ಕೃಷಿ ತೋಟಗಾರಿಕೆ ವಿಧಾನ ಸಣ್ಣ ರೈತರಿಗೆ ವರದಾನ. ಆಹಾರಬೆಳೆ, ಅರಣ್ಯ ಸಸಿ ಹಾಗೂ ಹಣ್ಣಿನ ಸಸಿಗಳ ತ್ರಿವೇಣಿ ಸಂಗಮವಾಗಿರುವ ಈ ವಿಧಾನ ಒಂದು ಕುಟುಂಬದ ಅಗತ್ಯಗಳನ್ನು ಪೂರೈಸಬಲ್ಲದು. ವಾಡಿ ಎಂಬ ಹೆಸರಿನ ಈ ತೋಟಗಾರಿಕೆ ಪದ್ಧತಿಯು ಆಹಾರ, ಮೇವು, ಉರುವಲುಗಳ ಜತೆಗೆ ವಾಣಿಜ್ಯ ದೃಷ್ಟಿಯಿಂದಲೂ ಉಪಯುಕ್ತ. ಹೆಚ್ಚು ನೀರಿನ ಅಗತ್ಯವೂ ಇಲ್ಲ.
2009ರ ಸಮಯ. ಅರಸೀಕೆರೆ ತಾಲೂಕು ಬೊಮ್ಚಿಹಳ್ಳಿಯ ಮಂಜೇಗೌಡರ ಜಮೀನು ಅಕ್ಷರಶಃ ಪಾಳು ಬಿದ್ದಿತ್ತು. ನಬಾರ್ಡ್ ಜಲಾನಯನ ಯೋಜನೆ ಈ ಪ್ರದೇಶಕ್ಕೆ ಬಾರದಿದ್ದರೆ ಈಗಲೂ ಪಾಳು ಜಮೀನೇ ಆಗಿರುತ್ತಿತ್ತು. ಆದರೆ ಈಗ- ಅಂದರೆ 2013ರ ವೇಳೆಗೆ ಅಲ್ಲೊಂದು ಪುಟ್ಟ ವಾಡಿ ಮೈತಳೆದಿದೆ. ನಾಲ್ಕೇ ವರ್ಷಗಳ ಈ ಬೆಳವಣಿಗೆ ಸ್ವತಃ ಮಂಜೇಗೌಡರಿಗೂ ಅಚ್ಚರಿಯ ವಿಷಯ.
ಪ್ರಸ್ತುತ ವಾಡಿ ಅಭಿವೃದ್ಧಿಪಡಿಸಿರುವ ಒಂದೂವರೆ ಎಕರೆ ಭೂಮಿಯಲ್ಲಿ ಮೊದಲು ಕೇವಲ 10-12 ಗುಂಟೆ ಮಾತ್ರ ವ್ಯವಸಾಯ ಯೋಗ್ಯವಾಗಿತ್ತು. ಅಲ್ಲಿಗೆ ಆಲೂಗಡ್ಡೆ ಹಾಕುತ್ತಿದ್ದರು. ಉಳಿದ ಜಾಗವು ಕಲ್ಲುಮಣ್ಣಿನಿಂದ ತುಂಬಿತ್ತು. ಮಂಜೇಗೌಡರಿಗೆ ಈ ಪಾಳುಭೂಮಿಯ ಜತೆಗೆ ಫಲವತ್ತಾದ ಇತರೆ ನಾಲ್ಕೂವರೆ ಎಕರೆ ಜಮೀನು ಇದ್ದಿದ್ದರಿಂದ ಅಲ್ಲಿ ತೆಂಗು ಹಾಗೂ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದರು. ಪಾಳು ಜಮೀನನ್ನು ಕೃಷಿಯೋಗ್ಯವಾಗಿಸುವ ಮನಸ್ಸಿದ್ದರೂ ಹಣದ ತೊಂದರೆಯಿಂದ ಸುಮ್ಮನಾಗಿದ್ದರು.
