ಹೆಚ್ಚು ಹಸಿರಿದ್ದಲ್ಲಿ ತಂಪು ಸಾಮ್ರಾಜ್ಯ ಕಟ್ಟುತ್ತದೆ. ಆದರೆ ಅಲ್ಲೊಂದು, ಇಲ್ಲೊಂದು ಎಂಬಂತೆ ಮರವಿದ್ದರೆ? ಅವುಗಳ ಕೆಳಗೆ ನಿಂತರೆ ನೆರಳು ಸಿಗಬಹುದೇ ವಿನಾ ಅಷ್ಟು ತಂಪೆನಿಸುವುದಿಲ್ಲ. ಆದರೆ, ಮರದ ಕೆಳಗೆ ನಿಂತಾಗ ಎಸಿ ರೂಂಲ್ಲಿ ಕುಳಿತ ಹಾಗಾದರೆ ಹೇಗಿರುತ್ತೆ? ಒಮ್ಮೆ ಊಹಿಸಿಕೊಳ್ಳಿ, ಅಬ್ಬಾ...! ಅಂಥ ಮರ ಇದ್ರೆ ಹೇಳಿ ಅಂಥ ಕೇಳಲೂಬಹುದು.
ಕಡುಬಿಸಿಲಿನ ಒಂದು ದಿನ ತರಕಾರಿ ತರಲೆಂದು ಮಾರ್ಕೆಟ್ಗೆ ತೆರಳಿದ್ದೆ. ವಿಶಾಲ ವೃಕ್ಷವೊಂದರ ಅಡಿಯಲ್ಲಿ ಮಾರುತ್ತಿದ್ದ ರಾಶಿ ರಾಶಿ ತರಕಾರಿಗಳ ಬಳಿಗೆ ಬಂದಾಗ ಬಿರುಬಿಸಿಲಿನ ಆವೇಗ ಇಳಿಮುಖಗೊಂಡು ಆಹ್ಲಾದವೆನ್ನಿಸಿತು. ಜತೆಯಲ್ಲಿ ಉಷ್ಣತೆಯೂ ಕೊಂಚ ಕಡಿಮೆಯಾದ ಅನುಭವ. ಇದು ಕೇವಲ ನನ್ನ ಭ್ರಮೆಯಲ್ಲವೆಂಬುದನ್ನು ಖಾತ್ರಿಪಡಿಸಿಕೊಳ್ಳಲು ಮರುದಿನ ಉಷ್ಣತಾಮಾಪನ (ಥರ್ಮಾಮೀಟರ್) ತಗೆದುಕೊಂಡು ಬಂದೆ. ನನ್ನ ಅನಿಸಿಕೆ ಪುಷ್ಟೀಕರಿಸುವಂತೆ ಆ ಮರದಡಿಯಲ್ಲಿ ಉಳಿದೆಡೆಗಳಿಗಿಂತ 1.5 ಡಿಗ್ರಿ ಸೆಲ್ಷಿಯಸ್ನಷ್ಟು ಕಡಿಮೆಯಿತ್ತು.
ಬೆರಗಿನ ಮಳೆಮರ
ನಿಜ, ಯಾವುದೇ ವಿದ್ಯುತ್ಚಾಲಿತ ತಂಪುಯಂತ್ರ (ಎಸಿ, ಕೂಲರ್, ಫ್ಯಾನ್)ಗಳಿಲ್ಲದೆಯೇ ಏಕಾಂಗಿ ಮರವೊಂದು ತಾಪಮಾನ ತಂಪಾಗಿಸುವುದೆಂದರೆ ಬೆರಗಾಗುವಂಥದ್ದೇ ಢಿಅಲ್ಲವೇ? ಅಂಥ ಅಪೂರ್ವವಾದ ಮರದ ಹೆಸರೇ ಸಮಾನಿಯಾ ಸಮನ್. ಕನ್ನಡದಲ್ಲಿ 'ಮಳೆಮರ'. ಇನ್ನೂ ಸ್ವಲ್ಪ ಫೇಮಸ್ಸಾದ ಹೆಸರೆಂದರೆ, '5 ಒ ಕ್ಲಾಕ್' ಮರ.
