ಗರುಡನ ತಲೆ ಹಾಗೂ ರೆಕ್ಕೆ ಇದಕ್ಕೆ. ಎದ್ದು ನಿಂತ ಕಿವಿಗಳಿರುವ, ಸಿಂಹದ ದೇಹ, ಎದೆಯ ಮೇಲೆ ಪಕ್ಷಿಯ ಪುಚ್ಚಗುಚ್ಛಗಳು. ಸರ್ಪದ ಬಾಲ ಇದರ ವಿಶೇಷ. ಮುಂಗಾಲುಗಳಲ್ಲಿ ಗರುಡಾಕೃತಿಯ ಉಗುರುಗಳುಳ್ಳ, ಅದ್ಭುತವಾದ ಪೌರಾಣಿಕ ಪ್ರಾಣಿ.
ಸಿಂಹ ಪ್ರಾಣಿ ಲೋಕದಲ್ಲಿ ಶ್ರೇಷ್ಠವಾಗಿರುವಂತೆ ಗರುಡ ಪಕ್ಷಿಲೋಕದಲ್ಲಿ ಶ್ರೇಷ್ಠ. ಶಕ್ತಿಯುಕ್ತಿಗಳ ಸಂಗಮ ಈ ಗ್ರಿಫಿನ್. ನಮ್ಮ ಶರಭವನ್ನು ಇದು ಬಹಳಷ್ಟು ಹೋಲುತ್ತದೆ. ಮಧ್ಯಪೂರ್ವ, ಭಾರತ ಹಾಗೂ ಪ್ರಾಚೀನ ಪೂರ್ವ ಯುರೋಪ್ ಹಾಗೂ ಇರಾನ್ ಮಧ್ಯದ ಸಿಥಿಯಾ (ಈಗಣ ಕಝಕ್‌ಸ್ತಾನ್, ಮಂಗೋಲಿಯಾ) ಪ್ರದೇಶಗಳ ಜಾನಪದ, ದಂತಕಥೆಗಳಲ್ಲಿ ಗಣಿ, ನಿಧಿ ಕಾವಲುಗಾರನಾಗಿ ಮತ್ತು ಸೂರ್ಯನ ರಥ ಎಳೆಯುವ ಜನಪ್ರಿಯವಾಗಿರುವ ಪ್ರಾಣಿ. ಅನೇಕ ಸಾಮ್ರಾಜ್ಯಗಳ ರಾಜಲಾಂಛನವಾಗಿಯೂ ವಿಜೃಂಭಿಸಿದೆ. ಕಲೆ ಸಾಹಿತ್ಯಗಳಲ್ಲಿ ದೈವಶಕ್ತಿಯ ಪ್ರತೀಕವಾಗಿ ಬಿಂಬಿತವಾಗಿದೆ.
-ಎಚ್.ಜಿ. ಮಳಗಿ