'ಬ್ಯಾಸಿಗಿ ದಿವಸಕ ಬೇವಿನ ಮರ ತಂಪು, ಭೀಮಾರತಿಯೆಂಬ ಹೊಳಿ ತಂಪು, ಹಡೆದವ್ವ ನೀ ತಂಪು ನನ್ನ ತವರಿಗೆ...'
ಬೇವು ಮತ್ತು ತಾಯಿಯ ಮಡಿಲಿನ ಮಮತೆಯನ್ನು ಕನ್ನಡದ ಗರತಿಯರು ಅದೆಷ್ಟೋ ಶತಮಾನಗಳ ಹಿಂದೆಯೇ ತಮ್ಮ ಜಾಣ್ಣುಡಿಯಲ್ಲಿ ಹಾಡಿ ಹೊಗಳಿದ್ದಾರೆ. ಇಂಥ ತಾಯಿ ಸ್ವರೂಪದ 16 ಸಾವಿರ ಬೇವಿನ ಮರಗಳನ್ನು ಕಕ್ಕುಲತೆಯಿಂದ ಬೆಳೆಸಿರುವ ಅರಣ್ಯ ಇಲಾಖೆ ಮುಳುಗಡೆ ನಗರ ಬಾಗಲಕೋಟೆಯ ಹೊಸರೂಪ ನವನಗರಕ್ಕೆ ಕಾಯಂ ತಂಪು ತಂಪಾದ ಮಹಾನ್ ಛತ್ರಿಯನ್ನೇ ನಿರ್ಮಿಸಿದೆ.
ತಂಪು ತಂಪು
ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಲ್ಲಿ ಕೃಷ್ಣಾರ್ಪಣ ಆಗಲಿದ್ದ ಬಾಗಲಕೋಟೆ ಸ್ಥಳಾಂತರಕ್ಕೆ ನವನಗರ ನಿರ್ಮಿಸಲು ಮುಂದಾದಾಗ ಆಯ್ದು ಕೊಂಡ ಪ್ರದೇಶ ಬೋಳುಗುಡ್ಡ. ಸೆಕ್ಟರ್, ವಿವಿ, ಕ್ರೀಡಾಂಗಣ ಎಲ್ಲ ಸೌಲಭ್ಯ ಕಲ್ಪಿಸುವ ಜತೆಗೆ ಎಲ್ಲರಿಗೂ ಅನುಕೂಲವಾಗುವ ದಿಸೆಯಲ್ಲಿ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ಜೋಡಿಸಲು ಗುಡ್ಡದ ಮೇಲೆ 'ಬೃಹತ್ ಜಿಲ್ಲಾಡಳಿತ ಭವನ' ನಿರ್ಮಿಸಲಾಯಿತು. ಈ ಭವನ, ಸರ್ಕಾರಿ ನೌಕರರ ವಸತಿಗೃಹ, ಹೆಲಿಪ್ಯಾಡ್, ಖಾಸಗಿ ಮೆಡಿಕಲ್ ಕಾಲೇಜು ಇತ್ಯಾದಿಗಳಿಂದಾಗಿ ಆ ಗುಡ್ಡ ಇನ್ನಷ್ಟು ರಣಗುಡಲು ಶುರುವಿಟ್ಟಿತು. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕಾದ ಕಾವಲಿಯಲ್ಲಿ ಕುಳಿತ ಹಿಂಸೆ. ಸುರಿಯುವ ಬೆವರು, ಎದ್ದು ಓಡಿಸುವ ಧಗೆ, ಕಣ್ಣು ತೆರೆಯಲಾಗದಷ್ಟು ಉರಿ ಬಿಸಿಲು ಎಲ್ಲವೂ ಸೇರಿ ನವನಗರ ಮತ್ತು ಜಿಲ್ಲಾಡಳಿತ ಭವನ ಎಂದೊಡನೆ ಜನತೆ ಬೆವರುತ್ತಿದ್ದರು.
