

ಲಂಡನ್: ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದ ವೇಳೆ ಸೌನಾದಲ್ಲಿ ಮಲಗಿದ್ದಕ್ಕಾಗಿ ಉದ್ಯೋಗ ಕಳೆದುಕೊಂಡ ಉದ್ಯೋಗಿಯೊಬ್ಬರು ಇದೀಗ 964 ಕೋಟಿ ರೂ ಪರಿಹಾರ ನೀಡುಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅಚ್ಚರಿಯಾದರೂ ಸತ್ಯ.. ಬ್ರಿಟನ್‌ನ ಹಿರಿಯ ಟೆಕ್ ಎಕ್ಸಿಕ್ಯೂಟಿವ್ ಇದೀಗ ಸುಮಾರು 964 ಕೋಟಿ ರೂ ಪರಿಹಾರ ಕೋರಿ ಕಾನೂನು ಹೋರಾಟ ನಡೆಸುತ್ತಿದ್ದು, ಈ ಮೊತ್ತ ಬ್ರಿಟನ್‌ನ ಉದ್ಯೋಗ ನ್ಯಾಯಮಂಡಳಿಯೊಂದರಿಂದ ನೀಡಬಹುದಾದ ಅತಿ ದೊಡ್ಡ ಪರಿಹಾರಗಳಲ್ಲಿ ಒಂದಾಗುವ ಸಾಧ್ಯತೆ ಇದೆ ಎಂದು Independent ವರದಿ ಮಾಡಿದೆ.
ಮೂಲಗಳ ಪ್ರಕಾರ, ಶ್ಯಾನನ್ ಬರ್ನ್ಸ್ ಅವರು ADHD ಹೊಂದಿದ್ದು, Gitpod ಕಂಪನಿಯಲ್ಲಿ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷೆಯಾಗಿ (VP of Engineering) ಕೆಲಸ ಮಾಡುತ್ತಿದ್ದರು. 2023ರ ಏಪ್ರಿಲ್‌ನಲ್ಲಿ ಆಸ್ಟ್ರಿಯಾದ ಲೋಫರ್‌ನಲ್ಲಿ ನಡೆದ ತಂಡದ ಕಾರ್ಯಕ್ರಮಕ್ಕೆ ಅವರು ತೆರಳಿದ್ದರು.
ಈ ವೇಳೆ ಅವರು ಮದ್ಯಪಾನ ಮಾಡಿದ್ದರು. ಬಳಿಕ ತಮ್ಮ ಕೊಠಡಿಯ ಕೀ ಕಳೆದುಕೊಂಡಿದ್ದರಿಂದ ಕೊಠಡಿಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮವಾಗಿ ಆ ರಾತ್ರಿ ಸೌನಾದಲ್ಲೇ ಮಲಗಬೇಕಾಯಿತು ಎಂದು ವರದಿಯಾಗಿದೆ.
ಈ ಘಟನೆ ಬಳಿಕ Gitpod ಸಿಇಒ ಜೊಹಾನ್ಸ್ ಲ್ಯಾಂಡ್‌ಗ್ರಾಫ್, ಬರ್ನ್ಸ್ ಅವರ ವೃತ್ತಿಪರ ಹೊಣೆಗಾರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಳಿಕ 2023ರ ಜೂನ್‌ನಲ್ಲಿ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.
ಅಂಗವೈಕಲ್ಯ ಕಾರಣಕ್ಕೆ ವಜಾ ಎಂದ ನ್ಯಾಯಮಂಡಳಿ
2025ರಲ್ಲಿ ಬರ್ಮಿಂಗ್‌ಹ್ಯಾಮ್ ಉದ್ಯೋಗ ನ್ಯಾಯಮಂಡಳಿ, ಬರ್ನ್ಸ್ ಅವರನ್ನು ಅವರ ಅಂಗವೈಕಲ್ಯಕ್ಕೆ ಸಂಬಂಧಿಸಿದ ಕಾರಣಗಳಿಂದ ವಜಾಗೊಳಿಸಲಾಗಿದೆ ಎಂದು ತೀರ್ಪು ನೀಡಿತ್ತು. ಈ ಮೂಲಕ ಅವರು ದಾಖಲಿಸಿದ್ದ ಅಂಗವೈಕಲ್ಯ ಆಧಾರಿತ ತಾರತಮ್ಯ ಪ್ರಕರಣದಲ್ಲಿ ಜಯಗಳಿಸಿದ್ದರು. ಇದೀಗ ತಮ್ಮ ಭವಿಷ್ಯದ ಆದಾಯ ನಷ್ಟವನ್ನು ಆಧರಿಸಿ ಸುಮಾರು 964 ಕೋಟಿ ರೂ ಪರಿಹಾರ ಕೋರುತ್ತಿದ್ದಾರೆ.
ಕಂಪನಿಯು ಅವರ ಪರಿಹಾರ ಬೇಡಿಕೆಯನ್ನು 12.68 ಕೋಟಿ ರೂಗೆ ಸೀಮಿತಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿತ್ತು. 12.68 ಕೋಟಿ ರೂ ಗಿಂತ ಹೆಚ್ಚಿನ ಮೊತ್ತದ ಬೇಡಿಕೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಎಂದು ವಾದಿಸಿದ್ದ ಕಂಪನಿ, 1.27 ಲಕ್ಷ ರೂ ಠೇವಣಿ ವಿಧಿಸುವಂತೆಯೂ ಕೋರಿತ್ತು. 964 ಕೋಟಿ ರೂ ಪರಿಹಾರದ ಬೇಡಿಕೆಯನ್ನು ಕಂಪನಿ “ಅಸಾಮಾನ್ಯ” ಎಂದು ಬಣ್ಣಿಸಿದ್ದು, ಅದರ ಲೆಕ್ಕಾಚಾರವನ್ನು “ಸ್ಪಷ್ಟವಾಗಿ ಅಸಂಬದ್ಧ” ಎಂದು ವಾದಿಸಿತ್ತು.
ಆದರೆ ನ್ಯಾಯಾಧೀಶೆ ರೇಚೆಲ್ ವೆಡ್ಡರ್ಸ್ಪೂನ್ ಅವರು ಕಂಪನಿಯ ಅರ್ಜಿಯನ್ನು ತಿರಸ್ಕರಿಸಿದರು. ಬರ್ನ್ಸ್ ಅವರು ಈ ಹಿಂದೆ ಅಸಾಧಾರಣ ಮಟ್ಟದ ವೇತನ ಪಡೆದಿದ್ದು, ಅವರ ಪರಿಹಾರದ ಲೆಕ್ಕಾಚಾರದಲ್ಲಿ ವೇತನ ಮತ್ತು ಷೇರುಗಳ ಮೌಲ್ಯದ ನಷ್ಟವೂ ಸೇರಿದೆ ಎಂದು ನ್ಯಾಯಾಧೀಶರು ಹೇಳಿದರು.
32.61 ಕೋಟಿ ರೂ ಮೌಲ್ಯದ ಷೇರು?
ನ್ಯಾಯಮಂಡಳಿಯ ವಿಚಾರಣೆಯಲ್ಲಿ ಬರ್ನ್ಸ್ ಅವರು Gitpodನಲ್ಲಿ ಶೇ.0.85ರಷ್ಟು ಷೇರುಗಳನ್ನು ಹೊಂದಿದ್ದರು ಎಂಬುದು ತಿಳಿದುಬಂದಿದೆ. Gitpod ಅನ್ನು 3,836.76 ಕೋಟಿ ರೂ ಮೌಲ್ಯದಲ್ಲಿ OpenAI ಸ್ವಾಧೀನಪಡಿಸಿಕೊಂಡರೆ, ಆ ಷೇರುಗಳ ಮೌಲ್ಯ ಈಗ ಸುಮಾರು 32.61 ಕೋಟಿ ರೂ ಹಾಗೂ ನಾಲ್ಕು ವರ್ಷಗಳ ಬಳಿಕ 267.13 ಕೋಟಿ ರೂ ಆಗಬಹುದು ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ಬರ್ನ್ಸ್ ಕೋರಿರುವ ಪರಿಹಾರದ ಮೊತ್ತ ಅತ್ಯಂತ ಅಸಾಮಾನ್ಯವಾದದ್ದು ಎಂದು ನ್ಯಾಯಮಂಡಳಿ ಹೇಳಿದರೂ, ತಜ್ಞರ ಸಾಕ್ಷ್ಯವಿಲ್ಲದೆ ಅವರ ಲೆಕ್ಕಾಚಾರ ಯಶಸ್ವಿಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಈಗಲೇ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಬರ್ನ್ಸ್ ಅವರು ಆದಾಯ ನಷ್ಟದ ಜೊತೆಗೆ ಮಾನಸಿಕ ನೋವು/ಭಾವನಾತ್ಮಕ ತೊಂದರೆಗೆ ಪರಿಹಾರ ಹಾಗೂ ACAS Uplift ಮೊತ್ತವನ್ನೂ ಕೇಳಿದ್ದಾರೆ. ಸದ್ಯ ಅವರು ಟೆಕ್ ಕ್ಷೇತ್ರವನ್ನು ತೊರೆದು ಥೆರಪಿಸ್ಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.