ಕರಾವಳಿಯ ಗುಡ್ಡ ಪ್ರದೇಶದಲ್ಲಿ ರಬ್ಬರ್ ಹವಾ ಸಿಕ್ಕಾಪಟ್ಟೆ. ಅಲ್ಲಿ ಹಣ್ಣಿನ ಬೆಳೆ ಬೆಳೆದು ಸೈ ಎನಿಸಿಕೊಂಡವರು ಬಹಳ ಕಡಿಮೆ. ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಪೆರುವಾಯಿಯ ಅನಂತಕೃಷ್ಣ ಗುಡ್ಡ ಪ್ರದೇಶದಲ್ಲಿ ಬಾಳೆಕೃಷಿ ಮಾಡಿ ಇತರರ ಕಣ್ ತಿರುಗಿಸಿದ್ದಾರೆ.
ಅನಂತ ಕೃಷ್ಣರ ವಯಸ್ಸು 27. 'ಹೆಚ್ಚು ಓದಿದವರು ಕೃಷಿ ಮಾಡುವುದಾ?' ಎಂದು ಮೂಗು ಮುರಿದವರ ಬಾಯಿ ಮುಚ್ಚಿಸಿದ್ದಾರೆ ಈ ಯುವಕ. ಕೆಲಸಕ್ಕಾಗಿ ಪೇಟೆ ಅಲೆಯುವ ಯುವಕರಿಗೆ ತಾವು ಗಳಿಸಿದ ಜ್ಞಾನವನ್ನು ಕೃಷಿಯಲ್ಲಿ ತೊಡಗಿಸಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಅನಂತ ಕೃಷ್ಣ ತಮ್ಮ ಡೀಟೈಲ್ಸ್ ಅನ್ನು ಹೀಗೆ ಬಿಚ್ಚಿಟ್ಟರು; 'ನನ್ನ ತಂದೆ ಪಿ.ಎಸ್. ಸೀತಾರಾಮ ಭಟ್. ಕೃಷಿ ಹಿನ್ನೆಲೆಯವರು. ನನಗವರು ಚಿಕ್ಕಂದಿನಲ್ಲೇ ಕೃಷಿ ಕೆಲಸ ಹೇಳಿಕೊಟ್ಟರು. ಬಯೋಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಓದಿದೆ. ಆದರೂ ಸೆಳೆತ ಕೃಷಿ ಮೇಲೆಯೇ ಇತ್ತು. ಐದು ವರ್ಷದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಮನೆಯಲ್ಲಿ ಎಲ್ಲರೂ ಬೆನ್ನು ತಟ್ಟುತ್ತಿದ್ದಾರೆ. ಕೃಷಿಯಲ್ಲಿ ವಿಜ್ಞಾನವನ್ನು ಬಳಸತೊಡಗಿದೆ. ಬಿಎಸ್ಸಿ ಪದವೀಧರೆ, ನನ್ನ ಹೆಂಡತಿ ಸ್ವಾತಿಯೂ ವೈಜ್ಞಾನಿಕ ಕೃಷಿ ವಿಧಾನಕ್ಕೆ ಕೈಜೋಡಿಸಿದಳು. ಕಾಡುಗಿಡಗಳಿಂದ ತುಂಬಿದ್ದ 6 ಎಕರೆ ಭೂಮಿಯಲ್ಲಿ ಪ್ರಯೋಗ ಮಾಡಲು ನಿರ್ಧರಿಸಿದೆ'.
