ಕೃಷಿಯನ್ನೇ ತಮ್ಮ ಜೀನವದ ಅವಿಭಾಜ್ಯ ಅಂಗ ಎಂದು ಭಾವಿಸಿ, ಅದನ್ನು ತಮ್ಮ ಕುಟುಂಬದೊಂದಿಗೆ ಸಾವಯವ ಕೃಷಿಯನ್ನೇ ಅಳವಡಿಸಿಕೊಂಡು ಯಶಸ್ಸು ಸಾಧಿಸಿದವರು ತುಂಬಾ ವಿರಳ. ಆದರೆ ತೇರದಾಳ ಪಟ್ಟಣದ ಧರೆಪ್ಪ ಪರಪ್ಪ ಕಿತ್ತೂರ ಕೃಷಿಯಲ್ಲಿ ಏನಾದರು ಸಾಧನೆ ಮಾಡಲೇಬೇಕೆಂದು ಪಣ ತೊಟ್ಟು ತಾವು ನಡೆಸುತ್ತಿದ್ದ ಪರ್ಟಿಲೈಜರ್ ಅಂಗಡಿಯನ್ನು ತೊರೆದು 1991ರಿಂದ ಸಾವಯವ ಕೃಷಿಗೆ ಮೊರೆ ಹೋದರು. ಆ ನಂತರ ಅಲ್ಲಿಂದ ಇಲ್ಲಿಯವರೆಗೆ ಸದಾ ವಿಭಿನ್ನ ಆಲೋಚನೆಯೊಂದಿಗೆ ಕೃಷಿಯಲ್ಲಿ ತಮ್ಮ ಬದುಕು ಕಂಡುಕೊಂಡಿರುವ ಅವರ ಸಾಧನೆ ನಿಜಕ್ಕೂ ಇತರರಿಗೆ ಮಾದರಿ.
ಇವರು ಓದಿದ್ದು, 8ನೇ ತರಗತಿ ಆದರೆ ಅವರ ಕೃಷಿಯಲ್ಲಿನ ಪಾಂಡಿತ್ಯ ಹಾಗೂ ಸಾಧಿಸಿದ ಸಾಧನೆ ಅಪಾರ. ತಮ್ಮ ಸ್ವಂತ ಅನುಭವಗಳೊಂದಿಗೆ ಕೃಷಿಯಲ್ಲಿ ಹಲವಾರು ವಿನೂತನ ಪ್ರಯೋಗಗಳನ್ನು ಮಾಡುತ್ತಾ ಸಾವಯವ ಕೃಷಿಯಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಲಾಭವನ್ನು ಗಳಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸುಮಾರು 18 ಎಕರೆ ಜಮೀನು ಹೊಂದಿರುವ ಧರೆಪ್ಪ ಕಿತ್ತೂರ ಅವರು ಬಾಲ್ಯದಿಂದಲೇ ಕೃಷಿಯ ಬಗ್ಗೆ ಆಸಕ್ತಿ ಹೊಂದಿದವರು. ಧರೆಪ್ಪ ಕಳೆದ 24 ವರ್ಷಗಳಿಂದ ತಮ್ಮ ಜಮೀನಿನಲ್ಲಿ ಯಾವುದೇ ತರಹದ ರಾಸಾಯನಿಕ ಔಷಧಿಗಳನ್ನು ಬಳಸದೇ ಸಾವಯವ ಕೃಷಿಯಲ್ಲಿಯೇ ಬೆಳೆ ಬೆಳೆದು ಉತ್ತಮ ಲಾಭವನ್ನು ಕಂಡು ಕೊಂಡಿದ್ದಾರೆ. ವಾಣಿಜ್ಯ ಬೆಳೆ ಕಬ್ಬು ಬೆಳೆಯಲ್ಲಿ ಮಿಶ್ರ ಬೆಳೆಗಳಾಗಿ ಚಂಡು ಹೂ, ಹೂಕೊಸು(ಗೋಬಿ), ಎಲೆಕೊಸು(ಗೋಬಿ ಗಡ್ಡೆ), ಪಾಲಕ, ಮೆಂತೆ, ಕೋತಂಬರಿ, ಮೆಣಸಿನಕಾಯಿ, ಸಬಸಗಿ ಪಲ್ಲೆ, ಶೇಂಗಾ, ಉಳ್ಳಾಗಡಿ, ರಾಜಗೇರಿಪಲ್ಲೆ, ಸವತೆಕಾಯಿ ಬೆಳೆದಿದ್ದಾರೆ ಅಲ್ಲದೇ ತಮ್ಮ ತೋಟದಲ್ಲಿ ಎಂಟು ರೀತಿಯ ಸಿಓ0265, ಸಿಓ 010, ಸಿಓ 98005, ಸಿಓ 254 & ಸಿಓ261 , ಸಿಓ 86032 ಎಸ.ಎನ್.ಕೆ. 377 & ಎಸ್.ಎನ್.ಕೆ.680. ರಂತಹ ವಿವಿಧ ಕಬ್ಬು ತಳಿಗಳನ್ನು ಬೆಳೆದಿದ್ದಾರೆ.