ಹಸಿರು ನಿಶಾನೆ
ಈ ಸಂಗತಿ ಅರಿತ ಬಾಗಲಕೋಟೆ ವಲಯ ಅರಣ್ಯಾಧಿಕಾರಿ ರಘುನಾಥ ಹಿರಿಯ ಅಧಿಕಾರಿಗಳಲ್ಲಿ ಪ್ರಸ್ತಾವನೆಯೊಂದನ್ನು ಇಟ್ಟರು. ಅದು ಸ್ಥಳೀಯ ಸಸ್ಯ ಬೇವು ಬೆಳೆಸುವ ಪ್ರಸ್ತಾವನೆ. ನೆಲದಲ್ಲಿ ಅದು ಅಷ್ಟಾಗಿ ಆರೈಕೆ ಇಲ್ಲದಿದ್ದರೂ ಉತ್ತಮವಾಗಿ ಬೆಳೆಯುತ್ತದೆ. ಸದಾ ತಂಪಾಗಿ ಇರುತ್ತದೆ. ಕಳ್ಳಕಾಕರ ಕಾಟ ಇರಲ್ಲ. ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ಆದರೂ ಅದರ ಹಣ್ಣು ಡೀಸೆಲ್ ತಯಾರಿಕೆಗೆ ಅನುಕೂಲ. ಇತ್ಯಾದಿ ಕಾರಣಗಳಿಂದ ಹಿರಿಯ ಅಧಿಕಾರಿಗಳು ಬೇವು ಬೆಳೆಯಲು ಹಸಿರು ನಿಶಾನೆ ತೋರಿಸಿದರು.
ಮಳೆಗಾಲದಲ್ಲಿ ಜೆಸಿಬಿಯಿಂದ ಇಡೀ ಗುಡ್ಡದಲ್ಲಿ ಟ್ರಂಚ್ ಹೊಡೆಸಿ, ಅದಕ್ಕೆ ಕೆರೆಯ ಅಂಗಳದಲ್ಲಿನ ರೇವೆ ಮಣ್ಣು ಹಾಕಿಸಿ ತುಸು ಎತ್ತರವಾದ ಬೇವಿನ ಸಸಿಗಳನ್ನು ನೆಟ್ಟರು. ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಹೆಚ್ಚುತ್ತಾ ಸಾಗಿತು. ಸುಮಾರು 18 ಸಾವಿರದಷ್ಟು ಸಸಿಗಳನ್ನು ನೆಟ್ಟಿದ್ದರು. ಅವುಗಳಲ್ಲಿ ಈಗ 16300 ಸಸಿಗಳು ಹೆಮ್ಮರವಾಗಿವೆ.
ಬದಲಾದ ಬಾಗಲಕೋಟೆ
ಈ ಮರಗಳಿಂದಾಗಿ ಹೊಸ ಬಾಗಲಕೋಟೆಯ ಚಹರೆಯೇ ಬದಲಾಗಿದೆ. ದೂರದಿಂದ ನೋಡಿದರೆ ಮಲೆನಾಡೇನೋ ಎನ್ನುವಂತೆ ಭಾಸವಾಗುತ್ತಿದೆ. ಹಳೇ ಬಾಗಲಕೋಟೆಯ ರೋಟರಿ ಕ್ಲಬ್ ಕ್ರಾಸ್ (ಡಾ. ದಡೆನ್ನವರ ಕ್ರಾಸ್‌ನಲ್ಲಿ) ನಿಂತು ವಿದ್ಯಾಗಿರಿ ರಸ್ತೆ ಮತ್ತು ಎಪಿಎಂಸಿ ರಸ್ತೆಗಳು ಬಾದಾಮಿಯ ಐತಿಹಾಸಿಕ ಸಾಲು ಮರಗಳನ್ನು ನೆನಪಿಸುತ್ತಿವೆ. ಇಲ್ಲಿ ರಸ್ತೆಯ ಇಕ್ಕೆಲ, ವಿಭಜಕದ ಮಧ್ಯೆಯೂ ಬೇವು ನೆಟ್ಟು ಬೆಳೆಸಿದ್ದಾರೆ.
ತಮ್ಮ ಸಿಬ್ಬಂದಿಯ ಜತೆಗೆ ಸತತ ಪ್ರಯತ್ನ ಮಾಡಿ ಈ ಬೇವು ಬೆಳೆದು ನಗರಕ್ಕೆ ತಂಪೆರೆದಿರುವ ಅಧಿಕಾರಿ ರಘುನಾಥ, 'ಸ್ಥಳೀಯ ಜಾತಿಯ ಈ ಬೇವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಹೆಚ್ಚಿನ ಕಷ್ಟವಿಲ್ಲದೆ ಬೆಳೆಯುತ್ತದೆ. ಅತಿಯಾದ ನಿಸರ್ಗಸ್ನೇಹಿ. ಇಡೀ ಪರಿಸರವೇ ಉಲ್ಲಸಿತ, ಆರೋಗ್ಯದಾಯಕ ಆಗಿರುತ್ತದೆ. ಖಾಲಿ ಪ್ರದೇಶಗಳಲ್ಲೂ ಬೇವು ನೆಡಬೇಕಿದೆ' ಎನ್ನುವ ತಮ್ಮ ಮುಂದಿನ ಕನಸನ್ನು ಮುಂದಿಟ್ಟರು.
- ಮಲ್ಲಿಕಾರ್ಜುನ ಸಿದ್ದಣ್ಣವರ