ಈಕೆಯ ಹೆಸರು ಆನ್ನಿ ಸಿನ್ಹಾ ರಾಯ್. 35ರ ಹರೆಯದ ಆನ್ನಿ ಬೆಂಗಳೂರು ಮೆಟ್ರೋ ಯೋಜನೆಯಲ್ಲಿ ಪ್ರಧಾನ ಪಾತ್ರ ವಹಿಸಿದಾಕೆ. ಈಕೆ ಭಾರತದ ಏಕೈಕ ಟನಲ್ ಇಂಜಿನಿಯರ್!. ದಕ್ಷಿಣ ಭಾರತದ ಮೊದಲ ಸುರಂಗ ಮಾರ್ಗವಾದ ನಮ್ಮ ಮೆಟ್ರೋದಲ್ಲಿ ಕಬ್ಬನ್ ರಸ್ತೆ ಮತ್ತು ವಿಧಾನ ಸೌಧ ನಡುವಿನ 4.8 ಕಿಮೀ ಪೂರ್ವ- ಪಶ್ಟಿಮ ಸುರಂಗ ಮಾರ್ಗ ನಿರ್ಮಾಣದಲ್ಲಿ ಆನ್ನಿ ಮಹತ್ತರ ಪಾತ್ರ ವಹಿಸಿದ್ದಾರೆ.
ಉತ್ತರ ಕೊಲ್ಕತ್ತಾ ಮಧ್ಯಮ ಕುಟುಂಬವೊಂದರಲ್ಲಿ ಜನಿಸಿದ ಆನ್ನಿ ನಾಗ್ಪುರ್ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಸ್ನಾತಕೋತ್ತರ ಪದವಿ ಪಡೆಯಬೇಕೆಂಬ ಆಸೆ ಈಕೆಗೆ ಇತ್ತು. ಆದರೆ ಆ ಹೊತ್ತಿಗೆ ಈಕೆಯ ಅಪ್ಪ ತೀರಿದ್ದು, ಕುಟುಂಬದ ಜವಾಬ್ದಾರಿ ಹೊರಲು ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಬಂದೊದಗಿತು. ಹಾಗೆ 2007 ಅಕ್ಟೋಬರ್‌ನಲ್ಲಿ ದೆಹಲಿ ಮೆಟ್ರೋದಲ್ಲಿ ಈಕೆಗೆ ಕೆಲಸ ಸಿಕ್ಕಿತು.
2009ರಲ್ಲಿ ಚೆನ್ನೈ ಮೆಟ್ರೋಗೆ ಸೇರಿದ ಈಕೆ 2014ರಲ್ಲಿ 6 ತಿಂಗಳ ಕಾಲ ದೋಹಾಗೆ ಹೋಗಿ ಬಂದರು. ಅನಂತರ 2015ರಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪರೇಷನ್ (ಬಿಎಂಆರ್ ಸಿ)ಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಈಕೆ ಕಾರ್ಯ ಆರಂಭಿಸಿದರು.
ದೆಹಲಿ ಮೆಟ್ರೋದಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅಲ್ಲಿದ್ದದ್ದು ಗಂಡಸರು ಮಾತ್ರ,. 100 ರಷ್ಟು ಗಂಡಸರು, ಹೆಚ್ಚಿನವರು ಕಾರ್ಮಿಕರು, ಕೆಲವೇ ಕೆಲವು ಇಂಜಿನಿಯರ್‌ಗಳು. ಅಲ್ಲಿ ಶೌಚಾಲಯ ಇರಲಿಲ್ಲ. ಕುಳಿತುಕೊಳ್ಳಲು ಸ್ಥಳವೂ ಇರಲಿಲ್ಲ. ಎಲ್ಲಿ ನೋಡಿದರೂ ಪಳೆಯುಳಿಕೆಗಳು ಮಾತ್ರ. ಇಲ್ಲಿ ನಾನು ಹೆಚ್ಚು ಹೊತ್ತು ನಿಲ್ಲಲಾರೆ ಎಂದು ಅನಿಸಿ ಬಿಟ್ಟಿತ್ತು ಎಂದು ಆನ್ನಿ ತಮ್ಮ ಕೆಲಸದ ಮೊದಲ ದಿನದ ಅನುಭವವನ್ನು ಹೇಳಿಕೊಂಡಿದ್ದಾರೆ.
ಇದೀಗ ಈಕೆ ಸುರಂಗಮಾರ್ಗ ನಿರ್ಮಾಣದಲ್ಲೇ ತಲ್ಲೀನಳಾಗಿದ್ದು, ಪ್ರತೀ ದಿನ 8 ಗಂಟೆಗಳ ಕಾಲ ಸುರಂಗದಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ಕಾರ್ಯ ನಡೆಯುವಾಗ ಈಕೆ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ವರೆಗಿನ ಸುರಂಗ ಮಾರ್ಗ ಕೊರೆಯಲು ಸುರಂಗ ಕೊರೆಯುವ ಯಂತ್ರ ಗೋದಾವರಿಯನ್ನು ಏಕಾಂಗಿಯಾಗಿ ಚಲಾಯಿಸಿದ್ದರು.
ಪುರುಷ ಪ್ರಾಬಲ್ಯವಿರುವ ಕಾರ್ಯಕ್ಷೇತ್ರಕ್ಕೆ ಕಾಲಿಟ್ಟು ಮಹಿಳೆಯರು ಸಾಧಿಸದೇ ಇರುವ ಕೆಲಸಗಳು ಯಾವುದೂ ಇಲ್ಲ ಎಂದು ತೋರಿಸಿಕೊಟ್ಟ ಗಟ್ಟಿಗಿತ್ತಿ ಈಕೆ. ದೋಹಾದಲ್ಲಿ ಕೆಲಸ ಪಡೆಯಲು ಯತ್ನಿಸಿದ್ದಾಗ ಈಕೆಯ ವೀಸಾ ಅರ್ಜಿ ಮೂರು ಬಾರಿ ತಿರಸ್ಕೃತಗೊಂಡಿತ್ತು.
ಅವಿವಾಹಿತ ಹೆಣ್ಣು ಮಕ್ಕಳು ಅಲ್ಲಿ ಹೋಗಿ ಕೆಲಸ ಮಾಡುವಂತಿಲ್ಲ ಎಂಬ ಕಾರಣದಿಂದ ನನ್ನ ವೀಸಾ ಅರ್ಜಿಯನ್ನು ಕತಾರ್ ಮೂರು ಬಾರಿ ತಿರಸ್ಕರಿಸಿತ್ತು. ನಾಲ್ಕನೇ ಬಾರಿ ನಾನು ಹೋರಾಟ ಮಾಡಿ ಆ ಅವಕಾಶವನ್ನು ಪಡೆದುಕೊಂಡೆ ಎಂದು ಹೇಳುವ ಆನ್ನಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಿಗೆ ಕಾಲಿಡಬೇಕು. ಚೌಕಟ್ಟುಗಳನ್ನು ಮೀರಿ ಇಂಥಾ ಕಾರ್ಯಕ್ಷೇತ್ರಗಳಿಗೆ ಹೆಚ್ಚು ಹೆಚ್ಚು ಮಹಿಳೆಯರು ಬರಬೇಕು ಎನ್ನುತ್ತಾರೆ.