ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು ಎಂಬ ಮಾತಿದೆ. ಪ್ರಾಯೋಗಿಕವಾಗಿ ಇದನ್ನು ಮಾಡ ಹೊರಟರೆ ಬ್ಯಾಂಕಿನವರ ಬಳಿ ಹೋಗಬೇಕಾಗುತ್ತದೆ. ಸೇಬು ಕೊಳ್ಳಲು ಸಾಲಕ್ಕಾಗಿ! ಇಂದು ಕಿಲೋ ಸೇಬಿನ ಬೆಲೆ ನೂರಿಪ್ಪತ್ತರಿಂದ ನೂರೈವತ್ತರವರೆಗೆ ಇದೆ. ಪೀಕ್ ಸೀಸನ್ನಿನಲ್ಲಿಯೂ ಅದು ಎಂಭತ್ತು ರುಪಾಯಿಗಿಂತ ಕಡಿಮೆಯಾದ ಉದಾಹರಣೆ ಇಲ್ಲ. ಕಿಲೋ ಒಂದಕ್ಕೆ ನಾಲ್ಕರಿಂದ ಐದು ಹಣ್ಣು ಬರುತ್ತದೆ. ಅಂದರೆ ಸರಾಸರಿ ಒಂದು ಹಣ್ಣಿಗೆ ಇಪ್ಪತ್ತು ರುಪಾಯಿ. ಸಾಫ್ಟ್‌ವೇರ್ ಸಂಬಳದವರೂ ಒಂದು ಕ್ಷಣ ಯೋಚಿಸಬೇಕಾದ ವಿಷಯ. ಇದಕ್ಕಿಂತ ವೈದ್ಯರ ಫೀಸೇ ವಾಸಿ ಅಂತಂದುಕೊಳ್ಳುವವರೇ ಹೆಚ್ಚು!
ಸೇಬು ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಮಾತ್ರ ಬೆಳೆಯುವುದರಿಂದ ಅಷ್ಟು ದುಬಾರಿ, ಅದರ ಬದಲು ಮನೆ ಹಿತ್ತಿಲಲ್ಲೋ ಹೊಲದಲ್ಲೋ ಬದನೆಕಾಯಿ, ಕೊತ್ತಂಬರಿ ಸೊಪ್ಪು, ಮೂಲಂಗಿಯಂತೆ ಬೆಳೆದುಕೊಳ್ಳುವಂತಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ಬರುವುದು ಸಹಜ. ಆದರೆ, ಒಣಭೂಮಿ ಪರಿಸರದಲ್ಲಿ ಅದು ಬೆಳೆಯುವುದಿಲ್ಲ ಎಂಬ ನಿರಾಶೆಯೂ ಸಹಜ.
ಆದರೆ ನಿರಾಶೆ ಪಡಬೇಕಿಲ್ಲ. ಕರ್ನಾಟಕದ ಹವಾಮಾನದಲ್ಲೂ ಸೇಬು ಬೆಳೆಯುವ ಭರವಸೆ ಸಿಕ್ಕಿದೆ. ಮೂರು ವರ್ಷಗಳಿಂದ ನಡೆಯುತ್ತಿರುವ ಈ ಯತ್ನಗಳು ಫಲ ಕೊಟ್ಟಿವೆ. ಅರ್ಥಾತ್ 2011ರಲ್ಲಿ ನೆಟ್ಟ ಸಸಿಗಳು ಈಗ ಹಣ್ಣು ಬಿಟ್ಟಿವೆ. ಕಾಶ್ಮೀರ, ಹಿಮಾಚಲದಂಥ ಚಳಿ ಪ್ರದೇಶ ಹೊರತುಪಡಿಸಿ ಒಣ ಹವಾಮಾನದಲ್ಲೂ ಯಶಸ್ವಿಯಾಗಿ ಸೇಬು ಬೆಳೆದಿರುವುದು ಕರ್ನಾಟಕದಲ್ಲೇ.
