ಶಿಕ್ಷಕರು ಮನಸ್ಸು ಮಾಡಿದರೆ ಏನೂ ಸಾಧ್ಯ ಎಂಬುದಕ್ಕೆ ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ಚೆಂಬು ಸರ್ಕಾರಿ ಪ್ರೌಢಶಾಲೆ ಸಾಕ್ಷಿ. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಕೂಡಡ್ಕ ಎನ್ನುವ ಕುಗ್ರಾಮದಲ್ಲಿರುವ ಶಾಲೆ ಶೈಕ್ಷಣಿಕ ಸಾಧನೆಯಿಂದ ಈಗ ಇಡೀ ರಾಜ್ಯದ ಗಮನ ಸೆಳೆದಿದೆ.
ಇಲ್ಲಿಗೆ ಬರುವವರು ಕೂಲಿಕಾರ್ಮಿಕರ, ರೈತರ, ಪರಿಶಿಷ್ಟ ಜಾತಿ, ಪಂಗಡದ ಬಡ ಮಕ್ಕಳು. ಮನೆಯಲ್ಲಿ ಓದುವ ಪರಿಪಾಠ ಇಲ್ಲ. ಹೆಚ್ಚಿನ ಮಕ್ಕಳ ಹೆತ್ತವರು ನಿರಕ್ಷರಿಗಳು. ಕಾಂತಬೈಲು, ದಬ್ಬಡ್ಕ, ಊರುಬೈಲು, ಕುದುರೆಪಾಯ ಇತ್ಯಾದಿ 8-10 ಕಿ.ಮೀ ದೂರವಿರುವ ಹಿಂದುಳಿದ ಪ್ರದೇಶಗಳಿಂದ ನಡೆದು ಈ ಶಾಲೆಗೆ ಮಕ್ಕಳು ಬರುತ್ತಾರೆ. ಸರ್ಕಾರದಿಂದ ಸೈಕಲ್ ಸಿಕ್ಕರೂ ಇದು ಗುಡ್ಡಗಾಡು ಪ್ರದೇಶವಾದ್ದರಿಂದ ಪ್ರಯೋಜನಕ್ಕೆ ಬರುವುದಿಲ್ಲ. ಬಸ್ ಸೌಕರ್ಯ ಇಲ್ಲ. ಆಗೊಮ್ಮೆ ಈಗೊಮ್ಮೆ ಜೀಪ್ ಸಂಚಾರ ಇದ್ದರೂ ಅದಕ್ಕೆ ದುಡ್ಡು ಕೊಡುವ ಚೈತನ್ಯ ಮಕ್ಕಳಲ್ಲಿ ಇಲ್ಲ. ಶಾಲೆ ಆರಂಭವಾದ 14 ವರ್ಷಗಳಲ್ಲಿ 2002ನೇ ಸಾಲಿನಲ್ಲಿ ಬಂದ ಶೇ 92 ಅತೀ ಹೆಚ್ಚಿನ ಫಲಿತಾಂಶ ಆಗಿತ್ತು. ಇದೇ ಪ್ರಥಮ ಬಾರಿಗೆ ಶೇ. 100 ಫಲಿತಾಂಶ ಗಳಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಪರೀಕ್ಷೆಗೆ ಕೂತ 26 ಮಕ್ಕಳಲ್ಲಿ 12 ಮಂದಿ ಪ್ರಥಮ ಶ್ರೇಣಿ, 9 ಮಂದಿ ದ್ವೀತೀಯ ಶ್ರೇಣಿ ಹಾಗೂ 5 ಮಂದಿ ತೇರ್ಗಡೆ ಸ್ಥಾನ ಗಳಿಸಿದ್ದಾರೆ. ಸುತ್ತಮುತ್ತಲ ಖಾಸಗಿ, ಆಂಗ್ಲ ಮಾಧ್ಯಮ ಶಾಲೆಗಳೂ ಇಷ್ಟು ಫಲಿತಾಂಶ ಗಳಿಸಿಲ್ಲ.
