ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನ ನವೀಕರಿಸಬಹುದಾದ ಶಕ್ತಿ ಹಾಗೂ ಸುಸ್ಥಿರ ತಂತ್ರಜ್ಞಾನಗಳ ಕೇಂದ್ರ (ಎನ್‌ಐಇ- ಕ್ರೆಸ್ಟ್) ಪರಿಸರಸ್ನೇಹಿ ಸಂಸ್ಥೆ. ಇದು ಸದ್ದಿಲ್ಲದೆ ಒಂದಿಷ್ಟು ಸಂಶೋಧನೆಗಳನ್ನು ನಡೆಸಿದೆ.
ಜೈವಿಕ ಇಂಧನ ತಂತ್ರಜ್ಞಾನ
ಹೊಂಗೆ ಬೀಜದಿಂದ ಡೀಸೆಲ್ ತಯಾರಿಸುತ್ತಿದೆ. ಬೀಜವನ್ನು ಎಣ್ಣೆ ಮಾಡಿದ ನಂತರ, ಹಿಂಡಿಯನ್ನು ಗೊಬ್ಬರವಾಗಿ ಬಳಸಲಾಗುತ್ತಿದೆ. ಈ ಯೋಜನೆಗೆ ಕರ್ನಾಟಕ ಜೈವಿಕ ಇಂಧನ ಇಲಾಖೆಯು 3 ವರ್ಷದ ಅವಧಿಗೆ ಸಹಾಯಧನ ನೀಡಿದೆ. ನಿತ್ಯ 40 ಲೀಟರ್ ಡೀಸೆಲ್ ತಯಾರಿಸಲಾಗುತ್ತಿದೆ. ಎನ್‌ಐಇ ಕಾಲೇಜು, ಮೈಸೂರು ಮಹಾನಗರಪಾಲಿಕೆ ಹಾಗೂ ಖಾಸಗಿ ವಾಹನಗಳಿಗೆ ಡೀಸೆಲ್ ಪೂರೈಸಲಾಗುತ್ತಿದೆ. 'ಹೊಂಗೆ ಬೆಳೆದಿರುವ ರೈತರು ನಮಗೆ ಬೀಜ ಪೂರೈಸಿದರೆ ಪ್ರತಿ ಕೆಜಿಗೆ ರು. 15ರಂತೆ ಖರೀದಿಸುತ್ತೇವೆ' ಎನ್ನುತ್ತಾರೆ ಎನ್‌ಐಇ- ಕ್ರೆಸ್ಟ್ ನಿರ್ದೇಶಕ ಪ್ರೊ. ಎಸ್. ಶ್ಯಾಮಸುಂದರ್.
ಜೈವಿಕ ಅನಿಲ
ಅಡುಗೆಮನೆ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸಲಾಗುತ್ತಿದೆ. ಅಡುಗೆಮನೆಯಲ್ಲಿ ಉತ್ಪಾದನೆಯಾಗುವ ಎಲ್ಲ ರೀತಿಯ ತ್ಯಾಜ್ಯ ಹಾಕುವುದರಿಂದ ಸುಮಾರು ಒಂದೂವರೆಯಿಂದ ಎರಡು ತಾಸಿಗೆ ಬೇಕಾಗುವಷ್ಟು ಅನಿಲ ಉತ್ಪಾದನೆಯಾಗುತ್ತದೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ (ಎಟಿಐ), ಗುಲ್ಬರ್ಗದ ಪೊಲೀಸ್ ತರಬೇತಿ ಶಾಲೆ (ಪಿಟಿಸಿ), ಬಿಜಾಪುರದ ಮಹಿಳಾ ವಿವಿ, ಎನ್‌ಐಇ ಕಾಲೇಜಿನ ಕ್ಯಾಂಟೀನ್, ಚಾಮುಂಡಿ ಬೆಟ್ಟದ ದಾಸೋಹ ಭವನ, ನಂಜನಗೂಡು ದೇವಸ್ಥಾನದಲ್ಲಿ ಜೈವಿಕ ಅನಿಲ ಘಟಕ ಸ್ಥಾಪಿಸಲಾಗಿದೆ.
