ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ (ಡಬಲ್ಯೂ ಹೆಚ್ ಒ) ಬಿಡುಗಡೆ ಮಾಡಿರುವ ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳು ಸೇರಿವೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ WHO ಮಾಹಿತಿ ನೀಡಿದ್ದು, ಭಾರತದ ರಾಜಧಾನಿ ದೆಹಲಿ ಮತ್ತು ಪ್ರಧಾನಿ ಮೋದಿ ತವರು ಕ್ಷೇತ್ರ ವಾರಣಾಸಿ ನಗರಗಳು 2016ರ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿವೆ. ಅಪಾಯಕಾರಿ ವಿಷ ಪದಾರ್ಥ ಪಿಎಂ 2.5 ಪ್ರಮಾಣ ಹೆಚ್ಚಾಗಿರುವ ನಗರಗಳನ್ನು ಈ ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಗೆ ಸೇರಿಸಲಾಗಿದೆ.
ಇನ್ನು ಭಾರತದ ದೆಹಲಿ, ವಾರಣಾಸಿ, ಕಾನ್ಪುರ, ಫರಿದಾಬಾದ್, ಗಯಾ, ಪಾಟ್ನಾ, ಆಗ್ರಾ, ಮುಜಫರ್ ಪುರ್, ಶ್ರೀನಗರ, ಗುರಗಾಂವ್, ಜೈಪುರ, ಪಟಿಯಾಲ ಮತ್ತು ಜೋಧ್ಪುರ ನಗರಗಳು ಈ ಪಟ್ಟಿಯಲ್ಲಿ ಸೇರಿವೆ. ಉಳಿದಂತೆ ಕುವೈತ್ ನ ಅಲಿ ಸುಬಾಹ್ ಅಲ್ ಸಲೇಮ್ ನಗರ, ಚೀನಾದ ಕೆಲ ನಗರಗಳು ಮತ್ತು ಮಂಗೋಲಿಯಾ ನಗರಗಳು ಪಟ್ಟಿಯಲ್ಲಿ ಸೇರಿವೆ ಎನ್ನಲಾಗಿದೆ. ಅಂತೆಯೇ ಪಿಎಂ 10 ಪ್ರಮಾಣ ಅಧಿಕವಾಗಿರುವ ನಗರಗಳ ಪಟ್ಟಿಯಲ್ಲೂ ಭಾರತದ ಸಾಕಷ್ಟು ನಗರಗಳಿದ್ದು, 2016ರಲ್ಲಿ ಈ ಪಟ್ಟಿಯಲ್ಲಿ ಭಾರತದ 13 ನಗರಗಳಿದ್ದವು.
WHO ಎಚ್ಚರಿಕೆ ನೀಡಿರುವಂತೆ ದಕ್ಷಿಣ ಏಷ್ಯಾ ದೇಶಗಳ ನಗರಗಳಲ್ಲಿ ವಾಯು ಮಾಲೀನ್ಯ ಅಪಾಯದ ಮಟ್ಟ ಮೀರಿ ದಿನೇ ದಿನೇ ಏರುಗತಿಯತ್ತ ಸಾಗುತ್ತಿದ್ದು, ವಾಯು ಮಾಲೀನ್ಯದಿಂದಾಗಿ ಶೇ.34ರಷ್ಟು ಅಂದರೆ 7ಮಿಲಿಯನ್ ಜನರ ಪೈಕಿ 2.4 ಮಿಲಿಯನ್ ಮಕ್ಕಳು ಶೈಶಾವಸ್ಥೆಯಲ್ಲೇ ಸಾವನ್ನಪ್ಪುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಪ್ರಮುಖವಾಗಿ ದೇಶದ ವಾಯು ಮಾಲೀನ್ಯಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ನಗರ ಪ್ರಮಾಣಕ್ಕೂ ಮೀರಿ ರಸ್ತೆಗಳಿಯುತ್ತಿರುವ ವಾಹನಗಳೇ ಕಾರಣ ಎನ್ನಲಾಗಿದೆ. ಅಂತೆಯೇ ಪರಿಸರಕ್ಕ ಪೂರಕವಾಗಿ ಇಂಧನದ ಕೊರತೆಯೂ ವಾಯುಮಾಲೀನ್ಯಕ್ಕೆ ಕಾರಣ ಎನ್ನಲಾಗಿದೆ.
2016 ವರದಿಯ ಪ್ರಕಾರ ಭಾರತದ ಒಟ್ಟು 13 ನಗರಗಳಲ್ಲಿ ವಿಷಾನಿಲ ಕಣಗಳ ಮಟ್ಟ 10ಕ್ಕೂ ಹೆಚ್ಚಿದೆ. ಪ್ರಪಂಚದಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರತಿವರ್ಷ 70 ಲಕ್ಷ ಮಂದಿ ಶ್ವಾಸಕೋಶ ಕ್ಯಾನ್ಸರ್, ಪಾರ್ಶ್ವಾವಾಯು, ಹೃದಯಾಘಾತ ಹೀಗೆ ಅನೇಕ ಕಾಯಿಲೆಗಳಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿದೆ. ವಾಯುಮಾಲಿನ್ಯ ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಿರುವವ ಪ್ರಮಾಣ ಕೆಳ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಲ್ಲಿ ಹೆಚ್ಚಾಗಿವೆ. ಅದರಲ್ಲೂ ಏಷ್ಯಾದಲ್ಲಿನ ಭಾರತ, ಆಫ್ರಿಕಾ ರಾಷ್ಟ್ರಗಳು ವಾಯುಮಾಲಿನ್ಯದ ದುಷ್ಪಪರಿಣಾಮಗಳನ್ನು ಎದುರಿಸುತ್ತಿವೆ ಎಂದು ವರದಿಯಲ್ಲಿದೆ.