ಇದಕ್ಕೆ ಪ್ರೇರಣೆ ಇಂಡೋನೇಷ್ಯಾದ ಬಾಟು ಪ್ರದೇಶದಲ್ಲಿ ಯಶಸ್ವಿಯಾಗಿ ಬೆಳೆದಿರುವ ಸೇಬು. 80 ವರ್ಷಗಳಿಂದ ಅಲ್ಲಿ ಯಶಸ್ವಿಯಾಗಿ ಸೇಬು ಬೆಳೆಯಲಾಗುತ್ತಿದೆ. ಬಾಟುವಿನ ವಾತಾವರಣ ಕರ್ನಾಟಕದಂತೆಯೇ ಇದೆ. ಬಿಸಿಲು, ಚಳಿ, ಉಷ್ಣಾಂಶ, ಶೀತಾಂಶ ಎಲ್ಲವೂ ಒಂದೇ. ಹಾಗಾಗಿ ಕರ್ನಾಟಕದಲ್ಲಿಯೂ ಈ ಪ್ರಯತ್ನ ಏಕೆ ಮಾಡಬಾರದೆಂದು ಚಿಂತಿಸಿದ ಹಿಮಾಚಲ ಪ್ರದೇಶದ ನಿವೃತ್ತ ಸೇಬು ವಿಜ್ಞಾನಿ ಡಾ. ಚಿರಂಜಿತ್ ಪರ್ಮಾರ್ ಅವರ ಪ್ರಯತ್ನದ ಫಲವಿದು. ಅವರು ನಾಲ್ಕು ವರ್ಷಗಳ ಹಿಂದೆ ಇಂಡೋನೇಷ್ಯಾದ ಬಾಟು ದ್ವೀಪಕ್ಕೆ ಭೇಟಿ ಇತ್ತಾಗ ಆಕಸ್ಮಿಕವಾಗಿ ಸೇಬಿನ ತೋಟ ಕಂಡರು. ಶೀತ ಪ್ರದೇಶವಲ್ಲದ ಅಲ್ಲಿ ಎರಡು ಸಾವಿರ ಹೆಕ್ಟೇರ್‌ನಲ್ಲಿ ಹಬ್ಬಿದ್ದ ಫಲಭರಿತ ಸೇಬಿನ ತೋಟಗಳ ದರ್ಶನ ಅವರಿಗೆ ಪವಾಡವಾಗಿ ಕಂಡಿತು. ಸೇಬಿನ ಮೂಲವಾದ ಹಿಮಾಚಲದ ಇಳುವರಿಗಿಂತ ಬಾಟುವಿನ ಇಳುವರಿ ಹತ್ತಾರು ಪಟ್ಟು ಹೆಚ್ಚಿತ್ತು.
ವಾಪಸ್ ಭಾರತಕ್ಕೆ ಬಂದವರಿಗೆ ಅದೇ ಗುಂಗು. ಬಾಟು ವಾತಾವರಣವೇ ಇರುವ ಭಾರತದ ಹಲವಾರು ರಾಜ್ಯಗಳಲ್ಲಿ ಸುಲಭವಾಗಿ ಸೇಬು ಬೆಳೆಯಬಹುದೆನ್ನಿಸಿ ಪ್ರಚಾರ ಶುರುಮಾಡಿದರು. ಲೇಖನ, ಪತ್ರಗಳ ಮೂಲಕ ಮಾಹಿತಿ ಹಂಚಿದರು. ಇವರಿಂದ ಉತ್ತೇಜಿತರಾಗಿ ರಾಜ್ಯದ ಅಡಿಕೆ ಪತ್ರಿಕೆಯೂ ಲೇಖನ ಪ್ರಕಟಿಸಿತು. ಲೇಖನ ಓದಿದ ಹಲವು ರೈತರು ಪರ್ಮಾರ್ ಅವರ ಸಂಪರ್ಕ ಸಾಧಿಸಿದರು. ಮಂಗಳೂರಿನ ಕೃಷ್ಣಶೆಟ್ಟಿ ಗಿಡ ತರಿಸಲು ಮುಂದಾದರು. ಸಹರೈತರ ಬೇಡಿಕೆಗಳನ್ನೂ ಸೇರಿಸಿ ಉತ್ಸಾಹದಿಂದ ಮಿಶನ್ ಆ್ಯಪಲ್ ಶುರುಮಾಡಿದರು. ಪರ್ಮಾರ್ 2011ರಲ್ಲಿ ಮಂಗಳೂರಿನ ಕೃಷ್ಣಶೆಟ್ಟಿಯವರಿಗೆ ಮುನ್ನೂರಕ್ಕೂ ಹೆಚ್ಚು ಸೇಬಿನ ಸಸಿಗಳನ್ನು ಕಳುಹಿಸಿದರು. ಶೆಟ್ಟಿಯವರು ಅವನ್ನು ನಾಲ್ಕೈದು ಜಿಲ್ಲೆಗಳ ಆಸಕ್ತರಿಗೆ ಹಂಚಿದರು. ಅವರಲ್ಲಿ ತುಮಕೂರಿನ ಗಂಗಾಧರಮೂರ್ತಿಯವರು ಈಗಾಗಲೇ ಸೇಬುಹಣ್ಣನ್ನು ಪಡೆಯುವ ಮಟ್ಟಿಗೆ ಪ್ರಗತಿ ಸಾಧಿಸಿದ್ದಾರೆ.
