ಅಡಕೆ ಸಸಿ ಹಾಕಿ ಕನಿಷ್ಠ ಮೂರು ವರ್ಷದವರೆಗೆ ಅದರಲ್ಲಿ ಮತ್ತೊಂದು ಬೆಳೆ ಬೆಳೆಯಲು ಸಾಧ್ಯ. ಹಾಗಾಗಿ ಬಹುತೇಕರು ಅಡಕೆ ನಡುವೆ ಬಾಳೆ ಹಾಕುತ್ತಾರೆ. ಆದರೆ, ಬಾಳೆ ಫಸಲು ಕೈ ಸೇರಲು ವರ್ಷ ತೆಗೆದುಕೊಳ್ಳುತ್ತದೆ. ಅಲ್ಲದೆ, ಕೆಲವೊಮ್ಮೆ ಗಾಳಿ- ಮಳೆಗೆ ನೆಲಕಚ್ಚುವುದು, ಬೆಲೆ ಇಳಿಕೆಯಿಂದ ನಷ್ಟವಾಗುವುದೇ ಹೆಚ್ಚು. ಅಲ್ಲದೆ, ಸಣ್ಣ ಹಿಡುವಳಿದಾರರು ದೊಡ್ಡ ಬಂಡವಾಳ ಹಾಕಿ ಬಾಳೆ ಬೆಳೆಯುವುದು ಕಷ್ಟ. ಇಂಥವರು ಅಡಕೆ ನಡುವೆ ಟೊಮೆಟೊ, ಹೂಕೋಸು, ಬೀನ್ಸ್... ಇತ್ಯಾದಿ ತರಕಾರಿ ಬೆಳೆಯುವುದೇ ಹೆಚ್ಚು. ಆದರೆ, ಇದಕ್ಕೆ ಮಾರುಕಟ್ಟೆಯಲ್ಲಿ ಸದಾ ಒಳ್ಳೆಯ ಬೆಲೆ ಸಿಗುತ್ತದೆ ಎನ್ನುವ ಭರವಸೆ ಇಲ್ಲ.
ಪ್ರತಿಕೂಲ ಪರಿಣಾಮ
ಒಮ್ಮೊಮ್ಮೆ ಉಪ ಬೆಳೆ ಮುಖ್ಯ ಬೆಳೆಯ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ ನಿದರ್ಶನಗಳಿವೆ. ಹೀಗೆ ನಾನಾ ಕಾರಣಗಳಿಂದ ಅನೇಕ ಬಾರಿ ಕೃಷಿಕರ ಮಿಶ್ರ ಬೇಸಾಯದ ಮುಖ್ಯ ಆಶಯವೇ ಹಳ್ಳ ಹಿಡಿಯುತ್ತದೆ. ಇದಕ್ಕೆ ಚಿತ್ರದುರ್ಗ ಜಿಲ್ಲೆಯ ಮಾನಂಗಿಯ ರೈತರಾದ ಲೋಕೇಶ್ವರಪ್ಪ ಮತ್ತು ಚನ್ನಪ್ಪ ಹೊಂಬಾಳೆ ಕೈಗೊಂಡ ಅಡಕೆ ಮಿಶ್ರ ಬೇಸಾಯ ಪದ್ಧತಿ ಉತ್ತರ ನೀಡಿದೆ.
ಲೋಕೇಶ್ವರಪ್ಪರದ್ದು ಒಂದು ಎಕರೆ ಜಮೀನು ಇದೆ. ಇವರು ಸಣ್ಣ ಹಿಡುವಳಿದಾರರಾಗಿದ್ದರಿಂದ ಮೊದಲೆಲ್ಲಾ ಪೂರ್ಣಾವಧಿಯಾಗಿ ತರಕಾರಿ ಬೆಳೆಯುತ್ತಿದ್ದರು. ಒಮ್ಮೆ ಇವರಿಗೆ ಅಡಕೆ ಬೆಳೆಯುವ ಯೋಚನೆ ಬಂತು. ಹೀಗಾಗಿ ಕಳೆದ ಎರಡೂವರೆ ವರ್ಷದ ಕೆಳಗೆ ಒಂದು ಎಕರೆಗೆ ಅಡಕೆ ಸಸಿ ತುಂಬಿಸಿದರು. ಪ್ರಾರಂಭದಲ್ಲಿ ಟೊಮೆಟೊ, ಹೂಕೋಸು ಬೆಳೆದರು. ಆದರೆ, ಮಾರುಕಟ್ಟೆ ಇವರ ಕೈ ಹಿಡಿಯಲಿಲ್ಲ.
