ಕರ್ನಾಟಕದಲ್ಲೂ ಶೇ.25ರಷ್ಟು ಮಳೆ ಕೊರತೆ, ಸರ್ಕಾರದಿಂದ ಮೋಡ ಬಿತ್ತನೆ

ಉತ್ತರ ಭಾರತದಾದ್ಯಂತ ಭಾರಿ ಮಳೆ ಮುಂದುವರೆದಿರುವಂತೆಯೇ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ ಮುಂದುವರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಉತ್ತರ ಭಾರತದಾದ್ಯಂತ ಭಾರಿ ಮಳೆ ಮುಂದುವರೆದಿರುವಂತೆಯೇ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ ಮುಂದುವರೆದಿದೆ.

ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಶೇ.20ರಿಂದ 25ರಷ್ಟು ಮಳೆ ಕೊರತೆ ಎದುರಿಸುತ್ತಿದೆ ಎಂದು ಹವಾಮಾನ ಇಲಾಖೆ ವರದಿಗಳು ಹೇಳಿವೆ, ಕರ್ನಾಟಕರದಲ್ಲಿ ಈ ಬಾರಿ ವಾಡಿಕೆಗಿಂತ ಶೇ. 25ರಷ್ಟು ಕಡಿಮೆ ಮಳೆಯಾಗಿದ್ದು, ಮುಂಗಾರು  ಕೊರತೆಯಾಗಿರುವ ಭಾಗಗಳಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಮರಾಠವಾಡಾ ಹಾಗೂ ವಿದರ್ಭಗಳಲ್ಲೂ ಮಳೆಕೊರತೆಯಾಗಿದ್ದು, ಈ ಭಾಗದಲ್ಲಿ ಅತೀ ಹೆಚ್ಚು  ಅಂದರೆ ಶೇ.32ರಷ್ಟು ಮಳೆ ಕಡಿಮೆಯಾಗಿದೆ. ಅಂತೆಯೇ ಪಶ್ಚಿಮ ಮಧ್ಯ ಪ್ರದೇಶದಲ್ಲಿ ಶೇ.23ರಷ್ಟು, ಕೇರಳದಲ್ಲಿ ಸತತ 2ನೇ ವರ್ಷ ಬರಗಾಲ ಮುಂದುವರೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬಿತ್ತನೆ ಕಾರ್ಯ ಕುಂಠಿತ
ಇನ್ನು ಕರ್ನಾಟಕದ ಹಲವೆಡೆ ಮಳೆ ಅಭಾವ ಮುಂದುವರೆದಿದ್ದು, ಕಳೆದ ವರ್ಷ ಆಗಸ್ಟ್ ತಿಂಗಳ ಹೊತ್ತಿಗೆ ಕರ್ನಾಟಕದಲ್ಲಿ ಸುಮಾರು 984.57 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಈ ಬಾರಿ ಆಗಸ್ಟ್ ತಿಂಗಳ ಹೊತ್ತಿಗೆ  ಕೇವಲ 976.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಮಾಡಲಾಗಿದೆ. ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯದಲ್ಲಿ ಕುಂಠಿತವಾಗಿದೆ ಎಂದು ಹೇಳಲಾಗಿದೆ. ರಾಜ್ಯದ ಒಟ್ಟು 27 ಜಿಲ್ಲೆಗಳಲ್ಲಿ ಮಳೆಕೊರತೆ ಕಾಡುತ್ತಿದೆ.  ಅಂತೆಯೇ 13 ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳ ಮಳೆ ಕೊರತೆಯುಂಟಾಗಿದೆ ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರದಿಂದ ಮೋಡ ಬಿತ್ತನೆ
ಇದೇ ವೇಳೆ ಹವಾಮಾನ ಇಲಾಖೆಯ ಮಳೆ ಕೊರತೆ ಮುನ್ಸೂಚನೆ ಪಡೆದ ರಾಜ್ಯ ಸರ್ಕಾರ ಮಳೆಗಾಗಿ ಮೋಡ ಬಿತ್ತನೆ ಮೊರೆ ಹೋಗಿದ್ದು, ಮಳೆ ಸುರಿಸಬಲ್ಲ ಫಲವತ್ತಾದ ಮೋಡಗಳನ್ನು ಪತ್ತೆ ಮಾಡಿ ಅಲ್ಲಿ ಮೋಡ ಬಿತ್ತನೆ ಮಾಡಲು  ಸರ್ಕಾರ ನಿರ್ಧರಿಸಿದೆ. ಈಗಾಗಲೇ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಕಾರ್ಯಕ್ಕಾಗಿ ಸಕಲ ಸಿದ್ಥತೆ ಪೂರ್ಣಗೊಂಡಿದ್ದು,  ಯಾದಗಿರಿ ಜಿಲ್ಲೆಯ ಸುರಪುರ, ಗದಗ ಮತ್ತು ಬೆಂಗಳೂರಿನಲ್ಲಿ ರೇಡಾರ್‌ಗಳನ್ನು ಸ್ಥಾಪಿಸಲಾಗಿದೆ.  ಒಟ್ಟು 60 ದಿನಗಳ ಕಾಲ ಅಮೆರಿಕದಿಂದ ಬಂದಿರುವ ಎರಡು ವಿಶೇಷ ವಿಮಾನಗಳ ಮೂಲಕ ಮೋಡ ಬಿತ್ತನೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನಿಂದಲೇ ಮೋಡ ಬಿತ್ತನೆ
ರಾಜ್ಯದಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಇಂದಿನಿಂದಲೇ ಚಾಲನೆ ನೀಡಲಾಗುತ್ತಿದ್ದು, ಮೋಡ ಬಿತ್ತನೆ ಕಾರ್ಯಕ್ರಮವನ್ನು ಇಂದು ಮಧ್ಯಾಹ್ನ 2 ಗಂಟೆಗೆ ಜಕ್ಕೂರು ಏರೋಡ್ರಮ್‌ ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌  ಸಚಿವ ಎಚ್.ಕೆ.ಪಾಟೀಲ ಉದ್ಘಾಟನೆ ಮಾಡಲಿದ್ದಾರೆ. ಮೋಡಬಿತ್ತನೆ ಕಾರ್ಯಕ್ಕೆ ರಾಜ್ಯ ಸರ್ಕಾರ ಒಟ್ಟು 35.77 ಕೋಟಿ ಹಣ ವ್ಯಯಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com