ಒಬ್ಬ ಗೌರವ ಶಿಕ್ಷಕಿಯೂ ಸೇರಿದಂತೆ ಈಗ ಇರುವ ಒಟ್ಟು ಶಿಕ್ಷಕರ ಸಂಖ್ಯೆ 8. ಬೋಧಕೇತರ ಸಿಬ್ಬಂದಿ 1. ಆದರೆ 2012ರ ಸಾಲಿನಲ್ಲಿ ಆಗಸ್ಟ್ ಕೊನೆವರೆಗೆ ಇದ್ದ ಅಧ್ಯಾಪಕರ ಸಂಖ್ಯೆ ಕೇವಲ 3. ಅದರಲ್ಲೂ ಒಬ್ಬ ಶಿಕ್ಷಕಿ ಹೆರಿಗೆ ರಜೆ ಪಡೆದು ಮನೆಯಲ್ಲಿದ್ದರು. ಆ ಸಮಯದಲ್ಲಿ ಡಿಸ್ಟಿಂಕ್ಷನ್ ಗಳಿಸುತ್ತಿದ್ದ ವಿದ್ಯಾರ್ಥಿಗಳು ಅಧ್ಯಾಪಕರ ಕೊರತೆ ಕಾರಣದಿಂದ ಟಿಸಿ ಪಡೆದು ಬೇರೆ ಶಾಲೆಗೆ ಹೋದರು. ಉಳಿದವರು ಕಲಿಕಾ ಸಾಮರ್ಥ್ಯ ಕಡಿಮೆ ಹೊಂದಿದ ಮಕ್ಕಳು.
ಸೆಪ್ಟೆಂಬರ್ ಆರಂಭದಲ್ಲಿ ಮುಖ್ಯೋಪಾಧ್ಯಾಯರಾಗಿ ರಾಮನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದ ಕೆ. ನಾರಾಯಣ ಸೇರಿದ್ದೇ ಈ ಶಾಲೆಯ ಭಾಗ್ಯದ ಬಾಗಿಲು ತೆರೆಯಿತು. ಅವರ ಸಮರ್ಥ ಮಾರ್ಗದರ್ಶನದಲ್ಲಿ ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯವಾಯ್ತು. ಇದೇ ಸಂದರ್ಭದಲ್ಲಿ ಸರ್ಕಾರ ಮೂರು ಹೊಸ ಅಧ್ಯಾಪಕರ ಸೇರ್ಪಡೆ ಮಾಡಿತು. ಇಂಗ್ಲೀಷ್ ಬೋಧನೆಗೆ ಅಧ್ಯಾಪಕರು ಇಲ್ಲದೇ ಇದ್ದುದರಿಂದ ಎಸ್‌ಡಿಎಂಸಿ ನೆರವಿನಿಂದ ಗೌರವ ಶಿಕ್ಷಕಿಯೊಬ್ಬರನ್ನು ನೇಮಿಸಲಾಯಿತು.
ಸಾಧ್ಯವಾದದ್ದು ಹೇಗೆ?
ಶಾಲೆಗೆ ಶೇ. 100 ಫಲಿತಾಂಶ ತರುವುದು ಮುಖ್ಯ ಶಿಕ್ಷಕ ನಾರಾಯಣ ಅವರ ಕನಸಾಗಿತ್ತು. ಅದನ್ನು ಸಾಕಾರಗೊಳಿಸಲು ಅವರು ಶಾಲೆಗೆ ನಿಯೋಜನೆಗೊಂಡ ದಿನದಿಂದಲೇ ಕಾರ್ಯಪ್ರವೃತ್ತರಾದರು. ಊರವರು ಹಾಗೂ ಸಹ ಶಿಕ್ಷಕರ ಸಹಕಾರದಿಂದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಅಧ್ಯಯನ ಮಾಡಲು ಅನುಕೂಲವಾಗುವಂತೆ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಅದರಲ್ಲಿ ಒಂದು ದತ್ತು ಯೋಜನೆ.
ಇದರ ಪ್ರಕಾರ ಎಲ್ಲ ಶಿಕ್ಷಕರಿಗೆ 10ನೇ ತರಗತಿಯ ಮಕ್ಕಳನ್ನು ಸಮನಾಗಿ (ಒಬ್ಬರಿಗೆ 4-5ಮಕ್ಕಳಂತೆ) ಹಂಚಿದರು. ಆ ಮಕ್ಕಳನ್ನು ಎಲ್ಲ ಪಾಠದಲ್ಲೂ ತೇರ್ಗಡೆಯಾಗುವಂತೆ ಮಾಡುವ ಹೊಣೆಗಾರಿಕೆ ಆಯಾ ದತ್ತು ಪಡೆದ ಶಿಕ್ಷಕರದ್ದು.
