ಭಕ್ತಿ-ಭವಿಷ್ಯ

ಶಂಕರರು ಸರ್ವಜ್ಞ ಪೀಠವನ್ನೇರಿದ್ದ ಶಾರದಾಪೀಠ ದೇವಾಲಯ ಇಂದು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ!

Srinivas Rao BV
ಭಾರತದ ಮುಕುಟ ಕಾಶ್ಮೀರ, ಕಾಶ್ಮೀರವಿಲ್ಲದ ಭಾರತ ಊಹೆಗೂ ನಿಲುಕದ್ದು. ಕಾಶ್ಮೀರ ಭಾರತೀಯ ಪರಂಪರೆಯ ಪ್ರತಿನಿಧಿಯೆಂದರೂ ತಪ್ಪಾಗಲಾರದು. ಕಾಶ್ಮೀರದಲ್ಲಿ ಭಾರತದ ಐತಿಹ್ಯ, ಇತಿಹಾಸಕ್ಕೆ ಸಂಬಂಧಿಸಿದಂತಹ  ದೇವಾಲಯಗಳಿವೆ. ಇವುಗಳಲ್ಲಿ ಶಾರದಾಪೀಠ(ಸರ್ವಜ್ಞ ಪೀಠ) ದೇವಾಲಯವೂ ಒಂದು ಆದಿ ಶಂಕರಾಚಾರ್ಯರು ಅದ್ವೈತ ತತ್ವವನ್ನು ಪ್ರಚಾರ ಮಾಡುತ್ತಾ,  ಪುಣ್ಯ ಕ್ಷೇತ್ರಗಳಾದ ಗಿರಿನಾರ, ಸೋಮನಾಥ, ಪ್ರಭಾಸ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಯ ಪಂಡಿತರನ್ನು ವಾದದಲ್ಲಿ ಗೆದ್ದು ಅದ್ವೈತ ತತ್ವವನ್ನು ಪ್ರತಿಪಾದಿಸಿದ್ದರು.  ಅಲ್ಲಿಂದ ದ್ವಾರಕೆಗೆ ಬಂದು ಅಲ್ಲಿ ಪ್ರಸಿದ್ಧರಾದ ಬೇಧಾಬೇಧ ಪಂಡಿತರಾದ ಭಾಸ್ಕರರನ್ನು ವಾದದಲ್ಲಿ ಸೋಲಿಸಿದರು. ದ್ವಾರಕೆಯ ಪಂಡಿತರೆಲ್ಲಾ ಅದ್ವೈತ ತತ್ವವನ್ನು ಒಪ್ಪಿಕೊಂಡರು. ಬಾಹ್ಲೀಕದಲ್ಲಿ ಜೈನಪಂಡಿತರನ್ನು ವಾದದಲ್ಲಿ ಹಿಮ್ಮಟ್ಟಿಸಿದರು. ಅಲ್ಲಿಂದ ಕಾಂಬೋಜಕ್ಕೆ [ಉತ್ತರಕಾಶ್ಮೀರ] ದಾರದ [ದಬೀಸ್ಥಾನ್] ಕ್ಕೆ ಬಂದು ಅಲ್ಲಿಯ ಸಂನ್ಯಾಸಿಗಳನ್ನೂ ಪಂಡಿತರನ್ನೂ ವಾದದಲ್ಲಿ ಸೋಲಿಸಿದರು ಎತ್ತರದ ಶಿಖರ ,ಕಣಿವೆಗಳನ್ನು ದಾಟಿ ಕಾಶ್ಮಿರ, ನಂತರ ಕಾಮರೂಪಕ್ಕೆ ಬಂದು ಅಲ್ಲಿ ನವಗುಪ್ತನೆಂಬ ತಾಂತ್ರಿಕರನ್ನು ಎದುರಿಸಿದರು. 
ದೇಶಾದ್ಯಂತ ವಿವಿಧ ಪಂಥಗಳ ವಿದ್ವಾಂಸರನ್ನು ವಾದದಲ್ಲಿ ಗೆದ್ದ ನಂತರ ಶಂಕರಾಚರ್ಯರು ಕಾಶ್ಮೀರದಲ್ಲಿ ಸರ್ವಜ್ಞ ಪೀಠದ ಪ್ರವೇಶ ಮಾಡಿ ಅಲ್ಲಿಯ ಎಲ್ಲಾ ದರ್ಶನಗಳ ಪಂಡಿತರನ್ನೂ ವಾದದಲ್ಲಿ ಮಣಿಸಿ ಸರ್ವಜ್ಞ ಪೀಠವನ್ನು ಆರೋಹಣ ಮಾಡಿದ ದೇವಾಲಯವೇ ಶಾರದಾ ಪೀಠ ಅಥವಾ ದೇವಾಲಯ. ಈ ಸರ್ವಜ್ಞ ಪೀಠಕ್ಕೆ ನಾಲ್ಕು ದಿಕ್ಕಿಗೆ ನಾಲ್ಕು ಬಾಗಿಲಿದ್ದು ದಕ್ಷಿಣ ಭಾರತದಿಂದ ಯಾರೂ ಶ್ರೇಷ್ಠ ಪಂಡಿತರು ಬಾರದೇ ಇದ್ದುದರಿಂದ ದಕ್ಷಿಣದ ಬಾಗಿಲು ತರೆದೇ ಇರಲಿಲ್ಲವಂತೆ. ಶಂಕರರು ಅದನ್ನು ತೆರೆಸಿ ಪ್ರವೇಶಮಾಡಿ, ಎಲ್ಲರನ್ನೂ ವಾದದಲ್ಲಿ ಜಯಿಸಿದರು ಎಂಬ ಐತಿಹ್ಯವಿದೆ. ಶಂಕರರು ದಿಗ್ವಿಜಯ ಸಾಧಿಸಿದ ಶಾರದಾಪೀಠ ಅಥವಾ ಸರ್ವಜ್ಞ ಪೀಠ ಇಂದು ಪಾಕ್ ಅಕ್ರಮಿತ ಕಾಶ್ಮೀರದಲ್ಲಿದೆ.
