ಶತಕಕ್ಕೆ ಎರಡೇ ಬಾಕಿ. ಆದರೆ ನೋಡಿದರೆ ಹಾಗನ್ನಿಸುವುದೇ ಇಲ್ಲ. ಪುಟಿಯುವ ಉತ್ಸಾಹ. ಸದಾ ಏನಾದರೂ ಮಾಡಬೇಕು ಎನ್ನುವ ತುಡಿತ. ಗಾಂಧಿ ತತ್ತ್ವಾನುಯಾಯಿಯಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪ್ರೊ. ಎಸ್.ಆರ್. ರೋಹಿಡೇಕರ್ 98ರ ಇಳಿವಯಸ್ಸಿನಲ್ಲೂ ಉಲ್ಲಾಸದ ಚಿಲುಮೆ. ಇವರ ಮಾರ್ಗದರ್ಶನ ಪಡೆಯಲು ಇಂದಿಗೂ ಅನೇಕರು ಪ್ರತಿದಿನ ಇವರನ್ನು ಭೇಟಿ ಮಾಡುತ್ತಾರೆ! ಮೊನ್ನೆ ಮೊನ್ನೆಯವರೆಗೂ ಇವರು ಯೋಗಾಭ್ಯಾಸ ಮಾಡುತ್ತಿದ್ದರು ಎಂದರೆ ಅಚ್ಚರಿಯಾಗದಿರದು!
'ಶಿಕ್ಷಣವೆಂದರೆ ಕೇವಲ ಜ್ಞಾನ ಸಂಪಾದನೆಯಲ್ಲ. ರಾಷ್ಟ್ರದ ವಿಕಾಸ, ಅಂತಾರಾಷ್ಟ್ರೀಯ ಮಟ್ಟದ ಸಾಮಾಜಿಕ ನಾಗಾಲೋಟಕ್ಕೆ ತಕ್ಕ ಮಾನವ ಸಂಪನ್ಮೂಲವನ್ನು ಒದಗಿಸುವ ಸಾಧನ' ಎಂದು ಪ್ರತಿಪಾದಿಸಿದ ಪ್ರೊ. ರೋಹಿಡೇಕರ್ ಗ್ರಂಥ ರಚನಕಾರರೂ ಹೌದು. ಒಟ್ಟೂ 25 ಪುಸ್ತಕಗಳನ್ನು ಬರೆದಿದ್ದಾರೆ. ವಿಶೇಷವೆಂದರೆ, ಶೇಕ್ಸ್‌ಪಿಯರನ ಸಮಗ್ರ ಸಾನೆಟ್‌ಗಳನ್ನು ಕನ್ನಡಕ್ಕೆ ಅನುವಾದಿಸಿದ ಮೊದಲಿಗರು ಎಂಬ ಹೆಗ್ಗಳಿಕೆ ಇವರದು. ನಿವೃತ್ತಿಯ ನಂತರ ಅನೇಕ ವರ್ಷಗಳವರೆಗೆ ಶೈಕ್ಷಣಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿ.ಕೆ.ಆರ್.ವಿ. ರಾವ್ ಅವರು ಬೆಂಗಳೂರಿನಲ್ಲಿ ಸ್ಥಾಪಿಸಿದ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್‌ಗೆ ಸದಸ್ಯರಾಗಿ ಶೈಕ್ಷಣಿಕ ಸಂಶೋಧನೆಗಳನ್ನು ಕೈಗೊಂಡವರು. ಈ ಸಂಸ್ಥೆಯಿಂದ ಅವರ ಅನೇಕ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ.