ಮಕ್ಕಳಿಗೆ ದಾನಿಗಳ ನೆರವಿನಿಂದ ಮತ್ತು ಸ್ವಂತ ಖರ್ಚಿನಿಂದ ಪೆನ್ನು, ಪೆನ್ಸಿಲ್, ನೋಟ್ ಪುಸ್ತಕ ಇತ್ಯಾದಿ ಅಧ್ಯಯನ ಸಾಮಾಗ್ರಿಗಳನ್ನು ಒದಗಿಸಿ ಮಕ್ಕಳು ಓದಲೇ ಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು. 10ನೇ ತರಗತಿ ವಿದ್ಯಾರ್ಥಿಗಳ ವೇಳಾಪಟ್ಟಿ ಬದಲಿಸಿದರು. ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಶನಿವಾರ ಮಧ್ಯಾಹ್ನವೂ ತರಗತಿಗಳನ್ನು ನಡೆಸಿದರು. ಪ್ರತಿ ಭಾನುವಾರ ವಿಷಯವಾರು ವಿಶೇಷ ತರಗತಿ. ಅಂದು ಶಿಕ್ಷಕರು ತಮ್ಮ ವಿಷಯದಲ್ಲಿ ಹಿಂದುಳಿದ ಮಕ್ಕಳನ್ನು ವೈಯಕ್ತಿಕವಾಗಿ ವಿಶೇಷ ತರಬೇತಿಯೊಂದಿಗೆ ಸಜ್ಜುಗೊಳಿಸಬೇಕಾಗಿತ್ತು.
ಇಷ್ಟೇ ಅಲ್ಲದೆ ವಿಶೇಷ ಪಠ್ಯ ಸೂಚಿಗಳು, ಮಾರ್ಗದರ್ಶಿ ಪುಸ್ತಕಗಳು, ಪ್ರಶ್ನೆಪತ್ರಿಕೆಗಳು ಇತ್ಯಾದಿಗಳನ್ನು ಬಳಸಿ ಮಕ್ಕಳನ್ನು ಪ್ರೇರೇಪಿಸಿದರು. ಆಗಾಗ ಪರೀಕ್ಷೆ ನಡೆಸಿ, ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬಿದರು. 10 ವರ್ಷಗಳ ಪ್ರಶ್ನೆ ಪತ್ರಿಕೆಗಳ ಪುಸ್ತಕ ಬಳಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಗೆ ಉತ್ತರಿಸುವ ಕೌಶಲ ಬೆಳೆಸಿದರು. 15 ದಿನಗಳಿಗೊಮ್ಮೆ ಪೋಷಕರ ಸಭೆ ಕರೆದು ಅವರ ಮಕ್ಕಳು ಯಾವ ಮಟ್ಟದಲ್ಲಿ ಇದ್ದಾರೆ? ಹೇಗೆ ಪರೀಕ್ಷೆಗೆ ತಯಾರಾಗಬೇಕು? ಏಕೆ ಹಿಂದುಳಿದಿದ್ದಾರೆ ಇತ್ಯಾದಿ ವಿಷಯಗಳನ್ನು ಚರ್ಚಿಸಿ ಪೋಷಕರ ಜವಾಬ್ದಾರಿಯನ್ನೂ ಹೆಚ್ಚಿಸಿದರು.
