ಕೃಷಿ-ಪರಿಸರ

ಅಡಕೆ ಚೊಗರಲ್ಲೂ ಉಂಟು ಅಂಟು!

ಜೂನ್ ತಿಂಗಳಲ್ಲಿ ವ್ಯಾಪಕ ಮಳೆ. ಅಡಕೆ ಮರಗಳಿಗೆ ಕೊಳೆರೋಗ. ಬೋಡೋ ಸಿಂಪಡಣೆ ಮಾಡಲಾಗದಷ್ಟೂ ಮಳೆಯ ತೀವ್ರತೆ. ಕೊಳೆ ರೋಗದಿಂದಾಗಿ 5 ಕ್ವಿಂಟಲಿನಷ್ಟು ಎಳೆ ಅಡಕೆಗಳು ಉದುರಿದ್ದವು.
ಬಂಟ್ವಾಳ ತಾಲೂಕಿನ (ದ.ಕ.) ವಿಟ್ಲದ ಬದನಾಜೆ ಶಂಕರ ಭಟ್ಟರು ಅಡಕೆಯ ಚೊಗರಿನಿಂದ ಅಂಟು ತಯಾರಿಸಬಹುದೆನ್ನುವ ಫಾರ್ಮುಲಾಕ್ಕೆ ಶ್ರೀಕಾರ ಬರೆದು 2 ವರುಷವಾಯಿತು. ನಿರಂತರ ಅಧ್ಯಯನ, ವಿಶ್ವಾಸವೃದ್ಧಿ, ಹೇಗೂ ಎಳೆ ಅಡಕೆ ಉಂಟಲ್ಲಾ, ಅದರ ಸಿಪ್ಪೆ ತೆಗೆದು ಬೇಯಿಸಿ ಚೊಗರು ಬೇರ್ಪಡಿಸಿದರು. ಈ ಚೊಗರಿನಿಂದ ಅಂಟು ತಯಾರಿಸಿದರು. ಐದಾರು ಬಾರಿ ಯತ್ನದ ಬಳಿಕ ಅಂಟು ತಯಾರಿ ಹಿಡಿತಕ್ಕೆ ಬಂತು.
ಅಂಟಿನ ಮುಖ್ಯ ಒಳಸುರಿ ಶೇ. 60ರಷ್ಟು ಅಡಕೆಯ ಚೊಗರು. ಇದರ ಅಂಟು ಗುಣ ಉದ್ದೀಪನಗೊಳಿಸಲು 3- 4 ಸಂಯೋಜಕ (ಫಿಲ್ಲರ್) ಸೇರಿಸಿದಾಗ ಕಂದು ಬಣ್ಣದ ಚೊಗರಿನ ಅಂಟು ಸಿದ್ಧ. ಕ್ಷಮತೆಯ ಪ್ರಯೋಗ ಹೇಗೆ? ಭಟ್ಟರು ತಮ್ಮ ತೋಟದಲ್ಲಿ ನೀರಾವರಿಗೆ ಹಾಕಿದ ಪಿವಿಸಿ ಕೊಳವೆ ಜಾಲವನ್ನು ಪ್ರಯೋಗಕ್ಕೆ ಬಳಸಿದರು. ಕೆಲವೆಡೆ ಪೈಪ್ ಅನ್ನು ತುಂಡರಿಸಿ, ಚೊಗರು ಅಂಟನ್ನು ಹಾಕಿ ಪುನಃ ಜೋಡಿಸಿದರು. ಪೈಪುಗಳು ಗಾಢವಾಗಿ ಅಂಟಿಕೊಂಡಿತು. ಆರು ತಿಂಗಳಾಯಿತು, ಬಿಸಿಲು ಮತ್ತು ತೇವದಿಂದ ತೊಂದರೆಯಾಗಿಲ್ಲ. ಕನ್ನಡಿಗೂ ಅಂಟು ಪ್ರಯೋಗ. ಎರಡು ಕನ್ನಡಿಯನ್ನು ಪರಸ್ಪರ ಅಂಟಿಸಿದರು. ಅಂಟಿದ ಕನ್ನಡಿ ಬಿಡಿಸಲಾಗಷ್ಟು ಗಟ್ಟಿ. 3-4 ಕನ್ನಡಿಯನ್ನು ಒಂದರ ಮೇಲೊಂದು ಇಟ್ಟು ಅಂಟಿಸಿದರೆ ಪರಿಣಾಮ ಕೊಡಬಹುದೇ? ಪ್ರಯೋಗ ಮುಂದುವರಿದಿದೆ. ಅಂಟನ್ನು ಪೇಸ್ಟ್ ಮತ್ತು ಲಿಕ್ವಿಡ್ ರೂಪದಲ್ಲಿ ತಯಾರಿಸಬೇಕು. ಇದರಲ್ಲಿ ಲಿಕ್ವಿಡ್ ರೂಪದ ಅಂಟು ಕನ್ನಡಿ ಅಂಟಿಸಲು ಸಹಕಾರಿ. ಕನ್ನಡಿಯ ಪಾರದರ್ಶಕತೆ ಉಳಿಯುತ್ತದೆ. ಪ್ಲೈವುಡ್ ತಯಾರಿ, ಟೈಲ್ಸ್‌ಗಳಿಗೆ ಚೊಗರನ್ನು ಬಳಸುವ ಪ್ರಯೋಗದಲ್ಲಿದ್ದಾರೆ. ಇವಕ್ಕೆ ಬಲವಾದ ಪ್ರೆಸ್ಸಿಂಗ್ ಬೇಕು. ಫ್ಯಾಕ್ಟರಿಗಳಲ್ಲಿ ಮಾತ್ರ ಸಾಧ್ಯ. ಆಗಷ್ಟೇ ಅಂಟಿನ ಕ್ಷಮತೆಯ ಪರೀಕ್ಷೆಯಾಗುತ್ತದೆ. ಇದು ಯಶಸ್ಸಾದರೆ ಪ್ಲೈವುಡ್ ಫ್ಯಾಕ್ಟರಿ ಸಂಪರ್ಕಿಸಿ, ಅವರಿಗೆ ಬೇಕಾದ ಅಂಟನ್ನು ತಯಾರಿಸಿ ಕೊಡಬೇಕು. ಅದೆಲ್ಲಾ ದೀರ್ಘಕಾಲಿಕ ಯೋಜನೆ ಎನ್ನುತ್ತಾರೆ ಭಟ್ಟರು.
ಅಂಟು ತಯಾರಿಯನ್ನು ಉದ್ಯಮವನ್ನಾಗಿಸಿ, ಮಾರುಕಟ್ಟೆ ಮಾಡುವ ಯೋಚನೆ. ಶಿರಸಿ, ಸಾಗರದ ಮೂರ್ನಾಲ್ಕು ಮಂದಿ ಕೃಷಿಕರು ಚೊಗರನ್ನು ವಿತರಿಸಲು ಒಪ್ಪಿದ್ದಾರಂತೆ. ಅಲ್ಲಿ 1 ಕಿಲೋ ಚೊಗರಿಗೆ 25 ರುಪಾಯಿ ದರ. ಬಹುಶಃ ಇಲ್ಲಿಗೆ ತಲಪುವಾಗ ಸಾಗಾಟ, ನಿರ್ವಹಣೆ ಸೇರಿ ದುಪ್ಪಟ್ಟಾಗಬಹುದು.
'ಇದರಿಂದ ಅಡಕೆ ಬೆಳೆಗಾರರಿಗೆ ಏನು ಪ್ರಯೋಜನ?' ಎಂದು ಪ್ರಶ್ನಿಸುತ್ತಾರೆ ಶಂಕರ ಭಟ್. ಸಾಮಾನ್ಯವಾಗಿ ಕೊಳೆ ರೋಗ ಬಾಧಿಸಿ ಉದುರಿದ ಅಡಕೆಯನ್ನು ಬಹುತೇಕರು ಬಿಸಾಡುತ್ತಾರೆ. ಇನ್ನೂ ಕೆಲವರು ಕರಿಗೋಟು ಮಾಡಿ ಕಡಿಮೆ ಬೆಲೆಗೆ ಮಾರುತ್ತಾರೆ. ಇಂಥ ಅಡಕೆಯನ್ನು ಸಂಗ್ರಹಿಸಿ ಪಲ್ಪ್ ಮಾಡಿ ನೀಡಬಹುದು. ಉತ್ತರ ಕನ್ನಡದ ದರದಷ್ಟೇ ಇಲ್ಲೂ ನೀಡಬಹುದು.
ಕಂಪನಿ ತಯಾರಿನ ಪಿವಿಎಸ್ ಪೈಪ್ ಫಿಟ್ಟಿಂಗ್ ಅಂಟು ಯಾವ ದರಕ್ಕೆ ಸಿಗುತ್ತದೋ ಅದಕ್ಕಿಂತ ಅರ್ಧ ಬೆಲೆಗೆ ಚೊಗರು ಅಂಟನ್ನು ನೀಡಬಹುದು. ಚೊಗರು ಅಂಟು ಬಿಡು ವಾತಾವರಣದಲ್ಲಿ ಗಟ್ಟಿಯಾಗದು. ಹಾಗಾಗಿ ವೇಸ್ಟ್ ಇಲ್ಲ. ಒಂದು ಕಿಲೋ ಅಂಟಿಗೆ ರು. 250- ರು. 300ಕ್ಕೆ ಮಾರಬಹುದು ಎನ್ನುವ ಲೆಕ್ಕಾಚಾರ.
ಚೊಗರಿನ ಅಂಟಿಗೆ ಕೃಷಿಕರ ಸ್ವೀಕೃತಿ ಸಿಗಬಹುದೆನ್ನುವ ವಿಶ್ವಾಸ ಶಂಕರ ಭಟ್ಟರಿಗಿದೆ. 15- 20 ಕೃಷಿಕರಿಗೆ ಅಂಟನ್ನು ನೀಡಿ ಹಿಮ್ಮಾಹಿತಿಗಾಗಿ ವಿನಂತಿಸಿದ್ದಾರೆ. ಮುಂದಿನ ಆರು ತಿಂಗಳೊಳಗೆ ತಮ್ಮ ಮಂಗಳಾ ಹರ್ಬಲ್ ಲಾಕರ್ ಬ್ರಾಂಡಿನಲ್ಲಿ ಮಾರುಕಟ್ಟೆ ಮಾಡಲಿದ್ದಾರೆ. (ಮೊ. 9448382229)

- ನಾ. ಕಾರಂತ ಪೆರಾಜೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್