ತೀರ್ಥಹಳ್ಳಿಯಿಂದ 26 ಕಿ.ಮೀ ಪಯಣಿಸಿದರೆ ಮಡುಬ ಸಿಗುತ್ತದೆ. ಬಲಬದಿ ತಿರುಗಿ ಪುನಃ 7 ಕಿ.ಮೀ ಪಯಣಿಸಿದರೆ ಸಿಗುವುದೇ ಸತ್ಯನಾರಾಯಣ ಆಂಬ್ಳೆಯವರ ಕೃಷಿ ಕಣಜ. ಫಿಲಿಫೈನ್ಸ್‌ನಿಂದ ಮೆಣಸು ಬೀಜ ತರಿಸಿ ಕಾಕ್‌ಫಿಟ್‌ನಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ.
ಬೆಳೆಯುವ ಬಗೆ ಹೀಗೆ: ಎರಡೂವರೆ ಅಡಿಯ ಬೆಡ್ ನಿರ್ಮಿಸಬೇಕು. ಇದರ ಎತ್ತರ 8 ಇಂಚು, ಮಧ್ಯೆ ಒಂದೂವರೆ ಅಡಿ ದಾರಿ, ಅದರ ಮೇಲೆ ಡ್ರಿಪ್‌ಲೈನ್ ಹಾಯಿಸಿ ತದನಂತರ ಅದರ ಮೇಲೆ ಮಲ್ಚಿಂಗ್ ಪೇಪರ್ ಹಾಸಬೇಕು. ಬೆಡ್ ಸಿದ್ಧವಾದ ನಂತರ, ಮಧ್ಯ ಭಾಗಕ್ಕೆ ಕೆಂಪು ಮಣ್ಣು ಹಾಸುತ್ತಾ ಹೋಗಬೇಕು. ಒಂದು ಬೆಡ್‌ನಲ್ಲಿ ಎರಡು ಸಾಲು ನಾಟಿ ಮಾಡಬಹುದು. ಬೆಡ್‌ನ ಮೇಲೆ ಹಾಸಿದ ಮಲ್ಚಿಂಗ್ ಪೇಪರ್ ಮೇಲೆ ಗುರುತು ಹಾಕುತ್ತಾ ಹೋಗಬೇಕು. ದೊಡ್ಡ ತ್ರಿಜ್ಯದ ಮೂಲಕ ಗುರುತು ಹಾಕುತ್ತಾ ಹೊದರೆ ಒಂದು ಸಾಲಿನ ಎರಡು ಗಿಡದ ನಡುವೆ ಇನ್ನೊಂದು ಸಾಲಿನ ಗಿಡ ನಾಟಿ ಮಾಡಬಹುದು ಎನ್ನುತ್ತಾರೆ ಸತ್ಯನಾರಾಯಣ. ಒಂದು ಎಕರೆಗೆ 10000 ಗಿಡ ನೆಡಬಹುದು. ಕಾಕ್‌ಫಿಟ್‌ನಲ್ಲಿ ನೆಟ್ಟ ಗಿಡವನ್ನು ಮಣ್ಣು ಸಮೇತ ಬೆಡ್‌ನಲ್ಲಿ ನಾಟಿ ಮಾಡಬಹುದು. ಹೀಗೆ 6 ಎಕರೆ ಜಾಗದಲ್ಲಿ ಫಿಲಿಫೈನ್ಸ್ ಮೆಣಸು ಕೃಷಿ ಮಾಡಿದ್ದಾರೆ.
2 ತಿಂಗಳಿಗೆ ಫಸಲು: ಒಂದು ಎಕರೆಯಲ್ಲಿ ಕೃಷಿ ಮಾಡಿದ ನಂತರ ಇನ್ನೊಂದು ಎಕರೆಯಲ್ಲಿ ಕೃಷಿ ಮಾಡಬಹುದು. ನಾಟಿ ಮಾಡಿದ ಎರಡು ತಿಂಗಳಲ್ಲಿ ಬೆಳೆ ಪಡೆಯಬಹುದು. ಹೀಗೆ 6 ಎಕರೆಯಲ್ಲಿ ಬದಲಿಯಾಗಿ 6 ಬಾರಿ ನಾಟಿ ಮಾಡಬಹುದು. ಒಂದು ಎಕರೆಯಲ್ಲಿ ಬೆಳೆಯತೊಡಗಿದ ನಂತರ ಇನ್ನೊಂದು ಎಕರೆ ನಾಟಿ ಮಾಡಬೇಕು. ಮಧ್ಯ ಭಾಗದಲ್ಲಿ ಎಳೆದ ಪೈಪ್ ಡ್ರಿಪ್ ಮೂಲಕ ನೀರು ಹಾಯಿಸಬೇಕು. ನಾಟಿ ಮಾಡುವಾಗ ಒಂದು ಗಿಡದಿಂದ ಇನ್ನೊಂದು ಗಿಡದ ನಡುವೆ 2 ಅಡಿ ಅಂತರ ಇರಿಸಬೇಕು. ಒಂದು ಸಾಲು ಇನ್ನೊಂದು ಸಾಲಿನ ಅಂತರ 4 ಅಡಿ ಇರಬೇಕು.
20 ಟನ್ ಇಳುವರಿ: ಒಂದು ಗಿಡದ ಜೀವತ ಅವಧಿ 8 ತಿಂಗಳು. 4 ಬಾರಿ ಕೊಯ್ಲು ಮಾಡಬಹುದು. ಒಂದು ಎಕರೆಯಲ್ಲಿ 20 ಟನ್ ಮೆಣಸು ಪಡೆಯಬಹುದು. ಬೆಳೆ ಬಂದನ ನಂತರ ಕೆಂಪು ಕೆಂಪಾಗಿ ಆಕರ್ಷಕವಾಗಿ ಕಾಣಿಸುತ್ತದೆ. ಅಂಬ್ಳೆಯವರು ಮೊದಲ ವರ್ಷದ ಕೃಷಿಯಲ್ಲಿ ಒಟ್ಟು 120 ಟನ್ ಮೆಣಸು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ನಾಮಧಾರಿ ಕಂಪನಿಯ ಮುಖಾಂತರ ಇಂಗ್ಲೆಂಡ್ ಅಮೆರಿಕ, ಫಿಲಿಫೈನ್ಸ್ ಮತ್ತು ಇತರ ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದಾರೆ. 1 ಎಕರೆಯಲ್ಲಿ 2 ಲಕ್ಷದಷ್ಟು ಲಾಭ ಬರಬಹುದು. ಆ ಲೆಕ್ಕದಲ್ಲಿ 12 ಲಕ್ಷ ರುಪಾಯಿ ವಾರ್ಷಿಕ ಲಾಭ ಪಡೆಯಬಹುದು. ಮಾಹಿತಿಗೆ ಸತ್ಯನಾರಾಣಯ ಆಂಬ್ಳೆಯವರ ಮೊ. 9146791586.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos