ಕೃಷಿ-ಪರಿಸರ

೨೦ ಮಿಲಿಯನ್ ಡಾಲರ್ ಮೊತ್ತದ ಆನೆದಂತ ನಾಶಪಡಿಸಿದ ಮಲೇಶಿಯಾ

Guruprasad Narayana

ಕ್ವಾಲಾಲಂಪುರ್: ಅಕ್ರಮ ವನ್ಯಜೀವಿ ಸಂಪತ್ತಿನ ಮಾರಾಟವನ್ನು ಹತ್ತಿಕ್ಕುವ ಕ್ರಮವಾಗಿ, ಮೊದಲ ಬಾರಿಗೆ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಲೇಶಿಯಾ ಅಧಿಕಾರಿಗಳು ವಶಪಡಿಸಿಕೊಂಡಿದ್ದ ೨೦ ಮಿಲಯನ್ ಡಾಲರ್ ಬೆಲೆ ಬಾಳುವ ಆನೆ ದಂತವನ್ನು ನಾಶಪಡಿಸಿದ್ದಾರೆ.

೪೦೦೦ಕ್ಕೂ ಹೆಚ್ಚು ದಂತಗಳು ಹಾಗೂ ಮತ್ತಿತರ ವನ್ಯ ಜೀವಿಗಳನ್ನು ಅಧಿಕಾರಿಗಳು ಹಲವು ಸಮಯದಲ್ಲಿ ವಶಪಡಿಸಿಕೊಂಡಿದ್ದರು ಎಂದು ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ ಸಚಿವ ವ್ಯಾನ್ ಜುನೈಡಿ ತೌಂಕ ಜಾಫರ್ ಹೇಳಿದ್ದಾರೆ.

ಗುರುವಾರ ಒಟ್ಟಾಗಿ ೯.೫೫ ಟನ್ ನಷ್ಟು ದಂತ ನಾಶಪಡಿಸಲಾಗಿದೆ. ನುಚ್ಚುನೂರು ಮಾಡಿ ವಶಪಡಿಸಿಕೊಂಡ ದಂತವನ್ನು ನಾಶ ಮಾಡುವುದು ಅಕ್ರಮ ಮಾರುಕಟ್ಟೆಯಿಂದ ದಂತವನ್ನು ಹೊರಗಿಡಲು ಪರಿಣಾಮಕಾರಿ ಮಾರ್ಗ ಎಂದಿದ್ದಾರೆ ಅಧಿಕಾರಿಗಳು.

ಅಕ್ರಮ ವನ್ಯಜೀವಿ ಉತ್ಪನ್ನಗಳ ಮಾರುಕಟ್ಟೆಯಾಗಿ ಮಲೇಶಿಯಾವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಜುನೈಡಿ ಒಪ್ಪಿಕೊಂಡಿದ್ದಾರೆ.

"ಅಂತರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳಿಗೆ ಅತ್ಯುತ್ತಮ ಸೌಲಭ್ಯ ಒದಗಿಸಿಕೊಡಲು ಸಾಧ್ಯವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ ಆದರೆ ಇದೇ ಸಮಯದಲ್ಲಿ ಅಕ್ರಮ ವನ್ಯಜೀವಿ ಉತ್ಪನ್ನಗಳ ಮಾರಾಟಗಾರೂ ಇಲ್ಲಿ ನುಸುಳಿ ಅದರ ಲಾಭ ಪಡೆಯುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ವನ್ಯ ಜೀವಿ ಕಳ್ಳಸಾಗಾಣಿಕೆ ಮತ್ತು ದಂತ ಮಾರುಕಟ್ಟೆಗೆ ಕಡಿವಾಣ ಹಾಕಲು ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಜುನೈಡಿ ಹೇಳಿದ್ದಾರೆ.

೨೦೧೪ರಿಂದ ವಶಪಡಿಸಿಕೊಳ್ಳಲಾಗಿರುವ ಈ ವನ್ಯ ಜೀವಿ ಉತ್ಪನ್ನಗಳ ಮೇಲೆ ವಿಧಿವಿಜ್ಞಾನ ಪರೀಕ್ಷೆ ನಡೆಸಿದ್ದು, ಇವುಗಳ ಮೂಲವನ್ನು ಪತ್ತೆಹಚ್ಚಿ ಇಡೀ ಅಪರಾಧಕ್ಕೆ ತಡೆ ಹಾಕುವುದಕ್ಕೆ ಮಲೇಶಿಯಾ ಮುಂದಾಗಿದೆ. 

SCROLL FOR NEXT