ಸರ್ಕಾರದ ಮಟ್ಟದಲ್ಲಿ ಪಿಯುಸಿ ಅಭ್ಯಾಸ ಕ್ರಮದ ಪುನರ್‌ರಚನೆಯಲ್ಲಿ ಇವರು ತಯಾರಿಸಿದ ಪಿಯುಸಿ ಪಠ್ಯಕ್ರಮ ಇನ್ನೂ ಜಾರಿಯಲ್ಲಿರುವುದು ಶಿಕ್ಷಣಕ್ಕೆ ಅವರೆಂಥ ಭದ್ರಬುನಾದಿ ಹಾಕಿಕೊಟ್ಟಿದ್ದಾರೆ ಎಂಬುದರ ಅರಿವಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇವರು ಬರೆದ ಸಂಕ್ಷಿಪ್ತ ಭಾಷಾಂತರ ಪದಕೋಶ ಮತ್ತು ಆಡಳಿತ ಸಹಾಯ ಪುಸ್ತಕಗಳು ಇಂದಿಗೂ ಚಾಲ್ತಿಯಲ್ಲಿವೆ. ಪಿಇಸಿಆರ್‌ಟಿ ಪ್ರೊಜೆಕ್ಟ್‌ನಲ್ಲಿ ರಾಜಸ್ಥಾನ, ಸಿಕ್ಕಿಮ್, ಮಣಿಪುರ ಸೇರಿದಂತೆ ಭಾರತದಾದ್ಯಂತ ಅನೇಕ ರಾಜ್ಯಗಳಲ್ಲಿ ಪ್ರಮುಖ ಶೈಕ್ಷಣಿಕ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ ಇವರ ನೂರಾರು ಭಾಷಣಗಳು ರೇಡಿಯೊ, ದೂರದರ್ಶನಗಳಲ್ಲಿ ಪ್ರಸಾರವಾಗಿವೆ.
ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ಹೊಸ ಹೊಸ, ಸೃಜನಾತ್ಮಕ ಯೋಜನೆಗಳನ್ನು ರೂಪಿಸಿದ ಹೆಗ್ಗಳಿಕೆ ಇವರದು. 1968-69ರಲ್ಲಿ ಅಮೆರಿಕ ಸರ್ಕಾರವು 'ಇಂಡಿಯಾ ಪ್ರಾಜೆಕ್ಟ್'ನ ಅಡಿಯಲ್ಲಿ ಭಾರತದ ಬಗ್ಗೆ ತಯಾರಿಸುತ್ತಿದ್ದ ಪುಸ್ತಕಗಳಿಗೆ ಮಾರ್ಗದರ್ಶನ ನೀಡಿ, ಅಲ್ಲಿನವರಿಗೆ ಭಾರತದ ಜನಜೀವನ, ಸಂಸ್ಕೃತಿ, ಕಲೆಯ ಬಗ್ಗೆ ಇದ್ದ ಹಲವು ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿ, ಭಾರತದ ಸಂಸ್ಕೃತಿ, ಕಲಾ ಶ್ರೀಮಂತಿಕೆಯನ್ನು ತಿಳಿಸಿಕೊಟ್ಟ ಪ್ರೊ. ರೋಹಿಡೇಕರ್ ದೇಶದ ಹೆಮ್ಮೆ. ಇವರ ಸಾಧನೆಯನ್ನು ಗುರುತಿಸಿ 1995ರಲ್ಲಿ ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ರಾಜ್ಯಪಾಲ ಖುರ್ಷಿದ್ ಅಲಂ ಖಾನ್, ಬಿ.ಡಿ. ಜತ್ತಿ, ಡಾ. ಸಾ.ಶಿ. ಮರುಳಯ್ಯ ಮುಂತಾದವರು ಸನ್ಮಾನಿಸಿದ್ದಾರೆ. ಅಷ್ಟೇ ಅಲ್ಲ ಅನೇಕ ಸಂಘ ಸಂಸ್ಥೆಗಳೂ ಇವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ. ಶಿಕ್ಷಣ ಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಕರ್ಮಯೋಗಿ, ಜ್ಞಾನಯೋಗಿ ಪ್ರೊ. ಎಸ್.ಆರ್. ರೋಹಿಡೇಕರ್ ಶತಾಯುಷಿಯಾಗಿ ಸಮಾಜಕ್ಕೆ ಅವರ ಮಾರ್ಗದರ್ಶನ ಇನ್ನಷ್ಟು ಸಿಗಲಿ.
-ಜಯಶ್ರೀ ದೇಶಪಾಂಡೆ