ಕೃಷಿಯಲ್ಲಿ ರೈತರಿಗೆ ಗೊಬ್ಬರ ನಿರ್ವಹಣೆ ಬಹುಮುಖ್ಯ ಅಂಶ. ಇದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಪ್ರಯೋಗ ನಡೆದಿವೆ. ಇಂತಹ ಪ್ರಯೋಗಗಳಿಗೆ ಪ್ರೇರಣೆ ಕೊಟ್ಟದ್ದು ರಸಗೊಬ್ಬರ ಬಳಕೆ ಸುಸ್ಥಿರವಲ್ಲ ಎಂಬ ಜ್ಞಾನೋದಯ ಮತ್ತು ಗೊಬ್ಬರ ಬೆಲೆ ಏರಿಕೆ.
ದ್ರವರೂಪದ ಸ್ಲರಿ ಗೊಬ್ಬರ ತಯಾರಿಸಿ ಎಲ್ಲಾ ಬೆಳೆಗಳಿಗೂ ನೀಡುತ್ತ, ಗಮನ ಸೆಳೆಯುವ ತೋಟವೊಂದಿದೆ. ಆ 20 ಎಕರೆಯಲ್ಲಿ ಕಾಫಿ, ಕಾಳುಮೆಣಸು, ಕಿತ್ತಳೆ, ಏಲಕ್ಕಿ, ಬಾಳೆ ಬೆಳೆಯುತ್ತಿರುವ ಲಿಂಗರಾಜು ಕಾಫಿ ಬೆಳೆಗಾರರಿಗೆ ಮಾದರಿ.
ಭರ್ಜರಿ ಇಳುವರಿ
ಹೌದು, ಇತರ ಬೆಳೆಗಾರರು ಎಕರೆಗೆ 7- 8 ಚೀಲ ಇಳುವರಿ ಪಡೆದರೆ ಇವರು 17- 20 ಚೀಲ ಪಡೆಯುತ್ತಿದ್ದಾರೆ. ಇವರ ತೋಟ ಸಕಲೇಶಪುರ ತಾಲೂಕಿನ ಬೆಳಗೋಡು ಬಳಿಯಿದೆ. ಕಾಫಿ ಕೃಷಿಗೆ ಬಂದದ್ದು 1985ರಲ್ಲಿ. ಅದಕ್ಕೂ ಮೊದಲು ರಾಗಿ, ಬತ್ತ, ಆಲೂಗಡ್ಡೆ, ಜೋಳ ಬೆಳೆಯುತ್ತಿದ್ದರು.
ಹೊಸದರಲ್ಲಿ ಒಳ್ಳೆಯ ಕಾಫಿ ಆಗುತ್ತಿರಲಿಲ್ಲ. ಬಂದ ಆದಾಯವೆಲ್ಲ ಅಲ್ಲಿಂದಲ್ಲಿಗೆ ಸರಿಯಾಗುತ್ತಿತ್ತು. 2000ನೇ ಇಸವಿಯಲ್ಲಿ ಯಥೇಚ್ಛ ರಸಗೊಬ್ಬರ ನೀಡಿ 10 ಎಕರೆಗೆ 120- 150 ಚೀಲ ಇಳುವರಿ ಪಡೆದರು. ನಂತರದ ವರ್ಷಗಳಲ್ಲಿ ಕಾಫಿ ಏನೇನೂ ಇರಲಿಲ್ಲ.