ಅಮೆರಿಕ ತವರು
ಮೂಲತಃ ಫ್ಯಾಬೆಸಿ ಕುಟುಂಬಕ್ಕೆ ಸೇರಿರುವ ಈ ಮರದ ತವರು ಅಮೆರಿಕ ಖಂಡ. ಇದು ಪೆನಿನ್ಸುಲಾ, ವಾಟೆಮಾಲಾ, ಪೆರು, ಬೊಲಿವಿಯಾ, ಬ್ರೆಜಿಲ್ ಮೊದಲಾದೆಡೆಗಳಲ್ಲೆಲ್ಲ ಮೊದಲಿನಿಂದಲೂ ಕಂಡುಬಂದಿದೆ. ಇದರ ಎಲೆಗಳು ಮಳೆಗಾಲದಲ್ಲಿ ಮಡಚಿಕೊಳ್ಳುವುದರಿಂದ ಮಳೆ ಮರವೆಂದೂ, ಸಂಜೆಯಾದ ಕೂಡಲೆ ಸಂಕುಚಿತಗೊಳ್ಳುವುದರಿಂದ 5 ಒ ಕ್ಲಾಕ್ ಮರವೆಂದೂ ಹೆಸರು ಬಂದಿವೆ.
ಕೊಡೆಯಾಕೃತಿ
ಸರಿಸುಮಾರು 25 ಮೀ.ನಿಂದ ಹೆಚ್ಚೆಂದರೆ 60 ಮೀ. ಎತ್ತರದವರೆಗೆ ಬೆಳೆಯುವ ಸಮಾನಿಯಾ, 80 ಮೀಟರ್ನಷ್ಟು ವಿಸ್ತಾರವಾದ ಪ್ರದೇಶದಲ್ಲಿ ತನ್ನ ಬಾಹುಗಳನ್ನು ಕೊಡೆಯಾಕೃತಿಯಲ್ಲಿ ಹರಡಿಕೊಳ್ಳುತ್ತದೆ. ಮನುಷ್ಯನ ಎದೆಯಮಟ್ಟದ ಎತ್ತರಕ್ಕೆ ಈ ಮರದ ಸುತ್ತಳತೆ ಅಳತೆ ಮಾಡಿದಲ್ಲಿ 450 ಸೆಂ.ಮೀ. ದಪ್ಪವಿರುವುದು ಕಂಡುಬರುತ್ತದೆ.
ಆಶ್ರಯತಾಣ
ವ್ಯಾಪಕವಾಗಿ ಹರಡಿಕೊಂಡಿರುವುದರಿಂದ ಈ ಮರವು ಹಲವಾರು ಪ್ರಾಣಿ, ಪಕ್ಷಿ, ಕ್ರಿಮಿ- ಕೀಟಗಳಿಗೆ ಆಶ್ರಯತಾಣ. ಸಾಮಾನ್ಯವಾಗಿ ಏಕೈಕ ಸಮಾನಿಯಾ ಮರವು ನೂರಾರು ಪಕ್ಷಿಗಳಿಗೆ ಆವಾಸಸ್ಥಾನ.
ಔಷಧಿ ತಯಾರಿಕೆ
ಕೇವಲ ನೆರಳು ನೀಡುವುದೊಂದೇ ಈ ಮರದ ಉಪಯೋಗವಲ್ಲ. ಥಂಡಿ- ಜ್ವರ, ಅತಿಸಾರ, ತಲೆನೋವು, ಹೊಟ್ಟೆ, ಕರುಳು ಸಂಬಂಧಿ ಕಾಯಿಲೆಗಳಿಗೆ ಇದು ಸಾಂಪ್ರದಾಯಿಕ ಔಷಧಿ. ವೆಸ್ಟ್ ಇಂಡೀಸ್ನಲ್ಲಿ ಇದರ ಬೀಜಗಳನ್ನು ಪಿತ್ತ ಶಮನಕ್ಕಾಗಿ ಜಗಿಯುತ್ತಾರೆ. ಅಲ್ಲದೆ, ಈ ಮರವು ಭಾಗಗಳಲ್ಲಿ ಸೂಕ್ಷ್ಮಾಣುಜೀವಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂಬುದು ಬೆಳಕಿಗೆ ಬಂದಿದೆ. ಪೂರ್ವ ಏಷ್ಯಾದ ಹಲವೆಡೆ ಗಟ್ಟಿಮುಟ್ಟಾಗಿರುವ ಇದರ ಕಾಂಡ, ಟಿಸಿಲುಗಳಿಂದ ಪೀಠೋಪಕರಣ, ದೋಣಿ ಇತ್ಯಾದಿ ತಯಾರಿಸುತ್ತಾರೆ.
