

ವಾಷಿಂಗ್ಟನ್: ಪ್ರಸ್ತುತ ಜಗತ್ತನ್ನೇ ಆತಂಕಕ್ಕೆ ತಳ್ಳಿರುವ ಅಮೆರಿಕಾ-ಇರಾನ್ ಯುದ್ಧವು ಮುಂಬರುವ ನವೆಂಬರ್ ಮಧ್ಯಾವಧಿ ಚುನಾವಣೆಯ ನಂತರ "ತಕ್ಷಣವೇ" ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭವಿಷ್ಯ ನುಡಿದಿದ್ದಾರೆ.
ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆಯಲಿರುವ ರಿಪಬ್ಲಿಕನ್ ಸಮಾವೇಶಕ್ಕೆ ಹೊರಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, ಇರಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇರಾನ್ ಇನ್ನು ಹೆಚ್ಚು ದಿನ ಯುದ್ಧವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಅಮೆರಿಕದ ಚುನಾವಣೆಯ ಮೇಲೆ ಪ್ರಭಾವ ಬೀರುವ ಏಕೈಕ ಉದ್ದೇಶದಿಂದ ಟೆಹ್ರಾನ್ ಈ ಸಂಘರ್ಷವನ್ನು ಉದ್ದೇಶಪೂರ್ವಕವಾಗಿ ಎಳೆಯುತ್ತಿದೆ. ಹೀಗಾಗಿ, ನವೆಂಬರ್ ಚುನಾವಣ ಮುಗಿದ ತಕ್ಷಣವೇ ಈ ಯುದ್ಧ ಕೊನೆಗೊಳ್ಳಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಯ ಮೇಲೆ ಪ್ರಭಾವ ಬೀರಲು ಅವರು ಹತಾಶರಾಗಿದ್ದಾರೆ. ದುರ್ಬಲ ವ್ಯಕ್ತಿಗಳ ಗುಂಪು ಅಧಿಕಾರಕ್ಕೆ ಬರಬೇಕು, ನಂತರ ಅವರನ್ನು ಹಾಗೆಯೇ ಬಿಟ್ಟು ತಮ್ಮ ಪರಮಾಣು ಅಸ್ತ್ರವನ್ನು ಹೊಂದಲು ಅವಕಾಶ ನೀಡಬೇಕು ಎಂಬುದು ಅವರ ಉದ್ದೇಶ, ಹೀಗಾಗಿ ಚುನಾವಣೆ ಮುಗಿದ ತಕ್ಷಣ ಯುದ್ಧ ಅಂತ್ಯಗೊಳ್ಳಲಿದೆ. ಏಕೆಂದರೆ ಅವರು ಇನ್ನು ಹೆಚ್ಚು ಕಾಲ ತಡೆದುಕೊಳ್ಳಲು ಸಾಧ್ಯವಿಲ್ಲ,” ಎಂದಿದ್ದಾರೆ.
ಈ ನಡುವೆ ಯುದ್ಧದ ತೀವ್ರತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $100 ದಾಟಿದ್ದು, ಜಗತ್ತಿನಾದ್ಯಂತ ಇಂಧನ ದರ ಏರಿಕೆಯಾಗಿದೆ.
ಈ ಬಗ್ಗೆ ಮಾತನಾಡಿದ ಟ್ರಂಪ್, "ನವೆಂಬರ್ ಚುನಾವಣೆಯವರೆಗೆ ತೈಲ ಬೆಲೆಯಲ್ಲಿ ಯಾವುದೇ ದೊಡ್ಡ ಇಳಿಕೆ ಕಂಡುಬರುವುದಿಲ್ಲ. ಆದರೆ, ಚುನಾವಣೆ ಮುಗಿಯುತ್ತಿದ್ದಂತೆ ಬೆಲೆಗಳು ಭಾರೀ ಪ್ರಮಾಣದಲ್ಲಿ ಕುಸಿಯಲಿವೆ," ಎಂದು ಭರವಸೆ ನೀಡಿದ್ದಾರೆ.
ಕೇವಲ ಕೆಲವು ವಾರಗಳಲ್ಲಿ ಮುಗಿಯಬೇಕಿದ್ದ ಈ ಮಿಲಿಟರಿ ಕಾರ್ಯಾಚರಣೆಯು ಈಗ 7ನೇ ತಿಂಗಳಿಗೆ ಕಾಲಿಟ್ಟಿದೆ. ಯುಎಸ್ ಮಿಲಿಟರಿ ಯೋಜಿತ ಸಮಯಕ್ಕಿಂತ ಮುಂದಿದೆ ಮತ್ತು ಇರಾನ್‌ನ ಬಹುತೇಕ ಪ್ರಮುಖ ನೆಲೆಗಳನ್ನು ಧ್ವಂಸಗೊಳಿಸಿದೆ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಶ್ವೇತಭವನದ ಉನ್ನತ ಸಲಹೆಗಾರರು ಮಾತ್ರ ಈ ಯುದ್ಧವು ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯ ಕೊನೆಯವರೆಗೂ ಮುಂದುವರಿಯಬಹುದು ಎಂಬ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಆಂತರಿಕ ಮೂಲಗಳು ತಿಳಿಸಿವೆ.