ತೋಟಗಾರಿಕೆ ಬೆಳೆಗಳು: ಬಾಳೆ, ಪಪ್ಪಾಯಿ, ಚಿಕ್ಕು, ರಾಮಪಲ, ಸೀತಾಫಲ, ಅಂಜೂರ, ಮೊಸಂಬಿ, ಪಶ್ಚಿಮ ಬಂಗಾಳದ ಬಾರೆ ಹಣ್ಣು, ಮಾವು, ಪೇರಲ, ನೆಲ್ಲಿ, ತೆಂಗು, ಅಡಿಕೆ, ಕಾಫಿ ಸೇರಿದಂತೆ ಕಲ್ಲಂಗಡಿ, ನುಗ್ಗೆಕಾಯಿ, ಗಜ್ಜರಿ, ಗೆಣಸು, ಮುಂತಾದವುಗಳನ್ನು ಬೆಳೆಸಿದ್ದಾರೆ.
ಔಷಧಿಗಿಡಗಳು : ಸಕ್ಕರೆ ಕಾಯಿಲೆ, ಮೂತ್ರ ವಿರ್ಷಜನೆ ತೊಂದರೆ, ಹಾವು ಕಡಿತ, ಕೆಮ್ಮು ನಂತಹ ಮುಂತಾದ ಔಷದಿ ಹಾಗೂ ಆಯುರ್ವೇದದ ಸಸ್ಯಗಳ ಜೊತೆಗೆ ಸಾಂಬರು ಪದಾರ್ಥದ ಸಸ್ಯಗಳನ್ನು ಕೂಡಾ ಬೆಳೆಸಿದ್ದಾರೆ.
ಹೈನುಗಾರಿಕೆ : ಸಾವಯವ ಕೃಷಿಗೆ ಮೂಲಾಧಾರವಾಗಿರುವ ಹೈನುಗಾರಿಕೆಯನ್ನು ಮಾಡಿಕೊಂಡಿರುವ ಇವರು 6 ಎಮ್ಮೆ, 4 ಆಕಳು, 4 ಆಡುಗಳನ್ನು ಸಾಕುತ್ತಿದ್ದಾರೆ. ಇದರಿಂದ ಹಾಲು ಉತ್ಪಾದನೆ ಒಂದು ಕಡೆ ಆದರೆ ಆಕಳ ಸಗಣಿ, ಮೂತ್ರ(ಗಂಜಲು) ಸಾವಯವ ಗೊಬ್ಬರಕ್ಕೆ ಬಳಸುತ್ತಿದ್ದಾರೆ. ಅಲ್ಲದೇ ಹಸುಗಳಿಗಾಗಿ ಹಸಿರು ಪಾಚಿ(ಅಜೋಲ್)ಯನ್ನು ಬೆಳೆಸಿ ಅವುಗಳಿಗೆ ನೀಡುತ್ತಿರುವುದರಿಂದ ಹಾಲಿನ ಪ್ರಮಾಣ ಹೆಚ್ಚಿಗೆ ದೊರಕುತ್ತದೆ ಎನ್ನುತ್ತಾರೆ ಧರೆಪ್ಪ. ಅಲ್ಲದೇ ಇದರ ಜೊತೆ ಜೇನು ಸಾಕಣೆ, ಮೊಲ ಸಾಕಣೆಯನ್ನೂ ಮಾಡಿಕೊಂಡಿದ್ದಾರೆ.
