'ಮಗನ್ನ ಹೈನುಗಾರಿಕೆಯಿಂದ್ಲೇ ಎಂಜಿನಿಯರಿಂಗ್ ಓದ್ಸಿದ್ವಿ. ಈಗ ಅವ್ನು ನೌಕರಿ ಮಾಡ್ತಾ ಇದಾನ್ರಿ. ಕೈತುಂಬಾ ಪಗಾರ್ ಬರುತೈತ್ರಿ' ಎನ್ನಲು ಧಾರವಾಡ ಎರಿಕೊಪ್ಪದ ಗಂಗವ್ವ ಅವರಿಗೆ ಅಭಿಮಾನ. ಹಟ್ಟಿ ತುಂಬಾ ಆಕಳು, ಎಮ್ಮೆಗಳಿದ್ದ ದಿವಸಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ನಿರ್ವಹಣೆಯ ಅನುಕೂಲಕ್ಕಾಗಿ ಈಗ ಎರಡೆರಡು ಎಮ್ಮೆ, ಆಕಳುಗಳಿವೆ. ಗಂಗವ್ವರ ಪತಿ ಶ್ರೀಕಾಂತ. ಇವರಿಗೆ ಇಪ್ಪತ್ತೈದು ವರುಷದಿಂದ ಎರಿಕೊಪ್ಪದಿಂದ ಹತ್ತು ಕಿಲೋಮೀಟರ್ ದೂರದ ಹುಬ್ಬಳ್ಳಿಗೆ ನಿತ್ಯ ಹಾಲು ಸರಬರಾಜು ಮಾಡುವ ಕಾಯಕ.
ಎರಿಕೊಪ್ಪ ಸುತ್ತಲಿನ ಸುಮಾರು ಇಪ್ಪತ್ತರಿಂದ ಮೂವತ್ತು ಮನೆಗಳಿಂದ ಹಾಲು ಖರೀದಿ. ಬೆಳಗ್ಗೆ ಆರು ಗಂಟೆಗೆ ಹೊರಟರೆ ಎಲ್ಲಾ ಕೆಲಸ ಮುಗಿಸಿ ಹನ್ನೆರಡು ಗಂಟೆ ಹೊತ್ತಿಗೆ ಮರಳುತ್ತಾರೆ. ಸೈಕಲಿನಲ್ಲಿ ಐದಾರು ಕ್ಯಾನ್ ಪೇರಿಸಿ ಹೊರಡುವ ಶ್ರೀಕಾಂತರು ತರುವ ಹಾಲನ್ನು ಕಾಯುವ ನಲವತ್ತು ಕುಟುಂಬಗಳಿವೆ. ಇವರೆಲ್ಲಾ ಬೇರೆ ಬೇರೆ ಕಚೇರಿಗಳಲ್ಲಿ ಉದ್ಯೋಗಿಗಳು.
ಒಂದು ಲೀಟರಿಗೆ ಇಪ್ಪತ್ತೈದು ರುಪಾಯಿಯಂತೆ ಹಾಲು ಖರೀದಿ. ಮೂವತ್ತು ರೂಪಾಯಿಗೆ ಮಾರಾಟ. ಆಕಳಿನದೇ ಬೇಕೆಂದು ಬೇಡಿಕೆ ಮುಂದಿಡುವ ಗ್ರಾಹಕರಿದ್ದಾರೆ. ಆಕಳಿನ ಹಾಲಿಗೆ ಐದು ರೂಪಾಯಿ ಅಧಿಕ. ಮನೆಯಲ್ಲೇ ಸಿದ್ಧಪಡಿಸಿದ ಬೆಣ್ಣೆಗೂ ಕಾಯಂ ಗಿರಾಕಿಗಳು. ತಿಂಗಳಿಗೆ ಸುಮಾರು ಹತ್ತು ಕಿಲೋ ಬೆಣ್ಣೆ ಮಾರಾಟ. ಕಿಲೋಗೆ ಮುನ್ನೂರು ರೂಪಾಯಿ ದರ.
