ಬಾಲ ಕವಯಿತ್ರಿ ಶಾರ್ವರಿ ಜಿ. ರಾವ್ ಮೈಸೂರಿನ ಗಿರೀಶ್ ಹಾಗೂ ವಾಣಿಶ್ರೀಯವರ ಮಗಳು. ಓದುತ್ತಿರುವುದು ಇಂಗ್ಲಿಷ್ ಮಾಧ್ಯಮದಲ್ಲಾದರೂ ಕನ್ನಡದಲ್ಲಿ ಕವಿತೆ ಬರೆಯುವ ಹವ್ಯಾಸವನ್ನು ಬಾಲ್ಯದಿಂದಲೇ ರೂಢಿಸಿಕೊಂಡಿದ್ದಾಳೆ. ಕನ್ನಡ ಕಾವ್ಯಗೋಷ್ಠಿಯಲ್ಲೂ ಭಾಗವಹಿಸಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.
ಈಕೆ ರಚಿಸಿದ 'ಅತಿವೃಷ್ಟಿ-ಅನಾವೃಷ್ಟಿ', 'ರಾಜಕೀಯ ದೊಂಬರಾಟ', 'ಬರಗಾಲ' ಕವನಗಳಲ್ಲಿ ಈಕೆಯ ಸಾಮಾಜಿಕ ಕಳಕಳಿ ವ್ಯಕ್ತವಾದರೆ, 'ಹಸಿರು' ಕವನದಲ್ಲಿ ಪರಿಸರದ ಬಗೆಗಿನ ಕಾಳಜಿ, 'ಗುರು' ಕವನದಲ್ಲಿ ಗುರುಹಿರಿಯರ ಬಗ್ಗೆ ಗೌರವ ಎದ್ದು ಕಾಣುವಂತಿದೆ. ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿರುವ ಈಕೆಯ ಕವನಗಳಲ್ಲಿನ ಪ್ರಬುದ್ಧತೆ, ಕನ್ನಡ ಪದಪ್ರಯೋಗದ ಮೇಲಿನ ಹಿಡಿತ ಈಕೆ ಭವಿಷ್ಯದ ಕವಯಿತ್ರಿ ಎನ್ನುವುದನ್ನು ನಿರೂಪಿಸುತ್ತದೆ.
ಬಡವರ ಸೇವೆ ಮಾಡಬೇಕು, ಕನ್ನಡ ನಾಡು, ನುಡಿ ಉಳಿಸುವಂಥ ಕೆಲಸ ಮಾಡಬೇಕೆಂಬ ಮಹದಾಸೆಯನ್ನು ಈ ಚಿಕ್ಕ ವಯಸ್ಸಿಗಾಗಲೇ ಹೊತ್ತಿರುವ ಶಾರ್ವರಿ, ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾಳೆ. ಈಕೆಗೆ ಸರಿಯಾದ ಮಾರ್ಗದರ್ಶನ ದೊರೆತರೆ ಕನ್ನಡ ಕಾವ್ಯಲೋಕಕ್ಕೆ ಉತ್ತಮ ಕೊಡುಗೆಯಾಗುವುದರಲ್ಲಿ ಸಂಶಯವಿಲ್ಲ.
- ಸೀತಾರಾಮ