ಬರನಿರೋಧಕ, ಪೌಷ್ಟಿಕಾಂಶದ ಗಣಿಯಾಗಿರುವ ಬಹಳಷ್ಟು ಸಿರಿಧಾನ್ಯಗಳು ದುರ್ಬೀನು ಹಾಕಿ ಹುಡುಕಿದರೂ ಸಿಗುತ್ತಿಲ್ಲ!
ಕಾರಣ- ಇದ್ದ ಭೂಮಿಯಲ್ಲಿ ವಾಣಿಜ್ಯ ಬೆಳೆಗಳು ಕಾಲಿಟ್ಟಿವೆ. ಇನ್ನೊಂದೆಡೆ ದುಡಿಯುವ ಕಾರ್ಮಿಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಕೆಲವು ರೈತರು ಕಿರುಧಾನ್ಯ ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಮೆಚ್ಚತಕ್ಕ ಸಂಗತಿ.
ಆ ಪೈಕಿ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ರೈತ ಕಲ್ಲಪ್ಪ ಒಬ್ಬರು. ಅವರು ಒಮ್ಮೆ ಅಕ್ಕಡಿ ಬೆಳೆಯಾಗಿ ಬರಗ ಬೆಳೆಯಲು ಬೀಜಕ್ಕಾಗಿ ಊರೆಲ್ಲಾ ಹುಡುಕಿದರೂ ಸಿಗಲಿಲ್ಲ. ಅಂದೇ ಪಣ ತೊಟ್ಟು ವಾರ್ಷಿಕವಾಗಿ ಅರ್ಧ ಎಕರೆ ಜಮೀನಿನಲ್ಲಿ ಅಳಿದು ಹೋಗುತ್ತಿರುವ ಸಿರಿಧಾನ್ಯ ಉಳಿಸುವ ಕೈಂಕರ್ಯ ಕೈಗೊಂಡರು. ಇಂದು ಅವರ ಹೊಲದಲ್ಲಿ ಅಪರೂಪದ ಸಿರಿಧಾನ್ಯಗಳು ನಳನಳಿಸುತ್ತಿವೆ. ಸಂತೆಗಳಲ್ಲಿ ಅಲೆದಾಡಿ ಬೀಜ ಸಂಗ್ರಹಿಸಿ ತಂದು ಕೊಟ್ಟಿದ್ದಾರೆ ಅವರ ಗೆಳೆಯ ಹಾಗೂ ಕೃಷಿ ತಜ್ಞ ಶಿವರಾಜ. ಕಲ್ಲಪ್ಪ ಸಾವಯವ ವಿಧಾನದಲ್ಲಿ ಪ್ರತಿವರ್ಷ ಸಿರಿಧಾನ್ಯಗಳನ್ನು ಬಿತ್ತನೆ ಮಾಡುತ್ತಿದ್ದಾರೆ.
20 ನಮೂನೆ ಜೋಳ
ಕಳೆದ ಬಾರಿ ಹಿಂಗಾರಿನಲ್ಲಿ 20 ತರಹದ ದೇಸಿ ಜೋಳ ಬೆಳೆದು ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ಈಗ ಸಿರಿಧಾನ್ಯಗಳಾದ ಸಾವೆ ನವಣೆ, ವರೈ, ಹಾರಕ, ಸಜ್ಜೆ, ಬರಗ ಬೆಳೆಗಳನ್ನು ತಲಾ 5 ರಿಂದ 6 ಸಾಲುಗಳಲ್ಲಿ ಬೆಳೆದು ಬೀಜ ತಯಾರಿಸಿ ಆಸಕ್ತಿ ಇರುವ ರೈತರಿಗೆ ಹಂಚುತ್ತಾರೆ. ಸಾಮಾನ್ಯವಾಗಿ ಬೆಳೆಯುವ ಮೊದಲು ಹೊಲಕ್ಕೆ ಸಾವಯವ ಗೊಬ್ಬರ ಹಾಕುತ್ತಾರೆ. ತದನಂತರ ಬೀಜೋಪಚಾರ ಮಾಡಿ ಇಟ್ಟುಕೊಂಡ ಬೀಜ ಬಿತ್ತನೆ ಮಾಡುತ್ತಾರೆ. ಹೀಗೆ ಬೆಳೆದ ಸಿರಿ ಧಾನ್ಯಗಳಲ್ಲಿ ಕೆಲವು ಬರ ನಿರೋಧಕವಾಗಿದ್ದು, ಬರಗಾಲದಲ್ಲೂ ನಳನಳಿಸುತ್ತವೆ.
ಬೇಡಿಕೆ ಉಂಟು
ಇಲ್ಲಿ ಬೆಳೆದ ಸಿರಿಧಾನ್ಯಗಳನ್ನು ದೂರದ ಊರುಗಳಿಂದ ಬಂದು ತೆಗೆದುಕೊಂಡು ಹೋಗುತ್ತಾರೆ. ಈ ಬೀಜಗಳು ಹಲವು ವರ್ಷ ಕಳೆದರೂ ಕೆಡಲ್ಲ. ಉತ್ತರ ಕರ್ನಾಟಕದ ಹಲವು ವೈವಿಧ್ಯಮಯ ತಿಂಡಿಗಳನ್ನು ಸಿರಿಧಾನ್ಯಗಳಿಂದ ತಯಾರಿಸುತ್ತಾರೆ. ಕಡಿಮೆ ಮಳೆಯಲ್ಲೂ ಇವು ಉತ್ತಮ ಫಸಲು ಕೊಡುತ್ತವೆ. ದನ- ಕರುಗಳಿಗೆ ಮೇವು ಬಲು ಉತ್ಕೃಷ್ಟ. ಕಲ್ಲಪ್ಪ(ಮೊ. 9980634062) ಅವರು ಸಿರಿಧಾನ್ಯ ಹಂಚಿ ಉಳಿಸುವ ಕಾರ್ಯದಲ್ಲಿ ಖುಷಿ ಕಂಡುಕೊಂಡಿದ್ದಾರೆ.
- ವಿನೋದ ರಾ. ಪಾಟೀಲ, ಚಿಕ್ಕಬಾಗೇವಾಡಿ