ರಾಜ್ಯದ ಹಲವು ಭಾಗಗಳಲ್ಲಿ ಪುಷ್ಪೋದ್ಯಮ ಗರಿಗೆದರುತ್ತಿದೆ. ಹೂವಿನಿಂದಲೂ ಲಾಭ ತೆಗೀಬಹುದು ಎಂಬುದನ್ನು ರೈತರು ಮನಗಾಣುತ್ತಿದ್ದಾರೆ. ಹೂವಿನ ಬೆಳೆಗಳಲ್ಲಿ ನಿಧಾನವಾಗಿ ತಳ ಊರುತ್ತಿರುವುದು ಕಾರ್ನೇಷಿಯಾ.
ತೀರ್ಥಹಳ್ಳಿಯಿಂದ ಕೋಣಂದೂರಿಗಿಂತ ಮುಂಚೆ ತ್ಯಾರಂದೂರಿಂದ 4 ಕಿ.ಮೀ. ದೂರದಲ್ಲಿ ರಾಘವೇಂದ್ರರ ಪಾಲಿಹೌಸ್ ಇದೆ. ಅವರು ಕಾರ್ನೇಷಿಯಾ ಬೆಳೆಯುವ ಸಾಹಸ ಮಾಡಿದ್ದಾರೆ. ಅದಕ್ಕಾಗಿ ಜೋಪಾರ್ ಸಂಸ್ಥೆಯಿಂದ 24 ಸಾವಿರ ಗಿಡ ಕೊಂಡಿದ್ದಾರೆ. 1 ಗಿಡಕ್ಕೆ 8.50 ಕಿಮ್ಮತ್ತು.
ಬೆಳೆಯುವ ವಿಧಾನ ಹೇಗೆ?
ಸಸಿ ನೆಡುವುದಕ್ಕಿಂತ ಪೂರ್ವದಲ್ಲಿ ಮುಂಚಿತವಾಗಿ ಪಾಲಿಹೌಸ್ ನಿರ್ಮಿಸಬೇಕು. ಬೆಡ್ ಕೂಡಾ ಸಿದ್ಧಪಡಿಸಿಕೊಂಡಿರಬೇಕು. ಗಿಡಗಳ ಆಯ್ಕೆ ಮಾಡುವಾಗ ಜಾಗ್ರತೆ ತೀರಾ ಅಗತ್ಯ. ಬೆಡ್ 3 ಅಡಿ ಅಗಲವಿರಬೇಕು. 1 ಅಡಿ ದಾರಿ ಮಾಡಬೇಕು. 145 ಅಡಿ ಉದ್ದವಿರಬೇಕು. ಬೆಡ್‌ನಲ್ಲಿ (ಏರಿಯಲ್ಲಿ) ಸಸಿಯನ್ನು 15 ಸೆಂ.ಮೀ. ಅಂತರದಲ್ಲಿ ನೆಡಬೇಕು. ಗಿಡ ನೆಟ್ಟ 1 ತಿಂಗಳವರೆಗೆ ದಿನಕ್ಕೆ 3 ನಿಮಿಷ ಸಿಂಪಡಿಸುತ್ತಿರಬೇಕು. ತದನಂತರ ದಿನಕ್ಕೆ 7ರಿಂದ 10 ನಿಮಿಷ ಹನಿ ನೀರಾವರಿಯಲ್ಲಿ ನೀರನ್ನು ಹಾಯಿಸಬೇಕು.
ಗೊಬ್ಬರ
ವಾರಕ್ಕೆ ಮೂರು ಬಾರಿ ಕ್ಯಾಲ್ಸಿಯಂ ನೈಟ್ರೇಟ್ ಮೈಕ್ರೋ ನ್ಯೂಟ್ರಿಯೇಟ್ ಫಂಗಸೈಡ್ ಮತ್ತು ಪೆಸ್ಟಿಸೈಡ್ ಸ್ಪ್ರೇ ಮಾಡಬೇಕು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ನೈಟ್ರೇಟ್, ಪೋಟ್ಯಾಸಿಯಂ ನೈಟ್ರೇಟ್ ಪಾಸ್ಫೇಟ್, ಅಮೋನಿಯಮ್ ಸಲ್ಫೇಟ್, ಮೈಕ್ರೋ ನ್ಯೂಟ್ರಿಯೇಟ್ ಪೋಷಣೆಗೆ ಬಳಸಲಾಗುವುದು.