ಶೆಟ್ಟಿಯವರಿಂದ 12 ಸಸಿಗಳನ್ನು ಪಡೆದ ತುಮಕೂರಿನ ಬಳಿಯ ನೇರಳಾಪುರದ ಗಂಗಾಧರಮೂರ್ತಿ ಅವುಗಳನ್ನು 2011ರ ಫೆಬ್ರವರಿಯಲ್ಲಿ ನೆಟ್ಟರು. ಎಲ್ಲಾ ಸಸಿಗಳನ್ನು ಒಂದೇ ತಾಕಿನಲ್ಲಿ ನೆಟ್ಟಿದ್ದು, ಸಸಿಯಿಂದ ಸಸಿಗೆ 15 ಅಡಿ ಅಂತರವಿದೆ. ಸೇಬು ವ್ಯವಸಾಯದಲ್ಲಿ ಅನುಭವವಿಲ್ಲದ ಇವರು ತಮ್ಮ ತೋಟದ ಇತರ ಸಸಿಗಳಂತೆಯೇ ಇವನ್ನೂ ಬೆಳೆಸಿದರು. ವಿಶೇಷ ಆರೈಕೆಯನ್ನೇನೂ ಮಾಡಲಿಲ್ಲ. ವಾರಕ್ಕೊಮ್ಮೆ ನೀರು, ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ಕೊಟ್ಟರು. ಗಿಡಗಳ ಬುಡಕ್ಕೆ ಹುಲ್ಲು- ಸೊಪ್ಪುಗಳಿಂದ ಮುಚ್ಚಿಗೆ ಮಾಡಿದರು. ಒಂದು ಸಸಿ ಒಣಗಿ ಹೋಯಿತು. ಉಳಿದವು ಇವರ ನಿರೀಕ್ಷೆಯನ್ನೂ ಮೀರಿ ಬೆಳೆದವು. ಸಸಿಗಳು ಪೊದೆಯಾಕಾರದಲ್ಲಿ ಬೆಳೆಯುತ್ತವೆಂದುಕೊಂಡಿದ್ದ ಊಹೆಗೆ ವಿರುದ್ಧವಾಗಿ ನೇರವಾಗಿ ಬೆಳೆದವು. ಕೆಲವು ಗಿಡಗಳು 15 ಅಡಿ ಎತ್ತರ ಬೆಳೆದು ನಿಂತಿವೆ. ನೆಟ್ಟ ಒಂದೂವರೆ ವರ್ಷದ ನಂತರ ಇವರಿಗೊಂದು ಅಚ್ಚರಿ. 2012ರ ಅಂತ್ಯದಲ್ಲಿ ಮೂರು ಸಸಿಗಳು ಹೂಬಿಟ್ಟಿದ್ದವು. ನೋಡನೋಡುತ್ತಲೇ ಪೀಚಾಗಿ ಬಲಿಯತೊಡಗಿದವು. ಒಂದೇ ಗಿಡದಲ್ಲಿ ಹದಿಮೂರು ಹಣ್ಣುಗಳು ಬಿಟ್ಟವು. ಉಳಿದೆರಡರಲ್ಲಿ ಮೂರು- ನಾಲ್ಕು. ಹಕ್ಕಿಗಳು ತಿನ್ನಬಾರದು ಹಾಗೂ ಮನುಷ್ಯರು ಕೈಹಾಕಬಾರದೆಂದು ಬಟ್ಟೆ ಸುತ್ತಿದರು. ತೋಟ ನೋಡಿಕೊಳ್ಳುವವರಿಗೆ ಎಚ್ಚರಿಸಿದರು. ಇವರ ಜೊತೆಯಲ್ಲೇ ಸಸಿ ಪಡೆದಿದ್ದ ಶೃಂಗೇರಿಯ ರೈತರ ಸೇಬು ಗಿಡಗಳೂ ಕಾಯಿ ಬಿಟ್ಟಿರುವ ವರ್ತಮಾನ ಸಿಕ್ಕಿತು.
