ಉದರ ನಿಮಿತ್ತ ಕಾಲಿಗೆ ಗೆಜ್ಜೆ ಕಟ್ಟಿ, ವೇಷ ಧರಿಸಿ, ಕಿನ್ನೂರಿ ನಾದದೊಂದಿಗೆ ಗೀಗೀ ಪದ, ಗಂಗೇಗೌರಿ ಪದಗಳನ್ನು ಹಾಡುತ್ತಾ ಹೋಗುತ್ತಿದ್ದರೆ ಜೋಗಿಗಳಿಗೆ ಕಾಲ ಕಳೆದದ್ದೇ ಗೊತ್ತಾಗದು. ಊರೂರು ಅಲೆದು ದೇಗುಲ, ಶಾಲೆ, ಊರ ಹೊರಗಿನ ಡೇರೆಗಳಲ್ಲಿ ರಾತ್ರಿ ಕಳೆಯುತ್ತಾರೆ ಇವರು. ಕರ್ನಾಟಕದಲ್ಲಿ ಕಿನ್ನೂರಿ ಜೋಗಿ ಸಮುದಾಯಕ್ಕೆ ಸೇರಿದ ವಿದ್ಯಾವಂತರು, ಅಧಿಕಾರಿಗಳು, ರಾಜಕಾರಣಿಗಳು ಅತಿ ವಿರಳ. ಆದರೂ ಇಂಥ ಅಕ್ಷರ ವಂಚಿತ ಸಮುದಾಯದಲ್ಲಿ ಅರಳಿದವರು ಆನಂದಪ್ಪ ಜೋಗಿ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಳ್ಳಿಬೈಲಿನ ಆನಂದಪ್ಪ ಅದ್ಭುತ ಜಾನಪದ ಕಲಾವಿದ. ಅವರ ಜೀವನ ಆರಂಭವಾದದ್ದೇ ಜೋಗಿ ಸಮುದಾಯದ ಹಾಡಿನಿಂದ. ಈತನ ತಂದೆ ಬಸವಣ್ಣೆಪ್ಪ ಹಾಗೂ ತಾಯಿ ಕರಿಯಮ್ಮ ಹಾಡು ಹೇಳಿಕೊಟ್ಟು 'ಇದೇ ನಿನ್ನ ಜೀವನ ತಮ್ಮಾ' ಎಂದು ಹರಸಿದರು. ಆದರೆ, ಕಲಿಯುವ ಹಂಬಲವಿದ್ದ ಆನಂದಪ್ಪ ಕೂಲಿ ಮಾಡಿಕೊಂಡೇ ಪದವಿ ಪೂರೈಸಿದರು. ಚಿಕ್ಕಂದಿನಲ್ಲೇ ಮದುವೆಯಾಯಿತು. ಆದರೂ ಜ್ಞಾನದ ದಾಹ ತೀರಲಿಲ್ಲ. ಮೂರು ಮಕ್ಕಳ ಕುಟುಂಬವನ್ನೂ ನಿರ್ವಹಿಸಬೇಕು, ಇತ್ತ ಶಿಕ್ಷಣವನ್ನೂ ಮುಂದುವರಿಸಬೇಕು. ಕರ್ನಾಟಕ ವಿವಿಯಲ್ಲಿ ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸುವಾಗ ಇವರ ವಯಸ್ಸು 40!
ಹಿರಿಯ ಜಾನಪದ ವಿದ್ವಾಂಸರಾದ ಪ್ರೊ. ದುರ್ಗಾದಾಸ್ ಸಲಹೆ ಮೇರೆಗೆ ಜಾನಪದದಲ್ಲಿ ಪಿಎಚ್‌ಡಿ ಸಂಪಾದಿಸಿದರು. ಮಾರ್ಗದರ್ಶಕರಾಗಲು ಜಾನಪದ ವಿಭಾಗದ ವಿ.ಎಲ್. ಪಾಟೀಲ ಒಪ್ಪಿಕೊಂಡರು.
