ಶ್ರೀ ಮಹಾಕಾಳೇಶ್ವರ 
ಭಕ್ತಿ-ಭವಿಷ್ಯ

ಮಹಾಮಹಿಮ ಉಜ್ಜಯಿನಿಯ ಮಹಾಕಾಳೇಶ್ವರ

ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗದ ದರ್ಶನದಿಂದ ಅಕಾಲ ಮೃತ್ಯು, ಅಪಮೃತ್ಯು ವಿನ ಭಯವಿಲ್ಲವೆಂದೂ ಮುಕ್ತಿ ದೊರಕುವುದೆಂದೂ ಭಕ್ತರ ನಂಬುಗೆ.

ಹಿಂದೂಗಳಲ್ಲಿ ನೀಲಕಂಠ, ಶಂಕರ, ಪರಮಾತ್ಮ, ಕರುಣಾಸಾಗರ, ಭೋಲೆನಾಥನಾಗಿ ನೆಲೆಸಿರುವ ಶಿವ ಅತಿ ಭಕ್ತಿ ಹಾಗು ಶೃದ್ಧೆಗಳಿಂದ ಪೂಜಿಸಲ್ಪಡುವ ಮಹಾದೇವ. ಶಿವನಿಗೆ ಮುಡಿಪಾದ ಅದೇಷ್ಟೊ ಅಸಂಖ್ಯಾತ ದೇವಾಲಯಗಳು ನಮ್ಮ ಭಾರತ ದೇಶದಲ್ಲಿವೆ.

ಇದೆ ರೀತಿಯಾಗಿ ಶಿವನ 12 ಜ್ಯೋತಿರ್ಲಿಂಗಗಳು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು ಈ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೂರನೇ ಜ್ಯೋತಿರ್ಲಿಂಗಗಳಲ್ಲಿ ಉಜ್ಜಯಿನಿಯ ಮಹಾಕಾಲೇಶ್ವರ ಸಹ ಒಂದಾಗಿದೆ.

ಇಲ್ಲಿಯ ವಿಶೇಷ ವೆಂದರೆ ದೇವರಿಗೆ ಅರ್ಪಿಸಿದ ಹೂ ಪತ್ರೆಗಳನ್ನು ತೊಳೆದು ಪುನಃ ಉಪಯೋಗಿಸುತ್ತಾರೆ. ದೇವಾಲಯದ ಬಾಗಿಲ್ಲಿ ಹೂ ಪತ್ರೆ ಮಾರುವವರಿಗೆ ಬಹಳ ಅನುಕೂಲ. ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗದ ದರ್ಶನದಿಂದ ಅಕಾಲ ಮೃತ್ಯು , ಅಪಮೃತ್ಯು ವಿನ ಭಯವಿಲ್ಲವೆಂದೂ ಮುಕ್ತಿ ದೊರಕುವುದೆಂದೂ ಭಕ್ತರ ನಂಬುಗೆ. ಸ್ರಾಣ ಮಾಸದಲ್ಲಿ ಇಲ್ಲಿ ದೊಡ್ಡ ಜಾತ್ರೆ ನಡೆಯುವುದು.

ಮಧ್ಯಪ್ರದೇಶದ ಉಜ್ಜಯಿನಿ ಪಟ್ಟಣದಲ್ಲಿರುವ ಲಿಂಗರೂಪಿ ಮಹಾಕಾಲೇಶ್ವರ ಜ್ಯೋತಿರ್ಲಿಂಗದಲ್ಲಿ ಮೂರನೇಯದಾಗಿದೆ. ಈ ಪಟ್ಟಣವು ಸಾಕಷ್ಟು ಪೌರಾಣಿಕ ಹಿನ್ನೆಲೆ ಹೊಂದಿದೆ. ಸುಮಾರು ಐದು ಸಾವಿರ ವರ್ಷಗಳ ಹಿಂದಿನಿಂದಲೂ ಈ ಪಟ್ಟಣವು ಅಸ್ತಿತ್ವದಲ್ಲಿದೆ ಎಂಬ ಕುರುಹುಗಳು ಇತಿಹಾಸ ಸಂಶೋಧಕರಿಗೆ ಸಿಕ್ಕಿವೆ. ಶ್ರೀರಾಮಚಂದ್ರನು ಬಂದು ಇಲ್ಲಿನ ನದಿ ತೀರದಲ್ಲಿ ವಿರಮಿಸಿದ್ದನೆಂಬ ಪ್ರತೀತಿ ಇದೆ. ಸೀತಾಪಹರಣವಾದ ಸಂದರ್ಭದಲ್ಲಿ ರಾಮನು ಸೀತೆಯನ್ನು ಹುಡುಕುತ್ತ ಈ ಪಟ್ಟಣಕ್ಕೆ ಬಂದಿದ್ದನಂತೆ. ಕೃಷ್ಣ-ಬಲರಾಮರು ಈ ಪಟ್ಟಣದಲ್ಲಿಯೇ ವಿದ್ಯಾರ್ಜನೆ ಆರಂಭಿಸಿದ್ದರಂತೆ. ಈ ಮಾತಿಗೆ ಇಲ್ಲಿರುವ ಹಲವಾರು ಅವಶೇಷಗಳು ಇಂದಿಗೂ ಸಾಕ್ಷಿಯಾಗಿ ನಿಲ್ಲುತ್ತವೆ.

