ಸೈಟ್‌ಗಳನ್ನು ಸ್ಥಿತಿವಂತರು ಮಾರಾಟ ಮಾಡದೆ ಪಾಳು ಬಿಡುವುದೇ ಹೆಚ್ಚು. ಮಾರಾಟ ಮುಂದೂಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂಬುದು ಅವರ ಲೆಕ್ಕಾಚಾರ. ಹೀಗೆ ಮಾರದೆ ಬಿದ್ದ ಸೈಟ್‌ಗಳು ನಮ್ಮ ಆಸುಪಾಸಿನಲ್ಲಿ ಹಲವು. ಇಂಥ ನಿವೇಶನವನ್ನು ಮಾರದೆ, ಇದರಿಂದ ಹಣ ಗಳಿಸಬಹುದು.
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಎ. ಕೃಷ್ಣಮೂರ್ತಿ ಶೆಟ್ಟಿ ತಮ್ಮ ಸೈಟ್‌ನಲ್ಲಿ ಟೀಕ್ (ತೇಗ) ಬೆಳೆಯುವ ಮೂಲಕ ಅದನ್ನು ಸಾಧಿಸಿ ತೋರಿಸಿದ್ದಾರೆ. ಇಲ್ಲಿನ ಬಸವೇಶ್ವರ ನಗರದಲ್ಲಿ ಇವರದ್ದು 30X40 ಅಳತೆಯ 20 ಸೈಟುಗಳಿವೆ. ಕೃಷ್ಣಮೂರ್ತಿ ಸ್ಥಿತಿವಂತರು. ಹಾಗಾಗಿ ಸೈಟ್‌ಗಳನ್ನು ಮಾರುವ ದರ್ದು ಅವರಿಗಿಲ್ಲ. ಆದರೆ, ಖರೀದಿದಾರರ ಕಾಟ ಇವರ ನಿದ್ದೆಗೆಡಿಸಿತು. ಜಾಗ ಖಾಲಿ ಬಿಟ್ಟಿದ್ದಕ್ಕೆ ಈ ಉಪಟಳ ಎಂದುಕೊಂಡು, ಇದಕ್ಕೆ ಪರ್ಯಾಯ ಯೋಜನೆ ರೂಪಿಸಿದರು. ಜಾಗವನ್ನು ಮತ್ತೊಬ್ಬರಿಗೆ ನಿಗದಿತ ಅವಧಿಗೆ ಬಾಡಿಗೆ ಕೊಡುವುದಕ್ಕಿಂತ ಸ್ವತಃ ಕೃಷಿ ಮಾಡಲು ಸ್ಕೆಚ್ ಹಾಕಿದರು.
ಕೈ ಹಿಡಿದ ಟೀಕ್
ಸೈಟ್‌ನಲ್ಲಿ ಬೋರ್‌ವೆಲ್ ಕೊರೆಸಿದರು. ಅದೃಷ್ಟಕ್ಕೆ ನೀರು ಚಿಮ್ಮಿತು. ಈ ನೀರು ಬಳಸಿಕೊಂಡು ಮಿತ ಪರಿಶ್ರಮದಲ್ಲಿ ಹೆಚ್ಚು ಲಾಭ ಗಳಿಸುವ ನಿಟ್ಟಿನತ್ತ ಚಿಂತಿಸಿದರು. ಆಗ ಇವರಿಗೆ ಸರಿ ಅನಿಸಿದ್ದು ತೇಗದ ಕೃಷಿ. ಇದಕ್ಕೆ ಪೂರಕವಾಗಿ ಭೂಮಿ ಸಿದ್ಧಪಡಿಸಿದರು.