'ಹುಬ್ಬಳ್ಳಿಯಲ್ಲಿ ಕೆಎಂಎಫ್ ಡೈರಿ ಘಟಕ ಆರಂಭವಾಗಿದೆ. ಹಾಗಾಗಿ ಸ್ವಲ್ಪಮಟ್ಟಿಗೆ ವ್ಯಾಪಾರ ಕಡಿಮೆ. ಆದರೂ ನಾನು ತರುವ ಹಾಲನ್ನೇ ಇಚ್ಛೆಪಡುವ, ಅದಕ್ಕಾಗಿ ಕಾಯುವ ಗ್ರಾಹಕರಿದ್ದಾರೆ. ಅವರಿಗೆ ತೊಂದರೆಯಾಗಬಾರದು' ಎನ್ನುವ ಪ್ರಾಮಾಣಿಕ ಕಾಳಜಿ ಶ್ರೀಕಾಂತರದು.
ಪತಿ ಹಾಲು ವ್ಯಾಪಾರ ಮಾಡಿದರೆ, ಕಾಕಡ ಕೃಷಿಯು ಗಂಗವ್ವರ ಸುಪರ್ದಿ. ಮನೆಮುಂದೆ ಇಪ್ಪತ್ತು ಗುಂಟೆ ಜಾಗದಲ್ಲಿ ಐವತ್ತು ಕಾಕಡ ಗಿಡಗಳಿವೆ. ಎಲ್ಲವೂ ಎರಡು ವರುಷದ ಗಿಡಗಳು. ಡಿಸೆಂಬರಿಂದ ಮೇ ತನಕ ದಿನಕ್ಕೆ 50- 60 ಮಾರು ಹೂವು ಮಾರಾಟ. ಸೀಸನ್ನಿನಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ದಿನಚರಿ ಆರಂಭವಾದರೆ ರಾತ್ರಿ ಹನ್ನೆರಡಾದರೂ ಹೂವಿನ ಕೆಲಸ ಮುಗಿಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮನೆಮಂದಿಯಲ್ಲದೆ ನೆರೆಕರೆಯ ಸಹಾಯಕರನ್ನು ಅವಲಂಬಿಸುತ್ತಾರೆ.
'ಕಡಿಮೆ ಎಂದ್ರೂ ಕಾಕಡ ಹೂವಿಂದ ದಿವ್ಸಕ್ಕೆ ಐನೂರು ರೂಪಾಯಿ ಬರುತ್ರಿ. ಜಾಸ್ತಿ ಅಂದ್ರ ದಿನಕ್ಕ ಒಂದು ಸಾವಿರವರ್ಗೂ ರೊಕ್ಕ ಬಂದೈತ್ರಿ' ಎನ್ನುತ್ತಾರೆ ಗಂಗವ್ವ. ಗಿಡದಿಂದ ಆಯ್ದ ಮೊಗ್ಗನ್ನು ಕಟ್ಟಿ ಮಾಲೆ ಮಾಡುವುದು ತ್ರಾಸದ ಕೆಲಸ. ಜೂನ್ನಿಂದ ಸೆಪ್ಟೆಂಬರ್ ತನಕ ಹೂವು ಕಡಿಮೆ.
ಗಿಡ ನೆಟ್ಟು ಆರು ತಿಂಗಳಲ್ಲಿ ಹೂ ಬಿಡಲು ಆರಂಭ. ಹಟ್ಟಿಗೊಬ್ಬರ ಉಣಿಕೆ. ಕೊಳವೆ ಬಾವಿಯ ನೀರಿನಿಂದ ನೀರಾವರಿ. ಗಿಡಗಳಿಗೆ ದಾಳಿಯಿಡುವ ಕೀಟಗಳ ನಿಯಂತ್ರಣಕ್ಕೆ ವಾರಕ್ಕೆ ಎರಡು ಬಾರಿ ರಾಸಾಯನಿಕ ಸಿಂಪಡಣೆ. ಈ ಭಾಗದಲ್ಲಿ ರಾಸಾಯನಿಕ ಬಳಕೆ ಹೆಚ್ಚು. ಸಾವಯವ ಗೊತ್ತಿಲ್ಲ. ರಾಸಾಯನಿಕದ ಬದಲಿಗೆ ವಿಷರಹಿತ ಸಿಂಪಡಣೆ ಪರಿಚಯಿಸಬೇಕಾಗಿದೆ ಎನ್ನುತ್ತಾರೆ, ಜತೆಗಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎಸ್. ಸೀತಾರಾಮ ಶೆಟ್ಟಿ. ಮಲ್ಲಿಗೆ ಕೃಷಿಯ ನಿರ್ವಹಣೆಗಾಗಿ ಯೋಜನೆಯ ವತಿಯಿಂದ ನೀಡಿದ ಸಾಲ ಗಂಗವ್ವರಿಗೆ ನೆರವಾಗಿದೆ.