ಇಂಥಹ ಪುಣ್ಯಸ್ಥಳವೆನಿಸಿಕೊಂಡ ಉಜ್ಜಯಿನಿಯ ಬಗ್ಗೆ ರಾಮಾಯಣ, ಮಹಾಭಾರತ ಹಾಗೂ ವಿವಿಧ ವೇದ, ಪುರಾಣಗಳಲ್ಲಿ ಉಲ್ಲೇಖವಿದೆ. ಕವಿರತ್ನ ಕಾಳಿದಾಸ ಉಜ್ಜಯಿನಿಯ ಸೌಂದರ್ಯದ ಬಗ್ಗೇನೆ ಸಾಕಷ್ಟು ಬರೆದಿದ್ದಾನೆ. ಇಲ್ಲಿನ ನದಿ ತೀರ, ಗುಹೆಗಳು ಇಲ್ಲಿ ಆಗಿ ಹೋದ ಗತಇತಿಹಾಸವನ್ನು ಕಣ್ಣಿಗೆ ಕಟ್ಟುಕೊಡುವಂತೆ ಬಣ್ಣಿಸುತ್ತವೆ ತಾವೇ ಮೂಕವಾಗಿ ನಿಂತುಕೊಂಡು. ಇಂತಹ ಹಿನ್ನೆಲೆಯುಳ್ಳ ಪಟ್ಟಣವು ಆ ಸಮಯದಲ್ಲಿ ಅಪ್ರತಿಮ ಸೌಂದರ್ಯ, ಸಂಪತ್ತುಗಳಿಂದ ರಾರಾಜಿಸುತ್ತಿತ್ತು. ಹಲವಾರು ವಿದ್ವಾಂಸರು, ಶಾಸ್ತ್ರಿಗಳು, ಪಂಡಿತರು ಅಲ್ಲಿ ವಾಸವಾಗಿ ಪೂಜೆ, ಪುನಸ್ಕಾರ ಮಾಡುತ್ತ ತಮ್ಮ ಜೀವನ ಸಾಗಿಸುತ್ತಿದ್ದರು. ಈ ಪಟ್ಟಣದಲ್ಲಿ ವಾಸವಾಗಿದ್ದ ವೇದಪ್ರಿಯನೆಂಬುವನು ಮಹಾನ್ ಶಿವಭಕ್ತನಾಗಿದ್ದನು. ಆದರೆ ವಯಸ್ಸಾಗಿ ಮುದುಕನಾಗುತ್ತ ಬಂದರೂ ಇವನಿಗೆ ಸಂತಾನ ಭಾಗ್ಯವಾಗಿರಲಿಲ್ಲ. ಶಿವನನ್ನು ಅಪರಿಮಿತವಾಗಿ ಏಕಾಗ್ರತೆಯಿಂದ ಧ್ಯಾನಿಸುತ್ತಿದ್ದ ವೇದಪ್ರಿಯನಿಗೆ ಕಡೆಗೂ ಪುತ್ರ ಸಂತಾನವಾಯಿತು. ಮುತ್ತಿನಂಥ ನಾಲ್ಕು ಮಕ್ಕಳು ಜನಿಸಿದರು. ಶಿವಾನುಗ್ರಹದಿಂದ ಜನಿಸಿದ ಆ ಮಕ್ಕಳು ತುಂಬಾ ಸಂಸ್ಕಾರವಂತರಾಗಿ ಬೆಳೆದರು.

