ಬ್ಯಾಸಿಲಿಸ್ಕ್ ಅಥವಾ ಕಾಕ್ಟ್ರೀಸ್- ಇದು ಗ್ರೀಕ್‌ನ ಪೌರಾಣಿಕ ಪ್ರಾಣಿ. ಇದನ್ನು ಸರ್ಪಗಳ ರಾಜ ಎಂತಲೂ ಕರೆಯಲಾಗುತ್ತದೆ. ಸಿರಿಯಸ್ ನಕ್ಷತ್ರದ ಅವಧಿಯಲ್ಲಿ ಗೋಲಾಕಾರದ, ಒಳಗೆ ಯಾವ ದ್ರವ್ಯವೂ ಇಲ್ಲದ ಏಳು ವರ್ಷದ ರೂಸ್ಟರ್ ಪಕ್ಷಿಯ ಮೊಟ್ಟೆಗೆ ಕಪ್ಪೆಯು ಕಾವು ಕೊಟ್ಟು ಅದರಿಂದ ಹುಟ್ಟಿದ್ದು ಬ್ಯಾಸಿಲಿಸ್ಕ್ ಎನ್ನುವುದು ನಂಬಿಕೆ.
ಮೊದಲು ಬಂಗಾರದ ಕಿರೀಟ ಧರಿಸಿದ ಭಯಾನಕ ಸರ್ಪವಾಗಿದ್ದ ಇದರ ಕಲ್ಪನೆ ಬಹುಶಃ ಭಾರತದ ಏಳು ೆಡೆಯುಳ್ಳ ಹಾವಿನಿಂದ ಪ್ರಭಾವಿತವಾಗಿದ್ದಿರಬಹುದು. ಮಧ್ಯಯುಗದಲ್ಲಿ ಹುಂಜದ ಮುಖವನ್ನು, ಕೆಲವೊಮ್ಮೆ ಮಾನವನ ಮುಖ, ಹೊಂದಿದ ದೊಡ್ಡ ಸರ್ಪವಾಗಿ ವರ್ಣಿತವಾಗಿದೆ.
ಅದು ಎಷ್ಟೊಂದು ಭಯಾನಕವಾಗಿತ್ತೆಂದರೆ, ಕೇವಲ ತನ್ನ ಒಂದು ನೋಟದಿಂದಲೇ ಎದುರಿಗಿದ್ದವರನ್ನು ಕೊಲ್ಲುವ ಸಾಮರ್ಥ್ಯ ಪಡೆದಿತ್ತು. ಪಶ್ಚಿಮದ ಕಲಾ ಪ್ರಕಾರಗಳಲ್ಲಿ ಇದನ್ನೊಂದು ರಕ್ಕಸ ಜಂತು ಎನ್ನಲಾಗುತ್ತದೆ. ದಂತಕಥೆಗಳ ಪ್ರಕಾರ, 2 ಜಾತಿಯ ಬ್ಯಾಸಿಲಿಸ್ಕ್‌ಗಳಿದ್ದವು. ಮೊದಲನೆಯದು ತನ್ನೆದುರು ಕಂಡ ಎಲ್ಲವನ್ನೂ ಸುಟ್ಟುಹಾಕುತ್ತಿತ್ತು. ಎರಡನೆಯದು ತನ್ನೆದುರು ಬಂದ ಜೀವಿಗಳನ್ನು ಮಾತ್ರ ತನ್ನ ಕಣ್ಣೋಟದಿಂದಲೇ ಕೊಲ್ಲುತ್ತಿತ್ತು. ಅವುಗಳ ಉಸಿರಿನಿಂದ ಸುತ್ತಲಿನ ಕಾಡು, ನಾಡು, ಸುಟ್ಟು ಕಲ್ಲಾಗುತ್ತಿತ್ತು. ಯಾರಾದರೂ ಧೈರ್ಯ ಮಾಡಿ ಅವುಗಳನ್ನು ಕೊಲ್ಲಲು ಕುರುರೆ ಏರಿ ಖಡ್ಗ ಹಿಡಿದು ಹೊರಟರೆ ಈ ಜಂತುಗಳ ವಿಷ ಆ ವ್ಯಕ್ತಿ ಹಿಡಿದ ಖಡ್ಗದ ಮೂಲಕ ಹಾಯ್ದು ಆ ವ್ಯಕ್ತಿ ಹಾಗೂ ಕುದುರೆಯನ್ನೂ ಸುಟ್ಟು ಹಾಕುವಷ್ಟು ಭಯಂಕರವಾಗಿತ್ತು.
ಇದನ್ನು ತಪ್ಪಿಸಲು ಇದ್ದ ಒಂದೇ ಉಪಾಯವೆಂದರೆ ಬ್ಯಾಸಿಲಿಸ್ಕ್ ಎದುರು ದರ್ಪಣ ಹಿಡಿದು, ಆ ಬ್ಯಾಸಿಲಿಸ್ಕ್ ತನ್ನ ಪ್ರತಿಬಿಂಬ ನೋಡಿದಾಗ ಸತ್ತು ಹೋಗುತ್ತಿತ್ತು. ಹುಂಜ ಅದರ ಸಹಜ ಶತ್ರು. ಹುಂಜದ ಧ್ವನಿ ಕೇಳಿದೊಡನೆ ಬ್ಯಾಸಿಲಿಸ್ಕ್ ಸತ್ತು ಬೀಳುತ್ತಿತ್ತು. ಅಪೋಲೋ ಹಾಗೂ ಡಯಾನಾ ದೇಗುಲಗಳ ಮುಂದೆ ದೃಷ್ಟಿ ದೋಷ ಪರಿಹಾರಕ್ಕಾಗಿ ಬ್ಯಾಸಿಲಿಸ್ಕ್ ಅವಶೇಷಗಳನ್ನು ತೂಗು ಹಾಕಲಾಗುತ್ತಿತ್ತು.
ಕೆಟ್ಟ ಶಕ್ತಿಗಳು ಆ ಅವಶೇಷಗಳನ್ನು ದಾಟಿ ಒಳಗೆ ಪ್ರವೇಶಿಸುವುದಿಲ್ಲವೆಂಬ ನಂಬಿಕೆ. ಲಾಂಛನಗಳಲ್ಲಿ ಬ್ಯಾಸಿಲಿಸ್ ಹುಂಜದ ಅಪೂರ್ಣ ದೇಹ, ಶಿರ, ಕಾಲು, ಹಾವಿನ ನಾಲಗೆ ಹಾಗೂ ಪೃಷ್ಠ ಹಾಗೂ ಬಾವಲಿಯ ರೆಕ್ಕೆ ಹಾಗೂ ಬಾಣದ ತುದಿ ಹೊಂದಿದ ಬಾಲದಿಂದ ಚಿತ್ರಿತವಾಗಿದೆ.
- ಎಚ್.ಜಿ. ಮಳಗಿ