ಕೃಷಿ-ಪರಿಸರ

ಹಸುಕಾಸು

ಕೆಲ ವರ್ಷಗಳ ಹಿಂದೆ ಸಂಬಂಧಿಕರಿಂದ ಆಕಳನ್ನು ಬಳುವಳಿ ಪಡೆದರು. ಈಗ ಇವರ ಮನೆಯಲ್ಲಿನ ಆಕಳುಗಳು ಒಂದೆರಡಲ್ಲ... 40ಕ್ಕೂ ಹೆಚ್ಚು!...

ಕೆಲ ವರ್ಷಗಳ ಹಿಂದೆ ಸಂಬಂಧಿಕರಿಂದ ಆಕಳನ್ನು ಬಳುವಳಿ ಪಡೆದರು. ಈಗ ಇವರ ಮನೆಯಲ್ಲಿನ ಆಕಳುಗಳು ಒಂದೆರಡಲ್ಲ... 40ಕ್ಕೂ ಹೆಚ್ಚು!
ಹೀಗೆ ಸದ್ದಿಲ್ಲದೆ ದೇಸೀಯ ಆಕಳುಗಳ ಸಂರಕ್ಷಣೆಯಲ್ಲಿ ನಿರತರಾಗಿದ್ದಾರೆ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಜಿ. ಸಿದ್ದಪ್ಪ. ಅಡಕೆ ಉದ್ದಿಮೆದಾರರಾಗಿರುವ ಇವರು ಮೂಲತಃ ಕೃಷಿ ಕುಟುಂಬದವರು. ಇವರ ಅಜ್ಜನ ಕಾಲದಿಂದಲೂ ಸುಮಾರು ವರ್ಷಗಳಿಂದಲೂ ಹೈನುಗಾರಿಕೆ ಪ್ರವೃತ್ತಿ ಈ ಕುಟುಂಬದ ಹಿರಿಯರು ಮಾಡುತ್ತಾ ಬಂದಿದ್ದಾರೆ. ಗೋವುಗಳನ್ನು ಸಾಕಿ ಸಲಹಿ ಆರ್ಥಿಕವಾಗಿ ಪ್ರಗತಿ ಹೊಂದಿದ್ದಾರೆ. ಇಂದು ಇವರ ಬಳಿ 30 ಆಕಳು, 10 ಕರುಗಳು ಜತೆಗೆ 3 ಎಮ್ಮೆಗಳು ಮತ್ತು 5 ಎಮ್ಮೆಮರಿಗಳು, 3 ಜೊತೆ ಎತ್ತುಗಳಿವೆ. ಇವರು ಎತ್ತುಗಳನ್ನು ಯಾರಿಂದಲೂ ಖರೀದಿಸದೆ ತಮ್ಮ ಆಕಳು ಹಾಕಿದ ಹೋರಿ ಕರುಗಳಿಂದಲೇ ಪೋಷಿಸಿ ಬೆಳೆಸಿದ್ದಾರೆ.
80 ಲೋಡ್ ಗೊಬ್ಬರ
10 ಎಕರೆ ಅಡಕೆ ತೋಟ, 10 ಎಕರೆ ಬೆದ್ದಲು ಭೂಮಿ ಇದೆ. ವಾರ್ಷಿಕವಾಗಿ ಶೇಖರಣೆಯಾಗುವ ಗೊಬ್ಬರ 80 ಲೋಡ್. ಇದನ್ನು ತಮ್ಮ ಅಡಕೆ ಮತ್ತು ಬೆದ್ದಲು ಭೂಮಿಗೆ ಪೂರೈಸುವುದರ ಮೂಲಕ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಹೊರಗಡೆ ಒಂದು ಲೋಡ್ ಗೊಬ್ಬರ ಖರೀದಿಸಿದರೆ ರು. 2000 ದಿಂದ ರು. 2500 ವರೆಗೆ ಕೊಡಬೇಕಾಗುತ್ತದೆ ಆದರೆ, ಇದಲ್ಲದರ ಗೋಜಿಗೆ ಹೋಗದೆ ತಾವು ಪೋಷಿಸುತ್ತಿರುವ ಆಕಳುಗಳಿಂದ ಗೊಬ್ಬರ ಸಂಗ್ರಹಿಸುತ್ತ ಇದರಲ್ಲೂ ಹಣ ಉಳಿಸುತ್ತಿದ್ದಾರೆ.