ಇನ್ನು ಕಾಶ್ಮೀರದ ಶ್ರೀನಗರದಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ ಪ್ರದೇಶ ಶಂಕರಾಚಾರ್ಯ ದೇವಾಲಯ ಎಂದೇ ಹೆಸರಾಗಿದೆ. ಶಂಕರಾಚಾರ್ಯರು ಶ್ರ‍ೀನಗರವನ್ನು ತಲುಪಿ, ಈ ಬೆಟ್ಟದ ಮೇಲಿನ ಕ್ರಿ.ಶ 400 ರ ಸುಮಾರಿನ ಈ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಯೇ ತಪಸ್ಸು ನಡೆಸಿದರು ಎಂಬ ಐತಿಹ್ಯದಿಂದ ಇದು ಶಂಕರಾಚಾರ್ಯ ದೇವಾಲಯ ಎಂದೇ ಪ್ರಸಿದ್ಧವಾಗಿದೆ. ಕಾಶ್ಮೀರ ಪ್ರದೇಶದಲ್ಲಿ ಇರುವ ಏಕೈಕ ಸನಾತನ ಧರ್ಮದ ದೇವಾಲಯ ಇದಾಗಿದ್ದರೂ ಅದರ ಪರಿಸ್ಥಿತಿ ಉತ್ತಮವಾಗಿಲ್ಲ. ದೇವಾಲಯದ ಕಾವಲಿಗೆ  ಬೆಟ್ಟದ ಮೇಲೆಯ ಸೇನೆಯ ಕ್ಯಾಂಪ್ ಇದೆ. ಇಲ್ಲಿನ ಅರ್ಚಕರೂ ಸಹ ಸೇನೆಯವರೇ ಆಗಿದ್ದಾರೆ.  ನಗರದಿಂದ 1000 ಅಡಿ ಮೇಲೆ ಇರುವ ಬೆಟ್ಟದಿಂದ  ದಾಲ್ ಸರೋವರವನ್ನು ನೋಡಬಹುದಾಗಿದೆ. ಶಂಕರರು ತಪಸ್ಸು ಆಚರಿಸುವ ಮುನ್ನ ಗೋಪಾದ್ರಿ ಎಂದು ಕರೆಯುತ್ತಿದ್ದ ಈ ಬೆಟ್ಟವನ್ನು ನಂತರದಲ್ಲಿ ಶಂಕರಾಚಾರ್ಯ ಬೆಟ್ಟ ಎನ್ನುತ್ತಿದ್ದರು. 
ಶಂಕರರು ಸರ್ವಜ್ಞ ಪೀಠ ಆರೋಹಣ ಮಾಡುವುದಕ್ಕೆ ಅಣಿಯಾಗುತ್ತಿದ್ದಂತೆಯೇ ಪ್ರತ್ಯಕ್ಷವಾಗುವ ಶಾರದೆ(ಸರಸ್ವತಿ)ಯಿಂದ, ಶಂಕರರು ಪರಕಾಯ ಪ್ರವೇಶ ಮಾಡಿದ್ದನ್ನು ಉಲ್ಲೇಖಿಸಿ ಸರ್ವಜ್ಞ ಪೀಠ ಆರೋಹಣ ಮಾಡುವುದನ್ನು ಪ್ರಶ್ನೆ ಎದುರಾಗುತ್ತದೆ. ಸರಸ್ವತಿಯ ಪ್ರಶ್ನೆಗೆ ಸಮರ್ಥವಾಗಿ ಉತ್ತರ ನೀಡಿದ ಶಂಕರರು  ಸರ್ವಜ್ಞ ಪೀಠ ಆರೋಹಣ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿರುವ ಶಾರದಾ ಪೀಠ ಶಂಕರರು- ಶಾರದೆಯ ನಡುವೆ ನಡೆದ ಸಂವಾದಕ್ಕೂ ಸಾಕ್ಷಿಯಾಗಿದೆ.
SCROLL FOR NEXT