ಇವರ ಪಿಎಚ್‌ಡಿ ಸಂಶೋಧನೆ ವೇಳೆಯ ಬದುಕು ಕಿನ್ನೂರಿ ಹಾಡಿನ ರಾಗದಷ್ಟು ಸುಶ್ರಾವ್ಯವಾಗಿರಲಿಲ್ಲ. ಮೂರು ಮಕ್ಕಳ ತಂದೆಯಾದ ಇವರು ಕುಟುಂಬದ ನಿರ್ವಹಣೆಗಾಗಿ ರಾತ್ರಿ ಪಾಳಿಯಲ್ಲಿ ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು. ಕ್ಷೇತ್ರ ಕಾರ್ಯಕ್ಕೆ ಹೋದಾಗ ಹಣವಿಲ್ಲದೆ ಮೈಲುಗಟ್ಟಲೆ ನಡೆದಿದ್ದಾರೆ. ಹಾಸ್ಟೆಲ್‌ನಲ್ಲಿ ಊಟವಿಲ್ಲದಿದ್ದಾಗ ಹೊರಗೆ ಬೆಳೆಯುವ ಹಕ್ಕರಿಕೆ ಸೊಪ್ಪನ್ನು ತಿಂದು ಹಸಿವನ್ನು ನೀಗಿಸಿಕೊಂಡಿದ್ದಾರೆ. ಪಿಎಚ್‌ಡಿ ಸಂಶೋಧನೆಯ ಸಂದರ್ಭದಲ್ಲಿ ಹಸಿವಿನಿಂದ ಕಳೆದ ದಿನಗಳಿಗೆ ಲೆಕ್ಕವೇ ಇಲ್ಲ.
ಜಾನಪದ ವಿವಿವಿಯಲ್ಲಿ ತಾತ್ಕಾಲಿಕ ಕ್ಷೇತ್ರತಜ್ಞರಾಗಿದ್ದಾಗ ಜೋಗಿ ಅವರ ಪತ್ನಿ ಅನಾರೋಗ್ಯಕ್ಕೆ ತುತ್ತಾದರು. ಪತ್ನಿಯನ್ನು ಉಳಿಸಲು ಇದ್ದ ಕೆಲಸವನ್ನೂ ತೊರೆದರು. ಇದ್ದ ಅಲ್ಪಸ್ವಲ್ಪ ಒಡವೆಗಳನ್ನೂ ಮಾರಿದರು. ಆಕೆಗೆ ಮರುಜೀವ ತಂದುಕೊಡುವಲ್ಲಿ ಆನಂದಪ್ಪ ಪಟ್ಟ ಬವಣೆ ಭಗವಂತನೇ ಬಲ್ಲ.
ಪ್ರಸ್ತುತ ಹುಬ್ಬಳ್ಳಿಯ ಗೋಕುಲಪ್ರದೇಶದ ಕೊಳಗೇರಿಯ ಬಾಡಿಗೆ ಮನೆಯಲ್ಲಿರುವ ಜೋಗಿಗೆ ಹಾಡಿನ ಕಾರ್ಯಕ್ರಮಗಳೇ ಇಂದು ಬದುಕಾಗಿದೆ. ಒಂದೆಡೆ ಸಹಧರ್ಮಿಣಿಯ ಆರೋಗ್ಯ ಕಾಪಾಡುವಿಕೆ. ಮತ್ತೊಂದೆಡೆ ಈತನ ವಯಸ್ಸಿಗೆ ಬಂದ ಎರಡು ಹೆಣ್ಣು ಮಕ್ಕಳ ಶಿಕ್ಷಣ ಕೊಡಿಸುವ ಹೊಣೆ.
ಜೋಗಿಯ ಬದುಕು ಕಿನ್ನೂರಿಯಷ್ಟೇ ಇಂಪಾಗಿರುವುದಿಲ್ಲವೆನ್ನುವುದಕ್ಕೆ ಇದು ಮತ್ತೊಂದು ನಿದರ್ಶನವಾಯಿತೇ? ಜೋಗಿ ಸಂಪರ್ಕ: 9980713605.
- ಡಾ. ವೃಷಭಕುಮಾರ್ ಶಿಗ್ಗಾವಿ