ಭೂಮಿಯ ಮೇಲೆ ಸುಪ್ತ ನಿದ್ರೆಯಲ್ಲಿರುವ ಸಾವಿರಾರು ಜಾತಿಯ ಗಿಡ, ಬಳ್ಳಿಗಳ, ಬೀಜಗಳು ಮುಂಗಾರು ಮಳೆಗೆ ಮೊಳೆತು, ಭೂಮಿಗೆ ಹಸಿರು ಹೊದಿಕೆ ಹೊದಿಸುತ್ತವೆ. ಮುಂಗಾರಿನ ಮಳೆ, ಮಾಗಿ ಚಳಿ, ಬಿರು ಬಿಸಿಲಿನ ಬೇಸಿಗೆಯ ಋತುಮಾನಗಳಲ್ಲಿ ಹೂವು, ಹಣ್ಣು ಬಿಟ್ಟು, ಜೀವ ತುಂಬಿದ ಬೀಜಗಳನ್ನು, ಭೂಮಿಗೆ ಉದುರಿಸುತ್ತವೆ. ಇಂಥ ಸಸ್ಯಕೋಟಿಯಲ್ಲಿ ಮೂಗುತಿ ಬೊಟ್ಟಿನ ಗಿಡ ವಿಶಿಷ್ಟವಾದದ್ದು. ಹತ್ತಾರು ಗಿಡಗಳ ಜೊತೆ ಬೆಳೆದರೂ ಅಬ್ಬರ ಮಾಡದೆ ಮೌನವಾಗಿದ್ದು, ಮಾಗಿ ಚಳಿಯ ನವೆಂಬರ್ ಡಿಸೆಂಬರ್, ಜನವರಿಯಲ್ಲಿ ಹಳದಿ ಬಣ್ಣದ ಬಿಡಿ ಬಿಡಿ ಹೂವು ಬಿಡುತ್ತದೆ. ಗ್ರಾಮೀಣರು ಈ ಹೂವಿನ ಅಂದ ನೋಡಿ, ಮೂಗುತಿ ಬೊಟ್ಟಿನ ಗಿಡ ಎಂಬ ಹೆಸರಿಟ್ಟಿದ್ದಾರೆ.
ನೂರಾರು ಹೆಸರು
ಗಿಡ ಮರ ಬಳ್ಳಿಗಳ ಲ್ಯಾಟಿನ್ ಭಾಷೆಯ ಸಸ್ಯಶಾಸ್ತ್ರೀಯ ವೈಜ್ಞಾನಿಕ ಹೆಸರುಗಳಂತೆ, ಕನ್ನಡದಲ್ಲಿ ಲ್ಯಾಟಿನ್ ಭಾಷೆಯಷ್ಟೇ ಗಟ್ಟಿಯಾದ ಹೆಸರುಗಳು ಗಿಡ- ಮರ ಬಳ್ಳಿಗಳಿವೆ. ಕಾಟಿ ಕೊಂಬಿನ ಗಿಡ, ಹುಲಿ ಉಗುರು, ಇಲಿ ಕಿವಿ ಗಿಡ, ಆಡುಮುಟ್ಟದ ಬಳ್ಳಿ, ಭೀಮನಕಡ್ಡಿ, ಹನುಮನ ಹಸ್ತ, ರಾತ್ರಿ ರಾಣಿ, ಎಡಮುರಿ ಹೀಗೆ ನೂರಾರು ಹೆಸರುಗಳು. ಈ ಹೆಸರುಗಳು ಸಸ್ಯ ಕೋಟಿಯ, ಪ್ರಾಣಿ ಕೋಟಿಯ, ಜಟಿಲ ಹೆಣಿಗೆಯ ಜೈವಿಕ ಸಾಂಗತ್ಯದ ರೂಪಕಗಳು.
ಕನ್ನಡದಲ್ಲಿ ಮೂಗುತಿ ಸೊಪ್ಪು, ಮೂಗು ಬೊಟ್ಟಿನ ಗಿಡ, ತಮಿಳಿನಲ್ಲಿ ಮೂಕುತ್ತಿ ಪೊಂಡು, ತೆಲುಗಿನಲ್ಲಿ ಅಡವಿ ಪೊಂಡು, ಹೆಸರುಗಳಾದರೆ, ವೈಜ್ಞಾನಿಕ ಸಸ್ಯ ಶಾಸ್ತ್ರಿಯ ಹೆಸರು ವಿಕೊಆ- ಇಂಡಿಕ ಅಥವಾ ವಿಕೊಆ ಅರಿಕುಲಾಟ, ವಿಕೊಆ- ಎಂಬುದು ಇಟಾಲಿಯನ್ ವಿಜ್ಞಾನಿಯ ಹೆಸರು. ಭಾರತ ಮೂಲದ ಗಿಡವಾದ್ದರಿಂದ ಇಂಡಿಕ ಎಂಬ ಹೆಸರು. ಗಿಡದ ಎಲೆಗಳ ಬುಡಗಳು ಮಡಿಕೆಗಳಂತೆ ಮಡಿಚಿಕೊಂಡು ಕಿವಿಗಳನ್ನು ಹೋಲುವುದರಿಂದ ಲ್ಯಾಟಿನ್ ಭಾಷೆಯ ಅರಿಕುಲಾಟ ಎಂಬ ಹೆಸರು ಬಂದಿದೆ.
ಭೂಮಿಗೆ ಮೂಗುತಿ!
ವಿರಳವಾದ ಕವಲು ಕೊಂಬೆಗಳಿಂದ ಕೂಡಿದ್ದು, ಸುಮಾರು ಒಂದುವರೆ ಅಡಿ ಎತ್ತರ ಬೆಳೆಯುತ್ತದೆ. ಎಲೆಗಳ ತುದಿ ಬಾಣದಂತೆ ಮೊನಚಾಗಿದ್ದು, ಹೃದಯಾಕಾರದಲ್ಲಿರುತ್ತವೆ. ಚದುರಿದಂತೆ ಇರುವ ಎಲೆಗಳು ಕಾಂಡಕ್ಕೆ ಪರ್ಯಾಯವಾಗಿ ಜೋಡಣೆಯಾಗಿದ್ದು, ವಿರಳವಾಗಿರುತ್ತವೆ. ಕಾಂಡಗಳ ಬಣ್ಣ ಹಸಿರು ಮಿಶ್ರಿತ ಕೆಂಪಾಗಿದ್ದು, ಬಳುಕುತ್ತಿರುತ್ತವೆ. ಹೂವುಗಳು ಹಳದಿ ಬಣ್ಣದಿಂದ ಕೂಡಿದ್ದು, ಬಿಡಿ ಬಿಡಿ ಆಗಿರುತ್ತವೆ.
ಉಪಯೋಗ
ಮೂಗುತಿ ಬೊಟ್ಟಿನ ಗಿಡದಲ್ಲಿ ಗರ್ಭ ನಿರೋಧಕ ಗುಣವಿದೆ. ಗಿಡದ ಬೇರನ್ನು ಅರೆದು ಚೇಳು ಕಡಿತದ ಭಾಗದ ಮೇಲೆ ಸವರಿದರೆ ನೋವು ನಿವಾರಣೆಯಾಗುತ್ತದೆ. ಹೂಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಗಂಟಲು ಬೇನೆಗಳ ಚಿಕಿತ್ಸೆಯಲ್ಲಿ ಜನಪದರು ಬಳಸುವ ಪದ್ಧತಿಯಿದೆ.
-ಚನ್ನರಾಜ್ ಎಲ್.ಸಿ.