ಪ್ರಾಣಿಗಳ ಮೇಲೆ ಎಲ್ಲರಿಗೂ ಪ್ರೀತಿ ಇದ್ದೇ ಇರುತ್ತದೆ. ಆ ಪ್ರೀತಿ ಕೇವಲ ನಾಯಿ ಬೆಕ್ಕುಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಆದರೆ ಇಲ್ಲೊಬ್ಬರಿದ್ದಾರೆ, ಹೆಸರು ಸುಧೀಂದ್ರ ಐತಾಳ್. ಅಪ್ಟಟ ಪ್ರಾಣಿಪ್ರೇಮಿ. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಮನೆಯಲ್ಲಿ ಪುಟ್ಟ ಪ್ರಾಣಿ ಸಂಗ್ರಹಾಲಯವನ್ನು ಇವರು ನಿರ್ಮಿಸಿದ್ದಾರೆ.
ಮನೆಯ ಹಿಂಭಾಗದ ಸ್ವಲ್ಪ ಜಾಗವನ್ನೇ ಬಳಸಿಕೊಂಡು, ಪ್ರಾಣಿಗಳನ್ನು ಸ್ವಂತ ಮಕ್ಕಳಂತೆ ಸಾಕುತ್ತಿದ್ದಾರೆ. ಕರೆಂಟ್ ಶಾಕ್ ಹೊಡೆದು, ರೆಕ್ಕೆ ಕತ್ತರಿಸಿ ಹೋಗಿ ಅಥವಾ ಅನಾರೋಗ್ಯ ಸ್ಥಿತಿಯಲ್ಲಿರುವ ಪಕ್ಷಿಗಳು ಇವರ ಪೋಷಣೆಯಿಂದಾಗಿ ಮರಳಿ ಜೀವ ಪಡೆಯುತ್ತವೆ. ಇಲ್ಲಿ ಬಿಳಿ ಇಲಿ, ಮೊಲ, ಎಮು, ಕುದುರೆ, ಕೋತಿ, ಬಾತುಕೋಳಿ, ದನ, ಎಮ್ಮೆ, ಆಮೆ, ರಷ್ಯನ್ ಕ್ಯಾಟ್, ಲವ್‌ಬರ್ಡ್ಸ್ ಸೇರಿದಂತೆ ವಿಧ-ವಿಧದ ಪಕ್ಷಿಗಳು ಹಾಗೂ ಹಲವು ಪ್ರಾಣಿಗಳು ಇವರ ಪೋಷಣೆಯಲ್ಲಿ ಬೆಳೆಯುತ್ತಿವೆ.
ಜೀವನಾಧಾರಕ್ಕಾಗಿ ಇವರು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಕೃಷಿ. ಆದರೆ, ಕೃಷಿಯಿಂದ ಬರುವ ಆದಾಯ ಸಾಲದೆ ಹೋದುದರಿಂದ ಬ್ಯಾಂಕ್‌ಗಳಲ್ಲಿ ಲಕ್ಷಗಟ್ಟಲೆ ಸಾಲ ಮಾಡಿ ಪ್ರಾಣಿಗಳನ್ನು ಮನೆಯಲ್ಲೇ ಸಾಕುತ್ತಿದ್ದಾರೆ.
ಇವರು ಹಾಡುವುದು- ಮಾತಾಡುವುದು ಎಲ್ಲವೂ ಪ್ರಾಣಿಗಳೊಂದಿಗೆ. ಐತಾಳರಿಗೆ ಪ್ರಾಣಿ-ಪಕ್ಷಿಗಳು ನೀಡುವ ಪ್ರತಿಸ್ಪಂದನೆಯನ್ನು ನೋಡಿ ಎಲ್ಲರೂ ಅಚ್ಚರಿ ಪಡುತ್ತಾರೆ. ಇವರು ಸಾಕಿರುವ ಒಂದು ಕೋತಿಯ ಮೇಲೆ ಅತೀವ ಪ್ರೀತಿ. ಅದಕ್ಕೆ 'ಸ್ಮಿತಾ' ಎಂಬ ಹೆಸರನ್ನೂ ಇಟ್ಟಿದ್ದಾರೆ. ಅದಕ್ಕೆ ಬಂಗಾರದ ಆಭರಣಗಳನ್ನೂ ಮಾಡಿಸಿದ್ದರು. ಆದರೆ, ಯಾರೋ ಆ ಆಭರಣಗಳನ್ನೂ ಕದ್ದೊಯ್ದಿದ್ದಾರೆ. ಮತ್ತೆ ಬಂಗಾರ ಮಾಡಿಸಿದರು ಐತಾಳರು. ಸ್ಮಿತಾಗೂ ಆಭರಣದ ಮೇಲೆ ತುಂಬಾ ಪ್ರೀತಿ. ಹಾಗಾಗಿ ಜನರು ಅದನ್ನ ನೋಡಲು ಹೋದಾಗಲೆಲ್ಲಾ ಐತಾಳರು ಕೋತಿ ಬಳಿ, 'ಸ್ಮಿತಾ ನಿನ್ನ ನೋಡೋಕೆ ಜನ ಬಂದಿದಾರೆ. ಬಟ್ಟೆ ಮುಚ್ಚಿಕೋ. ಇಲ್ಲಾ ಅಂದ್ರೆ ಚಿನ್ನ ಕದ್ದುಕೊಂಡು ಹೋಗ್ತಾರೆ' ಅಂತ ತಮಾಷೆಗೆ ಹೇಳಿದರೆ ಸಾಕು, ಅಲ್ಲೆ ಇರುವ ಬಟ್ಟೆಯಿಂದ ಸ್ಮಿತಾ ತನ್ನ ಇಡೀ ದೇಹವನ್ನು ಮುಚ್ಚಿಕೊಳ್ಳುವುದನ್ನು ನೋಡುವುದೇ ಒಂದು ಮಜಾ. ಹೀಗೆ ಬಾಲ್ಯದಿಂದಲೇ ಪ್ರಾಣಿಗಳ ಮೇಲಿನ ಮಮತೆಯನ್ನು ಬೆಳೆಸಿಕೊಂಡಿರುವ ಇವರ ಆಸಕ್ತಿಗೆ ಮನೆಯವರೂ ಪೂರ್ಣ ಸಹಕಾರ ನೀಡುತ್ತಿದ್ದಾರೆ.
