ನವದೆಹಲಿ: ಗಂಗಾ ನದಿ ನೀರಿನ ನಿಗೂಢ ವಿಶೇಷ ಶಕ್ತಿಯ ಬಗ್ಗೆ ವೈಜ್ಞಾನಿಕವಾಗಿ ಭಾರತೀಯ ವಿಜ್ಞಾನಿಗಳು ಮೌಲ್ಯಾಂಕನ ಮಾಡಿದ್ದಾರೆ.
ಭಾರತದಲ್ಲಿ ಹಿಂದೂ ಜನರು ಗಂಗಾ ನದಿ ನೀರನ್ನು ಬ್ರಹ್ಮ ದಿವ್ಯ ಅಥವಾ ದೈವಾಮೃತ ಎಂದು ನಂಬುತ್ತಾರೆ. ಗಂಗಾ ನದಿ ನೀರಿನಲ್ಲಿ ಮುಳುಗೆದ್ದರೆ ಪಾಪಗಳೆಲ್ಲಾ ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ. ಜೀವನದ ಹುಟ್ಟು-ಸಾವಿನ ಚಕ್ರದಿಂದ ಮುಕ್ತಿ ಸಿಗುತ್ತದೆ ಎಂದು ಭಾವಿಸುತ್ತಾರೆ.
ಇಂತಹ ಸಂದರ್ಭದಲ್ಲಿ ಚಂಡೀಗಢ ಮೂಲದ ಸೂಕ್ಷ್ಮ ಜೀವಿ ತಂತ್ರಜ್ಞಾನ ಕೇಂದ್ರದ ವಿಜ್ಞಾನಿಗಳು ಗಂಗಾ ನದಿ ನೀರಿನ ವಿಶೇಷ ಗುಣಗಳ ಬಗ್ಗೆ ಅಧ್ಯಯನ ನಡೆಸಿದ್ದು, ನೀರಿನಲ್ಲಿರುವ ಬ್ಯಾಕ್ಟಿರಿಯೊಫೇಜಸ್ ಗಳು ನೀರು ಹಾಳಾಗದಂತೆ ನೋಡಿಕೊಳ್ಳುತ್ತದೆ ಎಂದು ಹೇಳುತ್ತಾರೆ.
ಬ್ಯಾಕ್ಟಿರಿಯೊಫೇಜ್ ಒಂದು ರೀತಿಯ ವೈರಸ್ ಆಗಿದ್ದು ಅದು ಬ್ಯಾಕ್ಟೀರಿಯಾವನ್ನು ತಿನ್ನುತ್ತದೆ. ಇದು ಗಂಗಾ ನದಿ ನೀರಿನಲ್ಲಿರುವ ಸ್ವ ಶುದ್ಧೀಕರಣದ ರಹಸ್ಯವನ್ನು ಬಹಿರಂಗಪಡಿಸಿದೆ.
ಗಂಗಾ ನೀರಿನಲ್ಲಿರುವ ಹೊಸ ವೈರಸ್ ಗಳ ಬಗ್ಗೆ ಇದೇ ಮೊದಲ ಬಾರಿಗೆ ವಿಜ್ಞಾನಿಗಳಿಗೆ ಪತ್ತೆಯಾಗಿದೆ. ನೀರಿನ ಬಗ್ಗೆ ನಡೆಸಿರುವ ಅಧ್ಯಯನದ ಮಾಹಿತಿ ಇಂಡಿಯನ್ ಸೈನ್ಸ್ ಜರ್ನಲ್ ನಲ್ಲಿ ಪ್ರಕಟವಾಗಿದ್ದು ಚಂಡೀಗಢದ ಸೂಕ್ಷ್ಮ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಷಣ್ಮುಗಂ ಮಯಿಲ್ರಾಜ್ ಹೇಳುವ ಪ್ರಕಾರ, ಅನೇಕ ಹೊಸ ವೈರಸ್ ಗಳು ಗಂಗಾ ನದಿ ನೀರಿನಲ್ಲಿ ಪತ್ತೆಯಾಗಿವೆ. ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು ಹಲವು ಸೋಂಕುಗಳಿಗೆ ನಿರೋಧಕವಾಗಿ ಬಳಸಬಹುದು ಎಂದು ತಿಳಿದುಬಂದಿದೆ ಎನ್ನುತ್ತಾರೆ.
ಡಾ.ಮಯಿಲ್ರಾಜ್ ಮತ್ತು ಅವರ ತಂಡ ಗಂಗಾ ನದಿ ನೀರಿನಲ್ಲಿ 20ರಿಂದ 25 ವೈರಸ್ ಗಳನ್ನು ಕಂಡುಹಿಡಿದಿದ್ದಾರೆ. ಈ ವೈರಸ್ ಗಳು ಕ್ಷಯ, ಟೈಫಾಯಿಡ್, ನ್ಯುಮೋನಿಯಾ, ಕಾಲರಾ, ಅತಿಸಾರ, ಭೇದಿ, ಮಿದುಳು ಉರಿತ ಮೊದಲಾದ ರೋಗಗಳಿಗೆ ಚಿಕಿತ್ಸೆಗಾಗಿ ಬಳಸಬಹುದು ಎಂದು ಕಂಡು ಹಿಡಿದಿದ್ದಾರೆ.
