

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ವಿಚಾರದಲ್ಲಿ ‘ನಿರ್ಧಾರದ ಹಂತದಲ್ಲಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದು, ‘ಬಹುದೊಡ್ಡ ಬೆಳವಣಿಗೆಗಳು ನಡೆಯಲಿವೆ’ ಎಂದು ಎಚ್ಚರಿಸಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ತನ್ನ ಷರತ್ತುಗಳನ್ನು ಮಧ್ಯವರ್ತಿಗಳ ಮೂಲಕ ಅಮೆರಿಕಕ್ಕೆ ತಿಳಿಸಿದೆ ಎಂದು ಹೇಳಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ನ್ಯೂಯಾರ್ಕ್‌ಗೆ ಭೇಟಿ ನೀಡುವ ನಿರೀಕ್ಷೆಯಿರುವ ಸಂದರ್ಭದಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಪೆಜೆಶ್ಕಿಯಾನ್ ಅವರೊಂದಿಗೆ ಇರಾನ್‌ನ ಹಿರಿಯ ನಿಯೋಗವೂ ಅಮೆರಿಕಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಇರಾನ್‌ನ ಅರೆ ಸರ್ಕಾರಿ ಸುದ್ದಿ ಸಂಸ್ಥೆ ತಸ್ನೀಮ್ ವರದಿ ಮಾಡಿದೆ.
ಈ ನಡುವೆ ಫಾಕ್ಸ್ ನ್ಯೂಸ್ ಜೊತೆಗಿನ ಸಂಭಾಷಣೆಯಲ್ಲಿ ಟ್ರಂಪ್ ತಾನು ‘ನಿರ್ಧಾರದ ಹಂತದಲ್ಲಿದ್ದೇನೆ’ ಎಂದು ಹೇಳಿದ್ದಾರೆ.
ಇರಾನ್ ಆಡಳಿತ ತನ್ನ ವರ್ತನೆಯನ್ನು ಬದಲಿಸದಿದ್ದರೆ, ‘ಬಹಳ ದೊಡ್ಡ ಬೆಳವಣಿಗೆಗಳು ಸದ್ಯದಲ್ಲೇ ನಡೆಯಲಿವೆ’ ಎಂದು ಅವರು ಎಚ್ಚರಿಸಿದ್ದಾರೆ.
ಇಡೀ ರಾಷ್ಟ್ರವನ್ನು ಯಾವಾಗ ಮತ್ತು ಹೇಗೆ ನಾಶಪಡಿಸಬೇಕು ಎಂಬುದು ನನ್ನ ಪ್ರಶ್ನೆ. ಅವರು ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳಿತು ಎಂದು ತಿಳಿಸಿದ್ದಾರೆ.
ಇದೇ ವೇಳೆ ಯುದ್ಧಕ್ಕೆ ಸಂಬಂಧಿಸಿದಂತೆ ಮೂರು ಸಾಧ್ಯ ಆಯ್ಕೆಗಳ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಇರಾನ್ ಅನ್ನು “ಸಂಪೂರ್ಣವಾಗಿ ನಾಶಪಡಿಸುವುದು”, “ಆರ್ಥಿಕವಾಗಿ ಕುಸಿಯಲು ಬಿಡುವುದು” ಅಥವಾ “ಒಪ್ಪಂದ ಮಾಡಿಕೊಳ್ಳುವುದು” ಎಂಬ ಮೂರು ಆಯ್ಕೆಗಳನ್ನು ಅವರು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ ಪ್ರದೇಶದಲ್ಲಿನ ಇತರ ಸಂಘರ್ಷಗಳ ಕುರಿತು ಮಾತನಾಡಿದ ಟ್ರಂಪ್, ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ಕ್ಷಿಪಣಿ ದಾಳಿ ನಡೆಸಿದ ಯೆಮನ್‌ನ ಹೌತಿ ಬಂಡುಕೋರರೊಂದಿಗೆ ಅಮೆರಿಕ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ. ಅಮೆರಿಕದ ಸಿಬ್ಬಂದಿ ಮೇಲೆ ದಾಳಿ ನಡೆಸದಿರಲು ಹೌತಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಟ್ರಂಪ್-ಪೆಜೆಶ್ಕಿಯಾನ್ ಭೇಟಿ ಸಾಧ್ಯತೆ?
