ಇಳಿ ಸಂಜೆ. ಮೇಜಿನ ಮೇಲೆ ದೊಡ್ಡದಾಗಿ ಉರಿಯುತ್ತಿದ್ದ ಚಿಮಣಿ ದೀಪ. ಅದರ ಪಕ್ಕದಲ್ಲಿ ಕುಳಿತಿದ್ದ ಅಜ್ಜ ಏಕಾಗ್ರತೆಯಿಂದ ಯಾವುದೋ ವಿಚಾರದಲ್ಲಿ ಮುಳುಗಿ ಹೋಗಿದ್ದರು. ಅದೇನೆಂದು ನೋಡುವ ಕುತೂಹಲ ಕಾಡಿತು. ಅಜ್ಜ ಮೆಲ್ಲಗೆ ಮೇಜಿನ ಡ್ರಾಯರನ್ನು ತೆಗೆದು ಅದರೊಳಗಿನಿಂದ ಜೋಪಾನವಾಗಿರಿಸಿದ್ದ ಡೈರಿಯನ್ನು ಹೊರತೆಗೆದರು. ಆ ದಿನದ ಖರ್ಚು ವೆಚ್ಚಗಳನ್ನು ಬರೆದರು. ಕೆಲಸಕ್ಕೆ ಎಷ್ಟು ಜನ ಬಂದಿದ್ದಾರೆ, ಅವರೆಲ್ಲಾ ಏನು ಕೆಲಸ ಮಾಡಿದ್ದಾರೆ, ಹತ್ತಿರದ ದಿನಸಿ ಅಂಗಡಿಯಿಂದ ಮನೆಗೆ ತಂದ ಸಾಮಾನುಗಳ ಪಟ್ಟಿಯ ವಿವರವನ್ನು ದಾಖಲಿಸಿದರು. ಅಷ್ಟೇ ಅಲ್ಲದೆ ತಮ್ಮ ಮುದ್ದು ಮೊಮ್ಮಗಳಿಗೆ ಪ್ರೀತಿಯಿಂದ ತಂದ ಚಾಕಲೇಟ್, ದೂರ ದೇಶದಲ್ಲಿರುವ ಮೊಮ್ಮಗ ಫೋನ್ ಮಾಡಿ ತಮ್ಮ ಆರೋಗ್ಯ ವಿಚಾರಿಸಿದ್ದುದನ್ನೂ ಬರೆಯಲು ಮರೆಯಲಿಲ್ಲ. ಅಜ್ಜನಿಗೆ ಮೊದಲಿನಿಂದಲೇ ಡೈರಿ ಬರೆಯುವ ಹವ್ಯಾಸ. ಎಲ್ಲವನ್ನೂ ತಪ್ಪದೇ ಬರೆಯುತ್ತಿದ್ದರು. ಮೊದಲ ಮಳೆ ಭೂಮಿಗೆ ಬಿದ್ದದ್ದು ಯಾವಾಗ, ತೋಟಕ್ಕೆ ಮದ್ದು ಸಿಂಪಡಿಸಿದ್ದು ಯಾವಾಗ, ತೋಟದ ಕೊಯ್ಲು ಆರಂಭಿಸಿದ್ದು ಯಾವಾಗ? ಮಕ್ಕಳು ಮೊಮ್ಮಕ್ಕಳು ಮನೆಗೆ ಬಂದು ಹೋದ ದಿನ.. ಹೀಗೆ ಎಲ್ಲಾ ವಿಚಾರಗಳನ್ನು ಅವರ ಪುಟ್ಟ ಡೈರಿ ಒಳಗೊಂಡಿರುತ್ತಿತ್ತು.
ಡೈರಿ ಬರೆಯುವುದು ಒಂದು ಒಳ್ಳೆಯ ಹವ್ಯಾಸ. ನಮ್ಮ ದಿನದ ಆಗು ಹೋಗುಗಳಲ್ಲಿ ಅದೆಷ್ಟೋ ಸಂತಸದ ಕ್ಷಣಗಳನ್ನು ನಾವು ಕಳೆದಿರುತ್ತೇವೆ. ಅಂತೆಯೇ ನೋವಿನ ಕ್ಷಣಗಳನ್ನು ಕೂಡ. ಆದರೆ ಅದನ್ನೆಲ್ಲಾ ಕ್ರಮಪ್ರಕಾರವಾಗಿ ನಮಗೆ ನೆನಪಿಡಲು ಅಸಾಧ್ಯ. ಅದನ್ನೆಲ್ಲಾ ನೆನಪಿಡಬೇಕಾದರೆ ಅದಕ್ಕಿರುವ ದಾರಿ ಡೈರಿ. ಆ ಕ್ಷಣಗಳನ್ನು ಬರಹ ರೂಪದಲ್ಲಿ ಚೊಕ್ಕದಾಗಿ ಡೈರಿಯಲ್ಲಿ ನಮೂದಿಸಿದರೆ ಮುಗಿಯಿತು. ನಮ್ಮ ಸುಂದರ ಕ್ಷಣಗಳು ಆ ಪುಸ್ತಕದಲ್ಲಿ ಬಂಧಿಯಾಗಿರುತ್ತದೆ. ಯಾರಿಂದಲೂ ಅದನ್ನು ಅಳಿಸಲು ಸಾಧ್ಯವಿಲ್ಲ. ಬೇಕೆಂದಾಗ ಅದನ್ನು ಮನಸಾರೆ ಓದಿ ಮತ್ತೊಮ್ಮೆ ಆ ಕ್ಷಣವನ್ನು ಆಸ್ವಾದಿಸಬಹುದು. ಅದು ಬರೆಯಬಾರದು, ಇದು ಬರೆಯಬಾರದು ಎಂದು ಅದೇನೂ ನಿಮಗೆ ನಿರ್ಬಂಧ ಹಾಕದು!