ಬೆಳೆಗಳಿಗೆ ಸಂಗೀತ...!: ಬೆಳೆಗಳಿಗೆ ಸಂಗೀತ ಕೇಳಿಸುವುದು ಧರೆಪ್ಪ ಅವರ ಜಮೀನಿನಲ್ಲಿ ಕಾಣಬರುವ ವಿಶೇಷತೆಗಳಲ್ಲಿ ಒಂದು. ಸರ್ ಜಗದೀಶ ಚಂದ್ರ ಬೋಸ್‍ರ ವಿಚಾರದಂತೆ ಸಸ್ಯಗಳಿಗೂ ಜೀವವಿದೆ ಎಂಬ ಕಾರಣದಿಂದ ಇವರು ತಮ್ಮ ಜಮೀನಿನಲ್ಲಿ ಎರಡು ಕಡೆ ಧ್ವನಿವರ್ಧಕ ಅಳವಡಿಸಿ ಪ್ರತಿದಿನ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ತಬಲಾ, ಶಹನಾಯಿ, ಜಲತರಂಗ, ಶಾಸ್ತ್ರೀಯ ವಾದ್ಯ ಸಂಗೀತ ಸೇರಿದಂತೆ ವಿವಿಧ ಸಂಗೀತವನ್ನು ಬೆಳೆದ ಬೆಳೆಗಳಿಗೆ ಮತ್ತು ತಮ್ಮ ಜಾನುವಾರುಗಳಿಗೂ ಕೇಳಿಸುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ರೋಗಗಳು ಕಡಿಮೆ ಆಗುತ್ತವೆ ಮತ್ತು ಶೇ. 5 ರಿಂದ ಶೇ.10 ರಷ್ಟು ಬೆಳೆಯಲ್ಲಿ ಇಳುವರಿ ಹೆಚ್ಚಾಗುತ್ತದೆ. ಹಾಗೂ ಜಾನುವಾರುಗಳು ಹೆಚ್ಚಿನ ಹಾಲನ್ನು ಕೊಡುತ್ತವೆ ಎನ್ನುತ್ತಾರೆ ಧರೆಪ್ಪ.
ಮಾರುಕಟ್ಟೆ : ತೋಟದಲ್ಲಿ ಬೆಳೆದಂತ ಬೆಳೆಗಳು, ಧವಸದಾನ್ಯ, ತರಕಾರಿ ಉತ್ಪನ್ನಗಳನ್ನು ಸ್ವಂತವಾಗಿ ಮಾರಾಟ ಮಾಡುತ್ತಾರೆ. ಜೊತೆಗೆ ಸಾವಯವ ಆರಿಷಿಣ ಪುಡಿ ಹಾಗೂ ಜವೆ ಗೋಧಿ, ರವಾ ತಾವೆ ತಯಾರಿಸಿ ಮಾರಾಟ ಮಾಡುತ್ತಾರೆ. ಆದರಲ್ಲೂ ಬಾಸುಮತಿ ಸೊಪ್ಪುನ್ನು ಸ್ಥಳೀಯ ಮತ್ತು ಹೊರ ಮಾರುಕಟ್ಟೆಗೆ ಮಾರಾಟ ಮಾಡಿ ಪ್ರತಿ ವಾರ ಲಾಭವನ್ನು ಪಡೆಯುತ್ತಿದ್ದಾರೆ.
ಹನಿ ನೀರಾವರಿ : ತಮ್ಮ ಜಮೀನಿನಲ್ಲಿ ಮಳೆ ನೀರು ಕೊಯ್ಲು, ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೇ ಕೇವಲ ಸಾವಯವ ಗೊಬ್ಬರ ಮಾತ್ರ ಬಳಸುತ್ತಿದ್ದಾರೆ. ಕೋಳಿ, ಎರೆಹುಳು ಗೊಬ್ಬರ, ಹಾಗೂ ತಿಪ್ಪೆ ಗೊಬ್ಬರ ಮಾತ್ರ ಹಾಕಿದ್ದಾರೆ. ಇನ್ನೊಂದು ವಿಶೇಷ ಎಂದರೆ ಪ್ರತಿವಾರ ಜೀವಸಾರ ಘಟಕದಿಂದ ಪ್ರತಿವಾರ ಹನಿ ನೀರಾವರಿ ಮೂಲಕ ಸಾವಯವ ಗೊಬ್ಬರ ನೀಡುತ್ತಾರೆ.
