ಚಿನ್ನದ ಗಣಿ ಕುಸಿದು 82ಕ್ಕೂ ಹೆಚ್ಚು ಕಾರ್ಮಿಕರು ಸಮಾಧಿ: ಆಫ್ರಿಕಾದ ಯುದ್ಧಪೀಡಿತ ಸುಡಾನ್‌ನಲ್ಲಿ ಭೀಕರ ದುರಂತ

ಆಫ್ರಿಕಾದ ಯುದ್ಧಪೀಡಿತ ಸುಡಾನ್‌ನ ಪಶ್ಚಿಮ ಕಾರ್ಡೊಫಾನ್ ಪ್ರಾಂತ್ಯದ ಅಲ್-ನುಹುದ್ ಪಟ್ಟಣದ ಬಳಿ ಇರುವ ಅಲ್-ಝರಾ ಎಂಬ ಅನಧಿಕೃತ ಚಿನ್ನದ ಗಣಿ ಕುಸಿತದ ದುರಂತದಲ್ಲಿ ಕನಿಷ್ಠ 82 ಕ್ಕೂ ಹೆಚ್ಚು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Sudan Gold Mine Collapse: Over 82 Workers Feared Dead in Tragic West Kordofan Incident
ಆಫ್ರಿಕಾದ ಯುದ್ಧಪೀಡಿತ ಸುಡಾನ್‌ನಲ್ಲಿ ಭೀಕರ ದುರಂತAi Image
Updated on

ಪಶ್ಚಿಮ ಕಾರ್ಡೊಫಾನ್ (ಸುಡಾನ್‌): ಚಿನ್ನ ಅಂದರೆ ಸತ್ತ ಹೆಣವೂ ಬಾಯಿಬಿಡುತ್ತೆ ಎಂಬ ಮಾತಿದೆ. ಇತಿಹಾಸದ ಪುಟಗಳನ್ನು ತಿರುವಿದರೆ ಈ ಹಳದಿ ಲೋಹಕ್ಕಾಗಿ ನಡೆದ ರಕ್ತಸಿಕ್ತ ಸಮರಗಳು ಒಂದೆರಡಲ್ಲ. ಆದರೆ ಅದೇ ಬಂಗಾರದ ಹೊಳಪಿನ ಹಿಂದೆ ಅದೆಷ್ಟೋ ಬಡ ಜೀವಗಳ ಕಣ್ಣೀರು ಮತ್ತು ಕರಾಳ ವಾಸ್ತವ ಅಡಗಿರುತ್ತದೆ ಎಂಬುದಕ್ಕೆ ಆಫ್ರಿಕಾದ ಯುದ್ಧಪೀಡಿತ ಸುಡಾನ್ ದೇಶದಲ್ಲಿ ನಡೆದ ಈ ಭೀಕರ ದುರಂತವೇ ಸಾಕ್ಷಿ. ಯಾಕಂದ್ರೆ, ಸುಡಾನ್‌ನ ಪಶ್ಚಿಮ ಕಾರ್ಡೊಫಾನ್ ಪ್ರಾಂತ್ಯದ ಅಲ್-ನುಹುದ್ ಪಟ್ಟಣದ ಬಳಿ ಇರುವ ಅಲ್-ಝರಾ ಅನಧಿಕೃತ ಚಿನ್ನದ ಗಣಿ ದಿಢೀರನೆ ಕುಸಿದು ಬಿದ್ದಿದ್ದು, ಕನಿಷ್ಠ 82ಕ್ಕೂ ಹೆಚ್ಚು ಅಮಾಯಕ ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ ಈ ಹೃದಯವಿದ್ರಾವಕ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಸರಣಿ ಸುರಂಗಗಳ ಕುಸಿತ

ಸುಡಾನ್‌ನ ಅರೆಸೇನಾ ಪಡೆಯಾದ ರಾಪಿಡ್ ಸಪೋರ್ಟ್ ಫೋರ್ಸಸ್ (RSF) ನಿಯಂತ್ರಣದಲ್ಲಿರುವ ಪಶ್ಚಿಮ ಕೊರ್ಡೊಫಾನ್‌ನ ಅಲ್-ನುಹುದ್ (Al-Nuhud) ಪಟ್ಟಣದ ಸಮೀಪದ ಅಲ್-ಝರಾ ಚಿನ್ನದ ಗಣಿಯ ಅತ್ಯಂತ ಕಿರಿದಾದ ಜಾಗದಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಸುರಂಗದ ಭಾಗ ಕುಸಿದಿದೆ. ಆ ಸುರಂಗಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದರಿಂದ, ಸರಪಳಿಯೋಪಾದಿಯಲ್ಲಿ ಒಂದರ ಹಿಂದೆ ಒಂದರಂತೆ ಪಕ್ಕದ ಎಲ್ಲಾ ಸುರಂಗಗಳು ಕುಸಿದು ಬಿದ್ದಿವೆ. ಅದರಲ್ಲೂ, ಯುದ್ಧದ ಕಾರಣದಿಂದಾಗಿ ಸ್ಥಳದಲ್ಲಿ ಯಾವುದೇ ಸರ್ಕಾರಿ ರಕ್ಷಣಾ ತಂಡಗಳಾಗಲಿ ಅಥವಾ ಮಣ್ಣು ತೆರವುಗೊಳಿಸುವ ಹೆವಿ ಮೆಷಿನರಿಗಳಾಗಲಿ ಇರಲಿಲ್ಲ. ಸ್ಥಳೀಯರು ಗುದ್ದಲಿ-ಪಿಕಾಸಿ ಮುಂತಾದ ಹಳೆಯ ಸಲಕರಣೆಗಳಿಂದಲೇ ಮಣ್ಣು ಅಗೆಯಲು ಹೆಣಗಾಡಬೇಕಾಯಿತು.