'ಚೌತಿ ವೇಳೆ ಬಾಳೆಹಣ್ಣಿಗೆ ವ್ಯಾಪಕ ಬೇಡಿಕೆ. ಅದೇ ಸಮಯಕ್ಕೆ ಬಾಳೆಗಿಡಗಳು ಫಸಲು ನೀಡುವಂತಿರಬೇಕು ಎಂದು ಯೋಜಿಸಿದೆ. ಜೂನ್ ಮತ್ತು ಜುಲೈನಲ್ಲಿ ಟಿಶ್ಯೂ ಲ್ಯಾಬ್‌ನಲ್ಲಿ ಬೆಳೆದ ನೇಂದ್ರ ಬಾಳೆ ಸಸಿಗಳನ್ನು ನೆಟ್ಟೆ. ಜೆಸಿಬಿ ನೆರವಿನಿಂದ ಪಾತಿ ನಿರ್ಮಿಸಿದೆ. ಪಾತಿಯ ಬದಿಯಲ್ಲಿ ಪ್ರತಿ ಗಿಡಕ್ಕೂ 6 ಅಡಿ ಅಂತರದಲ್ಲಿ ಸಸಿಗಳನ್ನು ನೆಟ್ಟೆ. ಈ ಪಾತಿಗಳು ಗಿಡದ ಬುಡದಲ್ಲಿ ಮಳೆ ನೀರು ನಿಲ್ಲುವುದನ್ನು ತಪ್ಪಿಸುತ್ತದೆ. ಬಾಳೆ ಗಿಡಗಳಿಗೆ ಬಿಸಿಲು ಅಗತ್ಯ. ಸಾವಯವ ಗೊಬ್ಬರದೊಂದಿಗೆ ಅಲ್ಪಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನೂ ಅಳವಡಿಸಿದೆ. ಬುಡವನ್ನು ಅಡಕೆ ಹಾಗೂ ತೆಂಗಿನ ಸಿಪ್ಪೆ ಹಾಕಿ ಮುಚ್ಚಿದೆ. ಎಲ್ಲಾ ಗಿಡಗಳು ಒಂದೇ ಪ್ರಮಾಣದಲ್ಲಿ ಬೆಳೆಯುತ್ತಿದ್ದವು'.
'ಬಾಳೆಗಿಡದ ಬೆಳವಣಿಗೆಗೆ ಅದರ ಗಡ್ಡೆಗಳು ಅಡ್ಡಿಪಡಿಸುತ್ತವೆ. ಅವುಗಳು ಕಂಡಾಗೆಲ್ಲಾ ತುಳಿದು ಅಥವಾ ಮರದ ಹಲಗೆಯಿಂದ ಬಡಿದು ನಿಯಂತ್ರಿಸುತ್ತಿದ್ದೆ. ಗೊನೆ ಬಂದ ಮೇಲೆ ಸ್ವಲ್ಪ ದಿನಗಳ ನಂತರ ಹೀಚಿನ ಗೊಂಚಲನ್ನು ತುಂಡರಿಸಿದೆ. ಅವುಗಳನ್ನು ಹಾಗೇ ಬಿಟ್ಟರೆ ಗೊನೆಯ ಕಾಯಿಗಳು ದಪ್ಪಗಾಗುವುದಿಲ್ಲ. ಗೊನೆಗಳು ದಪ್ಪವಾದಂತೆ ಗಾಳಿಗೆ ಮುರಿದು ಬೀಳದಂತೆ 3 ಎಂ.ಎಂ. ಹಗ್ಗದಿಂದ, ಮರ ಬಾಗಿದ ವಿರುದ್ಧ ದಿಕ್ಕಿಗೆ ಬಿಗಿದು ಕಟ್ಟಿದೆ. ಗೊನೆ ಕಟಾವು ಹಂತಕ್ಕೆ ತಲುಪುವಾಗ 10-12 ತಿಂಗಳುಗಳೇ ಹಿಡಿದವು'.
ಈಗಿವರು ಮೊನೋ ಕ್ರಾಪ್ ಆಗಿ 5 ಸಾವಿರ ಜಿ9, 150 ನೇಂದ್ರ, 500 ಏಲಕ್ಕಿ ಬಾಳೆ ಸೇರಿದಂತೆ ಇಂಟರ್ ಕ್ರಾಪ್ ಆಗಿ 1600 ಬಾಳೆಗಿಡಗಳನ್ನು ಪೋಷಿಸುತ್ತಿದ್ದಾರೆ. ಅಲ್ಲದೆ ಬಾಳೆಗಿಡಗಳ ನಡುವೆ ಕಾಯಿಮೆಣಸು, ಟೊಮೇಟೊ ಸೇರಿದಂತೆ ಇತರ ಸಣ್ಣಪುಟ್ಟ ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ. ಹನಿ ನೀರಾವರಿ ಅಳವಡಿಸಿದ್ದಾರೆ. ಮನೆಯ ಚಾವಣಿಯಲ್ಲಿ ಟಿಶ್ಯೂ ಕಲ್ಚರ್ ಲ್ಯಾಬ್ ಇದೆ. ಈ ಲ್ಯಾಬ್‌ನಲ್ಲಿ 3 ಲಕ್ಷ ಸಸಿಗಳನ್ನು ಬೆಳೆಸಬಹುದು. ಟಿಶ್ಯೂ ಕಲ್ಚರ್ ಮಾದರಿಯಲ್ಲಿ ಇತರೆ ಬೆಳೆಗಳನ್ನು ಬೆಳೆಯುವ ಆಲೋಚನೆ ಇವರದ್ದು.
- ಮಂಜುನಾಥ್ .ಎಲ್.ಕೆ.