ಯುದ್ಧ ಆರಂಭವಾದ ಸಂದರ್ಭದಲ್ಲಿ ಕೆಲವೇ ವಾರಗಳಲ್ಲಿ ಸಂಘರ್ಷ ಅಂತ್ಯಗೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದರು. ಆದರೆ ಇದೀಗ ಸಂಘರ್ಷ ಏಳನೇ ತಿಂಗಳಿಗೆ ಕಾಲಿಟ್ಟಿದೆ.
ಅಮೆರಿಕ-ಇಸ್ರೇಲ್ ಯುದ್ಧದಿಂದ ಗಲ್ಫ್ ಪ್ರದೇಶದಿಂದ ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತಿದ್ದ ತೈಲದ ಪ್ರಮಾಣದಲ್ಲಿ ಭಾರಿ ಕುಸಿತ ಉಂಟಾಗಿದೆ. ಯುದ್ಧಕ್ಕೂ ಮುನ್ನ ಜಗತ್ತಿನ ಒಟ್ಟು ಪೆಟ್ರೋಲಿಯಂ ಪೂರೈಕೆಯ ಸುಮಾರು ಶೇ.20ರಷ್ಟು ಈ ಜಲಮಾರ್ಗದ ಮೂಲಕ ಸಾಗುತ್ತಿತ್ತು.
ಕಳೆದ ವಾರ ಟ್ರಂಪ್ ಈ ಸಂಘರ್ಷವನ್ನು “ಸಣ್ಣ ವಿಷಯ” ಎಂದು ಬಣ್ಣಿಸಿದ್ದರು. ಆದರೆ, ಯುದ್ಧದಿಂದ ಇಂಧನ ಬೆಲೆ ಮತ್ತು ಹಣದುಬ್ಬರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾರರ ಮೇಲೆ ಇದರ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಆಡಳಿತ ಪಕ್ಷದವರೇ ವ್ಯಕ್ತಪಡಿಸುತ್ತಿದ್ದಾರೆ.
ಅಮೆರಿಕ ಸರ್ಕಾರ ತನ್ನ ತುರ್ತು ತೈಲ ಸಂಗ್ರಹದಿಂದಲೂ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಗಸ್ಟ್ ಆರಂಭದಲ್ಲಿ ಅಮೆರಿಕದ ತಂತ್ರಾತ್ಮಕ ಪೆಟ್ರೋಲಿಯಂ ಸಂಗ್ರಹ 300 ಮಿಲಿಯನ್ ಬ್ಯಾರೆಲ್‌ಗಿಂತ ಕೆಳಗೆ ಇಳಿದಿದ್ದು, 2026ರ ಆರಂಭದಿಂದ 100 ಮಿಲಿಯನ್ ಬ್ಯಾರೆಲ್‌ಗೂ ಹೆಚ್ಚು ಕುಸಿದಿದೆ.
ನವೆಂಬರ್ 3ರ ಬಳಿಕವಷ್ಟೇ ಯುದ್ಧ ಅಂತ್ಯಗೊಳ್ಳಲಿದೆ ಎಂಬ ಟ್ರಂಪ್ ಹೇಳಿಕೆ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕಳೆದ ವಾರ ನೀಡಿದ್ದ ಹೇಳಿಕೆಗೆ ಭಿನ್ನವಾಗಿದೆ. ಮಧ್ಯಂತರ ಚುನಾವಣೆಯೊಳಗೆ ಸಂಘರ್ಷ ಅಂತ್ಯಗೊಳ್ಳಲಿದೆ ಎಂದು ವ್ಯಾನ್ಸ್ ಯಾವುದೇ ಖಚಿತ ಭರವಸೆ ನೀಡಿರಲಿಲ್ಲ.