ಇಂಗುಗುಂಡಿ
ಹೈದರಾಬಾದ್‌ನ ಕಿಸಾನ್ ಬಯೋಟೆಕ್‌ನಿಂದ ಸಾಗುವಾನಿ ಸಸಿ ತಂದು 10 ್ಢ 10ರ ಅಂತರದಲ್ಲಿ ಒಟ್ಟು 400 ಸಸಿಗಳನ್ನು ನೆಟ್ಟು ಹನಿ ನಿರಾವರಿ ಕಲ್ಪಿಸಿದರು. ಕೆಮ್ಮಣ್ಣು, ಮರಳು, ಕುರಿ, ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ಕಾಲ- ಕಾಲಕ್ಕೆ ಹಾಕುತ್ತಾ ಬಂದರು. ತೇಗದ ಮಧ್ಯೆ ಯಥೇಚ್ಛವಾಗಿ ಇಂಗುಗುಂಡಿಗಳನ್ನು ನಿರ್ಮಿಸಿದ್ದರಿಂದ ಮಳೆ ನೀರು ಅಲ್ಲಿಯೇ ಇಂಗಿಸಿದರು. ಇದರಿಂದ ಅಂರ್ತಜಲ ವೃದ್ಧಿಯಾಗಿ, ಈಗ ಮರಗಳು ಕೇವಲ ಮಳೆ, ಅಂರ್ತಜಲ ಬಳಸಿಕೊಂಡು ಸೊಂಪಾಗಿ ಬೆಳೆಯುತ್ತಿವೆ. ಅಲ್ಲದೆ, ತೇಗದ ತರಗೆಲೆಗಳನ್ನು ಸೈಟ್‌ನಲ್ಲಿಯೇ ಮಣ್ಣಾಗುವಂತೆ ಮಾಡಿದ್ದು, ಇದರಿಂದ ಮಣ್ಣು ತೇವಾಂಶ ಕಾಪಿಡುವುದರ ಜತೆಗೆ ಎರೆಹುಳ ಗೊಬ್ಬರ ಉತ್ಪತ್ತಿಯಾಗಿ ಗಿಡಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
8 ವರ್ಷದ ಟೀಕ್
ಅಂದಹಾಗೆ, ಈ ಟೀಕ್‌ನ ಕಾವಲು ಇವರಿಗೆ ತಲೆನೋವಾಗಿಲ್ಲ. ಬೌಂಡರಿಗೆ ಮೆಸ್ ಹಾಕಿಸಿದ್ದು, ಇದು ಪಾರದರ್ಶಕವಾಗಿದ್ದರಿಂದ ಕಳ್ಳಕಾಕರು, ಕಿಡಿಗೇಡಿಗಳು ಒಳ ಹೋಗುವ ಧೈರ್ಯ ಮಾಡುವುದಿಲ್ಲ. ಅಕ್ಕಪಕ್ಕದ ಮನೆಯವರೇ ಈ ತೋಟಕ್ಕೆ ಶ್ರೀರಕ್ಷೆ. ಕೃಷ್ಣಮೂರ್ತಿ ಅವರು ತೇಗ ಹಾಕಿ 8 ವರ್ಷ ಕಳೆದಿದ್ದು, ಮರಗಳು ನಿರೀಕ್ಷೆಗೂ ಮೀರಿ ಬೆಳೆದಿವೆ. ಈಗ ಮಾರುಕಟ್ಟೆಯಲ್ಲಿ 1 ಘನ ಅಡಿಗೆ ರು. 2600ರಿಂದ ರು. 2900ರ ವರೆಗೆ ಬೆಲೆ ಇದೆ. ಹೀಗಾಗಿ ಇವರ ತೋಟದ ಟೀಕ್‌ಗೆ ಲಕ್ಷ ರು.ಗಳಲ್ಲಿ ಬೇಡಿಕೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ. 9449622666.
ಮಿಶ್ರ ಬೆಳೆಗೂ ಸೈಟ್
ತೇಗದ ಸಸಿ ನೆಟ್ಟ ಪ್ರಾರಂಭದಲ್ಲಿ ಕೃಷ್ಣಮೂರ್ತಿ ಶೆಟ್ಟಿ ಇದರ ನಡುವೆ ಅನೇಕ ಅಂತರ ಬೆಳೆ ಬೆಳೆದಿದ್ದಾರೆ. ಸೌತೆ, ಬದನೆ, ಮೆಣಸಿನಕಾಯಿ ಹೀಗೆ ಸತತ ಮೂರು ವರ್ಷ ತೇಗದ ನಡುವೆ ತರೇಹವಾರಿ ತರಕಾರಿ ಬೆಳೆದು ಹಣ ಗಳಿಸಿದ್ದಾರೆ. ಇದರಿಂದ ತೇಗದ ಸಸಿಗೆ ಮಾಡಿದ ಖರ್ಚನ್ನು ಮಿಶ್ರ ಬೆಳೆಯಿಂದಲೇ ತೆಗೆದಿದ್ದಾರೆ. ಅಲ್ಲಲ್ಲಿ ತೆಂಗು, ಸಪೋಟ, ಅಂಜೂರ ಹಾಕಿದ್ದು, ಅವೂ ಫಲ ನೀಡುತ್ತಿವೆ. ಹೀಗಾಗಿ ಇವರ ಸೈಟ್ ಇಂದು ಹಚ್ಚ ಹಸಿರು.
ಕೂಲಿಗಾರರು ಬೇಡ
ತೇಗ ಒಂದು ಹಂತಕ್ಕೆ ಬೆಳೆದ ಮೇಲೆ, ನಾವು ಅಷ್ಟೊಂದು ಗಮನ ಕೊಡುವುದುಬೇಡ. ಕೂಲಿಗಾರರ ಅಗತ್ಯವೂ ಇಲ್ಲ. ಅಲ್ಲದೆ, ಸೈಟ್‌ನಲ್ಲಿ ಮನೆ ಕಟ್ಟುವ, ಮಾರುವ ಯೋಚನೆ ಸುಳಿದ ಮರುಕ್ಷಣವೇ ತೇಗ ಕಡಿದರೂ ಒಳ್ಳೆಯ ಬೆಲೆ ಕಟ್ಟಿಟ್ಟ ಬುತ್ತಿ.
- ಎ. ಕೃಷ್ಣಮೂರ್ತಿ ಶೆಟ್ಟಿ
- ಸ್ವರೂಪಾನಂದ ಎಂ. ಕೊಟ್ಟೂರು