ಭೇಟಿ: ಧರೆಪ್ಪ ಕಿತ್ತೂರ ಅವರ ಸಾಧನೆ ಕೇಳಿ ಯುಎಸ್‍ಎ ದಿಂದ ಕರ್ನಾಟಕ್ಕೆ ಆಗಮಿಸಿದ್ದ ಟೈಮೋಥಿ ರೆಬರ್ ಅವರು ಇವರ ತೋಟಕ್ಕೆ ಭೇಟಿ ನೀಡಿ ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜಾಪುರದ ಸಿದ್ದೇಶ್ವರ ಶ್ರೀಗಳು ಕೂಡಾ ಇಲ್ಲಿಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಧಾರವಾಡ, ಬೆಳಗಾವಿ, ವಿಜಾಪುರ, ಬಳ್ಳಾರಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದವರು, ಮಹಾರಾಷ್ಟ್ರ ರಾಜ್ಯದ ಹಲವು ರೈತರು ಭೇಟಿ ನೀಡಿ, ಕಿತ್ತೂರ ಅವರ ರೈತ ಪದ್ಧತಿಯನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಇವರ ತೋಟಕ್ಕೆ ಭೇಟಿ ನೀಡಿದವರು ಸಂದರ್ಶನ ಪುಸ್ತಕದಲ್ಲಿ ಸಹಿ ಮತ್ತು ಅನುಭವ ಹಂಚಿಕೊಳ್ಳುವ ಪದ್ಧತಿಯನ್ನು ಇಟ್ಟುಕೊಂಡಿದ್ದಾರೆ.
ರಾಜ್ಯ ಸರಕಾರ ನೀಡುವ ಕೃಷಿ ಪಂಡಿತ, ಕೃಷಿ ಪ್ರಶಸ್ತಿ, ಜಿಲ್ಲಾ ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿ, ಜಿಲ್ಲಾ ಆಡಳಿತದಿಂದ ಸ್ವತಂತ್ರೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು, ರಾಜ್ಯ ಸರ್ಕಾರದ ವತಿಯಿಂದ ಕೃಷಿ ಅಧ್ಯಯನಕ್ಕಾಗಿ ಚೀನಾ ಪ್ರವಾಸವನ್ನು ಮಾಡಿದ್ದಾರೆ. ಕೃಷಿ ಭೂಮಿಯನ್ನು ನೋಡಿದರೆ ಒಂದು ಕೃಷಿ ವಿಶ್ವವಿದ್ಯಾಲಯವನ್ನೆ ನೆನಪಿಸುತ್ತದೆ. ನಿಜವಾಗಲೂ ಅವರ ಈ ಪ್ರಯತ್ನ ಮೆಚ್ಚುವಂತಹದು. ಧರೆಪ್ಪ ಕಿತ್ತೂರ (ತೇರದಾಳ) ಸಂಪರ್ಕ:09916238273
ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಬರುವಂತಹ ಬೆಳೆಗಳನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆಯಬೇಕು. ರೈತರು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆ ಬೆಳೆಯಬೇಕು. ಕೃಷಿಗೆ ಪೂರಕವಾಗುವಂತಹ ಆಡು, ಹೈನುಗಾರಿಕೆ, ಕಾಯಿಪಲ್ಲೆಗಳು ಸೇರಿದಂತೆ ದಿನದ, ವಾರದ ಹಾಗೂ ತಿಂಗಳ ಆದಾಯ ಬರುವಂತಹ ಯೋಜನೆಗೆಳನ್ನು ಹಾಕಿಕೊಂಡಲ್ಲಿ ರೈತನ ಬಾಳು ಬಂಗಾರವಾಗುತ್ತದೆ. ಒಟ್ಟಿನಲ್ಲಿ ರೈತರು ಸಮಗ್ರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು.
- ಧರೆಪ್ಪ ಕಿತ್ತೂರ ಸಾವಯವ ಕೃಷಿಕ, ತೇರದಾಳ