ನವದೆಹಲಿ: ಅರ್ಥ್ ಡೇ (ಭೂಮಿ ದಿನಾಚರಣೆ) ನಮ್ಮ ಗ್ರಹವನ್ನು ಹೆಚ್ಚು ಸ್ವಚ್ಛ ಮತ್ತು ಹಸಿರುಮಯವಾಗಿಸಲು ನಮ್ಮ ಧೃಢ ನಿಲುವನ್ನು ಮತ್ತೆ ಮನದಟ್ಟು ಮಾಡಿಕೊಳ್ಳುವ ಸಮಯ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.
"ತಾಯಿ ಭೂಮಿಗೆ ಗೌರವ ಸಲ್ಲಿಸುವ ದಿನ ಅರ್ಥ್ ಡೇ" ಎಂದು ಮೋದಿ ಹೇಳಿದ್ದಾರೆ.
"ನಮ್ಮ ಜೊತೆಗೆ ಭೂಮಿಯನ್ನು ಹಂಚಿಕೊಳ್ಳುವ ಸಸ್ಯಗಳು, ಪ್ರಾಣಿಗಳು ಮತ್ತು ಪಕ್ಷಿಗಳ ಜೊತೆಗೆ ಸೌಹಾರ್ದದಿಂದ ಬದುಕುವುದು ನಮ್ಮ ಕರ್ತವ್ಯ. ಇದು ನಮ್ಮ ಮುಂದಿನ ಪೀಳಿಗೆಗಳಿಗಾಗಿ ಮಾಡಬೇಕಾದ್ದು" ಎಂದು ಕೂಡ ಅವರು ಹೇಳಿದ್ದಾರೆ.
'ಪರಿಸರ ಮತ್ತು ಹವಾಮಾನ ಸಾಕ್ಷರತೆ' ಈ ವರ್ಷದ ವಿಷಯವಾಗಿದ್ದು, ಇದು ನಮ್ಮ ಪರಿಸರರ ಮತ್ತು ಸ್ವಾಭಾವಿಕ ಸಂಪನ್ಮೂಲಗಳನ್ನು ಸಂರಕ್ಷಿಸುವತ್ತ ಅರಿವು ಮೂಡಿಸುವ ಭರವಸೆ ಇದೆ ಎಂದು ಕೂಡ ಮೋದಿ ಹೇಳಿದ್ದಾರೆ.
ಅರ್ಥ್ ಡೇ ನೆಟ್ವರ್ಕ್ ಪ್ರಕಾರ, ೧೯೭೦ರಲ್ಲಿ ಪ್ರಾರಂಭವಾದ ಆಧುನಿಕ ಪರಿಸರ ಸಂರಕ್ಷಣಾ ಚಳುವಳಿಯನ್ನು ನೆನಪಿಸಿಕೊಳ್ಳಲು ಏಪ್ರಿಲ್ ೨೨ ರಂದು ವಿಶ್ವದಾದ್ಯಂತ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.