ಮೊದಲ ದಿನ ಕಾಲೇಜಿಗೆ ಹೋದಾಗ ಆದ ಮಧುರ ಅನುಭವ, ಹೊಸ ಗೆಳೆಯರೊಂದಿಗೆ ಮಾಡಿದ ಮೋಜು ಮಸ್ತಿ, ಕ್ಲಾಸಿನ ಹುಡುಗಿಯೊಬ್ಬಳು ಸುಂದರವಾಗಿ ಕಾಣುತ್ತಿದ್ದೀಯಾ ಎಂದು ಹೇಳಿದಾಗ ಆದ ಸಂತಸ, ಕಾಲೇಜಿಗೆ ಫಸ್ಟ್ ಬಂದಾಗ ತಾತನ ಅಪ್ಪ, ಅಮ್ಮ ಸಂಭ್ರಮಿಸಿದ ಬಗೆ, ಮನದ ಒಡತಿ ಎರಡು ಕೈಗಳನ್ನು ಹಿಡಿದು ನೀನಿಲ್ಲದೆ ಬದುಕಲಾರೆ ಎಂದು ಹೇಳಿದ ರಸಮಯ ಕ್ಷಣ ಹೀಗೆ ಮನಸ್ಸಿಗೆ ಬಂದುದ್ದನ್ನು ಅ ಡೈರಿಯಲ್ಲಿ ಗೀಚಿದ್ದರು ತಾತ. ಅವರಿಗೆ ಮರೆವು ಬಂದರೂ ಆ ಕ್ಷಣಗಳನ್ನು ಹಿಡಿದಿಟ್ಟ ಕೀರ್ತಿ ಅವರ ಡೈರಿಯದು. ತಾತನ ಡೈರಿಯ ಪುಟಗಳು ಅವರ ಇಂದಿನ ನಗುವಿಗೆ ಆಗಾಗ ಕಾರಣವಾಗುವುದಲ್ಲದೆ ನನ್ನ ಕುತೂಹಲವನ್ನೂ ತಣಿಸುವುವು. 60 ವರ್ಷಗಳ ಹಿಂದಿನ ಬದುಕಿನ ಶೈಲಿ ನನಗೆ ಆಶ್ಚರ್ಯ ಹುಟ್ಟಿಸುವುದು. ಅಜ್ಜಿ ಪತ್ರದಲ್ಲಿ ಏನು ಬರೆದಿದ್ದರು, ಅದರಿಂದ ತಾತನಿಗೆಷ್ಟು ಖುಷಿಯಾಗಿತ್ತು ಎಂದೆಲ್ಲಾ ಯೋಚಿಸುವಾಗ ನಮ್ಮ ಮೊಬೈಲ್ ಮೆಸೇಜ್‌ಗಳಿಗೆ ಇಷ್ಟು ಧೀರ್ಘಾಯಸ್ಸು ಇರಲು ಸಾಧ್ಯವೇ ಇಲ್ಲ ಎನಿಸುವುದು. ಈಗೇನಿದ್ದರೂ ಇನ್‌ಸ್ಟ್ಯಾಂಟ್.
ಆ ಕ್ಷಣದ ಭಾವನೆಗೆ ಆಗಲೇ ಡೆಲಿವರಿ, ಒಂದೆರಡು ದಿನದಲ್ಲಿ ಸಾವು! ತಾತನ ಕಾಲದ 10 ಪೈಸೆ, 20 ಪೈಸೆ ಲೆಕ್ಕಾಚಾರಗಳು ನನ್ನೆಣಿಕೆಗೂ ನಿಲುಕವು.
ಡೈರಿ, ಅದು ನಿಮ್ಮ ಸ್ವಂತದ್ದು. ಅದನ್ನು ನೀವು ಯಾರಿಗೂ ಓದಲು ಕೊಡಬೇಕೆಂದಿಲ್ಲ. ನಿಮ್ಮ ಬಳಿ ಹೇಳಲಾಗದ ಭಾವನೆಗಳು ಸಾವಿರ ಇರಬಹುದು. ಅದನ್ನು ಹೇಳಲು ಯಾರೂ ಸಿಗದಿರಬಹುದು. ಅಂತಹ ಸಮಯದಲ್ಲಿ ಡೈರಿಯನ್ನು ನಿಮ್ಮ ಸಂಗಾತಿ ಎಂದು ತಿಳಿದುಕೊಂಡು ನಿಮ್ಮ ಭಾವನೆಗಳನ್ನು ಬರೆಯಲು ಆರಂಭಿಸಿ. ನಿಮ್ಮ ಮನಸ್ಸು ಇದರಿಂದ ಹಗುರವಾಗುತ್ತದೆ ಮತ್ತು ಒಬ್ಬ ಒಳ್ಳೆಯ ಸಂಗಾತಿ ನಿಮಗೆ ದೊರೆತಂತೆ. ಮತ್ತೆ ಈ ಸಂಗಾತಿಯನ್ನು ಯಾವಾಗ ಬೇಕಾದರೂ, ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ಯಾಕೆಂದರೆ ಇದಕ್ಕೆ ಯಾರ ಒಪ್ಪಿಗೆಯೂ ಬೇಡ. ಮುಂದೊಂದು ದಿನ ನಿಮ್ಮ ಮೊಮ್ಮಗಳೂ ಕುಳಿತು ನಿಮ್ಮ ಕತೆ ಓದಿ ಖುಷಿ ಪಡದಿದ್ದರೆ ಕೇಳಿ...
- ಅನಿತಾ ಬನಾರಿ