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಪೆಜೆಶ್ಕಿಯಾನ್ ಅಮೆರಿಕಕ್ಕೆ ಭೇಟಿ ನೀಡಲಿರುವ ಬಗ್ಗೆ ಹಾಗೂ ಇರಾನ್ ಅಧ್ಯಕ್ಷರನ್ನು ಭೇಟಿಯಾಗುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗಲು ತಾನು “ಬಹುಶಃ ಮುಕ್ತನಾಗಿರುತ್ತೇನೆ” ಎಂದು ಟ್ರಂಪ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಭೆಯ ಸಂದರ್ಭದಲ್ಲಿ ಪೆಜೆಶ್ಕಿಯಾನ್ ಹಲವು ದೇಶಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ನಿರೀಕ್ಷೆಯೂ ಇದೆ.
ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ 7 ಷರತ್ತು; ಹೊಸ ಸೇನಾ ಕಾರ್ಯಾಚರಣೆಯ ಎಚ್ಚರಿಕೆ
ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದ ಮಾತುಕತೆಗಳನ್ನು ಪುನರಾರಂಭಿಸಲು ಇರಾನ್ ಕತಾರ್ ಮೂಲಕ ಅಮೆರಿಕಕ್ಕೆ ಏಳು ಷರತ್ತುಗಳನ್ನು ತಿಳಿಸಿದೆ ಎಂದು ದೇಶದ ಪ್ರಮುಖ ಮಾತುಕತೆಗಾರ ಮೊಹಮ್ಮದ್ ಬಘೇರ್ ಘಾಲಿಬಾಫ್ ಭಾನುವಾರ ಹೇಳಿದ್ದಾರೆ.
ಇದಕ್ಕೂ ಒಂದು ದಿನ ಮೊದಲು ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಮೊಹ್ಸೆನ್ ರೆಜಾಯಿ, ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಕತಾರ್ ಮೂಲಕ ವಾಷಿಂಗ್ಟನ್‌ಗೆ ಇರಾನ್ ತನ್ನ ಬೇಡಿಕೆಗಳನ್ನು ಕಳುಹಿಸಿದೆ ಎಂದು ಹೇಳಿದ್ದರು.
ಎಲ್ಲ ರಂಗಗಳಲ್ಲೂ ಯುದ್ಧ ಅಂತ್ಯಗೊಳ್ಳಬೇಕು, ನಮ್ಮ ಸ್ಥಗಿತಗೊಂಡಿರುವ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ನೌಕಾ ದಿಗ್ಬಂಧನವನ್ನು ಅಂತ್ಯಗೊಳಿಸಬೇಕು ಎಂಬುದು ನಮ್ಮ ಷರತ್ತುಗಳು ಎಂದು ತಿಳಿಸಿದ್ದಾರೆ.
ಇದೇ ವೇಳೆ, ಇರಾನ್‌ನ ಕೇಂದ್ರ ಸೇನಾ ಕಮಾಂಡ್ ಭಾನುವಾರ, ಹಲವು ಪ್ರಾದೇಶಿಕ ದೇಶಗಳ ಬೆಂಬಲದೊಂದಿಗೆ ಅಮೆರಿಕ ಮತ್ತೊಂದು ಸೇನಾ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದೆ.
ವಾಷಿಂಗ್ಟನ್‌ಗೆ ಬೆಂಬಲ ನೀಡುವ ದೇಶಗಳನ್ನು ಈ “ದುಷ್ಕೃತ್ಯ”ದಲ್ಲಿ ಭಾಗಿಗಳೆಂದು ಪರಿಗಣಿಸಲಾಗುವುದು. ಅಂತಹ ದೇಶಗಳು ಶಕ್ತಿಶಾಲಿ ಇರಾನ್ ಸಶಸ್ತ್ರ ಪಡೆಗಳಿಂದ ಯಾವುದೇ ರೀತಿಯ ಸಂಯಮವನ್ನು ಇನ್ನು ಮುಂದೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಇರಾನ್ ಸೇನಾ ಕಮಾಂಡ್ ಎಚ್ಚರಿಸಿದೆ.