ಹುಡುಕಾಟ
ಹೀಗೆ ಒಮ್ಮೆ ಕೈ ಸುಟ್ಟುಕೊಂಡರು ನೋಡಿ. ಮತ್ತೆ ಹೊಸದಕ್ಕಾಗಿ ಹುಡುಕಾಟ. ಕಾಂಪೋಸ್ಟ್ ಮಾಡಿದರೂ ಎಲ್ಲಾ ಗಿಡಗಳಿಗೂ ಕಾರ್ಮಿಕರು ಸಮನಾಗಿ ಹಾಕುತ್ತಿರಲಿಲ್ಲ. ಒಂದು ರು.ಗೆ ಒಂದು ಕೆಜಿ ಸಗಣಿ, ಗಂಜಲ ಕೊಂಡು ಜೀವಾಮೃತ ಮಾಡಿ ನೀಡಲಾರಂಭಿಸಿದರು. ಅಲ್ಲೂ ಮತ್ತೆ ಸಮಸ್ಯೆ. ಇಷ್ಟರಲ್ಲಾಗಲೇ ದನ ಸಾಕಲು ಆರಂಭಿಸಿದ್ದರು. ಸ್ಲರಿಯನ್ನು ದ್ರಾವಣ ರೂಪದಲ್ಲಿ ಪವರ್‌ಸ್ಪ್ರೇ ಮುಖಾಂತರ ನೀಡೋಣವೆಂದು ಶುರು ಮಾಡಿದರೆ ಸಂಜೆಯಾಗುವಷ್ಟರಲ್ಲಿ ಅದರ ಸೀಟಿಂಗ್ ಚಿಂದಿಯಾಯಿತು.
ವರದಾನ
ಈ ಸಮಯದಲ್ಲೇ ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಸಮಾರಂಭವೊಂದರ ವಸ್ತು ಪ್ರದರ್ಶನದಲ್ಲಿ ಸ್ಲರಿ ಪಂಪ್ ಪ್ರದರ್ಶನಕ್ಕೆ ಬಂದಿತ್ತು. ಈ ಸಮಯದಲ್ಲಿ ಇದು ವರದಾನವೆನ್ನಿಸಿತು. ಕೂಡಲೆ ಕೊಟ್ಟಿಗೆ ಪಕ್ಕ ಸಿಮೆಂಟ್ ತೊಟ್ಟಿ ಮಾಡಿಸಿ ಅಳವಡಿಸಿದರೆ ಇಲ್ಲೂ ಫಿಲ್ಟರ್ ಸಮಸ್ಯೆ ಬೆಂಬಿಡದ ಭೂತವಾಯಿತು. ಮೂರು ತೊಟ್ಟಿ ಮಾಡಿ ಫಿಲ್ಟರ್ ಮಾಡಿದರೂ ಉಪಯೋಗವಾಗಲಿಲ್ಲ. ಸಗಣಿಯಲ್ಲಿರುವ ಸಣ್ಣಸಣ್ಣ ದಾರದಂತಹ ಎಳೆಗಳು ಸೆಕ್ಷನ್‌ಗೆ ಕಟ್ಟಿಕೊಂಡು ಸದಾ ಕ್ಲೀನ್ ಮಾಡಬೇಕಾಗಿತ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಏನಾದರೂ ಮಾಡಲೇಬೇಕೆಂದು ಇನ್ನೊಂದು ಆರು ಅಡಿ ಆಳದ ಸಿಮೆಂಟ್ ಗುಂಡಿಗೆ 2 ಇಂಚು ಪೈಪ್, ಗೇಟ್ವಾಲ್ ಅಳವಡಿಸಿ ಪಲ್ಪರ್ ಮಂಕರಿಯನ್ನು ಜಾಲರಿಯಂತಿಟ್ಟು ಫಿಲ್ಟರ್ ಮಾಡಿ ಪಂಪ್ ಮೂಲಕ ಎತ್ತಲಾರಂಭಿಸಿದರು. ಇದರಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ತೋಟಕ್ಕೆ 100- 120 ಪೈಪ್ ಡೆಡ್‌ಲೈನ್ ಅಳವಡಿಸಿದ್ದಾರೆ.
