ಸೀಬೆ(ಪೇರಳೆ) ಹಣ್ಣು ಎಂದರೆ ಎಲ್ಲರಿಗೂ ಇಷ್ಟವೇ. ಆದರೂ ಸಿಹಿಯಾದ ರುಚಿಕರವಾದ ಈ ಹಣ್ಣಿನೊಳಗೆ ತುಂಬಿರುವ ಬೀಜಗಳೇ ಕೆಲವೊಮ್ಮೆ ಕಿರಿಕಿರಿಯಾಗುವುದುಂಟು. ಆಗ ಒಂದೇ ಒಂದು ಬೀಜವೂ ಇಲ್ಲದ ಸೀಬೆ ಹಣ್ಣಿದ್ದರೆ ಚೆನ್ನಾಗಿತ್ತು ಅನಿಸುವುದುಂಟು.
ಚಿಂತಿಸಬೇಡಿ. ಇಂಥ ಅಪರೂಪದ ಸೀಬೆ ತಳಿ ಅಮ್ಡಾಲು ರವಿಶಂಕರ ಭಟ್ಟರ ಅಂಗಳದಲ್ಲಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಬಳಿ ಇದೆ ಅವರ ಮನೆ. ಅವರ ಈ ಸೀಬೆ ಮರದಲ್ಲಿ ವರ್ಷದುದ್ದಕ್ಕೂ ಬುಟ್ಟಿಗಟ್ಟಲೆ ಹಣ್ಣುಗಳು ಎಲ್ಲ ಋತುವಿನಲ್ಲೂ ಸಿಗುತ್ತವೆ. ಒಂದು ಹಣ್ಣು 350 ಗ್ರಾಂ ತೂಕವೂ ಇದೆ. ಹಣ್ಣನ್ನು ಕತ್ತರಿಸಿದರೆ ಒಳಗೆ ಸೇಬಿನದೇ ಆಕಾರ. ತುಂಬ ಸಿಹಿ. ಬಾಳೆಹಣ್ಣಿನ ರುಚಿ, ಅಷ್ಟೇ ಮೃದು.
ಭಟ್ಟರ ಅಂಗಳದ ಮರಕ್ಕೆ ಇಪ್ಪತ್ತು ವರ್ಷಗಳಾಗಿದೆ. ಸುಬ್ರಹ್ಮಣ್ಯದ ನೆಂಟರೊಬ್ಬರು ಅದರ ಗಿಡ ಕೊಟ್ಟಿದ್ದಾರೆ. ನೆಟ್ಟು ಎರಡನೆಯ ವರ್ಷದಿಂದಲೇ ಫಲ ಕೊಡಲಾರಂಭಿಸಿದೆ. ರೆಂಬೆ- ಕೊಂಬೆ ಹರಡಿ ವಿಶಾಲವಾಗಿ ಬೆಳೆದಿದೆ. ಬೇಸಗೆಯಲ್ಲಿ ನೀರೂ ಹಾಕಿಲ್ಲ, ಗೊಬ್ಬರವನ್ನೂ ಕೊಟ್ಟಿಲ್ಲ. ಮಣ್ಣಿನಲ್ಲಿರುವ ಸತ್ವಾಂಶವನ್ನೇ ಬಳಸಿಕೊಂಡು ಮರ ಸಮೃದ್ಧ ಹಣ್ಣು ಕೊಡುತ್ತಿದೆ. ಬೇಕಾದವರಿಗೆ ಭಟ್ಟರು ಇದರ ಗಿಡ ತಯಾರಿಸಿ ಕೊಡುತ್ತಾರೆ. ಬೀಜವೇ ಇಲ್ಲದ ಹಣ್ಣಿನ ಗಿಡ ತಯಾರಿಸಲು ಇರುವುದೊಂದೇ ದಾರಿ. ಕೊಂಬೆಯ ಗಂಟಿರುವ ಭಾಗಕ್ಕೆ ಮಣ್ಣು ಮತ್ತು ಸೆಗಣಿಯ ಹುಡಿ ಕಟ್ಟಿ ಬೇರು ಬರುವಂತೆ ಮಾಡುವುದು. ಈ ಪ್ರಯತ್ನದಲ್ಲಿ ಕೈಗೆ ಸಿಗುವುದು ಹತ್ತರಲ್ಲಿ ಎರಡು ಗಿಡ ಮಾತ್ರ. ಹೀಗಾಗಿ ತೀರ ಆಸಕ್ತರಿಗಷ್ಟೇ ಗಿಡ ಕೊಡಲು ಮುಂದಾಗುತ್ತಾರೆ.(ಮೊ. 9449102263)
-ಪ.ರಾಮಕೃಷ್ಣ ಶಾಸ್ತ್ರಿ