32ರ ಹರೆಯದ ಅಕ್ಷ್‌ಸನ್ಶ್ ಗುಪ್ತ ಇತ್ತೀಚೆಗೆ ಭಾರತದ ಟಾಪ್ ವಿಶ್ವವಿದ್ಯಾನಿಲಯವಾದ ಜವಾಹರ್ ಲಾಲ್ ನೆಹರೂ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾನೆ. ಅದರಲ್ಲೇನು ವಿಶೇಷ ಅಂತೀರಾ? ಈ ಹುಡುಗನಿಗೆ ಸೊಂಟದಿಂದ ಕೆಳಗೆ ಸ್ವಾಧೀನವಿಲ್ಲ. ಕಷ್ಟಪಟ್ಟು ಮಾತನಾಡುತ್ತಾನೆ, ಈತನ ಮಾತು ಯಾರಿಗೂ ಸುಲಭವಾಗಿ ಅರ್ಥವೂ ಆಗುವುದಿಲ್ಲ. ಸೆರೆಬ್ರಲ್ ಪಾಲ್ಸಿಯಿರುವ ಹುಡುಗ ಶೇ. 95 ಅಂಗವೈಕಲ್ಯತೆ ಹೊಂದಿದ್ದಾನೆ.
ಉತ್ತರ ಪ್ರದೇಶದ ಜೌನ್‌ಪುರ್ ನಿವಾಸಿಯಾದ ಈತ ತನಗೆ ಅಂಗವೈಕಲ್ಯತೆ ಇದೆ ಎಂದು ಸುಮ್ಮನೆ ಕೂರಲಿಲ್ಲ. ಬಾಲ್ಯ ಎಂಬುದು ಕಷ್ಟದಿಂದ ಕೂಡಿತ್ತು. ಆದರೂ ಕಲಿಯಬೇಕೆಂಬ ಉತ್ಸಾಹ ಇವನಲ್ಲಿತ್ತು. ನಮ್ಮ ದೇಶದಲ್ಲಿ ಯಾರಿಗಾದರೂ ಅಂಗವೈಕಲ್ಯತೆ ಇದ್ದರೆ, ಕಲಿತು ಏನು ಮಾಡುವುದಿದೆ ಎಂಬ ತಾತ್ಸಾರ ಭಾವನೆ ಇದೆ. ನನ್ನ ಬಗ್ಗೆಯೂ ಹಲವರು ಹಾಗೆ ಹೇಳಿದ್ದರು.
ಆದರೆ ನನ್ನ ಅಮ್ಮನಿಗೆ ನನಗೆ ವಿದ್ಯಾಭ್ಯಾಸ ಕೊಡಿಸಬೇಕೆಂಬ ಹಠ. ಹಾಗೆ ನನ್ನನ್ನು ಶಾಲೆಗೆ ಸೇರಿಸಲಾಯಿತು. ಶಾಲೆಯಲ್ಲಿ ಅಡ್ಮಿಷನ್ ಕೊಟ್ಟ ಮೀರಾ ಸಾಹು ಅವರಿಗೆ ನಾನು ಚಿರ ಋಣಿ. ಶಾಲೆ ಮುಗಿಸಿ ನಾನು ಕಾಲೇಜಿಗೆ ಸೇರಿದೆ. ಜೌನ್ ಪುರ್ ನಲ್ಲಿರುವ ಉಮಾನಾಥ್ ಸಿಂಗ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಗೆ ಸೇರಿ ಕಂಪ್ಯೂಟರ್ ಸಯನ್ಸ್ ನಲ್ಲಿ ಬಿಟೆಕ್ ಮಾಡಿದೆ. ಆ ವೇಳೆ ಮಹಾಜನ್ ಎಂಬ ರಿಕ್ಷಾವಾಲ ನನ್ನನ್ನು ಕಾಲೇಜಿಗೆ ಕರೆದುಕೊಂಡು ಹೋಗಿ, ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದರು. ಅವರಿಗೆ ನಾನು ಋಣಿ.
ಇದಾದನಂತರ ಡಾಕ್ಟರೇಟ್ ಮಾಡಬೇಕೆಂದು ಅನಿಸಿತು. ಹಾಗೆ ಬ್ರೈನ್ ಕಂಪ್ಯೂಟರ್ ಇಂಟರ್‌ಫೇಸ್ ಎಂಬ ವಿಷಯದ ಬಗ್ಗೆ ಥೀಸಿಸ್ ಬರೆದು ಈತ ಡಾಕ್ಟರೇಟ್ ಪಡೆದುಕೊಂಡಿದ್ದಾನೆ. ಅಂಗವೈಕಲ್ಯವಿದ್ದರೂ ಅದನ್ನು ಮೀರಿ ಡಾಕ್ಟರೇಟ್ ಪಡೆದ ಗುಪ್ತಾಗೆ ನಮ್ಮ ಸಲಾಂ...