ಉತ್ತರ ಕೊರಿಯಾದ ನಕ್ಷೆಯನ್ನೇ ಬದಲಿಸಿದ ಅಣು ಪರೀಕ್ಷೆಗಳು! ಪರಮಾಣು ಟೆಸ್ಟ್ ಬೆನಲ್ಲೇ 1,399 ಬಾರಿ ನಡುಗಿದ ಭೂಮಿ

ಉತ್ತರ ಕೊರಿಯಾ ನಡೆಸಿದ ಸರಣಿ ಭೂಗತ ಪರಮಾಣು (ಅಣು) ಪರೀಕ್ಷೆಗಳ ತೀವ್ರತೆಯಿಂದಾಗಿ ಆ ದೇಶದ ಪ್ರಮುಖ ಟೆಸ್ಟ್ ಸೈಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಬದಲಾವಣೆಗಳಾಗಿದ್ದು, ಬರೋಬ್ಬರಿ 1,399 ಬಾರಿ ಭೂಕಂಪಗಳು ಸಂಭವಿಸಿವೆ ಎಂದು ಹೊಸ ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
North Korea Nuclear Test Site Jolted By Nearly 1,399 Earthquakes, Study Reveals
ಉತ್ತರ ಕೊರಿಯಾದ ನಕ್ಷೆಯನ್ನೇ ಬದಲಿಸಿದ ಅಣು ಪರೀಕ್ಷೆಗಳು!Online Desk
Updated on

ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಅಣ್ಣ (ಕಿಮ್ ಜೊಂಗ್ ಉನ್) ತೆಗೆದುಕೊಳ್ಳುವ ನಿರ್ಧಾರಗಳನ್ನು ಆ ದೇಶದ ಒಳಗಡೆ ಯಾರೂ ಪ್ರಶ್ನಿಸುವಂತಿಲ್ಲ. ಯಾಕಂದ್ರೆ, ಅಲ್ಲಿ ಸಂಪೂರ್ಣ ಏಕಚಕ್ರಾಧಿಪತ್ಯ ಇರುವುದರಿಂದ ಅವರೇ ಸರ್ವೋಚ್ಚ ನಾಯಕ. ಹೀಗೆ, ಜಗತ್ತಿನ ಯಾವುದೇ ನಿಯಮಗಳಿಗೆ ಜಗ್ಗದ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಭೂಗತ ಅಣು ಪರೀಕ್ಷೆ ನಡೆಸಿ ಜಂಬ ಕೊಚ್ಚಿಕೊಂಡಿದ್ದು ಹಳೆಯ ಸುದ್ದಿ. ಆದರೆ ಆ ರಹಸ್ಯ ಪರೀಕ್ಷೆಗಳ ಬೆನ್ನಲ್ಲೇ ಆ ನೆಲದಲ್ಲಿ ನಡೆದಿರುವ ಅಗೋಚರ ವಿನಾಶದ ಕತೆ ಈಗ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಹೌದು, ಕಿಮ್‌ನ ಆ ಒಂದು ನಿರ್ಧಾರದಿಂದಾಗಿ ನೆಲದಡಿಯಲ್ಲಿ ಸದ್ದಿಲ್ಲದೆ ಸಾವಿರಕ್ಕೂ ಹೆಚ್ಚು ಬಾರಿ ಭೂಮಿ ನಡುಗಿದೆ ಎಂಬ ಆಘಾತಕಾರಿ ಸತ್ಯವನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ. ಇಡೀ ಪ್ರದೇಶದ ನಕ್ಷೆಯನ್ನೇ ಬದಲಿಸಿರುವ ಈ ಭೂಕಂಪಗಳ ಅಸಲಿ ಕತೆಯ ವರದಿ ಇಲ್ಲಿದೆ:

ಪ್ರಸಿದ್ಧ ವಿಜ್ಞಾನ ಪತ್ರಿಕೆಯಾದ ಸೈನ್ಸ್ ನಲ್ಲಿ ಸೆಪ್ಟೆಂಬರ್ 2026ರಲ್ಲಿ ಪ್ರಕಟವಾದ ಈ ಜಂಟಿ ಅಧ್ಯಯನ ವರದಿಯು ಇಡೀ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದೆ. ದಕ್ಷಿಣ ಕೊರಿಯಾ ಮತ್ತು ಚೀನಾದ ಭೂವಿಜ್ಞಾನಿಗಳು ಜಂಟಿಯಾಗಿ 2008 ರಿಂದ 2025 ರವರೆಗಿನ ಭೂಕಂಪನ ದತ್ತಾಂಶಗಳನ್ನು ಆಳವಾಗಿ ವಿಶ್ಲೇಷಿಸಿದಾಗ, ಉತ್ತರ ಕೊರಿಯಾ ನಡೆಸಿದ ಸರಣಿ ಭೂಗತ ಪರಮಾಣು ಪರೀಕ್ಷೆಗಳ ಪರಿಣಾಮವಾಗಿ ಮೌಂಟ್ ಮಂಟಾಪ್ ಪರ್ವತ ಪ್ರದೇಶದಲ್ಲಿ ಒಟ್ಟು 1,399 ಬಾರಿ ಸಣ್ಣ ಪ್ರಮಾಣದ ಭೂಕಂಪಗಳು ಸಂಭವಿಸಿವೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.