ಈ ಭಾಗದಲ್ಲಿ ಕಾಕಡ ಹೂವಿನ ಕೃಷಿ ಅಂದರೆ ಅಸಡ್ಡೆ. ಶ್ರಮವಹಿಸಿ ದುಡಿದರೆ ರೊಕ್ಕ ಬರುತ್ತೆ ಎನ್ನುವ ಅನುಭವ ಇವರದು. ಶ್ರೀಕಾಂತರು ಹಾಲಿನೊಂದಿಗೆ ಗಂಗವ್ವ ಮಾಲೆ ಕಟ್ಟಿ ನೀಡಿದ ಮಲ್ಲಿಗೆಯ ಮಾಲೆಯನ್ನೂ ಒಯ್ಯುತ್ತಾರೆ. ಇದಕ್ಕೂ ನಿಶ್ಚಿತ ಗಿರಾಕಿಗಳಿದ್ದಾರೆ. ಮಾರುಕಟ್ಟೆಯಲ್ಲಿ ಹಾಲಿಗೆ ಮತ್ತು ಮಲ್ಲಿಗೆಗೆ ಎಷ್ಟೇ ದರದ ಏರಿಳಿತವಿದ್ದರೂ ಶ್ರೀಕಾಂತರ ಹಾಲು ಮತ್ತು ಮಲ್ಲಿಗೆಗೆ ವರುಷಪೂರ್ತಿ ಒಂದೇ ದರ. ಒಂದೇ ಗುಣಮಟ್ಟ. ಇದು ಅವರ ಶಿಸ್ತಿನ ಜೀವನ ಶೈಲಿ.
ಶ್ರೀಕಾಂತರು ಕಸಿ ಪ್ರವೀಣ. ಮಾವು ಕಸಿ ಗಿಡಗಳನ್ನು ತಯಾರಿಸುತ್ತಾರೆ. ಚಿಕ್ಕ ನರ್ಸರಿ ಹೊಂದಿದ್ದಾರೆ. 2- 3 ವರುಷಗಳಿಂದ ಕಸಿ ಗಿಡಗಳಿಗೆ ಜನರು ಒಲವು ಹೆಚ್ಚಾಗುತ್ತಿದೆ. ಗಿಡಗಳನ್ನು ಹುಡುಕಿ ಬರುವವರು ಇದ್ದಾರೆ. ಇವರಿಗೆ ಹತ್ತೆಕ್ರೆ ಗದ್ದೆಯಿದೆ. ಮಲ್ಲಿಗೆಯ ಆಸಕ್ತಿ ಶುರುವಾದ ಬಳಿಕ ಬತ್ತದ ಕೃಷಿ ಹಿಂದೆ ಬಿದ್ದಿದೆ.
ಎರಿಕೊಪ್ಪದಲ್ಲಿ ಕೃಷಿಯಲ್ಲಿದ್ದುಕೊಂಡು, ಸಂಪಾದನೆಯಲ್ಲಿ ನಗರದಲ್ಲಿ ದುಡಿಯುವವರಿಗೆ ಸಮದಂಡಿಯಾಗಿರುವ ಗಂಗವ್ವ ಶ್ರೀಕಾಂತ ದಂಪತಿಗಳ ಕೃಷಿ ಬದುಕಿನಲ್ಲಿ ಸ್ವಾವಲಂಬಿ ಪಾಠವಿದೆ. ನೆಮ್ಮದಿಯ ಸೆಳೆಯಿದೆ.
-ನಾ. ಕಾರಂತ ಪೆರಾಜೆ