ಈ ಎಲ್ಲಾ ಮಾಹಿತಿ ತಿಳಿದ ಪರ್ಮಾರ್ ದೂರದ ಹಿಮಾಚಲ ಪ್ರದೇಶದಿಂದ ಹೊರಟುಬಂದರು. ಮೊನ್ನೆ ಏಪ್ರಿಲ್‌ನಲ್ಲಿ ಮೂರು ದಿವಸ ಮಂಗಳೂರು, ಮಡಿಕೇರಿ ಹಾಗೂ ತುಮಕೂರಿನ ಮೂರ್ತಿಯವರ ತೋಟಕ್ಕೆ ಭೇಟಿ. ರೈತರು ಹಾಗೂ ಆಸಕ್ತರೊಂದಿಗೆ ಸಂವಾದ. ಅವರ ಭೇಟಿಯ ಸಮಯಕ್ಕೆ ಸರಿಯಾಗಿ ಮೂರ್ತಿಯವರ ತೋಟದಲ್ಲಿ ಸೇಬು ಹಣ್ಣಾಗಿತ್ತು. ಆಕರ್ಷಕ ಬಣ್ಣ, ಮಧ್ಯಮ ಗಾತ್ರ. ಸಂವಾದದ ನಡುವೆಯೇ ಒಂದು ಹಣ್ಣನ್ನು ಕತ್ತರಿಸಿ ಎಲ್ಲರಿಗೂ ತಿನ್ನಿಸಿದರು. ಉತ್ತಮ ರುಚಿ. ಪರ್ಮಾರ್ ಅವರಿಗೆ ಖುಷಿ, ಉಳಿದವರಲ್ಲಿ ಸೋಜಿಗ. 'ಅಂಗ್ಡೀಲಿ ಮಾರೋ ಸೇಬಿನ ಥರಾನೇ ಐತಲ್ರೀ' ಎಂಬ ಉದ್ಗಾರ. 'ಮನೆ ಮುಂದೆ ನಾಲ್ಕೈದ್ ಗಿಡ ಹಾಕಿದರೆ ಸಾಕು, ಸೇಬಿಗೆ ನೂರಾರು ರುಪಾಯಿ ಕೊಟ್ಟು ತರೋದು ತಪ್ಪುತ್ತೆ' ಎಂದು ಕೆಲವರು ಮಾತಾಡಿಕೊಂಡರೆ ಇನ್ನು ಕೆಲವರು ಎಕರೆಗಟ್ಟಲೆ ಹಾಕಿ ಲಾಭ ಪಡೆಯುವ ಮೂಡಿನಲ್ಲಿ ಪರ್ಮಾರ್ ಹಾಗೂ ಮೂರ್ತಿಯವವರಿಗೆ ಶೆಡ್ ಮಾಡಬೇಕೇ, ನೀರು ಹೆಚ್ಚು ಕೇಳುತ್ತದೆಯೇ, ಎಕರೆಗೆ ಎಷ್ಟು ಗಿಡ ಹಾಕಬೇಕು ಮುಂತಾದ ತರಹೇವಾರಿ ಪ್ರಶ್ನೆ ಕೇಳಿದರು.
