ಪ್ರಶಾಂತ್ ನಾಯರ್ (ಕೃಪೆ: ಫೇಸ್ ಬುಕ್ )
ಫೇಸ್ ಬುಕ್‌ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡುವುದರಿಂದ ದೇಶ ಉದ್ದಾರ ಆಗುತ್ತಾ? ಎಂದು ಪ್ರಶ್ನೆ ಕೇಳುವವರಿಗೆ ಇಲ್ಲಿದೆ ಉತ್ತರ. ಸಾಮಾಜಿಕ ತಾಣವನ್ನು ಜನರ ಉದ್ಧಾರಕ್ಕಾಗಿ ಹೇಗೆ ಬಳಸಿಕೊಳ್ಳಬಹುದು. ಯಾವುದೇ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿದರೆ, ಅದರಿಂದ ಉದ್ಧಾರ ಖಂಡಿತ ಸಾಧ್ಯವಾಗುತ್ತದೆ. ಹೀಗಂತ ಜನರಿಗೆ ತೋರಿಸಿಕೊಟ್ಟು, ಮಾದರಿಯಾದ ವ್ಯಕ್ತಿ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಶಾಂತ್ ನಾಯರ್.
ಪ್ರಶಾಂತ್ ನಾಯರ್ ಅವರ ಫೇಸ್‌ಬುಕ್ ಪುಟಕ್ಕೆ ಲಕ್ಷ ಅಭಿಮಾನಿಗಳಿದ್ದಾರೆ. ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಆಲಿಸಲು, ಹೊಸ ಯೋಜನೆಗಳ ಬಗ್ಗೆ, ಜನರ ಅಹವಾಲುಗಳ ಬಗ್ಗೆಯೂ ಇಲ್ಲಿ ಪ್ರಶಾಂತ್ ನಾಯರ್ ಜನರೊಂದಿಗೆ ಸಂಪರ್ಕ ನಡೆಸುತ್ತಾರೆ. ಜನರು ಕಾಮೆಂಟ್ ಹಾಕಿದರೆ ಅದಕ್ಕೂ ಉತ್ತರಿಸುತ್ತಾರೆ. ಕೆಲವೊಮ್ಮೆ ನಾಗರಿಕರ ಸಮಸ್ಯೆಗಳಿಗೆ ನಾಗರಿಕರೇ ಉತ್ತರ ಕಂಡುಕೊಂಡಿದ್ದರೆ ಅದನ್ನು ಪ್ರಶಂಸಿಸುತ್ತಾರೆ.
ಸೋಷ್ಯಲ್ ಮೀಡಿಯಾದ ಮೂಲಕವೇ ಹಲವಾರು ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರವನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಅದೇನೇ ಸಮಸ್ಯೆಯಿರಲಿ ಅದನ್ನು ಫೇಸ್‌ಬುಕ್‌ನ ಮೂಲಕ ಜನರು ಹೇಳಿಕೊಳ್ಳಬಹುದು. ಜಿಲ್ಲೆಯ ಪ್ರಗತಿ ಕಾರ್ಯಗಳ ಬಗ್ಗೆಯಿರುವ ಅಪ್‌ಡೇಟ್‌ಗಳೂ ಈ ಪುಟದಲ್ಲಿ ಲಭ್ಯವಾಗಿರುತ್ತವೆ.
ಪ್ರಶಾಂತ್ ನಾಯರ್ ಆರಂಭಿಸಿದ ಆಪರೇಷನ್ ಸುಲೈಮಾನಿ ಹೆಚ್ಚಿನ ಜನ ಮನ್ನಣೆಯನ್ನು ಗಳಿಸಿದೆ. ಹಸಿದವರಿಗೆ ಅನ್ನ ನೀಡುವ ಯೋಜನೆಯಾಗಿದೆ ಆಪರೇಷನ್ ಸುಲೈಮಾನಿ. ಜಿಲ್ಲೆಯಲ್ಲಿರುವ ರೆಸ್ಟೋರೆಂಟ್ ಗಳ ಸಹಾಯದಿಂದ ಹಸಿದ ಬಡವರಿಗೆ ಅನ್ನ ನೀಡುವ ವ್ಯವಸ್ಥೆಯಾಗಿದೆ ಆಪರೇಷನ್ ಸುಲೈಮಾನಿ. ಹೊಟ್ಟೆಗೆ ಹಿಟ್ಟಿಲ್ಲದೆ ಬದುಕುವ ಬಡವರು ಅಥವಾ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಇರುವವರು ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿತರಿಸಲಾಗಿರುವ ಸುಲೈಮಾನಿ ಕೂಪನ್‌ಗಳನ್ನು ರೆಸ್ಟೋರೆಂಟ್‌ಗಳಿಗೆ ನೀಡಿ ಊಟ ಮಾಡಬಹುದಾಗಿದೆ. ಇದು ಮಾತ್ರವಲ್ಲದೆ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಮತ್ತು ರಸ್ತೆಗಳಲ್ಲಿನ ಹೊಂಡ ಸಮಸ್ಯೆ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಿ, ರಸ್ತೆ ಕಾಮಗಾರಿಯನ್ನು ಮಾಡಲಾಗಿದೆ.