ಶುಚಿತ್ವಕ್ಕೆ ಆದ್ಯತೆ
ವಿಶಾಲವಾದ ಕೊಟ್ಟಿಗೆ ನಿರ್ಮಿಸಿ ಅದರ ಒಂದು ಭಾಗವನ್ನು ಆಕಳುಗಳಿಗೆ ಇನ್ನೊಂದು ಭಾಗವನ್ನು ಕರುಗಳಿಗೆ ಮೀಸಲಿಟ್ಟಿದ್ದಾರೆ. ಶುಚಿತ್ವಕ್ಕೆ ಆದ್ಯತೆ ನೀಡಿದ್ದಾರೆ. ಗಂಜಲ ಸಂಗ್ರಹಕ್ಕಾಗಿ ಕೊಟ್ಟಿಗೆ ಇಳಿಜಾರಿನ ಒಂದು ಮೂಲೆಯಲ್ಲಿ 5 ಅಡಿಯ ಗುಂಡಿ ನಿರ್ಮಿಸಿದ್ದಾರೆ. ಕೊಟ್ಟಿಗೆಯನ್ನು ನೀರಿನಿಂದ ತೊಳೆದು ಶುಚಿತ್ವ ಕಾಪಾಡುವುದು ನಿತ್ಯ ಹೊಣೆ. ಪ್ರತಿ ತಿಂಗಳಿಗೊಮ್ಮೆ ಪಶು ವೈದ್ಯಾಧಿಕಾರಿಗಳಿಂದ ಇವುಗಳ ಅರೋಗ್ಯದ ಬಗ್ಗೆ ವಿಚಾರಣೆ ನಡೆಸುತ್ತಾರೆ.
ಗೋವುಗಳ ವಿಶೇಷ
ಸಿದ್ದಪ್ಪನವವರ ಇನ್ನೊಂದು ವಿಶೇಷವೆಂದರೆ ಕರುಗಳಿಗೆ ಪ್ರತಿ ವಾರಕ್ಕೊಮ್ಮೆ ಬಾಳೆಹಣ್ಣು ಕೊಡುತ್ತಾರೆ. ಇವರನ್ನು ಕಂಡರೆ ಸಾಕು ಕರುಗಳು ಇವರನ್ನು ಹಿಂಬಾಲಿಸುತ್ತವೆ. ಇವರನ್ನು ಕಂಡರೆ ಗೋವುಗಳಿಗೆ ಎಲ್ಲಿಲ್ಲದ ಪ್ರೀತಿ. ಆಕಳು ಕೊಡುವ ಹಾಲನ್ನು ತಮ್ಮ ಕುಟುಂಬಕ್ಕೆ ಬಳಸಿಕೊಳ್ಳುತ್ತಾರೆ.
ಅವಿಭಕ್ತ ಕುಟುಂಬ
ಇವರದು ಅವಿಭಕ್ತ ಕುಟುಂಬ. 50 ಜನರು ಒಂದೇ ಸೂರಿನಡಿ ಜೀವನ ಸಾಗಿಸುತ್ತಿರುವುದು ಈ ಕುಟುಂಬದ ವಿಶೇಷ. ಇಂದಿಗೂ ಶಾಂತಿ ಸಹವಾಳ್ವೆ. ಅನೋನ್ಯತೆಯಿಂದ ಜೀವನ ಸಾಗಿಸುತ್ತಿರುವುದು ಗೋಮಾತೆಗಳ ಆಶೀರ್ವಾದದಿಂದ ಎಂಬುದು ಸಿದ್ದಪ್ಪ ಅವರ ನಂಬಿಕೆ.