ವೇದಾಧ್ಯಯನದಲ್ಲೇ ಮುಪ್ಪಿನ ಸಮಯವನ್ನು ಕಳೆಯುತ್ತ ಶಿಸ್ತುಬದ್ಧ ಸಂಸಾರವಾಗಿಸಿಕೊಂಡಿದ್ದ ವೇದಪ್ರಿಯನು ತನ್ನೆಲ್ಲ ಮಕ್ಕಳ ಮದುವೆಯನ್ನು ಮಾಡಿದನು. ಈ ಪಟ್ಟಣಕ್ಕೆ ಒಮ್ಮೆ ದ್ವೇಷಣನೆಂಬ ರಾಕ್ಷಸನು ದಾಳಿ ಮಾಡಿದನು. ಅಲ್ಲಿದ್ದ ಎಲ್ಲರನ್ನೂ ತನ್ನ ರಾಕ್ಷಸತನದಿಂದ ಕೊಚ್ಚಿ ಹಾಕಲಾರಂಭಿಸಿದನು. ಬಲಿಷ್ಠ ರಾಕ್ಷಸ ಸೇನೆಯೊಂದಿಗೆ ಬಂದ ದ್ವೇಷಣನು ಪಟ್ಟಣದಲ್ಲಿದ್ದ ಮಹಿಳೆಯರ ಶೀಲ ಕೆಡಿಸಲು ಮುಂದಾಗಿದ್ದನು. ಇಡೀ ಊರನ್ನೇ ಸ್ಮಶಾನವನ್ನಾಗಿಸಿಬಿಟ್ಟನು. ಇವನ ರಾಕ್ಷಸತನಕ್ಕೆ ಹೆದರಿ ಜನರು ಜೀವಭಯದಿಂದ ಊರಿಂದ ಓಟ ಕಿತ್ತರು.

ವೇದಪ್ರಿಯನಿಗೆ ರಾಕ್ಷಸನ ವಿಷಯ ತಿಳಿಸಿದರು ಎಲ್ಲರೂ. ಹೆಂಗಸರ ಮೇಲೆ ಮಾಡುತ್ತಿರುವ ಅನಾಚಾರವನ್ನು ಹೇಗಾದರೂ ಮಾಡಿ ತಪ್ಪಿಸಿ ನಮ್ಮವರ ಮಾನ ಉಳಿಸಿ ಎಂದು ಬೇಡಿಕೊಂಡರು. ಆಗ ವೇದಪ್ರಿಯನು ತನ್ನ ಮಕ್ಕಳು ಮತ್ತು ಜನರೊಂದಿಗೆ ಸೇರಿಕೊಂಡು ಮಹಾಶಿವನನ್ನು ಕುರಿತು ಶಿವಲಿಂಗ ಪೂಜೆ ಆರಂಭಿಸಿದನು. ಏಕೆಂದರೆ ದುಷ್ಟರು ಯಾವಾಗಲೂ ಶಿವನಿಂದಲೇ ಹತರಾಗುವುದು. ಅವರಿಗೆ ಬೇರಾವ ದೇವರ ವರವಿದ್ದರೂ ಉಪಯೋಗವಿಲ್ಲ. ಮಹಾಶಿವನ ಮುಂದೆ ಎಲ್ಲರೂ ತಲೆಬಾಗಲೇ ಬೇಕು. ಏಕೆಂದರೆ ಶಿವನಿಗೆ ಎದುರಾಡಿದರೆ ಅವರಂತ್ಯ ಬಂದಂಗೇನೆ.

ವೇದಪ್ರಿಯ ಮತ್ತು ಅವನ ಮಕ್ಕಳು ರುದ್ರಪಠಣ ಮಾಡಲಾರಂಭಿಸಿದರು. ಇವರು ಮಾಡುತ್ತಿರುವ ಶಿವಲಿಂಗ ಪೂಜೆಯ ಕುರಿತು ರಕ್ಕಸ ದ್ವೇಷಣಗೆ ಗೊತ್ತಾಯಿತು. ಅಲ್ಲಿಗೂ ದಾಳಿಯಿಟ್ಟನು. ಆದರೆ ಇವರು ಮಾಡುತ್ತಿದ್ದ ಶಿವಪೂಜೆಗೆ ಏನೂ ತೊಂದರೆಯಾಗಲಿಲ್ಲ. ಇದರಿಂದ ಉಗ್ರನಾದ ರಕ್ಕಸ ದ್ವೇಷಣನು ವೇದಪ್ರಿಯ ಮತ್ತು ಅವನ ಮಕ್ಕಳನ್ನು ಕೊಲ್ಲಲು ಮುಂದಾದನು. ಆ ಕೂಡಲೇ ಉಗ್ರರೂಪಿಯಾಗಿ ಲಿಂಗದಿಂದ ಹೊರಬಂದ ಮಹಾಶಿವನು ತನ್ನ ಮುಕ್ಕಣ್ಣಿನಿಂದ ರಾಕ್ಷಸನ ಸೇನೆಯನ್ನು ಸುಟ್ಟು ಭಸ್ಮ ಮಾಡಿದನು. ಬರೀ ಹೂಂಕಾರದಿಂದಲೇ ದ್ವೇಷಣನನ್ನು ಕೊಂದ ಮಹಾಕಾಲನ ಇನ್ನೊಂದು ರೂಪ ನೋಡಿದ ಜನರು ಶಿವನ ಮಹಿಮೆಯನ್ನು ಕೊಂಡಾಡತೊಡಗಿದರು.

