ಅವಮಾನ ಎಲ್ಲರಿಗುಂಟು, ಈ ಲೋಕದ ದೃಷ್ಟಿಯಲಿ,
ನಾವೆಲ್ಲರು ಎಂದೂ ಒಂದೇ, ಆ ದೇವರ ಸೃಷ್ಟಿಯಲಿ...
ಸುದೀಪ್ ನಿರ್ದೇಶನದ 'ಮೈ ಆಟೋಗ್ರಾಫ್' ಸಿನಿಮಾದ 'ಅರಳುವ ಹೂವುಗಳೇ ಆಲಿಸಿರಿ...' ಹಾಡಿನಲ್ಲಿ ಈ ಹಾಡು ಬರುತ್ತಿದ್ದಂತೆ ಎಲ್ಲರಿಗೂ ರೋಮಾಂಚನ. ಎತ್ತರದ ಶೃತಿಯಲ್ಲಿ ಮೂಡಿಬರುವ ಈ ಸಾಲು ಹೃದಯವನ್ನು ಮುಟ್ಟುತ್ತದೆ.
ಈ ಸಾಲುಗಳನ್ನು ಹಾಡಿದ್ದು ಶಿವಮೊಗ್ಗದವರೇ ಆದ ಅಂಧ ಗಾಯಕ ಶಿವಮೊಗ್ಗ ವೇಣುಗೋಪಾಲ್. ಸಿನಿಮಾ ಹಾಡಿನ ಮೂಲಕ ಅವರ ಪರಿಚಯ ಮಾಡಿಕೊಡಬೇಕಾಗಿರುವುದು ವಿಪರ್ಯಾಸ. ಏಕೆಂದರೆ, ವೇಣುಗೋಪಾಲ್ ಅವರ 50 ವರ್ಷಗಳ ಸಂಗೀತ ಸಾಧನೆಯಲ್ಲಿ ಇದು ಬರಿ ಎರಡು ಸಾಲಷ್ಟೇ. ಈ ದಾರಿಯಲ್ಲಿ ಅವರು ಸಾಧಿಸಿರುವುದು ಬಹಳ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವಿರಲಿ, ಸುಗಮ ಸಂಗೀತವಿರಲಿ, ಕೊಳಲು ವಾದನವಿರಲಿ... ವೇಣುಗೋಪಾಲ್ ಅವರಿಗೆ ವೇಣುಗೋಪಾಲ್ ಅವರೇ ಸಾಟಿ.
ಇತ್ತೀಚೆಗೆ ಅವರನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗಾಯನ ಗಂಗಾ ಟ್ರಸ್ಟ್ ರಾಜ್ಯಮಟ್ಟದ ಸ್ವರ ಸಾಮ್ರಾಟ್ ಪ್ರಶಸ್ತಿ ನೀಡಿ ಗೌರವಿಸಿತು. ಇದಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಕಲಾಶ್ರೀ, ಪಂ. ಪುಟ್ಟರಾಜ ಗವಾಯಿ, ಗಾನಶ್ರೀ, ಗಾನಕೋಗಿಲೆ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಲಭಿಸಿವೆ.
ಇವರು ಇಲ್ಲಿನ ಹೊಸಮನೆ ಬಡಾವಣೆಯ ಲಕ್ಷ್ಮಪ್ಪ ಮತ್ತು ಹನುಮಕ್ಕ ಅವರ 14ನೇ ಪುತ್ರ. ಹುಟ್ಟಿನಿಂದಲೇ ದೃಷ್ಟಿಹೀನರು. ಹಿಂದೂಸ್ತಾನಿ ಸಂಗೀತ ಗಾಯಕ ಪಂ. ಶಿವರಾಜ ಗವಾಯಿಗಳೇ ಇವರಿಗೆ ಪ್ರೇರಣೆ. ಪಿ.ಬಿ. ಶ್ರೀನಿವಾಸ್‌ರ ಸಂಗೀತ ಪಂಚಪ್ರಾಣ. ಚಿಕ್ಕವಯಸ್ಸಿನಿಂದಲೇ ಸಂಗೀತದ ಹುಚ್ಚು ಬೆಳೆಸಿಕೊಂಡರು. 15ನೇ ವಯಸ್ಸಿನಲ್ಲಿ ಪಾರ್ಕಿನಲ್ಲಿ ಕೊಳಲು ನುಡಿಸುತ್ತಿದ್ದರು. ಇದನ್ನು ಕಂಡ ವಿದ್ಯಾರ್ಥಿಗಳು ತಮ್ಮ ಸುತ್ತ ಕಳಿತು ಆಲಿಸುತ್ತಿದ್ದುದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ ವೇಣು.
ಇವರ ಸಾಧನೆಯನ್ನು ಗುರುತಿಸಿದ ಶಿವಮೊಗ್ಗದ ಡಾ. ಗುರುಬಸಪ್ಪ ಅವರು ಶ್ರೀಕಂಠಶಾಸ್ತ್ರಿಗಳೊಂದಿಗೆ ಸಂಗೀತ ಪಾಠಕ್ಕೆ ಸೇರಿಸಿದ್ದರು. ಒಂದು ವರ್ಷಗಳ ಕಾಲ ಇವರಲ್ಲಿ ಕರ್ನಾಟಕ ಸಂಗೀತವನ್ನೂ ಕಲಿತರು. ನಂತರ ಪಂ. ಶಿವಾರಾಜ ಗವಾಯಿಗಳ ಬಳಿ ಸಂಗೀತ ಶಾಲೆಗೆ ಸೇರಿದ್ದರು. ಅಲ್ಲಿಯೇ ಸಂಗೀತ ಮೇಸ್ಟ್ರು ಸಹ ಆದರು. ನಂತರ ಬೆಂಗಳೂರಿನ ಆಕಾಶವಾಣಿಯಲ್ಲಿ 6 ವರ್ಷ, ಭದ್ರಾವತಿಯ ಆಕಾಶವಾಣಿಯಲ್ಲಿ 25 ವರ್ಷ ಸೇವೆ ಸಲ್ಲಿಸಿದರು.
ಖ್ಯಾತ ಕವಿಗಳಾದ ದೊಡ್ಡರಂಗೇಗೌಡ, ದ.ರಾ. ಬೇಂದ್ರೆ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಿ.ವಿ. ಗುಂಡಪ್ಪ ಅವರ ಕವನದ ಸಾಲುಗಳನ್ನು ವೇಣು ಅವರು ಸಂಯೋಜನೆ ಮಾಡಿ ತಮ್ಮದೇ ಸ್ವರದಲ್ಲಿ ಹಾಡುತ್ತಿದ್ದರು. ನಂತರ ಪುರಂದರದಾಸ, ಕನಕದಾಸರು, ವಿಜಯದಾಸರು, ವಾದಿರಾಜರು, ಜಗನ್ನಾಥದಾಸರು ಸೇರಿದಂತೆ ಹಲವು ದಾಸರ ಸಾಲುಗಳನ್ನು ಸಂಯೋಜಿಸಿ ಹಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇದೂವರೆಗೂ ಸುಮಾರು 500ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ, ಇವರು ಕನ್ನಡದಲ್ಲಿ ಶರಣ ವೆಂಕಟರಮಣ, ಕೂಸು ಕಂಡಿರಾ ಧ್ವನಿಸುರಳಿಗಳನ್ನು, ಮರಾಠಿಯಲ್ಲಿ 4 ಕ್ಯಾಸೆಟ್‌ಗಳನ್ನು ಹೊರತಂದಿದ್ದಾರೆ. ರಂಗಗೀತೆಗಳನ್ನು ಹಾಡಿದ್ದಾರೆ.
ಸಿನಿಮಾ ಕ್ಷೇತ್ರ ಇವರನ್ನು ಗುರುತಿಸಿದ್ದು ಕಡಿಮೆ. 'ಪ್ರೇಮ' ಎಂಬ ಸಿನಿಮಾದಲ್ಲಿ ಒಂದು ಗೀತೆಗೆ ದನಿ ನೀಡಿದ್ದಾರೆ. ಇವರ ಸಾಧನೆಗೆ ಇವರ ಪತ್ನಿ ರತ್ನಮ್ಮ ಒತ್ತಾಸೆಯಾಗಿದ್ದಾರೆ. ಇವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಹಿರಿಯ ಮಗ ತಬಲಾ ಕಲಾವಿದ. ಕಿರಿಯ ಮಗಳು ಸಂಗೀತ ವಿದ್ಯಾರ್ಥಿ.
ಯಾರೂ ಗುರುತಿಸಿಲ್ಲ...
ಬೇರೆ ಜಿಲ್ಲೆಯವರ ತಮ್ಮವರ ಕಲೆಯನ್ನು ಗುರುತಿಸುತ್ತಾರೆ. ಆದರೆ, ನಮ್ಮ ಜಿಲ್ಲೆಯವರು ನಮಗೆ ಯಾವುದೇ ರೀತಿಯ ಪ್ರೋತ್ಸಾಹ ನೀಡಿಲ್ಲ. ಒಂದೆರಡು ಬಾರಿ ಅವಕಾಶ ನೀಡಿದ್ದು ಬಿಟ್ಟರೆ, ಬರೀ ನಿರ್ಲಕ್ಷ್ಯವೇ. ಇಲ್ಲಿ ನಮಗೆ ಪ್ರೋತ್ಸಾಹಕ್ಕಿಂತ ಶೋಷಣೆಯೇ ಹೆಚ್ಚಾಯಿತು.
- ವೇಣುಗೋಪಾಲ್
- ಮೋಹನ್ ಕುಮಾರ್ ಎನ್.
ಚಿತ್ರ: ಶಿವಮೊಗ್ಗ ನಂದನ್