ಬಾಟುವಿನಲ್ಲಿ ರೈತರು ಹಲವು ವರ್ಷ ಪ್ರಯತ್ನಪಟ್ಟು ಸೇಬು ಕೃಷಿಯ ಮಾರ್ಗ ಕಂಡುಕೊಂಡಿದ್ದಾರೆ. ಯಾವಾಗ ನೆಡಬೇಕು, ಎಷ್ಟು ಅಂತರ, ನೀರು- ಗೊಬ್ಬರದ ಪ್ರಮಾಣ, ಕೀಟ- ರೋಗ, ಎಲೆ ತೆಗೆಯುವ ಕಾಲ ಮುಂತಾದ ಸಂಗತಿಗಳನ್ನು ಸ್ವಾನುಭವದಿಂದ ತಿಳಿದು ರೂಢಿಸಿಕೊಂಡಿದ್ದಾರೆ. ನಾವೂ ಹಾಗೇ ಮಾಡಬೇಕು. ಅಲ್ಲದೆ, ಆಸಕ್ತ ಸೇಬು ಕೃಷಿಕರು ಸಂಘಟನೆ ರಚಿಸಿಕೊಂಡರೆ ಸೂಕ್ತ ಮಾರ್ಗದರ್ಶನ ಮಾಡಲು, ಸಸಿ ವಿತರಿಸಲು ಅನುಕೂಲ. ಅಲ್ಲದೆ, ಕೆಲವರಾದರೂ ಇಂಡೋನೇಷ್ಯಾದ ಬಾಟು ದ್ವೀಪಕ್ಕೆ ಹೋಗಿ ಅಧ್ಯಯನ ಮಾಡಿ ಬಂದರೆ ಒಳ್ಳೆಯದು ಎನ್ನುತ್ತಾರೆ ಪರ್ಮಾರ್.
ಕೆಲವೇ ಜನರಿಗೆ ತಿಳಿದಿರುವ ವಿಷಯ ಮತ್ತೊಂದಿದೆ, ಏನೆಂದರೆ ಮುಕ್ಕಾಲು ಶತಮಾನದ ಹಿಂದೆ ಬೆಂಗಳೂರಿನ ಸುತ್ತಮುತ್ತ ಸಾವಿರಾರು ಎಕರೆಯಲ್ಲಿ ಸೇಬು ಬೆಳೆಯಲಾಗುತ್ತಿತ್ತು. 'ಬೆಂಗಳೂರು ಆ್ಯಪಲ್' ಬಹಳ ಜನಪ್ರಿಯವಾಗಿತ್ತು. ಆದರೆ, ನಂತರ ಕಾಶ್ಮೀರ ಹಾಗೂ ಹಿಮಾಚಲದಿಂದ ಉತ್ತಮ ಗುಣಮಟ್ಟದ ಸೇಬು ಬರಲಾರಂಭಿಸಿ ಇಲ್ಲಿ ಬೆಳೆಯುವವರು ಕಡಿಮೆಯಾದರು. ಕೆಲವರ್ಷಗಳಲ್ಲಿ ಸಂಪೂರ್ಣ ನಿಂತೇ ಹೋಯಿತು. ಇದು ಕರ್ನಾಟಕದ ವಾತಾವರಣದಲ್ಲಿ ಸೇಬು ಬೆಳೆಯಬಹುದೆಂಬುದಕ್ಕೆ ಮತ್ತೊಂದು ಪುರಾವೆ. ಮನೆಮಟ್ಟಿಗೆ ನಾಲ್ಕೈದು ಸಸಿಗಳನ್ನು ಬೆಳೆದುಕೊಳ್ಳಬಹುದು ಆದರೆ, ವಾಣಿಜ್ಯವಾಗಿ ಸಾಧ್ಯವಿಲ್ಲ ಎಂದು ತೋಟಗಾರಿಕೆ ಇಲಾಖೆಯವರ ಅಭಿಪ್ರಾಯ. ಸೇಬುವನ್ನು ವಾಣಿಜ್ಯ ದೃಷ್ಟಿಯಿಂದ ಬೆಳೆಯಲು ಇನ್ನಷ್ಟು ಪ್ರಯೋಗ, ಸಂಶೋಧನೆಗಳ ಅಗತ್ಯ ಖಂಡಿತಾ ಇದೆ. ಎಕರೆಗಟ್ಟಲೆ ಹಾಕುವ ಅತ್ಯುತ್ಸಾಹಕ್ಕೆ ಹೋಗದೆ ಸದ್ಯದ ಮಟ್ಟಿಗೆ ಮನೆ ಹಿತ್ತಿಲಲ್ಲೋ ಹೊಲದಲ್ಲೋ ನಾಲ್ಕೈದು ಗಿಡ ಹಾಕಲಡ್ಡಿಯಿಲ್ಲ. ಗಂಗಾಧರಮೂರ್ತಿಯವರ ಸಂಪರ್ಕ: 9343563409.
-ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com