2009ರಲ್ಲಿ ಜಲಾನಯನ ಯೋಜನೆ ಈ ಗ್ರಾಮಕ್ಕೆ ಬಂದು ಮಂಜೇಗೌಡರು ಕೃಷಿ ತೋಟಗಾರಿಕೆ (ವಾಡಿ) ಫಲಾನುಭವಿಯಾಗಿ ಆಯ್ಕೆಯಾದರು. ಮೊದಲು ಉದಿ- ಬದು ಹಾಕಲಾಯಿತು. ಹೊಲದ ಸುತ್ತಲೂ ಬದುವಿನ ಮೇಲೆ ಹೆಬ್ಬೇವು, ತೇಗ, ಸಿಲ್ವರ್‌ಓಕ್ ಅರಣ್ಯಸಸಿಗಳನ್ನು ಹಾಗೂ ಹೊಲದ ನಡುವೆ 60 ಆಲ್ಫೋನ್ಸಾ ಮತ್ತು ರತ್ನಗಿರಿ ಮಾವನ್ನು ನೆಟ್ಟರು. ವಾಡಿ ತಲೆ ಎತ್ತಿತು, ಮಾವಿನ ನಡುವೆ ಇದ್ದ ಖಾಲಿ ಜಾಗದಲ್ಲಿ ಮೊದಲ ಮೂರು ವರ್ಷ ಕೊತ್ತಂಬರಿ, ಆಲೂಗಡ್ಡೆ, ದ್ವಿದಳ ಧಾನ್ಯಗಳು, ರಾಗಿ ಮುಂತಾದವುಗಳನ್ನೂ ಬೆಳೆಯಲಾರಂಭಿಸಿದರು. 2012ರ ಹೊತ್ತಿಗೆ ಮಾವು ಎದೆಯುದ್ದ ಬೆಳೆದಿದ್ದರಿಂದ ಅಂತರಬೆಳೆ ನಿಲ್ಲಿಸಿದರು.
ಆಗಿನಿಂದ ಹೊಲದ ನಡುವೆ ಟ್ರಂಚ್ ಹೊಡೆಸಿ 500 ಬಾಳೆ ನೆಟ್ಟರು. ಬದುಗಳಲ್ಲಿ ಮಳೆನೀರು ನಿಂತು ತಂಪಾಗಿದ್ದುದರಿಂದ ಬಾಳೆಯ ಬೆಳವಣಿಗೆ ಉತ್ತಮವಾಗಿದ್ದು, ಫಸಲು ಶುರುವಾಗಿದೆ. ಮಾವೂ ಫಸಲು ಬಿಡಲಾರಂಭಿಸಿದ್ದು, ಗುತ್ತಿಗೆದಾರರು ಖರೀದಿಸಲಾರಂಭಿಸಿದ್ದಾರೆ. ಹೊಲದ ಇಳಿಜಾರು ಭಾಗದಲ್ಲಿ ಕಲ್ಲಿನ ಬದು ಹಾಕಿಸಿದ್ದಾರೆ. ಮಳೆ ಬಂದಾಗ ಇಲ್ಲಿ ಐದು ಅಡಿಗೂ ಎತ್ತರಕ್ಕೆ ನೀರು ನಿಂತಿದ್ದು ನಿಧಾನವಾಗಿ ನೆಲದಲ್ಲಿ ಇಂಗುತ್ತದೆ.
ಹೊಲದಂಚಿನಲ್ಲಿ ನೆಟ್ಟಿದ್ದ ಕಾಡುಸಸಿಗಳು, ಅದರಲ್ಲೂ ಹೆಬ್ಬೇವು 30 ಅಡಿಗೂ ಮೀರಿ ಬೆಳೆದು ನಿಂತಿವೆ, ಈ ಪ್ರದೇಶಕ್ಕೆ ಹೊಸದಾದ ಹೆಬ್ಬೇವಿನ ಮರಗಳು ಈ ಪರಿ ಬೆಳೆಯುವುದು ಮಂಜೇಗೌಡರಿಗೆ ಆಶ್ಚರ್ಯ ತಂದಿದೆ. ಇದರ ಸೊಪ್ಪನ್ನು ಹಲವು ಬಾರಿ ಕತ್ತರಿಸಿ ತಿಪ್ಪೆಗೆ ಹಾಕಿದ್ದಾರೆ. ಇವರಿಗೆ ಇಂದು ತಮ್ಮ ಇತರೆ ಜಮೀನಿಗಿಂತ ವಾಡಿಯ ಬಗ್ಗೆಯೇ ಹೆಚ್ಚು ಪ್ರೀತಿ. ದಿನದ ಹೆಚ್ಚು ಹೊತ್ತು ಇಲ್ಲಿಯೇ ಕಳೆಯುತ್ತಾರೆ. ಪಾಳು ಬಿದ್ದಿದ್ದ ಜಮೀನು ಇಷ್ಟರಮಟ್ಟಿಗೆ ಡೆವಲಪ್ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ಎನ್ನುತ್ತಾರೆ ಗೌಡರು.
ಈ ಭಾಗದಲ್ಲಿ ಅಡಕೆ, ತೆಂಗಿನ ತೋಟಗಳು ನೀರಿಲ್ಲದೆ ಒಣಗುತ್ತಿವೆ. ಹೆಚ್ಚು ನೀರು ಕೇಳುವ ಇವುಗಳಿಗಿಂತ ಕಡಿಮೆ ನೀರಿನಲ್ಲೇ ವೈವಿಧ್ಯಮಯ ಬೆಳೆಗಳಿಗೆ ಅವಕಾಶವಿರುವ ವಾಡಿ ಪದ್ಧತಿ ರೈತರ ಆಯ್ಕೆಯಾಗಲಿ.
- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com