ಸಾಧನೆ

ಸ್ಮಶಾನ ಸಾಧು

ಈತ ಅಪ್ಪಟ್ಟ ಕನ್ನಡ ಪ್ರೇಮಿ. 76ರ ಇಳಿ ವಯಸ್ಸು. ಬರವಣಿಗೆಯೇ ಬದುಕು. ವಿಚಿತ್ರ ಎಂದರೆ ಸ್ಮಶಾನದಲ್ಲಿ ಕುಳಿತರೆ ಮಾತ್ರ ಇವರಿಗೆ ಅಕ್ಷರ ಸರಸ್ವತಿ ಒಲಿಯುತ್ತಾಳೆ. 39 ನಾಟಕಗಳನ್ನು ಹೀಗೆಯೇ ಬರೆದಿದ್ದಾರೆ.
ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ಸಾಧು ಕಠಾರೆ ಎಂಬ ಸಾಧಕನ ಕಥೆಯೇ ರೋಚಕ. ಬೆಳಗಾಗುತ್ತಲೇ ಅವರ ನಡಿಗೆ ಸ್ಮಶಾನದತ್ತ. ಅಲ್ಲಿನ ಪ್ರಶಾಂತ ವಾತಾರಣದಲ್ಲಿ ಕುಳಿತು ಬರೆದರೆ ಮಾತ್ರ ಸಾಲುಗಳು ಮುಂದೆ ಸಾಗುತ್ತವೆ. ಒಮ್ಮೆ ಬರೆಯಲು ಕುಳಿತರೆ ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ, ಹೊಟ್ಟೆ ಚುರುಗುಟ್ಟಿದರೆ ಬಾಳೆಹಣ್ಣು ತಿನ್ನುತ್ತಾರೆ. ಬರವಣಿಗೆ ಸಾಕು ಅನ್ನಿಸಿದೊಡನೆ ಮನೆಯತ್ತ ಹೆಜ್ಜೆ.
ಕನ್ನಡ ಭಾಷೆಯ ಮೇಲೆ ಅತೀವ ಪ್ರೀತಿ ಇಟ್ಟುಕೊಂಡಿರುವ ಕಠಾರೆಯವರಿಗೆ ನಾಟಕವೆಂದರೆ ವಿಪರೀತ ಗೀಳು. ಚಿಕ್ಕಂದಿನಲ್ಲಿಯೇ ನಾಟಕ ನೋಡುತ್ತಿದ್ದರು. ಆಗಲೇ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಲಾರಂಭಿಸಿದರು. ಶಾಲೆಗೆ ಹೋಗದೆ ನಾಟಕದ ಹಿಂದೆ ಬಿದ್ದಿದ್ದಕ್ಕೆ ಮನೆಯವರು ವಿರೋಧಿಸಿದರು. ಕೊನೆಗೊಂದು ದಿನ ನಾಟಕಕ್ಕಾಗಿಯೇ ಮನೆ ಬಿಟ್ಟು ಬೆಂಗಳೂರಿಗೆ ಓಡಿ ಹೋದರು. ಅದ್ಹೇಗೋ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ಕಂಪನಿ ಸೇರಿ ನಾಟಕದಲ್ಲಿ ಅಭಿನಯ ಆರಂಭಿಸಿದರು. ಆ ಬಳಿಕ ಹೆಸರಾಂತ ನಟನಟಿಯರಾದ ಧೀರೇಂದ್ರ ಗೋಪಾಲ್, ಸುಂದರಕೃಷ್ಣ ಅರಸ, ಸುಧೀರ್, ಅಕ್ಕಲಕೋಟೆ ರೇಣಕಮ್ಮ, ಕಲ್ಪನಾ, ಬಿ.ವಿ. ರಾಧಾ, ಸರ್ವಮಂಗಳಾ, ಮುಧೋಳ ಅಪ್ಪುರಾಜ, ಎಲಿವಾಳ ಸಿದ್ದಯ್ಯ, ಮುಸುರೆ ಕೃಷ್ಣಮೂರ್ತಿಯ ಮೊದಲಾದವರೊಂದಿಗೆ ನೂರಾರು ನಾಟಕದಲ್ಲಿ ಸಾಧು ಕಠಾರೆ ಪಾತ್ರ ಮಾಡಿದರು. ಅಲ್ಲಿಂದ ಬದುಕು ಚಿತ್ರರಂಗದತ್ತ ವಾಲಿತು. 'ಸಮರ', 'ಸ್ಟೇಟ್‌ರೌಡಿ', 'ಯುದ್ಧ', 'ಜಿರಂಜೀವಿ ರಾಜಾಗೌಡ', 'ಅಲ್ಲಾನೀನೆ ಈಶ್ವರನೀನೆ' ಸೇರಿದಂತೆ ಮುಂತಾದ ಚಿತ್ರಗಳಲ್ಲೂ ನಟಿಸಿದರು. ಕಿರುತೆರೆಯ ಧಾರವಾಹಿಗಳಲ್ಲಿಯೂ ಅವಕಾಶಗಳು ಒಲಿದು ಬಂದವು.

