ಜೋಡಿ ಸಾಲು ಹಾಗೂ ನಾಲ್ಕು ಅಡಿ ಅಂತರದ ನಾಟಿ ಕಬ್ಬಿನ ಬೇಸಾಯದಲ್ಲಿ ಇತ್ತೀಚೆಗೆ ಹೆಚ್ಚು ಪ್ರಚಲಿತ. ಈ ಪದ್ಧತಿಯು ನೀರಿನ ಉಳಿತಾಯ, ಕಡಿಮೆ ಶ್ರಮ, ಉತ್ತಮ ಗುಣಮಟ್ಟ ಹಾಗೂ ಅಧಿಕ ಇಳುವರಿ ನೀಡುವಲ್ಲಿ ಸಹಾಯಕ. ವಿಶೇಷವಾಗಿ ಹನಿ ನೀರಾವರಿ ಅಳವಡಿಸುವ ರೈತರಿಗೆ ಜೋಡಿ ಸಾಲು ಪದ್ಧತಿ ಹೇಳಿ ಮಾಡಿಸಿದ್ದು. ನಾಲ್ಕಡಿ ಪಟ ಪದ್ಧತಿ ಎಂದು ರೈತರು ಕರೆಯುತ್ತಾರೆ.
ನಾಲ್ಕಡಿ ಪಟ ಪದ್ಧತಿಯನ್ನು ಒಂಟಿ ಸಾಲು ಮತ್ತು ಜೋಡಿ ಸಾಲು- ಹೀಗೆ ಎರಡೂ ರೀತಿ ಮಾಡಬಹುದು. ಒಂಟಿ ಸಾಲಿನಲ್ಲಿ ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರವಿರುತ್ತದೆ. ಯಥೇಚ್ಛ ನೀರಿನ ಅನುಕೂಲ ಇರುವವರು ಮಾತ್ರ ಒಂಟಿ ಸಾಲು ಅಳವಡಿಸಿಕೊಳ್ಳುತ್ತಾರೆ. ಜೋಡಿ ಸಾಲು ಪದ್ಧತಿಯಲ್ಲಿ ಎರಡು ಸಾಲುಗಳು ಅಕ್ಕ- ಪಕ್ಕ ಇದ್ದು ನಂತರ ನಾಲ್ಕು ಅಡಿ ಅಂತರವಿರುತ್ತದೆ. ಜೋಡಿ ಸಾಲಿನ ನಡುವೆ ಹನಿ ನೀರಾವರಿ ಪೈಪುಗಳನ್ನು ಅಳವಡಿಸಲು ಪ್ರಶಸ್ತವಾಗಿರುತ್ತದೆ ಎಂಬುದು ಕುಣಿಗಲ್ ತಾಲೂಕು ಯಡವಾಣಿ ಗ್ರಾಮದ ಅರುಣ್‌ಕುಮಾರ್ ಅವರ ಅಭಿಮತ. ಈ ಸ್ಥಳದಲ್ಲಿ ಕಳೆ ತೆಗೆಯುವವರ ಅಥವಾ ನೀರು ಹಾಯಿಸುವವರ ಹಸ್ತಕ್ಷೇಪವಿರುವುದಿಲ್ಲವಾದ್ದರಿಂದ ಪೈಪುಗಳಿಗೆ ಹಾನಿಯಾಗುವುದಿಲ್ಲ.
ಈ ಪದ್ಧತಿಯ ಮತ್ತೊಂದು ಅನುಕೂಲವೆಂದರೆ ಸೂರ್ಯನ ಬೆಳಕು ಸಸಿಗಳ ಬುಡಕ್ಕೆ ನೇರವಾಗಿ ಬೀಳಲು ಅವಕಾಶವಿರುತ್ತದೆ. ಆದ್ದರಿಂದ ಸಸಿಗಳು ಆರೋಗ್ಯವಾಗಿ ಬೆಳೆಯಲು ಅನುಕೂಲ ಹಾಗೂ ಹೆಚ್ಚಿನ ಕವಲು ತೆಂಡೆ ಬರುತ್ತದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಒಂದು ಕಬ್ಬಿನ ಕಣ್ಣಿಗೆ 4- 5 ಕವಲು ಬಂದರೆ ನಾಲ್ಕಡಿ ಪಟ ಪದ್ಧತಿಯಲ್ಲಿ 10-15 ಕವಲುಗಳು ಬರುತ್ತವೆ. ಇದು ಸಹಜವಾಗಿಯೇ ಹೆಚ್ಚಿನ ಇಳುವರಿಗೆ ಸಹಾಯಕ.