ರಾತ್ರಿ ಶಾಲೆ
ಹೆಚ್ಚಿನ ವಿದ್ಯಾರ್ಥಿಗಳ ಮನೆಯಲ್ಲಿ ಕರೆಂಟಿಲ್ಲ, ಓದಿಗೆ ಪೂರಕ ವಾತಾವರಣವೂ ಇಲ್ಲ. 10 ಕಿ. ಮೀ. ದೂರದ ಪರೀಕ್ಷಾ ಕೇಂದ್ರಕ್ಕೆ ನಡೆದೇ ಹೋಗಬೇಕಾದ ಪರಿಸ್ಥಿತಿ. ಇದನ್ನು ಮನಗಂಡ ಅವರು ಕೈಗೊಂಡ ಇನ್ನೊಂದು ಮಹತ್ವದ ಕಾರ್ಯಕ್ರಮ ರಾತ್ರಿ ಶಾಲೆ ಯೋಜನೆ (ರಾತ್ರಿಯೂ ಶಾಲೆಯಲ್ಲೇ ತಂಗುವ ವ್ಯವಸ್ಥೆ). ಇದರಂತೆ 2013ರ ಮಾರ್ಚ್ 20ರಿಂದ ಎಪ್ರಿಲ್ 10ರ ತನಕ ಅಂದರೆ ಪರೀಕ್ಷಾ ಅವಧಿಯಲ್ಲಿ 20 ದಿನ ಹಗಲು-ರಾತ್ರಿ ಕಡ್ಡಾಯವಾಗಿ ಎಲ್ಲ ಮಕ್ಕಳೂ ಶಾಲೆಯಲ್ಲೇ ಇದ್ದು ಸಮೂಹ ಅಧ್ಯಯನ ನಡೆಸಬೇಕಾಗಿತ್ತು. ಆ ಸಮಯದಲ್ಲಿ 24 ಗಂಟೆಯೂ ನಾರಾಯಣ ಮತ್ತು ಸಹ ಶಿಕ್ಷಕ ಉಮೇಶ್ ಕುದರಿ ಮಕ್ಕಳ ಜತೆಯೇ ಇದ್ದು ಧೈರ್ಯ ತುಂಬಿದರು. ಜತೆಯಲ್ಲಿ ಪಾಳಿಯಂತೆ ಇಬ್ಬರು ಪೋಷಕರೂ ಇದ್ದರು. ಮಕ್ಕಳು ಬೆಳಿಗ್ಗೆ 4 ಗಂಟೆಗೆ ಏಳಬೇಕಾಗಿತ್ತು. 5 ಗಂಟೆಯಿಂದ ಪಾಠ ಶುರು. ಅಷ್ಟು ಹೊತ್ತಿಗೆ ಶಿಕ್ಷಕಿಯರೂ ತಮ್ಮ ಮನೆ ಕೆಲಸ ಬಿಟ್ಟು ಮಕ್ಕಳಿಗೆ ಪಾಠ ಹೇಳಲು ಬರುತ್ತಿದ್ದರು.
ರಾತ್ರಿ ಶಾಲೆಯ ದಿನಗಳಲ್ಲಿ ಮಕ್ಕಳಿಗೆ ನಾಲ್ಕು ಹೊತ್ತೂ ಒಳ್ಳೆಯ ಊಟ-ತಿಂಡಿಯನ್ನು ಸ್ವಂತ ಖರ್ಚಿನಿಂದ ಹಾಗೂ ದಾನಿಗಳ ನೆರವಿನಿಂದ ಒದಗಿಸಿದರು. ಶಾಲೆಯಿಂದ ಪರೀಕ್ಷಾ ಕೇಂದ್ರಕ್ಕೆ ಮಕ್ಕಳಿಗೆ ಹೋಗಲು ಅನುಕೂಲವಾಗುವಂತೆ ಉಚಿತ ಜೀಪ್ ವ್ಯವಸ್ಥೆಯನ್ನು ಮಾಡಿದರು.
'ರಾತ್ರಿ ಶಾಲೆ ಮಾಡಿದ್ದು ತುಂಬ ಪ್ರಯೋಜನಕ್ಕೆ ಬಂತು. ಪ್ರತಿ ವಿದ್ಯಾರ್ಥಿಯತ್ತ ವೈಯಕ್ತಿಕ ಗಮನ ಕೊಟ್ಟದ್ದರಿಂದ ಮತ್ತು ಸಹ ಅಧ್ಯಾಪಕರು, ಸಂಘ ಸಂಸ್ಥೆಗಳು, ಸ್ಥಳೀಯರ ಸಹಕಾರದಿಂದ ಶೇ. 100 ಫಲಿತಾಂಶ ಪಡೆಯಲು ಸಾಧ್ಯವಾಯ್ತು' ಎಂಬುದು ಮುಖ್ಯೋಪಾಧ್ಯಾಯರ ವಿನೀತ ನುಡಿ. ಮುಖ್ಯೋಪಾಧ್ಯಾಯ ಕೆ. ನಾರಾಯಣ ಅವರ ಮೊಬೈಲ್ ಸಂಖ್ಯೆ 9845148650ಕ್ಕೆ ಕರೆ ಮಾಡಿ ನೀವೂ ಅಭಿನಂದನೆ ಸಲ್ಲಿಸಬಹುದು.
ಚಿತ್ರ- ಲೇಖನ: ಸಹನಾ ಕಾಂತಬೈಲು