ನೈಸರ್ಗಿಕ ಛತ್ರಿ
ತನ್ನ ಸುವಿಶಾಲ ಆಕೃತಿಯಿಂದಾಗಿ ಸ್ವಾಭಾವಿಕವಾಗಿ ಈ ಮರವನ್ನು ಜನ ನೆರಳಿಗಾಗಿಯೇ ಆಶ್ರಯಿಸುವುದು ಹೆಚ್ಚು. ಬೀದಿಬದಿಯ ವ್ಯಾಪಾರಿಗಳಂತೂ ಈ ಮರದಡಿಯಲ್ಲಿ ಕುಳಿತು ವ್ಯಾಪಾರ ನಡೆಸುವುದು ಸರ್ವೆಸಾಮಾನ್ಯ. ಏಕೆಂದರೆ ಬೇಸಿಗೆಯಲ್ಲಿ ಇದು ಅವರನ್ನು ಬಿಸಿಲಿನಿಂದ ರಕ್ಷಿಸಿದರೆ, ಮಳೆಗಾಲದಲ್ಲಿ ಗಾಳಿ- ಮಳೆಗಳಿಂದ ನೈಸರ್ಗಿಕ ಛತ್ರಿಯೋಪಾದಿಯಲ್ಲಿ ಸಂರಕ್ಷಣೆ ನೀಡುತ್ತದೆ. ಇದರ ರೆಂಬೆ- ಕೊಂಬೆಗಳು ಬಿರುಗಾಳಿಗಳಿಗೆ ಜಗ್ಗುವುದಿಲ್ಲ ಹಾಗೂ ಮುರಿದು ಬೀಳುವ ಸಾಧ್ಯತೆ ಕಡಿಮೆ ಇರುವುದರಿಂದ ಧೈರ್ಯವಾಗಿ ಇದರಡಿಯಲ್ಲಿ ತಂಗಬಹುದು. ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ಈ ಮರವನ್ನು ನೆರಳಿಗಾಗಿಯೇ ಪಾರ್ಕ್ಗಳಲ್ಲಿ, ಕಾಲುಹಾದಿ ಹಾಗೂ ರಸ್ತೆಬದಿಯಲ್ಲಿ ನೆಡಲಾಗುತ್ತದೆ. ಹಾಗಿದ್ದೂ ರಸ್ತೆಬದಿ ಮತ್ತು ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿಗಳಂಚಿನಲ್ಲಿ ಈ ಮರ ಬೆಳೆಸುವುದು ನಿಜಕ್ಕೂ ಅಪಾಯಕಾರಿ. ಏಕೆಂದರೆ ಇದರ ಕಾಯಿಗಳು ದನಕರುಗಳಿಗೆ ಅತ್ಯಂತ ಸ್ವಾದಿಷ್ಟಕರ ತಿನಿಸು. ಹೀಗಾಗಿ ರಸ್ತೆಯ ಮೇಲೆಯೇ ಮರದಿಂದ ಉದುರುವ ಕಾಯಿ ತಿನ್ನಲು ಬೀಡು ಬಿಡುವ ಸಾಧ್ಯತೆ ಹೆಚ್ಚು. ಇದರಿಂದ ಅಪಘಾತಗಳಾಗುವ ಸಂಭವವೂ ಅಧಿಕ. ಹಾಗಾಗಿ ವಾಹನ ದಟ್ಟಣೆಯಿರುವ ಪ್ರದೇಶಗಳಲ್ಲಿ ಸಮಾನಿಯಾ ಬೆಳೆಸುವ ಪರಿಪಾಠ ಒಳ್ಳೆಯದಲ್ಲ.
-ಪ್ರೊ. ಶಿವಾನಂದ ಭಟ್ಟ