ಯುದ್ಧ ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದಕ್ಕೆ ಕೃತಕ ಗಡುವು ನಿಗದಿಪಡಿಸಲು ನಾನು ಬಯಸುವುದಿಲ್ಲ,” ಎಂದು ವ್ಯಾನ್ಸ್ ಹೇಳಿದ್ದರು. “ಇರಾನ್ ಹಡಗುಗಳ ಮೇಲೆ ಗುಂಡಿನ ದಾಳಿ ನಿಲ್ಲಿಸುವುದು ಯಾವಾಗ ಎಂಬುದನ್ನು ನೀವು ಕೇಳುತ್ತಿದ್ದೀರಿ. ಅದಕ್ಕೆ ಉತ್ತರ ನನಗೆ ಗೊತ್ತಿಲ್ಲ. ಅದನ್ನು ಇರಾನ್‌ನ್ನೇ ಕೇಳಬೇಕು,” ಎಂದಿದ್ದರು.
ಇದೇ ವೇಳೆ, ಅಮೆರಿಕದ ಮಾನದಂಡದ ಕಚ್ಚಾ ತೈಲದ ಬೆಲೆ ಬುಧವಾರ ಬ್ಯಾರೆಲ್‌ಗೆ ಸುಮಾರು 96 ಡಾಲರ್ ತಲುಪಿದೆ. ಅಮೆರಿಕದಲ್ಲಿ ಪೆಟ್ರೋಲ್ ಬೆಲೆಯೂ ಒಂದೇ ರಾತ್ರಿಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
ಎಎಎ ಮಾಹಿತಿ ಪ್ರಕಾರ, ಸಾಮಾನ್ಯ ಪೆಟ್ರೋಲ್‌ನ ಸರಾಸರಿ ಬೆಲೆ ಒಂದೇ ರಾತ್ರಿಯಲ್ಲಿ 7 ಸೆಂಟ್ ಏರಿಕೆಯಾಗಿ ಪ್ರತಿ ಗ್ಯಾಲನ್‌ಗೆ 4.22 ಡಾಲರ್ ತಲುಪಿದೆ. ಇದು ಕಳೆದ ವರ್ಷದ ಇದೇ ಅವಧಿಯ ಬೆಲೆಗಿಂತ ಒಂದು ಡಾಲರ್‌ಗಿಂತಲೂ ಹೆಚ್ಚಾಗಿದೆ.
ಸರಕು ಸಾಗಣೆ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಸಲಾಗುವ ಡೀಸೆಲ್ ಬೆಲೆಯೂ ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಮಟ್ಟಕ್ಕೆ ಏರಿಕೆಯಾಗಿದೆ. ಶುಕ್ರವಾರ ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಬಳಿಕವೂ ಏರಿಕೆ ಮುಂದುವರಿದಿದೆ. ಒಂದೇ ರಾತ್ರಿಯಲ್ಲಿ ಪ್ರತಿ ಗ್ಯಾಲನ್‌ಗೆ 9 ಸೆಂಟ್ ಏರಿಕೆಯಾಗಿ 5.94 ಡಾಲರ್ ತಲುಪಿದೆ.
ವಿಮಾನ ಇಂಧನದ ಬೆಲೆ ಕೂಡ ಭಾರಿ ಏರಿಕೆಯಾಗಿರುವುದರಿಂದ ಅಮೆರಿಕ ಸೇರಿದಂತೆ ಹಲವು ದೇಶಗಳ ವಿಮಾನಯಾನ ಸಂಸ್ಥೆಗಳು ಕೆಲವು ವಿಮಾನಗಳ ಸಂಚಾರ ಕಡಿತಗೊಳಿಸುವುದರ ಜೊತೆಗೆ ಪ್ರಯಾಣ ದರ ಮತ್ತು ಹೆಚ್ಚುವರಿ ಶುಲ್ಕಗಳನ್ನು ಏರಿಸಿವೆ.
ಅಮೆರಿಕದ ಸೇನೆ ಐದು ಇರಾನ್‌ನ ತೈಲ ಸಾಗಣೆ ಹಡಗುಗಳ ಮೇಲೆ ದಾಳಿ ನಡೆಸಿದ ಬಳಿಕ ಮಾರುಕಟ್ಟೆಯಲ್ಲಿ ಇತ್ತೀಚಿನ ಏರಿಳಿತ ಉಂಟಾಗಿದೆ. ಅಮೆರಿಕದ ಯುದ್ಧನೌಕೆಯ ಮೇಲೆ ಕ್ಷಿಪಣಿ ದಾಳಿ ನಡೆಸಲು ಇರಾನ್ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅಮೆರಿಕ ಹೇಳಿದೆ. ಇದರ ಬೆನ್ನಲ್ಲೇ ಇರಾನ್ ಬೆಂಬಲಿತ ಹೌತಿ ಬಂಡುಕೋರರ ದಾಳಿಯಿಂದ ಸೌದಿ ಅರೇಬಿಯಾದ ತೈಲ ಘಟಕಗಳಲ್ಲೂ ಬೆಂಕಿ ಕಾಣಿಸಿಕೊಂಡಿತ್ತು.