ಸಾಧನೆ

ಬೇರು ಕಲೆ

ಮಲೆನಾಡಿನಲ್ಲಿ ಬೇರು-ಬೊಗಟೆಗಳ ಸಂಗ್ರಹ ಹಾಗೂ ಅವುಗಳನ್ನು ಕಲಾಕೃತಿಯಾಗಿ ರೂಪಿಸುವುದು...

ಮಲೆನಾಡಿನಲ್ಲಿ ಬೇರು-ಬೊಗಟೆಗಳ ಸಂಗ್ರಹ ಹಾಗೂ ಅವುಗಳನ್ನು ಕಲಾಕೃತಿಯಾಗಿ ರೂಪಿಸುವುದು  ಹವ್ಯಾಸವಾಗಿ ಬೆಳೆಯುತ್ತಿದೆ. ಆಸಕ್ತ ರೈತರು ಬಿಡುವಿನ ವೇಳೆಯಲ್ಲಿ ಬೆಟ್ಟ-ಗುಡ್ಡಗಳಲ್ಲಿ ತಿರುಗಿ ಧಾರಾಳವಾಗಿ ಬಿದ್ದುಕೊಂಡಿರುವ ಬೇರು-ಬೊಗಟೆಗಳನ್ನು ಸಂಗ್ರಹಿಸಿ, ಅವುಗಳಿಗೆ ತಮ್ಮ ಕಲ್ಪನೆಯ ರೂಪ, ಆಕಾರಗಳನ್ನು ನೀಡಿ ವಿಶಿಷ್ಟ ಕಲಾಕೃತಿಯಾಗಿ ರೂಪಾಂತರಿಸುತ್ತಾರೆ. ಮನಸ್ಸಿನ ತೃಪ್ತಿಗಾಗಿ, ಬಿಡುವಿನ ವೇಳೆ ಕಳೆಯಲ್ಲೊಂದು ಹವ್ಯಾಸವಾಗಿ ಬೇರು-ಬೊಗಟೆಗಳಿಂದ ವೈವಿಧ್ಯಮಯ ಕಲಾಕೃತಿಗಳನ್ನು ತಮ್ಮ ಮನೆಗಳಲ್ಲಿಯೇ ಜೋಪಾನವಾಗಿಟ್ಟುಕೊಂಡು ಸಂಭ್ರಮಿಸುತ್ತಾರೆ.
ಮನೆಯಲ್ಲಿ ಕಲಾಕೃತಿಗಳನ್ನು ಅಲಂಕರಿಸಿದಾಗೆಲ್ಲ ಆ ಕಲಾವಿದ ಪತ್ನಿ, ಮಕ್ಕಳು, ಸಹೋದರರು ಹೀಗೆ ಮನೆಯ ಸದಸ್ಯರಿಂದ ಬೈಗುಳಕ್ಕೆ ಒಳಗಾಗುವುದೂ ಉಂಟು. ಅವುಗಳನ್ನು ಸಹಿಸಿಕೊಂಡು ತಮ್ಮ  ಕಲಾಕೃತಿಗಳನ್ನು ರಕ್ಷಿಸಿಕೊಂಡು ಉತ್ಸಾಹ ಕಾಪಿಟ್ಟುಕೊಳ್ಳುವವರಿಗೂ ಕಡಿಮೆ ಏನಿಲ್ಲ. ಮನೆಯೊಳಗೆ ಸ್ಥಾನ ಪಡೆದುಕೊಂಡ ಬೇರು-ಬೊಗಟೆಗಳ ಕಲಾಕೃತಿಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ. ಮನೆಗೆ ಬರುವ ಅತಿಥಿಗಳಿಗೆ ಕುತೂಹಲದಿಂದ ವೀಕ್ಷಿಸುವ ಮನರಂಜನೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಸಿದ್ದಾಪುರ ತಾಲೂಕಿನಲ್ಲಿ ಅನೇಕ ಕೃಷಿಕರು ಬೇರು-ಬೊಗಟೆ ಕಲಾಕೃತಿಗಳನ್ನು ಸಂಗ್ರಹಿಸುವುದರಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗಣಪತಿ ಇಟಗುಳಿ, ರವಿ ಹೆಗಡೆ ಹಾಲ್ಕಣಿ, ಅತ್ತಿಸರ ವಿ. ವಿ. ಹೆಗಡೆ, ಹೂಡ್ಲಮನೆ ಮಂಜುನಾಥ ಹೆಗಡೆ, ಹಿತ್ಲಳ್ಳಿಯ ಜಾಲೀಮನೆ ವೆಂಕಣ್ಣ.... ಹೀಗೆ ಅನೇಕರು ಬೇರು-ಬೊಗಟೆಗಳ ಆಕರ್ಷಕ ಕಲಾಕೃತಿಗಳನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದಾರೆ. ಅಲ್ಲದೇ, ಜಡ್ಡಿಮನೆ ಶ್ರೀಧರ ಹೆಗಡೆ, ನೀರ್ನಳ್ಳಿ ರಾಘವೇಂದ್ರ ಹೆಗಡೆ ತೆಂಗಿನಕಾಯಿ ಕರಟದಿಂದ ವೈವಿಧ್ಯಮಯವಾದ ವಸ್ತುಗಳನ್ನು ಸಿದ್ಧಪಡಿಸಿ ಸೈ ಎನಿಸಿಕೊಂಡಿದ್ದಾರೆ.

ಇಂಥ ಕಲಾಕೃತಿಗಳಿಗೆ ಈಗ ಶಹರಗಳಲ್ಲಿ ಬಹು ಬೇಡಿಕೆಯಿದೆ. ಹೋಟೆಲ್‌ಗಳು, ಅತಿಥಿ ಗೃಹಗಳು, ಸಿರಿವಂತರ ಮನೆಗಳು... ಇತ್ಯಾದಿ ಕಡೆಗಳಲ್ಲಿ ಅವು ಸ್ಥಾನ ಪಡೆಯುತ್ತವೆ. ಆದರೂ, ಬೇರು-ಬೊಗಟೆ ಕಲಾಕೃತಿಗಳನ್ನು ಸಿದ್ಧಗೊಳಿಸಿದ ಹಳ್ಳಿಯ ಕೃಷಿ ಕಲಾವಿದರಿಗೆ ತಮ್ಮಲ್ಲಿರುವ ಕಲಾಕೃತಿಗಳನ್ನು ಹೇಗೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇಲ್ಲ. ಜತೆಗೆ, ಎಲ್ಲಾ ಕಲಾಕೃತಿಗಳನ್ನು ಮಾರಾಟ ಮಾಡಲು ಕಲಾವಿದರೂ ಸಿದ್ಧರಿಲ್ಲ. ಏಕೆಂದರೆ ಎಲ್ಲಾ ಬೇರು-ಬೊಗಟೆಗಳು ಒಂದೇ ರೂಪ, ಆಕಾರದಲ್ಲಿ ಇರುವುದಿಲ್ಲ. ಅವು ವಿಭಿನ್ನವಾಗಿರುವುದರಿಂದ ಬಹುತೇಕ ಕಲಾವಿದರು ವಿಶಿಷ್ಟ ರೂಪದ ಕಲಾಕೃತಿಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಲು ಉತ್ಸಾಹ ತೋರುತ್ತಾರೆ.

-ಚಿತ್ರ-ಲೇಖನ: ಗಣಪತಿ ಹಾಸ್ಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್