ನಿರ್ವಹಣೆ ಬಗೆ
ಸಸಿ ನೆಟ್ಟ ನಾಲ್ಕು ತಿಂಗಳ ನಂತರ ಹೂವು ಬಿಡಲು ಆರಂಭಿಸುತ್ತದೆ. ಅನಂತರ ದಿನಾ ಕೊಯ್ಲು ಮಾಡಬೇಕು. ಕೊಯ್ಲು ಆದ ತಕ್ಷಣ ಪ್ಯಾಕಿಂಗ್ ಮಾಡಿ ಬೆಂಗಳೂರಿಗೆ ಕಳುಹಿಸಲಾಗುವುದು. 20 ಹೂವಿನ ಒಂದು ಗೊಂಚಲು ಮಾಡಲಾಗುತ್ತದೆ. ಕೊಯ್ಲು ಮಾಡುವಾಗ ಕಾಲು ಎಕರೆಯಲ್ಲಿ ಸುಮಾರು 1ಸಾವಿರದಂತೆ ಹೂವುಗಳು ಎರಡು ತಿಂಗಳ ಕಾಲ ದೊರೆಯುತ್ತದೆ. ಅನಂತರ ಸರಾಸರಿ 300 ರಿಂದ 400 ಹೂವು ನೀಡುತ್ತದೆ.
ರೋಗ ಬಾಧೆ
ಕಾರ್ನೇಷಿಯಾಕ್ಕೆ ಕಾಡುವ ಅಪಾಯಕಾರಿ ಕಾಯಿಲೆ ವೈಟ್ಸ್. ಇದರ ನಿರ್ಮೂಲನಕ್ಕೆ ಡೈಕೋಫಾಲ್, ಮೆಜೆಷ್ಟರ್, ನಾಟರ್‌ನೈಕೋ ಸ್ಪ್ರೇ ಮಾಡಬೇಕು. ದಿನಾ ಮುತುವರ್ಜಿಯಿಂದ ಮಗುವಿನಂತೆ ನೋಡಬೇಕು. ಹಲವು ಬಾರಿ ಗೊಬ್ಬರ ಕೊಡಬೇಕಾಗುತ್ತದೆ. ಅದಕ್ಕಾಗಿ ಆಳುಗಳ ಅಗತ್ಯ ಹೆಚ್ಚು. ಕೋಣಂದೂರಿನಂತಹ ಸಣ್ಣ ಊರಿನಲ್ಲಿ ಕಾರ್ನೇಷಿಯಾ ಬೆಳೆದು ಯಶಸ್ವಿಯಾದ ರಾಘವೇಂದ್ರರ ಸಾಧನೆ ನಿಜಕ್ಕೂ ಬೆರಗು ಮೂಡಿಸುವಂತಿದೆ.
ಮಾರುಕಟ್ಟೆ
ಸರಾಸರಿ 1 ಹೂವಿಗೆ 3.50 ಧಾರಣೆ ಇದೆ. ಇದು ನಿರಂತರ ಏರಿಳಿತದಿಂದ ಕೂಡಿರುತ್ತದೆ. ಯಾವುದೇ ಸಭೆ- ಸಮಾರಂಭಗಳು ಇಲ್ಲದ ಸಂದರ್ಭದಲ್ಲಿ 50 ಪೈಸೆಯಿಂದ 1 ಬೆಲೆ ಇಳಿಲೂಬಹುದು. ಸೀಸನ್‌ನಲ್ಲಿ ಅಂದರೆ ಹೆಚ್ಚು ಸಭೆ, ಸಮಾರಂಭಗಳು, ಮದುವೆ ಇರುವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಒಂದು ಹೂವಿಗೆ 10 ಇರುತ್ತದೆ. ಈ ಹೂವಿಗೆ ಗರಿಷ್ಠ ಬೇಡಿಕೆ. ಚೆನ್ನೈ ಮತ್ತು ಹೈದರಾಬಾದ್ ಹೆಚ್ಚು ಡಿಮ್ಯಾಂಡ್ ಉಂಟು. <
-ವಿ. ಬಾಲಕೃಷ್ಣ ಶಿರ್ವ