ಮಹಾಶಿವನು ಮಹಾಕಾಲನಾಗಿ ಬಂದ ರೂಪವನ್ನು ನೋಡಿ ಭಕ್ತಿಯಿಂದ ನಮಿಸಿದ ಎಲ್ಲರೂ ಲಿಂಗದಿಂದ ಉದ್ಭವಿಸಿದ ನೀನು ಇಲ್ಲಿಯೇ ನೆಲೆಸಿ ಬಂದ ಭಕ್ತರ ಇಷ್ಟಾರ್ಥ ಈಡೇರಿಸಯ್ಯ ಶಂಭೋಲಿಂಗನೇ ಎಂದು ಕೇಳಿಕೊಂಡರು. ಭಕ್ತರಿಗೆ ಬೇಗನೊಲಿಯುವ ಮಹಾಶಿವನು ಮಹಾಕಾಲನಾಗಿ ಈ ಸ್ಥಳಲ್ಲಿಯೇ ನೆಲೆಸಿದ್ದಾನೆಂದು ಪುರಾಣಗಳಲ್ಲಿದೆ. ಇದನ್ನೇ ಜ್ಯೋತಿರ್ಲಿಂಗವಾಗಿ ನಾವೆಲ್ಲರೂ ಭಕ್ತಿಯಿಂದ ಪೂಜಿಸುತ್ತಿದ್ದೇವೆ.

ಕುಂಭ ಮೇಳ
ಹರಿದ್ವಾರ , ಪ್ರಯಾಗ , ನಾಸಿಕದಂತೆ ಇಲ್ಲಿಯೂ ಹನ್ನೆರಡು ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಜನ ಸೇರುತ್ತಾರೆ. ಕ್ಷಿಪ್ರಾನದಿಯಲ್ಲಿ ಸ್ನಾನ ಮಾಡಿ ತರ್ಪಣ ಕೊಡುತ್ತಾರೆ . ನದಿಯ ಸ್ನಾನಘಟ್ಟಗಳು ವಿಶಾಲವಾಗಿ ಚೆನ್ನಾಗಿವೆ. ಸಮುದ್ರ ಮಥನ ಕಾಲದಲ್ಲಿ ಹುಟ್ಟಿದ ಅಮೃತದ ಬಿಂದುಗಳು ಈ ನಾಲ್ಕು ಸ್ಥಳಗಳಲ್ಲಿ ಬಿದ್ದುದರಿಂದ ಪರ್ವಕಾಲದಲ್ಲಿ ಈನದಿಗಳಲ್ಲಿ ಸ್ನಾನ ಮಾಡುವುದರಿಂದ ಮುಕ್ತಿ ದೊರಕುವುದೆಂದು ಹೇಳುತ್ತಾರೆ. ದೇಶದ ನಾನಾ ಭಾಗಗಳಿಂದ ಭಕ್ರ, ಹಾಗೂ ವಿದೇಶೀಯರೂ ಸಹ ಕುಂಭ ಮೇಳದ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ.

-ವಿಶ್ವನಾಥ್. ಎಸ್



Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

Techie Kidnap case: Lakshmi Menonಗೆ ಬಿಗ್ ರಿಲೀಫ್, ನಿರೀಕ್ಷಣಾ ಜಾಮೀನು ಮಂಜೂರು, ಏನಿದು ಪ್ರಕರಣ? ನಟಿ ಹೇಳಿದ್ದೇನು?

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

SCROLL FOR NEXT