ಪ್ರಾಣಿಗಳನ್ನು ಮನೆಯಲ್ಲೇ ಸಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ನಿಮಗೂ ಕಾಡುತ್ತಿರಬಹುದು. ಹೌದು, 2007ರಲ್ಲಿ ಅರಣ್ಯ ಇಲಾಖೆಯು ಇವರ ಮನೆಯ ಮೇಲೆ ದಾಳಿ ಮಾಡಿ ಪ್ರಾಣಿಗಳನ್ನು ರಕ್ಷಿತಾರಣ್ಯಕ್ಕೆ ಸಾಗಿಸಿದ್ದೂ ಇದೆ. ಇದರ ನಂತರ ಎನಿಮಲ್ ರೆಸ್ಕ್ಯೋ ಸೆಂಟರ್ ಅನ್ನು ಸ್ಥಾಪಿಸಿ ತನ್ನ ಕೈಂಕರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚಿಗಷ್ಟೇ ಮತ್ತೊಮ್ಮೆ ಇವರ ಮನೆಯ ಮೇಲೆ ಅರಣ್ಯ ಇಲಾಖೆಯವರು ದಾಳಿ ಮಾಡಿ ಐತಾಳರನ್ನು ಬಂಧಿಸಿದ್ದರು. ಜೈಲಿನಿಂದ ಹೊರಬಂದ ತಕ್ಷಣವೇ ಇವರ ಮಾನವೀಯತೆ ಗುರುತಿಸಿ ರಾಜ್ಯ ಸರಕಾರ ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.
ಸಾಲಿಗ್ರಾಮಕ್ಕೆ ಭೇಟಿ ಕೊಟ್ಟ ಪ್ರತಿಯೊಬ್ಬರೂ ತಪ್ಪದೇ ಐತಾಳರ ಮನೆಗೆ ಹೋಗಿ ಪ್ರಾಣಿಗಳನ್ನು ನೋಡಿಕೊಂಡು ಬರುತ್ತಾರೆ. ಬಂದವರೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ತಾವೇ ಖುದ್ದಾಗಿ ಎಲ್ಲಾ ಪ್ರಾಣಿಗಳ ಪರಿಚಯ ಮಾಡಿಸಿಕೊಡುತ್ತಾರೆ ಇವರು. ಕೇವಲ ಶೋಕಿಗೋಸ್ಕರವೋ ಅಥವಾ ಪ್ರಚಾರಕೋಸ್ಕರನೋ ಪ್ರಾಣಿಗಳ ಸೇವೆ ಮಾಡದೇ ಅವರ ಹೃದಯ ದುಃಖತಪ್ತ ಪ್ರಾಣಿಗಳಿಗಾಗಿ ಮಿಡಿಯುವ ಇವರ ಈ ಮಾನವೀಯತೆಯನ್ನು ಮೆಚ್ಚಲೇಬೇಕು. ಪ್ರಾಣಿಗಳಿಗೋಸ್ಕರನೇ ಇಡೀ ಜೀವನ ಮುಡಿಪಾಗಿಸಿರುವ ಐತಾಳರಿಗೊಂದು ಸಲಾಂ.
ಪಕ್ಷಿಗಳ ಗಿಜಿಗುಟ್ಟುವಿಕೆ, ಪ್ರಾಣಿಗಳ ಕಿರುಚಾಟ ಕೇಳದೆ ನನ್ನಿಂದ ಒಂದು ಕ್ಷಣವೂ ಇರಲಾಗದು.
- ಸುಧೀಂದ್ರ ಐತಾಳರು
- ಶ್ರುತಿ ಜೈನ್ ರೆಂಜಾಳ