ಸೀಮೆ ಬದನೆಯಲ್ಲಿ ಬಿಳಿ ಸೀಮೆ ಬದನೆ ಎಂಬ ವಿಶಿಷ್ಟ ತಳಿ ಇರುವುದು ಅನೇಕರಿಗೆ ಗೊತ್ತಿಲ್ಲ. ಕಾಯಿ ಬಲಿತ ಮೇಲೂ ನಾರಿನಂಶ ಇಲ್ಲದೆ ಇರುವುದು ಈ ಸೀಮೆ ಬದನೆಯ ವಿಶೇಷ. ಬಿಳಿ ಬಣ್ಣದಿಂದ ಕಂಗೊಳಿಸುವ ಈ ಸೀಮೆ ಬದನೆಯ ತಿರುಳೂ ಬಿಳಿ. ಅತ್ಯಂತ ರುಚಿಕರ. ಹಾಗೆಂದು ಇದೊಂದು ಹೊಸ ತಳಿಯ ಸೀಮೆ ಬದನೆಯಂತೂ ಅಲ್ಲ. ಇದು ನಾಟಿ ತಳಿ. ಆದರೆ, ಕಾಣಸಿಗುವುದು ಕಮ್ಮಿ. ಅಪರೂಪದ ಬಿಳಿ ಸೀಮೆ ಬದನೆ ಉಳಿಸಿ ಬೆಳೆಸಿದ್ದಾರೆ ಮಡಿಕೇರಿಯ ಸೈಂಟ್ ಜೋಸೆಫ್ ಕಾನ್ವೆಂಟ್ ಬಳಿಯ ಸವಿತಾ ಕೋಕಳ. ಸವಿತಾ ಅವರ ಮನೆಯ ಅಂಗಳದಲ್ಲಿ ಸಮೃದ್ಧವಾಗಿ ಹರಡಿದೆ ಬಿಳಿ ಸೀಮೆಬದನೆ ಬಳ್ಳಿ. ಅಷ್ಟೇ ಅಲ್ಲ, ಅಂಗಳದ ಕಾಂಪೌಂಡನ್ನೂ ದಾಟಿ ಪಕ್ಕದ ಮನೆಯವರ ಕಾಫಿ ತೋಟದಲ್ಲೂ ವಿಶಾಲವಾಗಿ ವ್ಯಾಪಿಸಿ ಅಲ್ಲೆಲ್ಲ ಹೂ, ಮಿಡಿ, ಕಾಯಿಗಳನ್ನು ಬಿಟ್ಟು ಬೀಗುತ್ತಿದೆ. ಏಳು ವರ್ಷಗಳಿಂದ ಅವರಿಗೆ ನಿರಂತರ ಬಿಳಿ ಸೀಮೆಬದನೆಯ ರಸದೌತಣ. ಹಸಿರು ಸೀಮೆ ಬದನೆಯ ಪರಿಚಯವಿದ್ದ ನನಗೆ ಸವಿತಾ ಎಂಬವರ ಮನೆಯಲ್ಲಿ ಬಿಳಿ ಸೀಮೆ ಬದನೆ ಕಂಡು ಕುತೂಹಲವಾಯಿತು. ಈ ಬಗ್ಗೆ ವಿಚಾರಿಸಿದೆ. ಏಳು ವರ್ಷಗಳ ಹಿಂದೆ ಬಂಧುವೊಬ್ಬರು ಸಾಂಬಾರು ಮಾಡಲು ಕೊಟ್ಟ ಬಿಳಿ ಸೀಮೆ ಬದನೆಯ ರುಚಿಗೆ ಮರುಳಾಗಿ ಒಂದನ್ನು ಮನೆಯಂಗಳದಲ್ಲಿ ಹೂವಿನ ಗಿಡಗಳ ನಡುವೆ ಊರಿದ್ದರು. ಪ್ರತ್ಯೇಕ ಉಪಚಾರ ಮಾಡದಿದ್ದರೂ ಹೂವಿನ ಗಿಡಗಳಿಗೆ ಕೊಟ್ಟ ನೀರು, ಗೊಬ್ಬರವನ್ನೇ ಹೀರಿ ಹುಲುಸಾಗಿ ಬೆಳೆಯಿತು. ಕಡು ಬೇಸಿಗೆಯಲ್ಲಿ ಗಿಡ ಒಮ್ಮೆ ಒಣಗಿದಂತೆ ಕಂಡರೂ ಮಳೆಗಾಲದಲ್ಲಿ ಮತ್ತೆ ಚಿಗುರಿ ನವವಧುವಿನಂತೆ ಶೋಭಿಸುವುದು. ಯಥೇಚ್ಛವಾಗಿ ಕಾಯಿಗಳನ್ನು ನೀಡುವುದು. ಇದಕ್ಕೆ ರೋಗ, ಕೀಟ ಬಾಧೆ ಇಲ್ಲ. ಸಾಮಾನ್ಯ ಸೀಮೆ ಬದನೆಗಿಂತ ಈ ಸೀಮೆ ಬದನೆಯಲ್ಲಿ ನಾರಿನಂಶ ಇಲ್ಲವೇ ಇಲ್ಲ ಎನ್ನುವಷ್ಟು ಕಮ್ಮಿ. ರುಚಿಯೂ ಹೆಚ್ಚು. ಬಲಿತ ಕಾಯಿಯೂ ಎಳೆಯದರಷ್ಟೇ ರುಚಿ ಎನ್ನುತ್ತಾರೆ ಸವಿತಾ. ಇದರಿಂದ ತಯಾರಿದ ಚಟ್ನಿ, ಪಲ್ಯ, ಗೊಜ್ಜು, ಬೋಳುಹುಳಿ, ಸಾಂಬಾರ್, ದೋಸೆ, ಸಲಾಡ್ ಎಲ್ಲವೂ ಒಂದಕ್ಕಿಂತ ಒಂದು ಸವಿ ಎನ್ನುವುದು ಅವರ ಅನುಭವ. ಕಾಯಿಗಳನ್ನು ಮಾರಿ ಹಣ ಗಳಿಸುವ ಮನಸ್ಸು ಸವಿತಾ ಅವರಿಗಿಲ್ಲ. ಮನೆಗೆ ಬಳಸಿ ಮಿಕ್ಕಿದುದನ್ನು ಅಕ್ಕಪಕ್ಕದವರಿಗೆ, ಬಂಧು ಮಿತ್ರರಿಗೆ ಉಚಿತವಾಗಿ ಕೊಡುತ್ತಾರೆ. ಅವರ ಸಂಪರ್ಕಕ್ಕೆ ಮೊ. 9448895895.
- ಸಹನಾ ಕಾಂತಬೈಲು