ಮರಳಿ ಗೂಡಿಗೆ
ವಯಸ್ಸಾದಂತೆ ಅವಕಾಶಗಳು ಕಡಿಮೆಯಾದವು. ಹುಟ್ಟೂರು ಹುಬ್ಬಳ್ಳಿ ಮತ್ತೆ ನೆನಪಾಯಿತು. ಪುಟ್ಟರಾಜ ಗವಾಯಿಗಳ ಪ್ರೇರಣೆಯಂತೆ 'ಕರ್ತೃ ಗುರುಸಿದ್ಧೇಶ್ವರ ಮಹಾತ್ಮೆ' ನಾಟಕ ಬರೆದರು. ಆ ಬಳಿಕ ಕಳೆದ ಎಂಟತ್ತು ವರ್ಷಗಳಲ್ಲಿ 'ಶರೀಫ ಶಿವಯೋಗಿಗಳ ಮಹಾತ್ಮೆ', 'ಸಿದ್ಧಾರೂಢ ಮಹಾತ್ಮೆ', 'ಜಗಜ್ಯೋತಿ ಬಸವೇಶ್ವರ ಮಹಾತ್ಮೆ', 'ಪುಟ್ಟರಾಜ ಕವಿಗವಾಯಿಗಳ ಮಹಾತ್ಮೆ', 'ಸಾಕಿದ ಹುಲಿ' ಸೇರಿ 39 ನಾಟಕಗಳನ್ನು ಬರೆದಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಕಣ್ಣಿಗೆ ಚಾಳಿಸು ಧರಿಸದೇ, ಕೈಯಲ್ಲಿ ಕೋಲು ಹಿಡಿಯದೇ ಲವಲವಿಕೆಯಿಂದ ಓಡಾಡುವ ಸಾಧು ಕಠಾರೆಯವರ ಉತ್ಸಾಹ ಎಂಥವರಿಗೂ ಹುಮ್ಮಸ್ಸು ತರುತ್ತದೆ.
ಸಾಧು ಕಠಾರೆಯವರಿಗೆ ಸರ್ಕಾರ ಮಾಸಾಶನ ನೀಡುತ್ತಿದ್ದು, ಮನೆಯನ್ನೂ ನೀಡಿದೆ. ನೂರಾರು ಸನ್ಮಾನ, ಹತ್ತಾರು ಪ್ರಶಸ್ತಿಗಳು ಸಾಧು ಕಠಾರೆಯವರಿಗೆ ಅರಸಿ ಬಂದಿದೆಯಾದರೂ ನಾಡಿನ ಹೆಮ್ಮೆಯ ಪ್ರತೀಕವಾದ ರಾಜ್ಯೋತ್ಸವ ಪ್ರಶಸ್ತಿ ಕೊನೆಯ ಕನಸು ಎನ್ನುತ್ತಾರೆ. ಕೈಯಲ್ಲಿ ಶಕ್ತಿಯಿರುವವರೆಗೂ ಸ್ಮಶಾನದಲ್ಲಿಯೇ ಕುಳಿತು ಕನ್ನಡ ಅಕ್ಷರ ಸೇವೆ ಮುಂದುವರಿಸುತ್ತೇನೆ ಎನ್ನುತ್ತಾರೆ. ಸಾಧಕನ ಕನಸು ನನಸಾಗಲಿ.

- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!