ಕೈ ಹಿಡಿದ ಹಾಗಲಕಾಯಿ
ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಇರುವ ತರಕಾರಿ ಬೆಳೆಯುತ್ತ ಗಮನಹರಿಸಿದರು. ಆಗ ಇವರಿಗೆ ಕಂಡಿದ್ದು ಈ ಹಾಗಲಕಾಯಿ. ಇನ್ನು ಚನ್ನಪ್ಪ ಹೊಂಬಾಳೆ ಅವರದ್ದು 10 ಗುಂಟೆ ಜಮೀನಿದೆ. ಅದರಲ್ಲಿ 6 ತಿಂಗಳ ಈಚೆಗೆ ಅಡಕೆ ತುಂಬಿಸಿದ್ದು, ಇದರ ನಡುವೆ ಹಾಗಲಕಾಯಿ ಬೀಜ ಹಾಕಿದ್ದಾರೆ. ಇದಕ್ಕೆ ಪ್ರೇರಣೆ ಲೋಕೇಶ್ವರಪ್ಪ ಅವರ ಮಿಶ್ರ ಬೇಸಾಯ ಪದ್ಧತಿ.
ಚನ್ನಪ್ಪ ಮತ್ತು ಲೋಕೇಶ್ವರಪ್ಪ ಕೃಷಿ ಅನುಭವದಿಂದ ಒಳ್ಳೆಯ ಫಸಲು ಪಡೆಯುತ್ತಿದ್ದಾರೆ. ಹಾಗಲಕಾಯಿಗೆ ಒಳ್ಳೆಯ ಧಾರಣೆ ಸಿಗುತ್ತಿದೆ. ಅಲ್ಲದೆ, ಅಡಕೆಗೆ ಗಾಳಿ, ಬೆಳಕು ಸರಾಗವಾಗಿ ಬರಲು ಸಹಾಯಕವಾಗಿದೆ.
ಏನೇನು ಲಾಭ?
ಕಾಲ- ಕಾಲಕ್ಕೆ ಹಾಗಲಕ್ಕೆ ನೀರು, ಗೊಬ್ಬರ, ಔಷಧ ನೀಡುತ್ತಾರೆ. ಬಳ್ಳಿಯ ಎಲೆ ಒಣಗಿ ಅಲ್ಲಿಯೇ ಮಣ್ಣಾಗಿ, ಫಲವತ್ತತೆ ಸೃಷ್ಟಿಸಿದ ಪರಿಣಾಮ ಅಡಕೆ ಗಿಡಗಳು ಸೊಂಪಾಗಿ ನಿರೀಕ್ಷೆಗೂ ಮೀರಿ ಬೆಳೆಯುತ್ತಿವೆ. ಅಂದಹಾಗೆ, ಈ ಮಿಶ್ರ ಬೆಳೆಯ ಧನಾತ್ಮಕ ಅಂಶಗಳು ಹೀಗಿವೆ. ಇದಕ್ಕೆ ಸಾಲು ನೀರು ಬಿಟ್ಟರೆ ಸಾಕು ಸಮೃದ್ಧಿಯಾಗಿ ಬೆಳೆದು ನಿಲ್ಲುತ್ತದೆ. ನೀರು ಪೂರೈಕೆಯಲ್ಲಿ ಅಡಚಣೆಯಾದರೂ ಹಾಗಲಕಾಯಿಯಲ್ಲಿ ಇಳುವರಿ ಕಮ್ಮಿಯಾಗುತ್ತೆ ವಿನಾ ಬೆಳೆ ಹಾಳಾಗಲ್ಲ. ಇದು ಬೀಜ ಹಾಕಿ 3 ತಿಂಗಳಲ್ಲಿ ಫಲ ನೀಡುವುದಕ್ಕೆ ಪ್ರಾರಂಭಿಸುತ್ತದೆ. ಸ್ವಲ್ಪ ಕಾಳಜಿ ವಹಿಸಿ ನಿರ್ವಹಣೆ ಮಾಡಿದರೆ ಒಟ್ಟು 6 ತಿಂಗಳು ಕಾಯಿ ಬಿಡುತ್ತದೆ. ಅಲ್ಲದೆ, ಮನೆಯವರೇ ಹಾಗಲವನ್ನು ಕೆಲವೇ ಗಂಟೆಯಲ್ಲಿ ಹರಿಯಲು ಸಾಧ್ಯ. ಹೀಗಾಗಿ ಕೂಲಿಗಾರರನ್ನು ಕಾಯುವ ಪ್ರಮೇಯವೇ ಇಲ್ಲ. ಮಾಹಿತಿಗೆ ಲೋಕೇಶ್ವರಪ್ಪ (ಮೊ. 8971691181).
- ಸ್ವರೂಪಾನಂದ. ಎಂ. ಕೊಟ್ಟೂರು