''ನಾವು ನಡೆಸಿರುವ ಅಧ್ಯಯನದಿಂದ ಗಂಗಾ ನದಿ ನೀರಿನಲ್ಲಿ ಹಲವು ಬ್ಯಾಕ್ಟೀರಿಯಾ ತಳಿಗಳು ಸಂಪದ್ಭರಿತವಾಗಿವೆ ಎಂದು ಗೊತ್ತಾಗಿದೆ. ಫ್ಲೇವೋಬ್ಯಾಕ್ಟೀರಿಯಾ, ಸ್ಫಿಂಗೋ ಬ್ಯಾಕ್ಟೀರಿಯಾ, ಬ-ಪ್ರೊಟಿಯೊಬ್ಯಾಕ್ಟೀರಿಯಾ, ನೊಸ್ಟೊಕೊಫಿಸೈಡಿಯಾ ಮೊದಲಾದ ಬ್ಯಾಕ್ಟೀರಿಯಾಗಳು, ನದಿಯಲ್ಲಿರುವ ಕೆಸರು ಬಿ-ಪ್ರೊಟಿಯೊಬ್ಯಾಕ್ಟೀರಿಯಾ, ಎ-ಪ್ರೊಟಿಯೊ ಬ್ಯಾಕ್ಟೀರಿಯಾ, ಕ್ಲೊಸ್ಟ್ರಿಡಿಯಾ, ಆಕ್ಟಿನೊಬ್ಯಾಕ್ಟೀರಿಯಾ, ಸ್ಫಿಂಗೊಬ್ಯಾಕ್ಟೀರಿಯಾ ಮತ್ತು ಡೆಲ್ಟಾಪ್ರೊಟಿಯೊಬ್ಯಾಕ್ಟೀರಿಯಾ ಮೊದಲಾದವುಗಳನ್ನು ಒಳಗೊಂಡಿದೆ'' ಎನ್ನುತ್ತಾರೆ ಅವರು.
ವಿಜ್ಞಾನಿಗಳ ತಂಡ ನೀರಿನ ಮಾದರಿಗಳನ್ನು ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ನಂತರ ಗಂಗಾ ನದಿಯ ಹರಿದ್ವಾರದಿಂದ ವಾರಣಾಸಿಯವರೆಗಿನ ಭಾಗಗಳಿಂದ ಸಂಗ್ರಹಿಸಿದೆ. ಈ ಭಾಗ ಅತ್ಯಂತ ಮಲಿನವಾಗಿದೆ. ಇನ್ನು ಮುಂದೆ ವಿಜ್ಞಾನಿಗಳ ತಂಡ ಯಮುನಾ ಮತ್ತು ನರ್ಮದಾ ನದಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಹೋಲಿಕೆ ಅಧ್ಯಯನ ಮಾಡಲಿದೆ. ಗಂಗಾ ನದಿ ನೀರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಶುದ್ಧದ ಪ್ರಮಾಣದಲ್ಲಿ ಹೇಗೆ ವ್ಯತ್ಯಾಸವಾಗಿದೆ ಎಂದು ಅಧ್ಯಯನ ಮಾಡಲಿದೆ.
ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿಯವರ ನೇತೃತ್ವದ ಸಂಯುಕ್ತ ಜಲ ಸಂಪನ್ಮೂಲ ಮತ್ತು ಗಂಗಾ ರಿಜವನೇಶನ್ ಇಲಾಖೆ ಅಧ್ಯಯನವನ್ನು ಆರಂಭಿಸಿದೆ. ಇದಲ್ಲದೆ ನಾಗ್ಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಲಕ್ನೋದ ರಾಷ್ಟ್ರೀಯ ಬೊಟನಿಕಲ್ ಸಂಶೋಧನಾ ಸಂಸ್ಥೆ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಅರೊಮಾಟಿಕ್ ಪ್ಲಾಂಟ್ಸ್ ಈ ಯೋಜನೆಯ ಭಾಗವಾಗಿವೆ. ಈ ಎಲ್ಲಾ ಸಂಸ್ಥೆಗಳು ನಡೆಸಿದ ಅಧ್ಯಯನದ ವರದಿಯನ್ನು ಈ ವರ್ಷ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿವೆ.
ಈ ಹಿಂದೆ ಕೂಡ ಭಾರತದ ಮತ್ತು ವಿದೇಶಗಳ ಅನೇಕ ವಿಜ್ಞಾನಿಗಳು ಗಂಗಾ ನದಿ ನೀರಿನ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಔಷಧೀಯ ಗುಣಗಳು ಇರುವ ಬಗ್ಗೆ ತಿಳಿದು ಬಂದಿದ್ದವು. ಆದರೆ ಆ ಔಷಧೀಯ ಅಂಶಗಳು ಯಾವುವು ಎಂದು ಗುರುತಿಸಿದ್ದು ಮಾತ್ರ ಚಂಡೀಗಢದ ಐಎಂಟೆಕ್ ವಿಜ್ಞಾನಿಗಳ ಸಾಧನೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos