

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಹ್ರೇನ್‌ನಲ್ಲಿರುವ ಅಮೆರಿಕಾ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ಭೀಕರತೆಯನ್ನು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಅಮೆರಿಕದ ಹಂಗಾಮಿ ನೌಕಾಪಡೆ ಕಾರ್ಯದರ್ಶಿ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೌಕಾ ಕಾರ್ಯದರ್ಶಿ ನಾಮನಿರ್ದೇಶಿತರಾದ ಹಂಗ್ ಕಾವೊ (Hung Cao), "ಇರಾನ್ ಪಡೆಗಳು ಬಹ್ರೇನ್ ಅನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ (blew the hell out of Bahrain)" ಎಂದು ಹೇಳಿದ್ದಾರೆ.
2026ರ ಫೆಬ್ರವರಿ ಮತ್ತು ಜೂನ್ ನಡುವೆ ಇರಾನ್ ನಡೆಸಿದ ಕ್ಷಿಪಣಿ ಹಾಗೂ ಭೀಕರ ಡ್ರೋನ್ ದಾಳಿಗಳಿಂದ ಅಮೆರಿಕದ ಪ್ರತಿಷ್ಠಿತ 'ನೇವಲ್ ಸಪೋರ್ಟ್ ಆಕ್ಟಿವಿಟಿ ಬಹ್ರೇನ್' (Naval Support Activity Bahrain) ನೆಲೆಗೆ ತೀವ್ರ ಹಾನಿಯಾಗಿದೆ ಎಂದು ಅವರು ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ನೆಲೆಯು ಅಮೆರಿಕ ನೌಕಾಪಡೆಯ 5ನೇ ಫ್ಲೀಟ್‌ನ ಪ್ರಧಾನ ಕಚೇರಿಯಾಗಿದೆ. ಮಧ್ಯಪ್ರಾಚ್ಯದಲ್ಲಿನ ಅಮೆರಿಕ ನೌಕಾಪಡೆಯ ಕಾರ್ಯಾಚರಣೆಗಳಿಗೆ ಪ್ರಮುಖ ಸಾಗಣೆ ಮತ್ತು ಸರಬರಾಜು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
‘ದಿ ಎಪೋಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕದ ಹಿರಿಯ ಅಧಿಕಾರಿ ಕಾವೋ, “ಅವರು ಬಹ್ರೇನ್ ನೆಲೆಯನ್ನೇ ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ” ಎಂದು ಹೇಳಿರುವುದಾಗಿ ವರದಿಯಾಗಿದೆ.
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ವಾಯುದಾಳಿ ಆರಂಭಿಸಿದ ಬಳಿಕ ಈ ನೌಕಾನೆಲೆ ಇರಾನ್ ದಾಳಿಗೆ ಪ್ರಮುಖ ಗುರಿಯಾಗಿತ್ತು.
ದಾಳಿಯಿಂದ ಉಂಟಾಗಿರುವ ಹಾನಿಯ ಹಿನ್ನೆಲೆಯಲ್ಲಿ ನೌಕಾನೆಲೆಯನ್ನು ದುರಸ್ತಿ ಮಾಡಬೇಕೇ ಅಥವಾ ಬೇರೆ ಕ್ರಮ ಕೈಗೊಳ್ಳಬೇಕೇ ಎಂಬ ಬಗ್ಗೆ ಅಮೆರಿಕ ನೌಕಾಪಡೆ ಪರಿಶೀಲನೆ ನಡೆಸುತ್ತಿದೆ. “ಇದನ್ನು ಪರಿಶೀಲಿಸಲು ನನ್ನ ಬಳಿ ಕಾರ್ಯಪಡೆ ಇದೆ” ಎಂದು ಕಾವೋ ತಿಳಿಸಿದ್ದಾರೆ.
ಬಹ್ರೇನ್ ನೆಲೆಗೆ ಉಂಟಾಗಿರುವ ಹಾನಿಯ ಪ್ರಮಾಣದಿಂದ ಅಮೆರಿಕ ಪಡೆಗಳು ಮತ್ತೆ ಅಲ್ಲಿಗೆ ಯಾವಾಗ ಮರಳಲಿವೆ ಎಂಬ ಪ್ರಶ್ನೆಯೂ ಎದುರಾಗಿದೆ.
