ಈತನ ಹೆಸರು ಮೊಹಮ್ಮದ್ ಸಲ್ಮಾನ್, ಬೆಂಗಳೂರು ನಿವಾಸಿ. ಬಾಲ್ಯದಿಂದಲೇ ಈತನಿಗೆ ಪೊಲೀಸ್ ಆಗಬೇಕೆಂಬ ಆಸೆಯಿತ್ತು. ಪೊಲೀಸರನ್ನು ನೋಡುವಾಗ, ಟ್ರಾಫಿಕ್ ಪೊಲೀಸರು ಸಂಚಾರ ನಿಯಂತ್ರಣ ಮಾಡುವಾಗಲೆಲ್ಲಾ ಅವರನ್ನು ನೋಡಿ ಮುಂದೊಂದು ದಿನ ತಾನು ಕೂಡಾ ಇದೇ ಸ್ಥಾನದಲ್ಲಿರುತ್ತೇನೆ ಎಂದು ಬಾಲಕ ಸಲ್ಮಾನ್ ಕನಸು ಕಾಣುತ್ತಿದ್ದ. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಹದಿಹರೆಯದಲ್ಲಿ ಈತನಿಗೆ ಪೋಲಿಯೋ ಬಾಧಿಸಿ ಕಾಲುಗಳು ಶಕ್ತಿ ಕಳೆದುಕೊಂಡವು. ಪೊಲೀಸ್ ಆಗಬೇಕೆಂಬ ಆತನ ಆಸೆಗೆ ಪೋಲಿಯೋ ಹೊಡೆತ ನೀಡಿತ್ತು!
ಆದರೆ ಸಲ್ಮಾನ್ ಈ ಹೊಡೆತದಿಂದ ವಿಚಲಿತನಾಗಲಿಲ್ಲ. ನಾಲ್ಕು ವರ್ಷದ ಹಿಂದೆ ಈತ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿ ತನ್ನ ಆಸೆಯನ್ನು ಅವರಲ್ಲಿ ಹೇಳಿಕೊಂಡಿದ್ದು ಮಾತ್ರವಲ್ಲದೆ ತನಗೇನಾದರೂ ಸಹಾಯ ಮಾಡಲು ಸಾಧ್ಯವೇ ಎಂದು ಬಿನ್ನವಿಸಿದ್ದ. ಈತನ ಹುಮ್ಮಸ್ಸು ನೋಡಿದ ಪೊಲೀಸ್ ಅಧಿಕಾರಿಗಳು ಈತನಿಗೆ ಟ್ರಾಫಿಕ್ ವಾರ್ಡನ್‌ನ ಕೆಲಸ ನೀಡಿದ್ದಾರೆ.
ಈಗ 21ರ ಹರೆಯದ ಸಲ್ಮಾನ್ ಬೆಂಗಳೂರಿನ ಕೋಲ್ಸ್ ಪಾರ್ಕ್‌ನ ಹೆನ್ಸ್ ಸರ್ಕಲ್ ನಲ್ಲಿ ವಾಹನಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಯ ನಿರ್ವಹಿಸುವಾಗ ಅಲ್ಲಿಯೇನಾದರೂ ಸಮಸ್ಯೆ ಕಂಡರೆ ಸಲ್ಮಾನ್ ತಕ್ಷಣವೇ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ತನ್ನ ಕನಸನ್ನು ನನಸು ಮಾಡಿಕೊಂಡ ನಂತರ ಸಲ್ಮಾನ್ ಅತೀವ ಶ್ರದ್ದೆಯಿಂದ ತಮ್ಮ ಕಾಯಕವನ್ನು ಮಾಡುತ್ತಿದ್ದು, ಪೊಲೀಸರೂ ಈತನ ಕೆಲಸಗಳನ್ನು ಶ್ಲಾಘಿಸಿದ್ದಾರೆ.