ಮಿಶ್ರಬೆಳೆ ಅನುಕೂಲ
ಎರಡು ಸಾಲುಗಳ ನಡುವಿನ ಸ್ಥಳದಲ್ಲಿ ರೈತರು ಹಲವಾರು ಮಿಶ್ರಬೆಳೆ ಹಾಕುತ್ತಾರೆ. ಕಬ್ಬು ನಾಟಿ ಮಾಡಿದ ಮೂರರಿಂದ ನಾಲ್ಕು ತಿಂಗಳವರೆಗೆ ಇದು ಸಾಧ್ಯ, ಆನಂತರ ಕಬ್ಬಿನ ಗರಿಗಳು ಹರಡಿಕೊಂಡು ನೆರಳು ಕಟ್ಟಿಕೊಳ್ಳುತ್ತದೆ ಹಾಗೂ ಕಬ್ಬಿನ ತೆಂಡೆ ಕಟ್ಟುವ ಕೆಲಸಕ್ಕಾಗಿ ಓಡಾಡುವುದರಿಂದ ಆರಂಭದ ತಿಂಗಳುಗಳಲ್ಲಿ ಮಾತ್ರ ಮಿಶ್ರ ಬೆಳೆ ಹಾಕುತ್ತಾರೆ. ಮೂಲಂಗಿ, ಟೊಮೆಟೋ, ಕುಂಬಳ, ಕೊತ್ತಂಬರಿ, ಶೇಂಗಾ, ಹೆಸರು, ಉದ್ದು ಮುಂತಾದ ಅಲ್ಪಾವಧಿ ಬೆಳೆಗಳನ್ನು ಸುಲಭವಾಗಿ ಬೆಳೆದುಕೊಳ್ಳಬಹುದು. ಸಾಂಪ್ರದಾಯಿಕ ಪದ್ಧತಿಯಲ್ಲಿ ಇದು ಅಸಾಧ್ಯ. ರಾಯಬಾಗ ತಾಲೂಕು ಚಿಂಚಲಿಯ ಅಪ್ಪಾಸಾಹೇಬ್ ಕಾಗವಾಡೆ ಈ ರೀತಿ ಕಬ್ಬಿನ ನಡುವೆ ಮಿಶ್ರಬೆಳೆ ಹಾಕಿ ಕಳೆದ ವರ್ಷ ಇಪ್ಪತ್ತು ಸಾವಿರಕ್ಕಿಂತ ಅಧಿಕ ಆದಾಯ ಪಡೆದಿದ್ದಾರೆ. ಮಿಶ್ರ ಬೆಳೆಯನ್ನು ಕಬ್ಬು ನಾಟಿ ಮಾಡುವಾಗ ಅಥವಾ ಒಂದು ವಾರದ ನಂತರ ಬಿತ್ತಬಹುದು. ಇದು ಕಳೆ ನಿಯಂತ್ರಣಕ್ಕೂ ಅನುಕೂಲ. ಮಿಶ್ರ ಬೆಳೆ ಹಾಕದಿದ್ದರೆ ತಿಂಗಳಿಗೊಮ್ಮೆಯಂತೆ ಮೂರ್ನಾಲ್ಕು ಬಾರಿಯಾದರೂ ಕಳೆ ತೆಗೆಯಬೇಕು.
ಇಟ್ಟಿಗೆ ಗೂಡಿನ ಬೂದಿ ಗೊಬ್ಬರವಾಯ್ತು
ಯಡವಾಣಿಯ ಅರುಣ್‌ಕುಮಾರ್ ಕಬ್ಬು ನಾಟಿ ಮಾಡುವಾಗ ಕೊಟ್ಟಿಗೆ ಗೊಬ್ಬರ, ಬೆಳವಣಿಗೆ ಹಂತದಲ್ಲಿ ಕೋಳಿ ಗೊಬ್ಬರ ಹಾಗೂ ಇಟ್ಟಿಗೆ ಸುಟ್ಟ ನಂತರ ಸಿಗುವ ಬೂದಿಯನ್ನು ಕೊಟ್ಟಿದ್ದಾರೆ. ಈ ಬೂದಿಯಲ್ಲಿ ಪೊಟ್ಯಾಷ್ ಅಂಶ ಹೆಚ್ಚಾಗಿರುತ್ತದೆ. ಅಲ್ಲದೆ, ಬೂದಿ ಹಾಕಿದ ನಂತರ ಮಣ್ಣಿನಲ್ಲಿ ತೇವಾಂಶ ಹೆಚ್ಚು ಕಾಲ ನಿಲ್ಲುತ್ತಿದೆ ಎಂಬುದು ಇವರ ಅನುಭವ. ಕೊಳವೆ ಬಾವಿ ಅವಲಂಬಿಸಿ ಕಬ್ಬು ಬೆಳೆಯುವವರು ಬೂದಿ ಬಳಸಿದರೆ ನೀರಿನ ಉಳಿತಾಯ ಖಂಡಿತ ಸಾಧ್ಯ ಇದು ಇವರ ಅನಿಸಿಕೆ. ಇನ್ನು ಇಳುವರಿ ವಿಚಾರಕ್ಕೆ ಬಂದರೆ, ನಾಲ್ಕಡಿ ಪಟ ಪದ್ಧತಿಯಲ್ಲಿ ಎಕರೆಗೆ ಅಂದಾಜು 65-70 ಟನ್ ಇಳುವರಿ ಬರುತ್ತದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ 45-50 ಟನ್ ಇಳುವರಿ ದೊರೆಯುತ್ತದೆ ಎನ್ನುತ್ತಾರೆ ರೈತರು.
= ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com