ಇಂಧನ ದಕ್ಷತೆ ಒಲೆ
ಎನ್‌ಐಇ- ಕ್ರೆಸ್ಟ್ ಇಂಧನ ದಕ್ಷತೆ ಒಲೆ ತಯಾರಿಸುತ್ತಿದೆ. ಜೈವಿಕ ಇಂಧನ ಬಳಸುವುದರಿಂದ ಸೌದೆಯ ಬಳಕೆ ಕಡಿಮೆಯಾಗುತ್ತದೆ. ಅಲ್ಲದೆ, ಇವು ಹೊಗೆರಹಿತ. ಸಾವಿರಾರು ಮಂದಿ ಇಂಧನ ದಕ್ಷತೆ ಒಲೆ ಪಡೆದಿದ್ದಾರೆ. ಅಲ್ಲದೆ, ಇಂಥ ಒಲೆ ತಯಾರಿಕೆ ಬಗ್ಗೆ ತರಬೇತಿ ನೀಡಲಾಗಿದೆ.
ಮಳೆ ನೀರು ಕೊಯ್ಲು
ಸಂಸ್ಥೆಯು ಮಳೆ ನೀರು ಸಂಗ್ರಹಕ್ಕೂ ಒತ್ತು ನೀಡುತ್ತಿದೆ. ಮೈಸೂರು ಅರಮನೆಯಲ್ಲಿ 1 ಕೋಟಿ ಲೀಟರ್ ಮಳೆ ನೀರು ಸಂಗ್ರಹಿಸಲಾಗುತ್ತಿದೆ. ಇದಲ್ಲದೆ, ಮೈಸೂರಿನ ಎಟಿಐ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, (ಆಯಿಷ್) ಕರ್ನಾಟಕ ರೇಷ್ಮೆ ನೇಯ್ಗೆ ಕಾರ್ಖಾನೆ (ಕೆಎಸ್‌ಐಸಿ) ಮೊದಲಾದ ಕಡೆಯೂ ಮಳೆ ನೀರು ಕೊಯ್ಲು ಮಾಡಲಾಗುತ್ತಿದೆ.
ಸೋಲಾರ್
ಬಂಡೀಪುರದಲ್ಲಿ ಅರಣ್ಯಕ ಎಂಬ ಬೇಟೆ ವಿರೋಧಿ ಘಟಕದ ಕಟ್ಟಡ ನಿರ್ಮಿಸಲಾಗಿದೆ. ವಿದ್ಯುತ್ ಕೊರತೆ ಇರುವ ಪ್ರದೇಶಗಳಿಗೆ ಈ ಸ್ಥಾವರ ಅಳವಡಿಸಬಹುದು. ಸೌರಶಕ್ತಿ ಹೊರತುಪಡಿಸಿ ಇತರೆ ಇಂಧನದ ಅವಶ್ಯಕತೆ ಇಲ್ಲ. ಒಮ್ಮೆ ಹಣ ತೊಡಗಿಸಿದರೆ ಸಾಕು. ಪರಿಸರ ಮಾಲಿನ್ಯವಾಗುವುದಿಲ್ಲ. ಗುಡುಗು, ಮಿಂಚು ಬಂದಾಗ ಮತ್ತು ಶಾರ್ಟ್ ಸರ್ಕ್ಯೂಟ್‌ನಿಂದಾಗುವ ತೊಂದರೆ ಎದುರಿಸುವ ಶಕ್ತಿ ಹೊಂದಿದೆ. ಈ ಸ್ಥಾವರವನ್ನು ಬೆಳಕು, ಯಂತ್ರಗಳ ಚಾಲನೆ, ನೀರೆತ್ತಲು ಬಳಸಬಹುದು. ಚಿಕ್ಕ ಸೌರ ವಿದ್ಯುತ್ ಸಾಧನವು ಸುಮಾರು 20 ವ್ಯಾಟ್, ದಿನಕ್ಕೆ ಉತ್ಪಾದಿಸುವುದರಿಂದ ಚಿಕ್ಕ ಕುಟುಂಬಕ್ಕೆ ಸಾಕಾಗುತ್ತದೆ. ಸೌರಶಕ್ತಿ ಕುಕ್ಕರ್ ಬಳಸಿ 4-5 ಜನರಿಗೆ ರುಚಿಕರ ಆಹಾರ ತಯಾರಿಸಬಹುದು. ಹೊಗೆ, ಮಸಿ, ಶಬ್ದಗಳಿರುವುದಿಲ್ಲ. ಆಹಾರ ತಳ ಹಿಡಿಯುವುದಿಲ್ಲ. ಸೌರಶಕ್ತಿ ಡ್ರೈಯರ್‌ನಿಂದ ಸೌರ ಸಂಗ್ರಹಕದಿಂದ ಲಭ್ಯವಾಗುವ ಬಿಸಿ ಗಾಳಿಯಿಂದ ಹಣ್ಣು ಮತ್ತು ತರಕಾರಿಗಳು, ಸಾಂಬಾರ ಪದಾರ್ಥಗಳು ಹಾಗೂ ಇತರೆ ಆಹಾರ ಸಂಸ್ಕರಣೆಯ ಉತ್ಪನ್ನ ಒಣಗಿಸಬಹುದು. ಸೌರಶಕ್ತಿ ಡ್ರೈಯರ್‌ನಲ್ಲಿ ಒಣಗಿಸಿದ ಪದಾರ್ಥಗಳು ಸ್ವಚ್ಛ ಆರೋಗ್ಯ ಹಾಗೂ ರುಚಿಕರ. ಅಲ್ಲದೆ ತೆಂಗು, ಅಡಕೆ, ಏಲಕ್ಕಿ, ಮೀನು, ಹಣ್ಣು, ತರಕಾರಿ, ಔಷಧಿ ಮೂಲಿಕೆಗಳನ್ನು ಹದವಾಗಿ ಸಂಸ್ಕರಿಸಬಹುದು. ಈ ಡ್ರೈಯರ್‌ಗಳನ್ನು ಅವಶ್ಯವಾದ ಗಾತ್ರಕ್ಕೆ ಕಟ್ಟಬಹುದು. ಈ ಡ್ರೈಯರ್ ದಕ್ಷತೆ ಶೇ.30- 40 ರಷ್ಟಿರುತ್ತದೆ.
ಸಸ್ಯಜನ್ಯ ಅನಿಲೀಕರಣ ಶಕ್ತಿ ಸ್ಥಾವರ
ಉರುವಲಿನ ಭಾಗಿಕ ದಹನದಿಂದಾಗಿ ಉತ್ಪತ್ತಿಯಾದ ಜೈವಿಕ ಉಷ್ಣತೆಯನ್ನು ವಾತಾವರಣದ ಮಟ್ಟಕ್ಕೆ ತಂಪುಕಾರಿ (ಕೂಲರ್) ಘಟಕದಲ್ಲಿ ಇಳಿಸಿ ಶೋಧಕದಲ್ಲಿ (ಫಿಲ್ಟರ್)ನಲ್ಲಿ ಶುದ್ಧ ಮಾಡಿ ಜನರೇಟರ್‌ಗೆ ಅಥವಾ ಅನಿಲ ಒಲೆಗೆ ಪೂರೈಸಲಾಗುತ್ತದೆ. 100- 200 ಕಿ.ವ್ಯಾಟ್ ಸಾಮರ್ಥ್ಯದ ಸ್ಥಾವರ ಸ್ಥಾಪಿಸಿಕೊಳ್ಳಬಹುದು. ಪ್ರತಿ ಕಿ. ವ್ಯಾಟ್ ವಿದ್ಯುತ್ ಉತ್ಪಾದಿಸಲು ಗಂಟೆಗೆ ಒಂದು ಕೆಜಿ ಉರುವಲು ಬಳಕೆಯಾಗುತ್ತದೆ.
ಪರಿಸರ ಸ್ನೇಹಿ ಶೌಚಾಲಯ
ಮಲ, ಮೂತ್ರ ಬೇರ್ಪಡಿಸಿ, ಮಲವನ್ನು ಗೊಬ್ಬರವಾಗಿಸುವುದು ಹಾಗೂ ಮೂತ್ರವನ್ನು ನೀರಿನೊಂದಿಗೆ ಬೆರೆಸಿ ವ್ಯವಸಾಯದಲ್ಲಿ ಬಳಸುವ ಉದ್ದೇಶ ಈ ಶೌಚಾಲಯದ್ದು. ಇದರಿಂದಾಗಿ ಕಡಿಮೆ ನೀರಿನ ಬಳಕೆಯ ಜತೆ ಉತ್ತಮ ನೈಸರ್ಗಿಕ ಗೊಬ್ಬರ ಲಭ್ಯ.
ಸಂಪರ್ಕ- ಪ್ರೊ. ಎಸ್. ಶ್ಯಾಮಸುಂದರ್, ನಿರ್ದೇಶಕರು, ಎನ್‌ಐಇ- ಕ್ರೆಸ್ಟ್, ದೂ. 0821- 4004914, ಇ- ಮೇಲ್- niecrest@gmail.com, ವೆಬ್‌ಸೈಟ್- www.niecrest.
-ಅಂಶಿ ಪ್ರಸನ್ನಕುಮಾರ್