ಸಂಬಂಧಿಕರಿಗೆ ಉಡುಗೊರೆ
ಸಂಬಂಧಿಕರಿಂದ ಬಳುವಳಿಯಾಗಿ ಪಡೆದು ಹೈನುಗಾರಿಕೆ ಆರಂಭಿಸಿದ ಇವರು ಸಹ ಹೆಚ್ಚುವರಿ ಗೋವುಗಳನ್ನು ತಮ್ಮ ರಕ್ತ ಸಂಬಂಧಿಕರಿಗೆ ಉಡುಗೊರೆಯಾಗಿ ಕೊಟ್ಟಿರುವುದು ಇನ್ನೊಂದು ವಿಶೇಷ. ಜತೆಗೆ ಹೆಚ್ಚುವರಿ ಹಸು ಮಾರಾಟ ಮಾಡುತ್ತಾರೆ. ಕೆಲವು ದಿನಗಳ ಹಿಂದೆ 20 ಆಕಳುಗಳನ್ನು ಒಂದು ಲಕ್ಷಕ್ಕೆ ಮಾರಿದ್ದಾರೆ. ಕೃಷಿ ಚಟುವಟಿಕೆಗೆ ಬೆನ್ನೆಲುಬಾದ ಹೋರಿ ಕರುಗಳನ್ನು ಸಾಕಣೆ ಮಾಡುತ್ತಾರೆ.
ಕೆಲಸಗಾರನ ನೇಮಕ
ಗೋವುಗಳನ್ನು ಗುಡ್ಡಗಾಡು ಪ್ರದೇಶಕ್ಕೆ ಮೇಯಿಸಲು ನಿತ್ಯ ಒಬ್ಬ ಆಳನ್ನು ನೇಮಿಸಿದ್ದಾರೆ. ಇವರ ಕೆಲಸ ಬೆಳಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೆ ಮೇಯಿಸಿಕೊಂಡು ಬರುವುದು, ದನಗಳನ್ನು ಕಟ್ಟಿಹಾಕುವುದು, ದನಗಳಿಗೆ ಪ್ರತಿ 5 ದಿನಕ್ಕೊಮ್ಮೆ ಮೈ ತೊಳೆಯುವುದು ಇವನ ಕರ್ತವ್ಯ. ತಿಂಗಳಿಗೆ 6 ಸಾವಿರ ರು. ಸಂಬಳ ಕೊಡುತ್ತಾರೆ.
ಮೇವು ಸಂಗ್ರಹ
ಹಸುಗಳಿಗೆ ನಿತ್ಯ ಮೆಕ್ಕೆಜೋಳದ ಸೊಪ್ಪು, ರಾಗಿ ಹುಲ್ಲು ಇನ್ನಿತರೆ ಮೇವುಗಳನ್ನು ಕಟಾವು ಯಂತ್ರದಿಂದ ಸಣ್ಣಗೆ ಮಾಡಿ ಹಾಕಲಾಗುತ್ತದೆ. ವಾರ್ಷಿಕವಾಗಿ ಹಸುಗಳಿಗೆ ಮೇವು ಒದಗಿಸಲು ಹಿತ್ತಲು(ಕಣ)ದಲ್ಲಿ ಬಣವೆ ಹಾಕಿ ಅದು ಹಾಳಾಗದಂತೆ ಎಚ್ಚರ ವಹಿಸುತ್ತಾರೆ. ಹಿಂಡಿ ಮತ್ತು ಬೂಸವನ್ನು ನಿತ್ಯ ನಿಗದಿತ ಪ್ರಮಾಣದಲ್ಲಿ ನೀಡುತ್ತಾರೆ.


- ಹಾಲೇಶ್ ಭೀಮಸಮುದ್ರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!