ಫಿಲಿಪ್ಪೀನ್ಸ್‌ನಲ್ಲಿ ಹಡಗಿನಲ್ಲಿ ಭೀಕರ ಅಗ್ನಿ ಅವಘಡ: 5 ಮಂದಿ ಸಾವು, 87 ಮಂದಿ ನಾಪತ್ತೆ; Video

ಕರಾವಳಿ ರಕ್ಷಣಾ ಪಡೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹಡಗಿನ ಬಹುತೇಕ ಭಾಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿರುವುದು ಕಂಡುಬಂದಿದೆ.
ಫಿಲಿಪ್ಪೀನ್ಸ್‌ನಲ್ಲಿ ಹಡಗಿನಲ್ಲಿ ಭೀಕರ ಅಗ್ನಿ ಅವಘಡ: 5 ಮಂದಿ ಸಾವು, 87 ಮಂದಿ ನಾಪತ್ತೆ; Video
Updated on

ಫಿಲಿಪ್ಪೀನ್ಸ್‌ನ ಪಲವಾನ್ ಪ್ರಾಂತ್ಯದ ಜನಪ್ರಿಯ ಪ್ರವಾಸಿ ತಾಣವೊಂದರ ಸಮೀಪ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ಐವರು ಮೃತಪಟ್ಟಿದ್ದಾರೆ. 87 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

ನಿನ್ನೆ ಬುಧವಾರ ಸಂಜೆ ಕರಾವಳಿಯಿಂದ ಸುಮಾರು 2.2 ಕಿ.ಮೀ. (1.3 ಮೈಲಿ) ದೂರದಲ್ಲಿದ್ದ M/V June Aster ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಘಟನೆಯಲ್ಲಿ ಮೃತಪಟ್ಟ ಐವರ ಮೃತದೇಹಗಳನ್ನು ದಡಕ್ಕೆ ತರಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

ಕರಾವಳಿ ರಕ್ಷಣಾ ಪಡೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹಡಗಿನ ಬಹುತೇಕ ಭಾಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿರುವುದು ಕಂಡುಬಂದಿದೆ.

ಇಂದು ಸ್ಥಳೀಯ ರೇಡಿಯೊ ಕೇಂದ್ರವೊಂದಕ್ಕೆ ಕರಾವಳಿ ರಕ್ಷಣಾ ಪಡೆಯ ಕ್ಯಾಪ್ಟನ್ ನೋಮಿ ಕಯಾಬ್ಯಾಬ್ ನೀಡಿದ ಮಾಹಿತಿ ಪ್ರಕಾರ, ಈವರೆಗೆ 42 ಮಂದಿಯನ್ನು ರಕ್ಷಿಸಲಾಗಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಫಿಲಿಪ್ಪೀನ್ಸ್‌ನಲ್ಲಿ ಹಡಗಿನಲ್ಲಿ ಭೀಕರ ಅಗ್ನಿ ಅವಘಡ: 5 ಮಂದಿ ಸಾವು, 87 ಮಂದಿ ನಾಪತ್ತೆ; Video
Trumpಗೆ Iran ಬಿಗ್ ಶಾಕ್: ಅಮೆರಿಕಾ ಹಡಗು ಸೇರಿ 20ಕ್ಕೂ ಹೆಚ್ಚು ನೌಕೆಗಳ ಮೇಲೆ ದಾಳಿ, Hormuz ಜಲಸಂಧಿ ಹೊರಗೂ 'No-go zone' ವಿಸ್ತರಣೆ..!

ಈಗ ನಮ್ಮ ಬಳಿ ಇರುವ ರಕ್ಷಿಸಲ್ಪಟ್ಟವರು ಮತ್ತು ಮೃತಪಟ್ಟವರ ಮಾಹಿತಿಯ ಆಧಾರದ ಮೇಲೆ ಇನ್ನೂ 87 ಮಂದಿ ಪತ್ತೆಯಾಗಿಲ್ಲ. ಹಡಗಿನ ಪ್ರಯಾಣಿಕರು ಮತ್ತು ಸಿಬ್ಬಂದಿಯ ಪಟ್ಟಿಯಲ್ಲಿ ಒಟ್ಟು 134 ಮಂದಿ ಇದ್ದರು ಎಂದು ಹೇಳಿದರು.

ಇದು ಸದ್ಯದ ಮಾಹಿತಿ ಮಾತ್ರ. ನಮ್ಮ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿರುವುದರಿಂದ ಈ ಸಂಖ್ಯೆ ಬದಲಾಗಬಹುದು ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಕಯಾಬ್ಯಾಬ್ ಹೇಳಿದರು. ರಕ್ಷಿಸಲ್ಪಟ್ಟವರ ಪೈಕಿ 38 ಮಂದಿ ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಎಂದು ಅವರು ತಿಳಿಸಿದರು.

ಆದರೆ ರಕ್ಷಿಸಲ್ಪಟ್ಟವರೊಂದಿಗೆ ಇನ್ನೂ ಮಾತನಾಡಲು ಸಾಧ್ಯವಾಗದ ಕಾರಣ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ಬೆಂಕಿ ನಂದಿಸುವ ಕಾರ್ಯಾಚರಣೆಯೂ ಮುಂದುವರಿದಿದೆ ಎಂದು ತಿಳಿಸಿದರು.

ರಾಯಿಟರ್ಸ್‌ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಬುಧವಾರ ರಾತ್ರಿ ವೇಳೆಗೆ 43 ಮಂದಿಯನ್ನು ರಕ್ಷಿಸಲಾಗಿತ್ತು.

ಹಡಗು ಮನಿಲಾದಿಂದ ಹೊರಟಿದ್ದು, ಬೆಂಕಿ ಕಾಣಿಸಿಕೊಂಡಾಗ ಪಲವಾನ್ ಪ್ರಾಂತ್ಯದ ಕೊರೋನ್ ಸಮೀಪದಲ್ಲಿತ್ತು. ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

7,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಫಿಲಿಪ್ಪೀನ್ಸ್‌ನಲ್ಲಿ ಸಮುದ್ರ ಅಪಘಾತಗಳು ಸಾಮಾನ್ಯವಾಗಿವೆ. ಮುಂಗಾರು ಮಳೆ ಹಾಗೂ ಚಂಡಮಾರುತಗಳು ನಿಯಮಿತವಾಗಿ ಅಪ್ಪಳಿಸುವುದರಿಂದ ಇಲ್ಲಿ ಸಮುದ್ರಯಾನ ಅಪಾಯಕಾರಿಯಾಗಬಹುದು.

ಹಿಂದಿನ ಹಲವು ಅಪಘಾತಗಳಿಗೆ ದೋಣಿಗಳ ಕಳಪೆ ನಿರ್ವಹಣೆ, ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದು ಹಾಗೂ ಸುರಕ್ಷತಾ ನಿಯಮಗಳ ಅನುಷ್ಠಾನದಲ್ಲಿನ ಲೋಪಗಳನ್ನೂ ಕಾರಣವೆಂದು ಹೇಳಲಾಗಿದೆ.

ಜನವರಿಯಲ್ಲಿ 350ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಬಲುಕ್-ಬಲುಕ್ ದ್ವೀಪದ ಸಮುದ್ರದ ಬಳಿ ಮುಳುಗಿದ್ದು, ಕನಿಷ್ಠ 18 ಮಂದಿ ಮೃತಪಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com