ಆಗಸ್ಟ್ 31ರಂದು ನಡೆದ ಸಭೆಯಲ್ಲಿ ಅಮೆರಿಕ ನೌಕಾಪಡೆಯ ಕಾರ್ಯಾಚರಣೆ ಮುಖ್ಯಸ್ಥ ಅಡ್ಮಿರಲ್ ಡ್ಯಾರಿಲ್ ಕಾಡ್ಲ್, ನೌಕಾಪಡೆಯ ಸಿಬ್ಬಂದಿ ಶೀಘ್ರದಲ್ಲೇ ನೆಲೆಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಮ್ಮ ವೈಯಕ್ತಿಕ ವಸ್ತುಗಳನ್ನು ಪಡೆಯಲು ಕೂಡ ಸಿಬ್ಬಂದಿ ತಕ್ಷಣ ಅಲ್ಲಿಗೆ ತೆರಳುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದರು.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿರುವ ಸಂದರ್ಭದಲ್ಲೇ ಬಹ್ರೇನ್ ನೌಕಾನೆಲೆಗೆ ಹಾನಿಯಾಗಿದ್ದು, ಮಧ್ಯಪ್ರಾಚ್ಯದ ವಿವಿಧೆಡೆ ಇರುವ ಅಮೆರಿಕದ ಸೇನಾ ನೆಲೆಗಳ ಮೇಲೂ ದಾಳಿಗಳು ನಡೆದಿವೆ.
ಜೋರ್ಡಾನ್‌ನ ಮುವಾಫಕ್ ಸಲ್ತಿ ವಾಯುನೆಲೆಯ ಮೇಲೂ ಇರಾನ್ ಪ್ರತ್ಯೇಕವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದು, ಹಲವು ಅಮೆರಿಕ ಯುದ್ಧವಿಮಾನಗಳಿಗೆ ಹಾನಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ದಾಳಿಯಲ್ಲಿ ಎ-10 ಥಂಡರ್‌ಬೋಲ್ಟ್ ಯುದ್ಧವಿಮಾನದ ಒಂದು ರೆಕ್ಕೆ ಕಳೆದುಹೋಗಿದೆ ಎನ್ನಲಾಗಿದ್ದು, ಸುಮಾರು ಎಂಟು ಎಫ್-15 ಯುದ್ಧವಿಮಾನಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಬಳಿಕ ಅವುಗಳನ್ನು ಮತ್ತೆ ಸೇವೆಗೆ ನಿಯೋಜಿಸಲಾಗಿದೆ. ದಾಳಿಯ ಸಂದರ್ಭದಲ್ಲಿ ಅಮೆರಿಕ ಪಡೆಗಳು 30ಕ್ಕೂ ಹೆಚ್ಚು ಪ್ಯಾಟ್ರಿಯಾಟ್ ಕ್ಷಿಪಣಿಗಳನ್ನು ಹಾರಿಸಿವೆ.
ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಇರಾನ್ ಪಡೆಗಳು ಅಮೆರಿಕದ ನೌಕಾ ಆಸ್ತಿಗಳು ಮತ್ತು ಸಾಗಣೆ ಹಿತಾಸಕ್ತಿಗಳನ್ನೂ ಗುರಿಯಾಗಿಸಿಕೊಂಡಿವೆ. ಅಮೆರಿಕವು ಐದು ಇರಾನ್ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದ ಬಳಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ದಾಳಿಯಲ್ಲಿ ಅಮೆರಿಕದ ಪಾತ್ರವಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದು, ಮುಂದಿನ ದಿನಗಳಲ್ಲೂ ದಾಳಿಗಳು ನಡೆಯಬಹುದು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಸಂಘರ್ಷದಿಂದ ಪ್ರಮುಖ ಇಂಧನ ಮತ್ತು ಸಾಗಣೆ ಮಾರ್ಗಗಳ ಮೇಲೂ ಒತ್ತಡ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿ ಪ್ರಮುಖ ಸಂಘರ್ಷದ ಕೇಂದ್ರವಾಗಿ ಮುಂದುವರಿದಿದ್ದು, ಇರಾನ್ ಬೆಂಬಲಿತ ಹೂತಿ ಪಡೆಗಳು ಯೆಮನ್‌ನ ಕೆಂಪು ಸಮುದ್ರ ಕರಾವಳಿಯಲ್ಲಿ ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಿವೆ. ಇದರಿಂದ ಬಾಬ್ ಎಲ್-ಮಂದೆಬ್ ಜಲಸಂಧಿ ಹಾಗೂ ಜಾಗತಿಕ ತೈಲ ಪೂರೈಕೆ ಕುರಿತು ಹೊಸ ಆತಂಕಗಳು ಮೂಡಿವೆ.