2,000 ವರ್ಷಗಳ ಶಾಂತಿ ಭಂಗ

ಐತಿಹಾಸಿಕ ದಾಖಲೆಗಳ ಪ್ರಕಾರ ಮೌಂಟ್ ಮಂಟಾಪ್ ಮತ್ತು ಪುಂಗ್ಯೆ-ರಿ ಪ್ರದೇಶಗಳು ಕಳೆದ ಎರಡು ಸಾವಿರ ವರ್ಷಗಳಿಂದ ಯಾವುದೇ ಪ್ರಮುಖ ಭೂಕಂಪನವಿಲ್ಲದೆ ಸಂಪೂರ್ಣ ಶಾಂತವಾಗಿದ್ದವು. ಆದರೆ 2006 ಮತ್ತು 2017 ರ ನಡುವೆ ಉತ್ತರ ಕೊರಿಯಾ ನಡೆಸಿದ 6 ಭೂಗತ ಅಣು ಪರೀಕ್ಷೆಗಳು ಇಡೀ ಭೂಮಿಯ ಮೇಲ್ಮೈಯನ್ನೇ ಬದಲಾಯಿಸಿವೆ. ಅದರಲ್ಲೂ, 2017ರಲ್ಲಿ ಉತ್ತರ ಕೊರಿಯಾ ನಡೆಸಿದ 6ನೇ ಹಾಗೂ ಅತ್ಯಂತ ಶಕ್ತಿಶಾಲಿ (ಸುಮಾರು 160 ಕಿಲೋಟನ್ ಸಾಮರ್ಥ್ಯದ) ಹೈಡ್ರೋಜನ್ ಬಾಂಬ್ ಪರೀಕ್ಷೆಯು ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕಾರಣವಾಗಿತ್ತು. ಈ ಸ್ಫೋಟದಿಂದಾಗಿ ಪರ್ವತದೊಳಗಿನ ಸುರಂಗಗಳು ಕುಸಿದಿದ್ದವು ಹಾಗೂ ಪರ್ವತದ ಮೇಲ್ಭಾಗದ ಆಕಾರವೇ ಸುಮಾರು 3 ಮೀಟರ್‌ಗಳಷ್ಟು ಕುಸಿದಿತ್ತು.

North Korea Nuclear Test Site Jolted By Nearly 1,399 Earthquakes, Study Reveals
'ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಕ್ಷಣ': ರಷ್ಯಾ-ಉತ್ತರ ಕೊರಿಯಾ ಗಡಿಯುದ್ದಕ್ಕೂ ಮೊದಲ ರಸ್ತೆ ಸೇತುವೆ ಸಂಪರ್ಕ!

ಮುಂದುವರೆದು, ಸಾಮಾನ್ಯವಾಗಿ ಯಾವುದೇ ಭೂಗತ ಸ್ಫೋಟ ನಡೆದ ಕೆಲವು ವಾರಗಳ ಬಳಿಕ ಭೂಮಿ ಶಾಂತವಾಗುತ್ತದೆ. ಆದರೆ, ಮಂಟಾಪ್ ಪರ್ವತದ ಅಡಿಯಲ್ಲಿ ಸ್ಫೋಟ ನಿಂತು ವರ್ಷಗಳು ಕಳೆದರೂ ಭೂಕಂಪಗಳ ಸಂಖ್ಯೆ ಮತ್ತು ತೀವ್ರತೆ ವರ್ಷದಿಂದ ವರ್ಷಕ್ಕೆ (2025ರ ವರೆಗೂ) ಹೆಚ್ಚುತ್ತಲೇ ಹೋಗಿದೆ. ಜೊತೆಗೆ, ಸರಣಿ ಅಣು ಸ್ಫೋಟಗಳ ಭೀಕರ ಒತ್ತಡಕ್ಕೆ ಸಿಲುಕಿ ಭೂಮಿಯ ಆಳದಲ್ಲಿದ್ದ ಹಳೆಯ, ನಿಷ್ಕ್ರಿಯ ಬಿರುಕುಗಳು ಮರುಜೀವ ಪಡೆದುಕೊಂಡಿವೆ. ಈ ಬಿರುಕುಗಳ ನಡುವೆ ನೀರು ತುಂಬಿಕೊಳ್ಳುತ್ತಿರುವುದರಿಂದ ಬಂಡೆಗಳು ಒಂದಕ್ಕೊಂದು ಜಾರುತ್ತಿದ್ದು, ನಿರಂತರವಾಗಿ ಸಣ್ಣ ಸಣ್ಣ ಭೂಕಂಪಗಳು (ಸಾಮಾನ್ಯವಾಗಿ 2 ರಿಂದ 3 ತೀವ್ರತೆಯುಳ್ಳವು) ಸಂಭವಿಸುತ್ತಿವೆ ಎಂದು ವಿಜ್ಞಾನಿಗಳು ವರದಿಯಲ್ಲಿ ವಿವರಿಸಿದ್ದಾರೆ.

ಒಟ್ಟಾರೆಯಾಗಿ, ಪರಮಾಣು ಅಸ್ತ್ರಗಳ ಪರೀಕ್ಷೆಯು ಕೇವಲ ತಕ್ಷಣದ ವಿನಾಶ ಮಾತ್ರವಲ್ಲದೆ, ಭೂಮಿಯ ಆಂತರಿಕ ರಚನೆಯನ್ನೇ ದಶಕಗಳ ಕಾಲ ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಈ ಘಟನೆ ಕಣ್ಣಮುಂದಿರುವ ದೊಡ್ಡ ಸಾಕ್ಷಿಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com