ಸೀಮೆನ್ಸ್ ವಿಜ್ಞಾನ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಆಧ್ಯಾ, ಶ್ರಿಯಾ ಹಾಗೂ ವಿನೀತ್
ನ್ಯೂಯಾರ್ಕ್: ಸೀಮೆನ್ಸ್ ಫೌಂಡೇಷನ್ ವತಿಯಿಂದ ನಡೆಯುವ ವಿಜ್ಞಾನ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಮೂವರು ವಿದ್ಯಾರ್ಥಿಗಳು ಪ್ರಶಸ್ತಿ ಗೆದ್ದಿದ್ದಾರೆ. ಆಧ್ಯ ಹಾಗೂ ಶ್ರಿಯಾ ತಂಡದ ವಿಭಾದಲ್ಲಿ ಪ್ರಶಸ್ತಿ ಗೆದ್ದಿದ್ದರೆ ವಿನೀತ್ ಎಂಬ ವಿದ್ಯಾರ್ಥಿ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.
ಆಧ್ಯಾ ಹಾಗೂ ಶ್ರಿಯಾ ಅವಳಿ ಸಹೋದರಿಯರಾಗಿದ್ದು, ಟೆಕ್ಸಾಸ್ ನಲ್ಲಿ 11 ಗ್ರೇಡ್ ವ್ಯಾಸಂಗ ಮಾಡುತ್ತಿದ್ದಾರೆ. ವೈದ್ಯಕೀಯ ಯೋಜನೆಗಳಿಗಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ದೊರೆತಿದೆ. ಆಧ್ಯಾ ಹಾಗೂ ಶ್ರಿಯಾ ಸ್ಕಿಜೋಫ್ರೇನಿ ಸಮಸ್ಯೆಯನ್ನು ಮಿದುಳಿನ ಸ್ಕ್ಯಾನ್ ಮತ್ತು ಮನೋವೈದ್ಯಕೀಯ ಮೌಲ್ಯಮಾಪನಗಳನ್ನು ಬಳಸಿ ಉಲ್ಭವಣವಾಗುವ ಮುನ್ನವೇ ಕಂಡುಕೊಳ್ಳುವ ಯೋಜನೆಯ ಪ್ರಸ್ತುತಿ ನೀಡಿದ್ದರು. ಮತ್ತೋರ್ವ ವಿದ್ಯಾರ್ಥಿ ವಿನೀತ್, ವೈದ್ಯಕೀಯ ಉಪಕರಣಗಳಿಗೆ ಬಳಸುವ ಜೈವಿಕ ವಿಘಟನೀಯ ಬ್ಯಾಟರಿ( ಬಯೋಡಿಗ್ರೆಡಬಲ್) ಯ ಕುರಿತ ಪ್ರಾಜೆಕ್ಟ್ ಗಾಗಿ ಪ್ರಶಸ್ತಿ ಗಳಿಸಿದ್ದು, ಪ್ರೌಢಶಾಲೆಯ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.
ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಹೊಸ ಅನ್ವೇಷಣೆಯಿಂದ ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಜನರ ಬದುಕು ಬದಲಾಗಲಿದೆ ಎಂದು ಸೀಮೆನ್ಸ್ ಫೌಂಡೇಷನ್ ನ ಸಿಇಒ ಡೇವಿಡ್ ಎಟ್ಜ್ ವಿಲರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಮೂವರು ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಬಹುಮಾನ ದೊರೆತಿದ್ದು, ಇಬ್ಬರು ವಿದ್ಯಾರ್ಥಿಗಳಿಗೆ ತಂಡದ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.
ವೈಯಕ್ತಿಕ ವಿಭಾಗದಲ್ಲಿ ಅಂತಿಮ ವರ್ಷದ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಮನನ್ ಶಾ( ಕ್ಯಾಲೊಫೋರ್ನಿಯಾ) ಗೆ 50,000 ಡಾಲರ್ ಸ್ಕಾಲರ್ ಶಿಪ್ ಪ್ರಶಸ್ತಿ, ಪ್ರತೀಕ್ ಕಲಕುಂಟ್ಲ(ಟೆಕ್ಸಾಸ್) $30,000, ಪ್ರಣವ್ ಶಿವಕುಮಾರ್ (ಇಲಿನಾಯ್ಸ್) ಗೆ $20,000 ಸ್ಕಾಲರ್ ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. ತಂಡದ ವಿಭಾದಲ್ಲಿ ನಿಖಿಲ್ ಚೀರ್ಲಾ ಹಾಗೂ ಅನಿಕಾ ಚೀರ್ಲಾ $50,000 ಸ್ಕಾಲರ್ ಶಿಪ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಸೀಮೆನ್ಸ್ ಫೌಂಡೇಷನ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ 2,146 ವಿದ್ಯಾರ್ಥಿಗಳು ಭಾಗವಹಿಸಿ ಒಟ್ಟು 1,600 ಪ್ರಾಜೆಕ್ಟ್ ಗಳ ಬಗ್ಗೆ ಪ್ರಸ್ತುತಿ ನೀಡಿದ್ದರು.