Sudan Gold Mine Collapse: Over 82 Workers Feared Dead in Tragic West Kordofan Incident
ಖ್ಯಾತ ನಟಿಯ 53 ಕೋಟಿ ರೂಪಾಯಿ ಮೌಲ್ಯದ ಆಭರಣ ಕಳ್ಳತನ; ಆದರೆ, 10 ವರ್ಷಗಳ ಬಳಿಕ ಕಿಮ್ ಕರ್ದಾಶಿಯನ್‌ಗೆ ಸಿಕ್ಕಿದ್ದು ಬರೀ ₹105 ಪರಿಹಾರ!

ಆಫ್ರಿಕಾದಲ್ಲಿ ಇಂತಹ ದುರಂತಗಳು ಯಾಕೆ ಹೆಚ್ಚು?

ಸುಡಾನ್‌ನಲ್ಲಿ ಉತ್ಪತ್ತಿಯಾಗುವ ಚಿನ್ನದಲ್ಲಿ ಸುಮಾರು 80% ಭಾಗ ಬರುವುದು ಇಂತಹ ಅನಧಿಕೃತ, ಸಾಂಪ್ರದಾಯಿಕ ಗಣಿಗಳಿಂದಲೇ. ಇಲ್ಲಿ ಕೆಲಸ ಮಾಡುವವರಿಗೆ ಹೆಲ್ಮೆಟ್, ಆಮ್ಲಜನಕ, ಸುರಂಗ ಕುಸಿಯದಂತೆ ತಡೆಯುವ ಮರದ ಅಥವಾ ಕಬ್ಬಿಣದ ಆಧಾರಸ್ತಂಭಗಳಂತಹ ಯಾವುದೇ ಸುರಕ್ಷತಾ ಸೌಲಭ್ಯಗಳಿರುವುದಿಲ್ಲ. ಅದರಲ್ಲೂ, ಸುಡಾನ್‌ನಲ್ಲಿ ಸೇನೆ ಮತ್ತು RSF ಬಂಡುಕೋರರ ನಡುವೆ ನಡೆಯುತ್ತಿರುವ ಭೀಕರ ಯುದ್ಧದಿಂದಾಗಿ ಕೃಷಿ, ವ್ಯಾಪಾರ ಸಂಪೂರ್ಣ ನಾಶವಾಗಿದೆ. ಹಸಿವು ಮತ್ತು ನಿರುದ್ಯೋಗದಿಂದ ತಪ್ಪಿಸಿಕೊಳ್ಳಲು ಲಕ್ಷಾಂತರ ಜನರಿಗೆ ಪ್ರಾಣದ ಹಂಗು ತೊರೆದು ಗಣಿಗಳಲ್ಲಿ ಚಿನ್ನ ಹುಡುಕುವುದೇ ಕೊನೆಯ ಜೀವನೋಪಾಯವಾಗಿದೆ.

ಮುಂದುವರೆದು, ಈ ಅಕ್ರಮ ಗಣಿಗಳಿಂದ ತೆಗೆಯುವ ಬಂಗಾರವನ್ನು ಗಡಿ ದಾಟಿಸಿ ಕಳ್ಳಸಾಗಣೆ ಮಾಡಲಾಗುತ್ತದೆ. ಇದರಿಂದ ಬರುವ ಅಪಾರ ಹಣವನ್ನು ಸ್ಥಳೀಯ ಸಶಸ್ತ್ರ ಗುಂಪುಗಳು ಮತ್ತು ಯುದ್ಧಕೋರರು ಶಸ್ತ್ರಾಸ್ತ್ರ ಖರೀದಿಸಲು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಗಣಿಗಳಲ್ಲಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಯಾರೂ ನಿಯಮ ರೂಪಿಸುವುದಿಲ್ಲ. ಅದರಲ್ಲೂ, ಯುದ್ಧಗ್ರಸ್ತ ಪ್ರದೇಶಗಳಲ್ಲಿ ಸರ್ಕಾರದ ಯಾವುದೇ ಕಾನೂನು ಅಥವಾ ಆಡಳಿತ ಅಸ್ತಿತ್ವದಲ್ಲಿಲ್ಲದಿರುವುದರಿಂದ, ಗಣಿ ಮಾಲೀಕರು ಹಳೆಯ, ಅಪಾಯಕಾರಿ ಮತ್ತು ಮುಚ್ಚಲ್ಪಟ್ಟಿದ್ದ ಹೊಂಡಗಳನ್ನು ಮತ್ತೆ ಅಗೆದು ಅಮಾಯಕ ಕಾರ್ಮಿಕರನ್ನು ಸಾವಿನ ಕೂಪಕ್ಕೆ ತಳ್ಳುತ್ತಾರೆ.

Sudan Gold Mine Collapse: Over 82 Workers Feared Dead in Tragic West Kordofan Incident
ಉತ್ತರ ಕೊರಿಯಾದ ನಕ್ಷೆಯನ್ನೇ ಬದಲಿಸಿದ ಅಣು ಪರೀಕ್ಷೆಗಳು! ಪರಮಾಣು ಟೆಸ್ಟ್ ಬೆನ್ನಲ್ಲೇ 1,399 ಬಾರಿ ನಡುಗಿದ ಭೂಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com