20 ದಿನಕ್ಕೊಮ್ಮೆ ಸ್ಲರಿ
3 ಜನರು 1 ಎಕರೆಗೆ 15 ಸಾವಿರ ಲೀಟರ್ ಸ್ಲರಿಯನ್ನು ಬೆಳಗ್ಗೆ 9ರಿಂದ ಕೊಡಲಾರಂಭಿಸಿದರೆ ಮಧ್ಯಾಹ್ನ 3ಕ್ಕೆ ಮುಗಿಯುತ್ತದೆ. 20 ದಿನಕ್ಕೊಮ್ಮೆ ಮತ್ತೆ ಈ ಸ್ಲರಿ ದ್ರಾವಣ ತಯಾರಾಗುತ್ತದೆ. ಈ ಮಿಶ್ರಣಕ್ಕೆ 5 ಕೆಜಿ ಟ್ರೈಕೋಡರ್ಮ, 5 ಲೀಟರ್ ಸೊಡೋ ಮನಾಸ್ ಮಿಶ್ರ ಮಾಡುತ್ತಾರೆ.
ಸ್ಲರಿ ಕೊಡಲು ಶುರು ಮಾಡಿದ 2ನೇ ವರ್ಷಕ್ಕೆ ಕಾಫಿ ಫಸಲು ಆರಂಭ. ಮೂರನೆ ವರ್ಷಕ್ಕೆ ಹಾಕಿದ ಬಂಡವಾಳ ವಾಪಸ್ಸಾಗಿದೆ ಎನ್ನುತ್ತಾರೆ ಲಿಂಗರಾಜು (9448719921).
ಅವರದೇ ಕ್ರಮ
ಲಿಂಗರಾಜು ಬಳಿ 10 ದನಗಳಿವೆ. ಗಿರ್, ಸಾಹಿವಾಲ್, ನಾಟಿ ತಳಿಯವು. ಸಿಂಧಿ ದನದ ಸಗಣಿ, ಗಂಜಲದಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಿರುವುದರಿಂದ ಅವನ್ನು ಸಾಕಿಲ್ಲ. ದನಗಳಿಗಾಗಿ 2 ಎಕರೆಯಲ್ಲಿ ಸೀಮೆ ಹುಲ್ಲು ಬೆಳೆಸಿದ್ದಾರೆ. 1 ಎಕರೆಯಲ್ಲಿ ರಾಜಮುಡಿ ಬತ್ತ ಬೆಳೆಯುತ್ತಾರೆ. ಗದ್ದೆಗೆ ಪೋಟ್ಯಾಷ್, ಕೆರೆಗೋಡು ಹಾಕುತ್ತಾರೆ. ಕಾಫಿಗೆ ವರ್ಷಕ್ಕೆ ಒಮ್ಮೆ ಎಕರೆಗೆ 400 ಕೆಜಿಯಷ್ಟು ಯೂರಿಯ, ರಾಕ್, ಪೋಟ್ಯಾಷ್ ಕೊಡುತ್ತಾರೆ. 4 ಸ್ಪ್ರೇ ಮಾಡುತ್ತಾರೆ. 2 ಸಲ ಕಾಂಟಾಫ್, 2 ಸಲ ಬೋರ್ಡೋ. ಪ್ರತಿ ಎಕರೆಗೆ 400 ಕೆಜಿ ಸುಣ್ಣವನ್ನು ಪ್ರತಿ ವರ್ಷ ಹಾಕುತ್ತಾರೆ. ಇದಿಷ್ಟು ಇವರದ್ದೆ ಕ್ರಮ. ಕಾಫಿ ಕಾಡುವ ಬೋರ್ ಕೀಟ ಹುಡುಕಿದರೆ ಒಂದೆರಡು ಸಿಗುವುದು ಕಷ್ಟ. ತೋಟದ ಮಣ್ಣಂತೂ ಸ್ಪಂಜಿನಷ್ಟು ಮೃದು. ಹೇರಳವಾಗಿ ಎರೆಹುಳುಗಳಿವೆ.
-ಪೂರ್ಣಿಮಾ ಕಾನಹಳ್ಳಿ